ಸಂಯುಕ್ತ ಕಿಸಾನ್ ಮೋರ್ಚ ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮೇ 20ರಂದು ಕರೆ ನೀಡಿರುವ ಸಾರ್ವತ್ರಿಕ ಮುಷ್ಕರಕ್ಕೆ ‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಬಲ ನೀಡಲಿದ್ದು, ರಾಜ್ಯದ ಗ್ರಾಮೀಣ, ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕಾರ್ಮಿಕರು, ರೈತರು ತಮ್ಮ ಕೆಲಸಗಳನ್ನು ನಿಲ್ಲಿಸಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ‘ಸಂಯುಕ್ತ ಹೋರಾಟ ಕರ್ನಾಟಕ’ದ ಸಂಯೋಜಕ ಟಿ. ಯಶವಂತ ಅವರು ಹೇಳಿದರು. ಅವರು ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಮೇ 20 ಸಾರ್ವತ್ರಿಕ ಮುಷ್ಕರ
‘ಸಂಯುಕ್ತ ಹೋರಾಟ ಕರ್ನಾಟಕ’ ಎಂಬುದು ರಾಜ್ಯದ ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿದೆ. ಮೇ 20ರಂದು ದೇಶದಾದ್ಯಂತ ನಡೆಯಲಿರುವ ಸಾರ್ವತ್ರಿಕ ಮುಷ್ಕರದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿಭಟಿಸಿ ಭಾಗವಹಿಸಲಿದ್ದೇವೆ ಎಂದು ಅವರು ತಿಳಿಸಿದರು.
ರೈತ ಮುಖಂಡರಾದ ಬಡಗಲಪುರ ನಾಗೇಂದ್ರ ಅವರು ಮಾತನಾಡಿ, “2020ರ ಈಚೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುಂದುವರಿದ ಹೋರಾಟ ನಡೆಯುತ್ತಿದೆ. ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜೆಸಿಟಿಯು ಸಾರ್ವತ್ರಿಕ ಮುಷ್ಕರಕ್ಕೆ ಜಂಟಿಯಾಗಿ ತೀರ್ಮಾನಿಸಿವೆ. ರೈತರು ನಡೆಸಿದ್ದ ಒಂದು ವರ್ಷಗಳ ಕಾಲದ ಹೋರಾಟದ ವೇಳೆ, ಕೇಂದ್ರ ಸರ್ಕಾರ ರೈತರಿಗೆ ನೀಡಿದ ಮಾತನ್ನು ಇನ್ನೂ ಈಡೇಡಿಸಿಲ್ಲ. ನಮ್ಮ ಈ ಹೋರಾಟ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಡೆಯುತ್ತಿದೆ” ಎಂದರು.
“ಬಿಜೆಪಿ ತಂದ ಕಾನೂನನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಚಾಚು ತಪ್ಪದೆ ಜಾರಿ ಮಾಡುತ್ತಿದೆ. ಕೊರೊನಾ ಸಮಯದಲ್ಲಿ ವಿದ್ಯುತ್ ನೀತಿಯನ್ನು ವಿರೋಧ ಮಾಡಿದ್ದ ಕಾಂಗ್ರೆಸ್ ಈಗ ಅದನ್ನು ಜಾರಿ ಮಾಡುತ್ತಿದೆ. ಭೂ ಮಸೂದೆಯನ್ನು ವಾಪಾಸು ಪಡೆಯುತ್ತೇವೆ ಎಂದು ಹೇಳಿದ್ದರೂ ಅದನ್ನು ಇನ್ನೂ ಮಾಡಿಲ್ಲ. ಬಿಜೆಪಿ ತಂದಿದ್ದ ಜಾನುವಾರು ಹತ್ಯೆ ನಿಷೇಧ ಮತ್ತು ತಿದ್ದುಪಡಿ ಕಾಯ್ದೆಯಿಂದ ರೈತರು ಬಹಳ ಸಂಕಷ್ಟದಲ್ಲಿ ಇದ್ದಾರೆ. ಸ್ವಾಮಿನಾಥನ್ ವರದಿ ಜಾರಿಗೆ ತರುತ್ತೇವೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ ಇಲ್ಲಿನ ಸರ್ಕಾರ ಅದರ ಬಗ್ಗೆ ಮಾತನಾಡುತ್ತಲೆ ಇಲ್ಲ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿ ಬದಲಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರಬಹುದು, ಆದರೆ ನೀತಿಗಳು ಹಾಗೆ ಇವೆ. ಮೇ 20ರಂದು ನಡೆಯಲಿರುವ ಮುಷ್ಕರದಲ್ಲಿ ರಾಜ್ಯದ ಎಲ್ಲಾ ಕಡೆ ಲಕ್ಷಾಂತರ ಜನರು ಬೀದಿಗೆ ಇಳಿಯುತ್ತಾರೆ. ಬಂಧನಕ್ಕೆ ಒಳಗಾಗುತ್ತಾರೆ. ಜೈಲ್ ಭರೋ ನಡೆಯುತ್ತದೆ. ಕೇಂದ್ರ ಮತ್ತು ಸರ್ಕಾರ ಈಗಾದರೂ ಕಾನೂನನ್ನು ವಾಪಾಸು ತೆಗೆದುಕೊಂಡರೆ ನಾವು ಹೋರಾಟದ ಬಗ್ಗೆ ಮರುಪರಿಶೀಲನೆ ಮಾಡುತ್ತೇವೆ.” ಎಂದು ಅವರು ಹೇಳಿದರು.
