ಸಂಕಷ್ಟ ಕಾಲ ಸರಕಾರಗಳಿಗೆ ಅರ್ಥಿಕ ನಿರ್ವಹಣೆಯಲ್ಲಿ ಹೊಸತನವನ್ನು ಹುಡುಕಲು ಅವಕಾಶ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಜನಪ್ರಿಯತೆ ಕಳೆದುಕೊಳ್ಳುವ ಭೀತಿಯಲ್ಲಿ ತೆಗೆದುಕೊಳ್ಳಲಾಗದೇ ಇರುವ ಕೆಲ ನಿರ್ಧಾರಗಳನ್ನು ಸಂಕಷ್ಟ ಕಾಲದಲ್ಲಿ ತೆಗೆದುಕೊಂಡು ಅರ್ಥವ್ಯವಸ್ಥೆಯಲ್ಲಿ ಕೆಲವೊಂದು ಸಮತೋಲನಗಳನ್ನು ಸಾಧಿಸುವ ಕೆಲಸವನ್ನು ಸರಕಾರಗಳು ಮಾಡುತ್ತದೆ. ಈ ವರ್ಷದ ಕೇಂದ್ರ ಬಜೆಟ್ ಹೆಚ್ಚು ಕಡಿಮೆ ಈ ಜಾಡಿನಲ್ಲೇ ಇತ್ತು. ಎಲ್ಲರಿಗೂ ಒಂದಷ್ಟು ಹಂಚುವ ಹಳೆಯ ಸಂಪ್ರ್ರದಾಯವನ್ನು ಬದಿಗಿಟ್ಟು ಕೆಲವೊಂದು ರಂಗಗಳ ಮೇಲೆ ಹೆಚ್ಚು ಗಮನ ಹರಿಸುವ ಮತ್ತು ಆ ಮೂಲಕ ಸೊರಗಿ ಹೋಗಿರುವ ಅರ್ಥ ವ್ಯವಸ್ಥೆಗೆ ಚೇತರಿಕೆ ತರುವ ಪ್ರಯತ್ನವೊಂದನ್ನು ಮಾಡಲಾಗಿತ್ತು.
ಅದರ ಸರಿ-ತಪ್ಪುಗಳನ್ನು ಕುರಿತು ವಿಮರ್ಶೆ ಮಾಡಬಹುದು. ಆದರೆ ಬಹುತೇಕ ಎಲ್ಲಾ ಅರ್ಥಪಂಡಿತರು ಒಪ್ಪಿರುವ ಹಾಗೆ ಅಲ್ಲೊಂದು ಸ್ಪಷ್ಟತೆ ಇತ್ತು, ಒಂದು ನಿರ್ದಿಷ್ಟತೆ ಇತ್ತು, ಒಂದು ಮಟ್ಟದ ಧೈರ್ಯ ಇತ್ತು. ಈ ವರ್ಷದ ರಾಜ್ಯ ಬಜೆಟ್‌ನಿಂದಲೂ ಇಂತಹದ್ದೊಂದು ಸ್ಪಷ್ಟತೆಯನ್ನು, ನಿರ್ಧಿಷ್ಟತೆಯನ್ನು ಮತ್ತು ಧೈರ್ಯವನ್ನು ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಬಜೆಟ್ ಹಳೆಯ ಹಾದಿಯಲ್ಲೇ ಮುಂದುವರಿದಿದೆ. ಇಲ್ಲದ ಸಮೃದ್ಧಿಯನ್ನು ಇದೆ ಎಂಬಂತೆ ಬಿಂಬಿಸುವುದು ಮತ್ತು ಲಭ್ಯ ಇರುವ ಅಷ್ಟಿಷ್ಟು ಸಂಪನ್ಮೂಲಗಳನ್ನು ಅವಶ್ಯಕತೆ ಇಲ್ಲದವರಿಗೂ ಹಂಚುವ, ಆ ಮೂಲಕ ಎಲ್ಲರನ್ನೂ ಓಲೈಸಲು ಪ್ರಯತ್ನಿಸುವ ಈ ಸಂಪ್ರದಾಯ ಅರ್ಥ ನಿರ್ವಹಣೆಯೂ ಅಲ್ಲ, ಅಭಿವೃದ್ಧಿ ನೀತಿಯೂ ಅಲ್ಲ. ಅದು ಶುದ್ಧ ಪಾಳೆಗಾರಿಕೆ.
