ಪರಿಶಿಷ್ಟ ಜಾತಿ (ಎಸ್‌ಸಿ) ಸಮಗ್ರ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಗ್ರಹಿಸಿ, ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಪೊಲೀಸರು ಹತ್ತಿಕ್ಕಿದ್ದಾರೆ. ಇಂದು ಬೆಳಗ್ಗೆ ಆರಂಭವಾದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಹೋರಾಟಗಾರರನ್ನು ಬಂಧಿಸಿದ್ದಾರೆ.
ಈ ಕುರಿತು ಮಾತನಾಡಿದ ಒಳಮೀಸಲಾತಿ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ, “ದುರುದ್ದೇಶದಿಂದ ಪೊಲೀಸರು ಪಾದಯಾತ್ರೆಗೆ ಅನುಮತಿ ನಿರಾಕರಿಸಿ ಈಗ ನಮ್ಮನ್ನು ಬಂಧಿಸಿದ್ದಾರೆ. ನಮ್ಮ ಸಮುದಾಯದ ಜನರ ಸಮಸ್ಯೆ ಕುರಿತು ಚರ್ಚಿಸಲು ನಮ್ಮದೇ ಸಮುದಾಯದ ನಾಯಕರ ಬಳಿಗೆ ಹೋಗುತ್ತಿರುವಾಗ ಬಂಧಿಸಿರುವುದು ಮೊದಲು. ಈಗ ನಾವು ಯಾರನ್ನು ಕೇಳಬೇಕು? ಈ ರೀತಿ ನಡೆದಿರುವುದು ಕರ್ನಾಟಕದ ಚರಿತ್ರಿಯಲ್ಲೇ ಮೊದಲು. ಸಿದ್ದರಾಮಯ್ಯ ಅವರ ಸರ್ಕಾರ ಹೀಗೆಲ್ಲಾ ಮಾಡುತ್ತಿರುವುದು ಸರಿಯಲ್ಲ” ಎಂದು ಆಕ್ರೋಶ ಹೊರಹಾಕಿದರು.
“ಒಳಮೀಸಲಾತಿ ಪ್ರಕ್ರಿಯೆ ಜಾರಿಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಅವರ ಈ ವಿಳಂಬ ಧೋರಣೆಗೆ ಪೂರಕವಾಗಿ ಪೊಲೀಸರು ಕೂಡ ಕೆಲಸ ಮಾಡುತ್ತಿದ್ದು, ನಮ್ಮನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ವಿವಿಧ ಜಿಲ್ಲೆಗಳಿಂದ ಬಂದಿರುವ ಒಳಮೀಸಲಾತಿ ಹೋರಾಟಗಾರರು ಸಿದ್ದರಾಮನಹುಂಡಿಗೆ ನೇರವಾಗಿ ತೆರಳಿ ಪಾದಯಾತ್ರೆ ಆರಂಭಿಸಬೇಕು. ರಾಜ್ಯದ ಜನರು, ಸರ್ಕಾರ ಮತ್ತು ಪೊಲೀಸರ ಈ ನಡೆಯನ್ನು ಖಂಡಿಸಬೇಕು” ಎಂದು ಒಳಮೀಸಲಾತಿ ಹೋರಾಟಗಾರ ಶಿವರಾಜ್ ಅಕ್ಕರಕಿ ಹೇಳಿದರು.

“ಮಾನ್ಯ ಮುಖ್ಯಮಂತ್ರಿಗಳೆ.. ಸಚಿವರಾದ ಎಚ್.ಸಿ. ಮಹದೇವಪ್ಪ ಅವರೇ.. ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದವರು ನಾವು; ಕೋಮುವಾದಿಗಳನ್ನು ಸೋಲಿಸಿದ್ದು ನಾವು. ರಾಜ್ಯದಲ್ಲಿ ಶಾಂತಿ-ನೆಮ್ಮದಿ ಇರಬೇಕು ಎಂದು ಬಯಸಿದವರು. ನ್ಯಾಯಯುತವಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಹತ್ತಿಕ್ಕಿ, ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಇಡೀ ಆಡಳಿತ ಯಂತ್ರದಲ್ಲಿ ಮೀಸಲಾತಿ ಉದ್ದೇಶವನ್ನೇ ಬುಡಮೇಲು ಮಾಡುವ ಯತ್ನ ನಡೆಯುತ್ತಿದೆ. ನಮ್ಮ ಹೋರಾಟ ಸರ್ಕಾರ ಅಥವಾ ಸಿದ್ದರಾಮಯ್ಯನವರ ವಿರುದ್ಧ ಅಲ್ಲ. ಏಕೆಂದರೆ, ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎಂದು ಬಯಸಿದವರು ನಾವು. ನಮ್ಮದು ಶಾಂತಿಯುತ ಪಾದಯಾತ್ರೆ. ಆದರೆ, ನಮ್ಮನ್ನು ಪೊಲೀಸರು ಬಂಧಿಸಿ ಕರೆದೊಯ್ಯತ್ತಿದ್ದಾರೆ. ಬೇಕಿದ್ದರೆ ನಮ್ಮನ್ನು ಬಂಧಿಸಿ ಜೈಲಿನಲ್ಲಿಡಿ ಅದಕ್ಕಾಗಿ ನಾವು ತಯಾರಿದ್ದೇವೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು” ಎಂದು ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿ ಬೇಸರ ಆಗ್ರಹಿಸಿದರು.