ಕಾರ್ಮಿಕ ನಾಯಕಿ ಎಸ್. ವರಲಕ್ಷ್ಮಿ ಮಾತನಾಡಿ, “ಸಂಪತ್ತು ಸೃಷ್ಟಿಸುವ ರೈತ ಮತ್ತು ಕಾರ್ಮಿಕರಿಗಾಗಿ ಇದ್ದ ಕಾನೂನುಗಳನ್ನು ವ್ಯಾಪಾರವನ್ನು ಸುಲಭ ಮಾಡಲು ಬೇಕಾಗಿ ಸರ್ಕಾರ ಬದಲಾವಣೆ ಮಾಡುತ್ತಿವೆ. ಅದರ ಬದಲಾಗಿ ನಾಲ್ಕು ಕಾರ್ಮಿಕ ವಿರೋಧಿ ಲೇಬರ್ ಕೋಡ್‌ಗಳ ಜಾರಿ ಮಾಡುತ್ತಿದೆ. ಈ ಬದಲಾವಣೆಯಿಂದ 80% ಕಾರ್ಮಿಕರು ಯಾವುದೇ ಕಾರ್ಮಿಕ ಕಾಯ್ದೆ ಅಡಿಯಲ್ಲಿ ಬರುವುದಿಲ್ಲ. ಸಂಘ ಕಟ್ಟುವ ಹಕ್ಕು, ಸಾಮೂಹಿಕ ಚೌಕಾಶಿಯ, ಮುಷ್ಕರದ ಹಕ್ಕನ್ನು ಈ ಕೋಡ್‌ಗಳ ಕಿತ್ತುಕೊಳ್ಳುತ್ತವೆ” ಎಂದು ಹೇಳಿದರು.
“ಈ ಕಾನೂನಿನ ಪ್ರಕಾರ ಮುಷ್ಕರಕ್ಕೆ 60 ದಿನಗಳ ಮುಂಚೆ ನೋಟಿಸ್ ನೀಡಬೇಕು. ಈ ಹಿಂದೆ 14 ದಿನಗಳ ಮುಂಚೆ ನೋಟಿಸ್ ನೀಡಿದರೆ ಹೇಳಿದರೆ ಸಾಕಿತ್ತು. ಈ ವೇಳೆ ಮುಷ್ಕರಕ್ಕೆ ಹೋಗುವ ಕಾರ್ಮಿಕರಿಗೆ ಸೆರೆಮನೆ ವಾಸ ಶಿಕ್ಷೆ, ದಂಡ ಹಾಕಿ ಹಕ್ಕು ಕೇಳುವ ಕಾರ್ಮಿಕರನ್ನು ಬೆದರಿಸಲಾಗುತ್ತದೆ. 70% ಕಾರ್ಮಿಕರು ಈಗ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಇಎಸ್ಐ ಮತ್ತು ಪಿಎಫ್ಐ ಐಚ್ಛಿಕವಾಗಿ ಮಾಡಲಾಗಿದೆ. ಕಟ್ಟಡ ಕಾರ್ಮಿಕರ ಸೆಸ್‌ಗಳನ್ನು ರದ್ದು ಮಾಡಲಾಗಿದೆ. ಈ ಕಾನೂನಿನ ಮೂಲಕ ಕಾರ್ಮಿಕರ ಎಲ್ಲಾ ಸವಲತ್ತುಗಳನ್ನು ಕಿತ್ತುಕೊಂಡಿದ್ದಾರೆ.” ಎಂದು ಅವರು ಹೇಳಿದರು.