ಬರಬರುತ್ತಾ ಬಹುತೇಕ ರಾಜ್ಯಗಳ ಬಜೆಟ್‌ಗಳು ಈ ನಿಟ್ಟಿನಲ್ಲೇ ಸಾಗುತ್ತಿವೆ. ತಮ್ಮನ್ನು ಮಹಾರಾಜ ಎಂದು ಭಾವಿಸಿಕೊಂಡಿರುವ ಮುಖ್ಯಮಂತ್ರಿಗಳು ಬಜೆಟ್ ಮಂಡಿಸುವುದೆಂದರೆ ವರ್ಷಕ್ಕೊಮ್ಮೆ ತಮ್ಮ ಸಾಮ್ರಾಜ್ಯದ ಖಜಾನೆಯ ಬಾಗಿಲು ತೆರೆದು ಕಂಡಕಂಡವರಿಗೆ ಮನಸೋ ಇಚ್ಛೆ ಉಂಬಳಿ ನೀಡುವುದೆಂತ ಭಾವಿಸಿದಂತಿದೆ. ಈ ಸಂಕಷ್ಟ ಸಮಯದಲ್ಲಿ, ಕರ್ನಾಟಕ ಸರಕಾರ ಸೋಮವಾರ (ಮಾರ್ಚ್ 8) ಮಂಡಿಸಿದ ಬಜೆಟ್ ಇದಕ್ಕೊಂದು ತಾಜಾ ಉದಾಹರಣೆ.
ಒಟ್ಟು 96 ಪುಟಗಳ ಬಜೆಟ್ ಭಾಷಣದ ಕೆಲವೊಂದು ಭಾಗಗಳು ಅಪ್ಪಟ ಸಮಾಜಶಾಸ್ತ್ರದ ಪಠ್ಯವೇನೋ ಎನ್ನುವ ರೀತಿಯಲ್ಲಿದ್ದವು. ಯಾಕೆಂದರೆ ಅವುಗಳಲ್ಲಿ ರಾಜ್ಯದ ಪ್ರಮುಖ ಜಾತಿ-ವರ್ಗಗಳ ಹೆಸರನ್ನು ಪಟ್ಟಿ ಮಾಡಿ ಅವುಗಳಿಗೆ ನೀಡಲಾದ ಹಣ ಹಂಚಿಕೆಯ ವಿವರವನ್ನು ನೀಡಲಾಗಿತ್ತು. ಈ ತನಕ ಅತೀಹೆಚ್ಚು ಜಾತಿಗಳನ್ನು ಹೆಸರಿಸಿದ ಬಜೆಟ್ ಎನ್ನುವ ಕೀರ್ತಿ ಈ ವರ್ಷದ ಬಜೆಟ್ ಭಾಷಣಕ್ಕೆ ಸಲ್ಲಬೇಕು. ಸಂಕಷ್ಟ ಕಾಲದಲ್ಲಿ ಸರಕಾರ ವೆಚ್ಚ ಮಾಡುವ ಪ್ರತೀ ಪೈಸೆಯ ಲೆಕ್ಕದ ಹಿಂದೆ ಕಟ್ಟಕಡೆಯ ಮನುಷ್ಯನ ಹಿತಾಸಕ್ತಿ ಇರಬೇಕು ಎನ್ನುವುದು ಸಾಮಾನ್ಯ ಜ್ಞಾನವೂ ಹೌದು, ಸಂವಿಧಾನದ ಪ್ರಮಾಣವೂ ಹೌದು. ಪ್ರಬಲ ಜಾತಿಗಳಿಗೆ, ಅರ್ಥವೇ ಇಲ್ಲದ ಸ್ಮಾರಕಗಳ ನಿರ್ಮಾಣಕ್ಕೆ, ಅಸಾಂದರ್ಭಿಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೋಟಿ ಕೋಟಿ ಹಂಚಿರುವ ಈ ವರ್ಷದ ಬಜೆಟ್, ಕೆಲವೊಂದು ವಿಚಾರಗಳಲ್ಲಿ ಪ್ರಜಾತಂತ್ರವನ್ನೇ ಅಣಕಿಸುವಂತಿದೆ.
