ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಆಲ್ಬರ್ಟ್ ಐನ್‌ಸ್ಟೈನ್ ಅವರಂತಹ ಹೆಸರಾಂತ ವ್ಯಕ್ತಿಗಳು ಮಹಾತ್ಮ ಗಾಂಧಿಯವರಿಂದ ಸ್ಫೂರ್ತಿ ಪಡೆದವರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
‘ಗಾಂಧಿ’ ಚಿತ್ರದ ಮೂಲಕ ಜಗತ್ತು ಮಹಾತ್ಮಾ ಗಾಂಧಿಯವರ ಬಗ್ಗೆ ಕಲಿತಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಬಗ್ಗೆ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿಯ ಆರೆಸ್ಸೆಸ್ ನಂಟಿನ ಬಗ್ಗೆ ಟೀಕಿಸಿದ್ದಾರೆ, ಗಾಂಧಿಯವರ ಪರಂಪರೆಯ ಬಗ್ಗೆ ಅವರಿಗೆ ತಿಳುವಳಿಕೆಯ ಕೊರತೆ ಇದೆ ಎಂದು ಹೇಳಿದ್ದಾರೆ.
ಯಾರಿಗೆ ಆರ್‌ಎಸ್‌ಎಸ್‌ನ ಶಾಖೆಯಲ್ಲಿ ತರಬೇತಿ ನೀಡಲಾಗಿದೆ, ಅವರು ಗೋಡ್ಸೆಯ ಅನುಯಾಯಿಗಳು, ಅವರಿಗೆ ಗಾಂಧೀಜಿ ಬಗ್ಗೆ ಏನೂ ತಿಳಿದಿಲ್ಲ, ಅವರಿಗೆ ಹಿಂದೂಸ್ತಾನದ ಇತಿಹಾಸ, ಸತ್ಯ ಮತ್ತು ಹಿಂಸೆಯ ಬಗ್ಗೆ ತಿಳಿದಿಲ್ಲ. ಗಾಂಧೀಜಿಯ ಬಗ್ಗೆ ಜಗತ್ತಿಗೆ ಏನೂ ತಿಳಿದಿಲ್ಲ ಎಂದು ಪ್ರಧಾನಿ ಹೇಳುವುದು ನಿರೀಕ್ಷಿತವೇ ಎಂದು ಹೇಳಿದ್ದಾರೆ.
ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ನೆಲ್ಸನ್ ಮಂಡೇಲಾ ಮತ್ತು ಐನ್‌ಸ್ಟೈನ್ ಅವರಂತಹ ಜಾಗತಿಕ ದಿಗ್ಗಜರು ವಿವಿಧ ಸ್ವಾತಂತ್ರ್ಯ ಚಳುವಳಿಗಳ ಜೊತೆಗೆ ಗಾಂಧಿಯವರ ತತ್ವಗಳಲ್ಲಿ ಸ್ಫೂರ್ತಿಯನ್ನು ಪಡೆದವರು, ವಿವಿಧ ಚಳುವಳಿಗಳು, ಸ್ವಾತಂತ್ರ್ಯ ಚಳುವಳಿಗಳು ಸಹ ಗಾಂಧೀಜಿಯಿಂದ ಸ್ಫೂರ್ತಿ ಪಡೆದವು. ಭಾರತದ ಮಕ್ಕಳು ಕೂಡ ಗಾಂಧೀಜಿಯಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಪ್ರಧಾನಿಯ ಜಗತ್ತು ಅವರ ಶಾಖೆಯಾಗಿದೆ, ಈ ವಿಷಯದ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಎಬಿಪಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರಿಚರ್ಡ್ ಅಟೆನ್‌ಬರೋ ಅವರು 1982ರಲ್ಲಿ ‘ಗಾಂಧಿ’ ಸಿನಿಮಾವನ್ನು ನಿರ್ಮಿಸುವವರೆಗೂ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬಗ್ಗೆ ಜಗತ್ತಿಗೆ ತಿಳಿದಿರಲಿಲ್ಲ. ಕಳೆದ 75 ವರ್ಷಗಳಲ್ಲಿ ಗಾಂಧಿಯವರ ಜಾಗತಿಕ ಖ್ಯಾತಿಯನ್ನು ಹೆಚ್ಚು ಮಾಡುವುದು ದೇಶದ ಕೆಲಸವಾಗಿರಲಿಲ್ಲವೇ ಎಂದು ಪ್ರಶ್ನಿಸಿದ್ದರು. ಮಹಾತ್ಮಾ ಗಾಂಧೀಜಿ ಒಬ್ಬ ಮಹಾನ್ ಚೇತನ. ಕಳೆದ 75 ವರ್ಷಗಳಲ್ಲಿ ಅವರಿಗೆ ಜಾಗತಿಕ ಮನ್ನಣೆಯನ್ನು ತಂದುಕೊಡುವುದು ನಮ್ಮ ಜವಾಬ್ದಾರಿಯಲ್ಲವೇ? ಇದು ಯಾರಿಗೂ ತಿಳಿದಿರಲಿಲ್ಲ, ದಯವಿಟ್ಟು ನನ್ನನ್ನು ಕ್ಷಮಿಸಿ. ಮೊದಲ ಬಾರಿಗೆ, 1982ರಲ್ಲಿ ಗಾಂಧಿ ಚಲನಚಿತ್ರವನ್ನು ನಿರ್ಮಿಸಿದಾಗ, ಅವರು ಯಾರು ಎಂದು ಜಗತ್ತು ಕುತೂಹಲದಿಂದ ನೋಡಿತ್ತು. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರ ಬಗ್ಗೆ ಜಗತ್ತಿಗೆ ತಿಳಿದಿದ್ದರೆ, ಜಗತ್ತು ಗಾಂಧಿ ಬಗ್ಗೆ ಕೂಡ ಅಷ್ಟೇ ತಿಳಿದಿರಬೇಕಿತ್ತು. ಗಾಂಧಿ ಮತ್ತು ಅವರ ಮೂಲಕ ಭಾರತವನ್ನು ಗುರುತಿಸಬೇಕಾಗಿತ್ತು ಎಂದು ನಾನು ಜಗತ್ತನ್ನು ಸುತ್ತಿದ ನಂತರ ಹೇಳುತ್ತಿದ್ದೇನೆ ಎಂದು ಮೋದಿ ಹೇಳಿದ್ದರು. ಮೋದಿಯ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.
ಇದನ್ನು ಓದಿ: ಮತದಾರರನ್ನು ಇವಿಎಂ ಬಳಿ ತೆರಳಲೇ ಬಿಡುತ್ತಿರಲಿಲ್ಲ! ಬೀಡ್ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಕ್ರಮದ ಆರೋಪ