“ಹೊಸ ಕಾರ್ಮಿಕ ಕೋಡ್‌ನಲ್ಲಿ ಕೆಲಸದ ಅವಧಿಯನ್ನು 8ರಿಂದ 12ಕ್ಕೆ ಹೆಚ್ಚಿಸುತ್ತಿದ್ದಾರೆ. ಅದಾಗ್ಯೂ ಓವರ್ ಟೈಮ್ ಕೆಲಸಕ್ಕೆ ಹೆಚ್ಚುವರಿ ವೇತನ ಕೊಡುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಲೇಬರ್ ಕೋಡ್ ಕಾರ್ಮಿಕರ ಮರಣ ಶಾಸನ. ಇದು ಜಾರಿಗೆ ಬಂದರೆ ರಾಜ-ಮಹಾರಾಜರ ಕಾಲದಲ್ಲಿ ಇದ್ದಂತೆ ಕಾರ್ಮಿಕರು ದಾಸ್ಯಕ್ಕೆ ಒಳಗಾಗುತ್ತಾರೆ” ಎಂದು ಅವರು ಎಚ್ಚರಿಸಿದರು.
“ರಾಜ್ಯದ ಸಿದ್ದರಾಮಯ್ಯ ಸರ್ಕಾರದ ಮೇಲೆ ಕಾರ್ಮಿಕ ಸಂಘಟನೆಗಳಿಗೆ ಹೆಚ್ಚು ತೀರಾ ಬೇಸರವಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಕಾರ್ಪೋರೇಟ್‌ಗಳ ಪರವಾಗಿದೆ ಎಂಬುವು ಎಲ್ಲರಿಗೂ ತಿಳಿದಿರುವಂತದ್ದೆ. ಅವರಿಂದ ಯಾವುದೇ ನಿರೀಕ್ಷೆಗಳು ಇರಲಿಲ್ಲ. ಆದರೆ ರಾಜ್ಯದ ಸಿದ್ದರಾಮಯ್ಯ ಸರ್ಕಾರ ಬಿಜೆಪಿ ಹೇಳುವುದನ್ನು ಮಾಡುತ್ತಿರುವುದು ನಮಗೆ ತೀರಾ ಬೇಸರದ ವಿಚಾರ. ಅದಾಗ್ಯೂ, ಒಂದು ದಿನದ ಮುಷ್ಕರಕ್ಕೆ ಈ ಹೋರಾಟ ನಿಲ್ಲುವುದಿಲ್ಲ. ಬೆವರು ಸುರಿಸಿ ದುಡಿಯುವ ಜನರ ಕೋಪ ಒಮ್ಮೆ ಸ್ಪೋಟ ಆಯಿತು ಎಂದರೆ ಅದನ್ನು ನಿಮಗೆ ನಿಲ್ಲಿಸಲು ಸಾಧ್ಯವಿಲ್ಲ” ಎಂದು ಅವರು ಎಚ್ಚರಿಕೆ ನೀಡಿದರು.
ಕಾರ್ಮಿಕ ಮುಖಂಡ ಕೆ.ವಿ.ಭಟ್ ಮಾತನಾಡಿ, “ಕೇಂದ್ರ ಕಾರ್ಮಿಕ ಜಂಟಿ ಸಮಿತಿ ದೇಶದಲ್ಲಿ ಕಳೆದ 30 ವರ್ಷಗಳಿಂದ ಒಟ್ಟಾಗಿ ಹೋರಾಟ ಮಾಡುತ್ತಲೇ ಬಂದಿದೆ. ಆ ಎಲ್ಲಾ ಹೋರಾಟಗಳ ಮುಂದುವರಿಕೆಯಾಗಿ ಈ ಮುಷ್ಕರ ನಡೆಯುತ್ತಿದೆ. ಕೇಂದ್ರ ಸರ್ಕಾರ ಸಾರ್ವಜನಿಕ ಉದ್ಯಮಗಳನ್ನು ಖಾಸಗಿಕರಣ ಮಾಡಲು ಮತ್ತು ಅದನ್ನು ಬಿಡಿಗಾಸಿಗೆ ಮಾರಾಟ ಮಾಡಲು ಹೊರಟಿದೆ. ಇದನ್ನು ಕೈ ಬಿಡಬೇಕು ಎಂಬುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ” ಎಂದರು.
“ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೈಪೋಟಿ ಮೇಲೆ ಬೆಲೆ ಏರಿಕೆ ಮಾಡುತ್ತಿವೆ. ಎರಡು ಸರ್ಕಾರಗಳು ಅದಕ್ಕೆ ಕಡಿವಾಣ ಹಾಕಬೇಕು ಎಂಬುವುದು ನಮ್ಮ ಬೇಡಿಕೆ. ಸಾವಿರಾರು ಕೋಟಿ ಜನರ ತೆರಿಗೆ ಹಣದಿಂದ ಕಟ್ಟಿರುವ ವಿದ್ಯುತ್ ವಲಯವನ್ನು ಬಿಡಿಗಾಸಿಗೆ ಖಾಸಗಿಗೆ ವಹಿಸಲಾಗುತ್ತಿದೆ. ಕೇಂದ್ರ ಸರ್ಕಾರ ತನ್ನ ನೀತಿಯನ್ನು ಜಾರಿ ಮಾಡಲು ರಾಜ್ಯ ಸರ್ಕಾರದೊಂದಿಗೆ ತಿಕ್ಕಾಟ ನಡೆಸುತ್ತಿದೆ. ತನ್ನ ನೀತಿ ಜಾರಿ ಮಾಡಿದರೆ ಮಾತ್ರ ಅನುದಾನ ನೀಡುತ್ತೇವೆ ಎಂದು ಹಿಂಬಾಗಿಲ ಮೂಲಕ ಕಾನೂನು ಜಾರಿಗೆ ತರುವ ಪ್ರಯತ್ನ ನಡೆಸುತ್ತಿದೆ” ಎಂದು ಹೇಳಿದರು.
ಈ ಹಿಂದೆ ಕೇಂದ್ರದ ನೀತಿ, ನಿಲುವುಗಳನ್ನು ವಿರೋಧ ಮಾಡಿಕೊಂಡು ಬಂದ ರಾಜ್ಯ ಸರ್ಕಾರ ಈಗ ವಚನ ಭ್ರಷ್ಟವಾಗಿದೆ. ಈ ಎಲ್ಲಾ ಬೇಡಿಕೆಗಾಗಿ ನಮ್ಮ ಹೋರಾಟ ನಡೆಯುತ್ತಿದ್ದು, ಅದರ ಭಾಗವಾಗಿ ಈಗಾಗಲೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಜಿಲ್ಲಾ ಸಮಾವೇಶ ನಡೆಯುತ್ತಿವೆ ಎಂದು ಅವರು ಹೇಳಿದರು.
ಹೋರಾಟಗಾರ ನೂರ್ ಶ್ರೀಧರ್ ಮಾತನಾಡಿ, ಭಾರತ ಮತ್ತು ಪಾಕಿಸ್ತಾನದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಉಭಯ ದೇಶಗಳ ರೈತರು ಮತ್ತು ಕಾರ್ಮಿಕರು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. “ದೇಶದಲ್ಲಿ ರೈತರ ಭೂಮಿಯನ್ನು, ಕಾರ್ಮಿಕರಿಂದ ಅವರ ಬದುಕುವ ಹಕ್ಕು ಮತ್ತು ಅವರ ಹೋರಾಟದ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದಾರೆ. ದುಡಿವ ಜನರ ಮೇಲೆ ಕೇಂದ್ರ ಮತ್ತು ರಾಜ್ಯದ ಎರಡೂ ಸರ್ಕಾರಗಳು ದಾಳಿ ಮಾಡುತ್ತಿವೆ. ಕೇಂದ್ರ ಸರ್ಕಾರಕ್ಕಿಂತ ನಮಗೆ ನಿರೀಕ್ಷೆಗಳಿದ್ದ ರಾಜ್ಯ ಸರ್ಕಾರದ ಬಗ್ಗೆ ಹೆಚ್ಚು ಭ್ರಮನಿರಸನ ಆಗಿದ್ದೇವೆ” ಎಂದು ಹೇಳಿದರು. ಮೇ 20 ಸಾರ್ವತ್ರಿಕ ಮುಷ್ಕರ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?
ವಿಸ್ತೃತ ದಾಳಿಗೆ ಇಸ್ರೇಲ್ ಸಂಪುಟ ಅನುಮೋದನೆ: 24 ಒತ್ತೆಯಾಳುಗಳ ಕುರಿತು ಬಿಡುಗಡೆಯಾದವರು ಹೇಳುವುದೇನು?