ರಾಜ್ಯದ ಅಭಿವೃದ್ಧಿ ದರ ಕುಂಠಿತವಾಗಿದೆ. ರಾಜ್ಯದ ಒಟ್ಟು ಆದಾಯ ಶೇ.2.6ರಷ್ಟು ಕುಸಿದಿದೆ. ಈ ಕಾಲಘಟ್ಟದಲ್ಲಿ ಬೇಕಾಗಿದ್ದದ್ದು ಅರ್ಥವ್ಯವಸ್ಥೆಗೆ ಪುನಶ್ಚೇತನ ನೀಡಬಲ್ಲ ಯೋಜನೆಗಳು. ತೋರಿಕೆಗಾಗಿ ಆರ್ಥಿಕ ಉತ್ತೇಜನಕ್ಕೆಂದು ಬಜೆಟ್‌ನಲ್ಲಿ ಒಂದು ವಿಭಾಗವನ್ನೇ ಮೀಸಲಿಡಲಾಗಿದೆ. ಅದರಲ್ಲಿ ಏನೇನೋ ಯೋಜನೆಗಳಿವೆ. ನಿರ್ಮಾಣ ಕಾಮಗಾರಿ ಕೇಂದ್ರಿತ ಹಲವಾರು ಪ್ರಸ್ತಾಪಗಳಿವೆ. ಉದಾಹರಣೆಗೆ ಹೊಸ ವಿಮಾನ ನಿಲ್ದಾಣಗಳು, ರೈಲ್ವೆ ಮಾರ್ಗಗಳು, ಮಾರುಕಟ್ಟೆ ಪ್ರಾಂಗಣಗಳು, ಹೈವೇಗಳು ಇತ್ಯಾದಿ. ಈ ಸಂಕಷ್ಟ ಕಾಲಕ್ಕೆ ಇಂತಹ ಯೋಜನೆಗಳೆಲ್ಲಾ ಅಗತ್ಯವೇ ಅಂತ ಕೆಲವರು ಪ್ರಶ್ನಿಸಿದ್ದಾರೆ. ಪ್ರಶ್ನೆಯೇನೋ ಸಮಂಜಸ ಅಂತ ಅನ್ನಿಸಬಹುದು. ಆದರೆ ಅರ್ಥವಿಜ್ಞಾನ ಸಂಕಷ್ಟ ಮತ್ತು ಅದರಿಂದ ಹೊರಬರುವ ಹಾದಿಯನ್ನು ಬೇರೆಯೇ ರೀತಿಯಲ್ಲಿ ಅರ್ಥೈಸಿ ಅವುಗಳನ್ನು ಎದುರಿಸಲು ಇಂತಹ ಯೋಜನೆಗಳ ಅಗತ್ಯ ಇದೆ ಎಂದು ಸಾರುತ್ತದೆ.
ಈ ಹಿನ್ನೆಲೆಯಲ್ಲಿ ಯಾವುದೇ ಕಾಮಗಾರಿ ಕೇಂದ್ರಿತ ಯೋಜನೆಗಳನ್ನು ಆರ್ಥಿಕ ಸಂಕಷ್ಟದ ದಿನಗಳಲ್ಲಿ ಸರಕಾರ ಕೈಗೊಳ್ಳುವುದನ್ನು ಸ್ವಾಗತಿಸಬೇಕಿದೆ. ಈ ವರ್ಷದ ಬಜೆಟ್‌ನ ಮಿತಿ ಇರುವುದು, ಇಂತಹ ಯೋಜನೆಗಳನ್ನೆಲ್ಲಾ ಬಜೆಟ್‌ನಲ್ಲಿ ಸೇರಿಸಲಾಗಿದ್ದರೂ, ಇವುಗಳನ್ನು ಅನುಷ್ಠಾನಗೊಳಿಸಲು, ಸಂಪನ್ಮೂಲಗಳನ್ನು ಹೊಂದಿಸುವ ಯಾವ ಸಾಧ್ಯತೆಯೂ ಇಲ್ಲದೆಯೇ ಇವುಗಳನ್ನೆಲ್ಲಾ ಸೇರಿಸಲಾಗಿದೆ ಎನ್ನುವ ಅಂಶ. ಯಾಕೆಂದರೆ ಬಹುತೇಕ ಈ ಯೋಜನೆಗಳಿಗೆ ಹಣ ಹೊಂದಿಸಲು ಸಾಧ್ಯವಾಗುವುದು ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಅನುದಾನ ಮತ್ತು ಜಿಎಸ್‌ಟಿ ಮುಂತಾದ ಪರಿಹಾರಗಳಿಂದ. ಮತ್ತು ಅದು ಸಾಧ್ಯವಾಗುವುದು ಆ ಪರಿಹಾರ ಸೂಕ್ತ ಸಮಯಕ್ಕೆ ಸೂಕ್ತ ಮೊತ್ತದಲ್ಲಿ ದೊರೆತರೇ ಮಾತ್ರ.
ಈ ಹಿಂದಿನ ವರ್ಷಗಳ ಅನುಭವದಲ್ಲಿ ಹೇಳುವುದಾದರೆ ಕೇಂದ್ರದಿಂದ ಈ ಹಣ ನಿರೀಕ್ಷಿತ ರೀತಿಯಿಂದ ಬರುತ್ತದೆ ಎನ್ನುವ ಖಾತರಿ ಏನೂ ಇಲ್ಲ. ಮಾತ್ರವಲ್ಲ, ಈ ರೀತಿ ಕಾಮಗಾರಿ ಕೇಂದ್ರಿತ ಯೋಜನೆಗಳನ್ನು ಹಮ್ಮಿಕೊಳ್ಳುವಾಗಲೂ ಅದಕ್ಕೂ ಒಂದು ಗೊತ್ತು ಗುರಿ ಅಂತ ಇರಬೇಕಾಗುತ್ತದೆ. ಉದಾಹರಣೆಗೆ ಇನ್ನೂ ಒಂದಷ್ಟು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲು ಸರಕಾರ ಉದ್ಯುಕ್ತವಾಗಿದೆ. ಪ್ರತಿ ಜಿಲ್ಲೆಗೊಂದರಂತೆ ವಿಮಾನ ನಿಲ್ದಾಣದ ಅಗತ್ಯ ಇದೆಯೇ? ರಸ್ತೆ ಮತ್ತು ರೈಲ್ವೆ ಸಂಪರ್ಕ ಉತ್ತಮಗೊಳಿಸಿದರೆ ಅದರಿಂದ ಸರ್ವರಿಗೂ ಪ್ರಯೋಜನವಾಗುತ್ತದೆ. ವಿಮಾನಯಾನವನ್ನು ಎಲ್ಲರಿಗೂ ತಲುಪಿಸುವ ಈ ಉಡ್ಡಯನ ಎಂಬ ಕೇಂದ್ರ ಸರಕಾರದ ಯೋಜನೆಯನ್ವಯ ರಾಜ್ಯ ಸರಕಾರ ಎಲ್ಲಾ ಕಡೆ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುತ್ತಿದೆ ಅನ್ನಿಸುತ್ತದೆ.
ಈ ಉಡ್ಡಯನ ಯೋಜನೆಯ ಯುಕ್ತಾಯುಕ್ತತೆಯ ಬಗ್ಗೆ ಒಮ್ಮೆ ಯೋಚಿಸಬೇಕು ಅನ್ನಿಸುತ್ತದೆ. ವಿಮಾನಯಾನ ಅಗ್ಗ ಎಂದರೆ ಎಷ್ಟು ಅಗ್ಗವಾಗಬಹುದು? ಇದರಲ್ಲಿ ಬಡವರ್ಗಕ್ಕೆ ಪ್ರಯಾಣಿಸಲು ಸಾಧ್ಯವೇ? ಉಳ್ಳವರೆಲ್ಲಾ ವಿಮಾನ ಹತ್ತಿದರೆ ಮತ್ತೆ ರಸ್ತೆ ಮತ್ತು ರೈಲ್ವೆ ಸಂಪರ್ಕ ಯಥಾಪ್ರಕಾರ ಕುಂಟುತ್ತದಲ್ಲವೇ? ಮುಂದುವರಿದ ಯಾವುದೇ ದೇಶಗಳಲ್ಲಿ ಮೊದಲ ಆದ್ಯತೆ ರೈಲ್ವೆ ಸಂಪರ್ಕ ಕಲ್ಪಿಸುವುದಕ್ಕೆ. ನಮ್ಮಲ್ಲಿ ಮಾತ್ರ ಮತ್ತೆ ಮತ್ತೆ ಹೆದ್ದಾರಿಗಳನ್ನು ನಿರ್ಮಿಸುವುದು, ಹೆದ್ದಾರಿಗಳನ್ನು ಅಗಲೀಕರಿಸುವುದು ಒಂದೆಡೆ ಆದರೆ, ಇತ್ತೀಚಿನ ವರ್ಷಗಳಲ್ಲಿ ಒಂದೇಸಮನೆ ವಿಮಾನ ನಿಲ್ದಾಣಗಳ ನಿರ್ಮಾಣ ನಡೆಯುತ್ತಿದೆ. ಅಭಿವೃದ್ಧಿಯ ದೃಷ್ಟಿಯಿಂದ, ಸಮತೋಲನ ಮತ್ತು ಸಮತೆಯ ದೃಷ್ಟಿಯಿಂದ ಈ ನೀತಿಯನ್ನೊಮ್ಮೆ ವಿಮರ್ಶೆಗೆ ಗುರಿಪಡಿಸುವ ಅಗತ್ಯ ಇದೆ ಅನ್ನಿಸುತ್ತದೆ.
ಈ ಬಜೆಟ್‌ನಲ್ಲಿ ಎಲ್ಲರೂ ನಿರೀಕ್ಷಿಸಿದ್ದ ಇನ್ನೊಂದು ಅಂಶ ಕೃಷಿ ಮಾರುಕಟ್ಟೆ ವ್ಯವಸ್ಥೆಯ ವಿಚಾರದಲ್ಲಿ ಸರಕಾರ ಯಾವ ರೀತಿಯ ಯೋಚನೆಯನ್ನು ಮತ್ತು ಯೋಜನೆಗಳನ್ನು ಮುಂದಿಡುತ್ತದೆ ಎನ್ನುವುದರ ಕುರಿತಾಗಿತ್ತು. ಕೇಂದ್ರ ಸರಕಾರ ಕೃಷಿ ಕಾನೂನುಗಳನ್ನು ಜಾರಿಗೆ ತಂದ ಬೆನ್ನಲ್ಲೇ ರಾಜ್ಯ ಸರಕಾರ ಕೂಡಾ ತನ್ನ ಕೃಷಿ ಕಾನೂನುಗಳನ್ನು ತಿದ್ದುಪಡಿಗೊಳಿಸಿದೆ ಮತ್ತು ರೈತರ ವ್ಯಾಪಕ ಪ್ರತಿರೋಧದ ನಂತರವೂ ಹೊಸ ಕಾನೂನುಗಳಿಂದ ಕೃಷಿಯ ಉದ್ದಾರವಾಗುತ್ತದೆ ಎಂದು ಹೇಳುತ್ತಲೇ ಬಂದಿದೆ. ಹಾಗಿರುವಾಗ ಈ ಕಾನೂನುಗಳಿಗೆ ಪೂರಕವಾದಂತೆ ಬಜೆಟ್‌ನಲ್ಲಿ ಒಂದು ಸ್ಪಷ್ಟವಾದ ಸಂದೇಶ, ಯೋಜನೆ ಇರಬೇಕಿತ್ತಲ್ಲವೇ? ಮುಖ್ಯವಾಗಿ ಕೃಷಿ ಮಾರುಕಟ್ಟೆಗಳನ್ನು ಸರಕಾರ ಪರೋಕ್ಷವಾಗಿ ಖಾಸಗೀಕರಣಗೊಳಿಸುತ್ತಿರುವಾಗ, ಖಾಸಗಿ ಖರೀದಿದಾರರಿಂದ ಶೋಷಣೆಗೆ ಒಳಗಾಗಬಹುದು ಎನ್ನುವ ಭೀತಿ ರೈತಾಪಿವರ್ಗವನ್ನು ಕಾಡುತ್ತಿದೆ.
ರೈತರ ಈ ಆತಂಕವನ್ನು ದೂರಗೊಳಿಸುವ ದೃಷ್ಟಿಯಲ್ಲಿ ಹೊಸ ಮಾರುಕಟ್ಟೆ ವ್ಯವಸ್ಥೆಗೆ ರೈತರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ವ್ಯಾಪಕವಾದ ಮೂಲಸೌಕರ್ಯಗಳನ್ನು ಒದಗಿಸುವ ಒಂದು ಭರವಸೆಯನ್ನಾದರೂ ಬಜೆಟ್‌ನಲ್ಲಿ ನೀಡಬೇಕಿತ್ತು ಎಂದು ರಾಜ್ಯದ ಅರ್ಥವ್ಯವಸ್ಥೆಯನ್ನು ಸೂಕ್ಷ್ಮವಾಗಿ ನೋಡುತಿದ್ದವರು ಸಹಜವಾಗಿಯೇ ನಿರೀಕ್ಷಿಸಿದ್ದರು. ಆದರೆ ಬಜೆಟ್‌ನಲ್ಲಿ ಅಂತಹ ನಿರ್ದಿಷ್ಟ ಯೋಚನೆ ಅಥವಾ ಆಶಯವೇನೂ ಕಾಣಿಸುತ್ತಿಲ್ಲ. ಒತ್ತಟ್ಟಿಗೆ ನೋಡಿದರೆ ಅಲ್ಲೊಂದು ಇಲ್ಲೊಂದು ಮಾರುಕಟ್ಟೆ ಪ್ರಾಂಗಣ, ಶೀತಲೀಕರಣ ವ್ಯವಸ್ಥೆ ಒದಗಿಸುವ ಖಾಸಗಿ ಹೂಡಿಕೆದಾರರಿಗೆ ಸಬ್ಸಿಡಿಯಲ್ಲಿ ಹೆಚ್ಚಳ ಇತ್ಯಾದಿ ಕ್ರಮಗಳನ್ನು ಹೇಳಲಾಗಿದೆಯಾದರೂ ಅವುಗಳಲ್ಲಿ ಒಂದು ಸಮಗ್ರ ದೃಷ್ಟಿಯ ಹೇಳಿಕೆಯೂ ಇಲ್ಲ. ಹೊಸ ವಿದ್ಯಾಭ್ಯಾಸ ನೀತಿಯ ಕುರಿತಾಗಿಯೂ ಹೀಗೆಯೇ ಹೇಳಬೇಕಾಗುತ್ತದೆ. ಹೊಸ ನೀತಿಯ ಅನುಷ್ಠಾನದ ಕುರಿತಂತೆ ಯಾವ ರೀತಿಯ ಹಣಕಾಸು ವ್ಯವಸ್ಥ ಮಾಡಲಾಗಿದೆ ಎನ್ನುವ ಅಂಶವೂ ಬಜೆಟ್‌ನಲ್ಲಿ ಕಾಣಿಸಲಿಲ್ಲ.
ಒಟ್ಟಿನಲ್ಲಿ, ಈ ವರ್ಷದ ಬಜೆಟ್‌ಅನ್ನು ಅಭಿವೃದ್ಧಿಯ ಒಂದು ನೀತಿ ನಿರೂಪಣೆ ಎಂಬ ದೃಷ್ಟಿಯಿಂದ ನೋಡಿದಾಗ ಅದರಲ್ಲಿ ಕಾಣಿಸುವುದು ಮತ್ತೆ ಅದೇ ಹಳೆಯ ಜಾಡು – ಅಲ್ಲೊಂದು ಯೋಜನೆ ಇಲ್ಲೊಂದು ಯೋಜನೆ, ಅಲ್ಲೊಂದಷ್ಟು ಮಂದಿಗೆ ಅಷ್ಟಿಷ್ಟು ಧನಸಹಾಯ, ಇಲ್ಲೊಂದಿಷ್ಟು ಮಂದಿಗೆ ಇಷ್ಟು ಧನಸಹಾಯ ಎಂಬ ಅದೇ ಹಳೆಯ ಕುಳುವಾರು ಪಟ್ಟಿ. ಈ ಬಜೆಟ್‌ಅನ್ನು ರಾಜ್ಯದ ಹಣಕಾಸು ನಿರ್ವಹಣೆಯ ವಾರ್ಷಿಕ ದಾಖಲೆ ಎಂಬ ದೃಷ್ಟಿಯಿಂದ ನೋಡಿದಾಗ ಕಾಣಿಸುವುದು ವಿಶ್ವಾಸ ಮೂಡಿಸದ ಅಂಕಿ-ಅಂಶಗಳ ಕಂತೆ. ಈ ಅಂಕಿ-ಸಂಖ್ಯೆಗಳೆಲ್ಲಾ ಮುಂದಿನ ಹಣಕಾಸು ವರ್ಷಕ್ಕೆ ತಲೆ ಕೆಳಗಾದರೆ ಆಶ್ಚರ್ಯವಿಲ್ಲ. ಹಾಗಾಗಿದೆ ರಾಜ್ಯದ ಆರ್ಥಿಕ ಪರಿಸ್ಥಿತಿ.

ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ರಾಜಕೀಯ ತತ್ವಶಾಸ್ತ್ರ, ಭಾರತದ ರಾಜಕೀಯ, ಕಾನೂನು ಮತ್ತು ಆಡಳಿತ ಹಾಗೂ ಭಾರತದಲ್ಲಿ ಆಡಳಿತದ ಸವಾಲುಗಳು ವಿಷಯವನ್ನು ಬೋಧಿಸುವ ನಾರಾಯಣ ಅವರು ಕನ್ನಡದ ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಲೇಖನಗಳನ್ನು ಬರೆಯುತ್ತಿರುವ ಸ್ವತಂತ್ರ ಚಿಂತಕ.


