ಸುಬ್ರಮಣಿಯನ್ ಸ್ವಾಮಿ
PC: financialexpress

ಸದಾ ವಿವಾದಾತ್ಮಕ ಹೇಳಿಕೆ ನೀಡುತ್ತಾ ಮತ್ತು ಬಿಜೆಪಿ ವಿರುದ್ಧ ಟೀಕೆ ಮಾಡುತ್ತ ಸುದ್ದಿಯಲ್ಲಿರುವ ಅದೇ ಪಕ್ಷದ ಸಂಸದ ಸುಬ್ರಮಣಿಯನ್ ಸ್ವಾಮಿ ತಮಿಳುನಾಡು ಬಿಜೆಪಿ ಪರಿಸ್ಥಿತಿ ಕುರಿತು ಇಂದು ವ್ಯಂಗ್ಯವಾಡಿದ್ದಾರೆ. ಬಿಜೆಪಿ-ಎಐಎಡಿಎಂಕೆ ಜೊತೆಗಿನ ಮೈತ್ರಿಯಲ್ಲಿ ಬಿಜೆಪಿಗೆ 20 ಸ್ಥಾನಗಳು ದೊರೆತಿದ್ದು ಅದರಲ್ಲಿ 18 ಸ್ಥಾನಗಳನ್ನು ಬೇರೆ ಪಕ್ಷದಿಂದ ಬಿಜೆಗೆ ಪಕ್ಷಾಂತರಗೊಂಡವರಿಗೆ ಟಿಕೆಟ್ ನೀಡಲಾಗಿದೆ. ಇದು ಬಿಜೆಪಿ ತಲುಪಿರುವ ಪರಿಸ್ಥಿತಿ ಎಂದು ಸುಬ್ರಮಣಿಯನ್ ಸ್ವಾಮಿ ಗೇಲಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, “ಬಿಜೆಪಿಯ ಪರಿಸ್ಥಿತಿ ಇಲ್ಲಿದೆ ಬಂದಿದೆ: ತಮಿಳುನಾಡು ಚುನಾವಣೆಯಲ್ಲಿ ಬಿಜೆಪಿಯ 20 ಅಭ್ಯರ್ಥಿಗಳಲ್ಲಿ 18 ಜನರು ಇತರೆ ಪಕ್ಷಗಳಿಂದ ಬಂದವರು ಮತ್ತು ಆರ್‌ಎಸ್‌ಎಸ್‌ ಅಥವಾ ಜನಸಂಘದೊಂದಿಗೆ ಯಾವುದೇ ಸಂಪರ್ಕ ಇಲ್ಲದವರು. ಎಐಎಡಿಎಂಕೆಯು ಸಿಎಎ ಅನ್ನು ರದ್ದುಗೊಳಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಸೇರಿಸಿದೆ” ಎಂದು ಟೀಕಿಸಿದ್ದಾರೆ.

ಈ ಟ್ವೀಟ್‌ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಅರುಣ್ ಕೊಂಡಪಲ್ಲೆ ಎಂಬುವವರು “ಪಕ್ಷದಲ್ಲಿ ನೀವಿರಬೇಕಾದರೆ ಬಿಜೆಪಿಗೆ ವಿರೋಧ ಪಕ್ಷದ ಅಗತ್ಯವೇ ಇಲ್ಲ” ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ “ಇಂದು ದೇಶದಲ್ಲಿ ಬೇರೆ ಆರೋಗ್ಯಕರ ವಿರೋಧ ಪಕ್ಷಗಳಿಲ್ಲ. ನಾನು ಹಿಂದುತ್ವವನ್ನು ಆಧರಿಸಿದ ಬಿಜೆಪಿಯ ನವೋದಯಕ್ಕಾಗಿ ಕೆಲಸ ಮಾಡುತ್ತೇನೆ. ಇದು ಜನಸಂಘ ಪರಂಪರೆಗೆ ಸೇರಿದೆ ಮತ್ತು ಮೂರ್ತಿ ಪೂಜೆಗೆ ಅಲ್ಲ” ಎಂದಿದ್ದಾರೆ.

ಇನ್ನು ನಿನ್ನೆ ಬಿಜೆಪಿ ಮೈತ್ರಿ ಪಕ್ಷ ಎಐಎಡಿಎಂಕೆಯು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ, “ನಾವು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ಉಭಯ ಪೌರತ್ವ ಮತ್ತು ವಸತಿ ಪರವಾನಗಿಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇವೆ. ಸಿಎಎಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತೇವೆ” ಎಂದು ಘೋಷಿಸಲಾಗಿದೆ.

ತಮಿಳುನಾಡು ಚುನಾವಣೆಯು ಏಪ್ರಿಲ್ 06 ರಂದು ನಡೆಯಲಿದ್ದು, ಮೇ 02 ರಂದು ಫಲಿತಾಂಶ ಪ್ರಕಟವಾಗಲಿದೆ.


ಇದನ್ನೂ ಓದಿ: ತಮಿಳುನಾಡು: ಪ್ರಣಾಳಿಕೆಯಲ್ಲಿ ಸಿಎಎ ವಿರೋಧಿಸಿದ BJP ಮಿತ್ರಪಕ್ಷ AIADMK!

LEAVE A REPLY

Please enter your comment!
Please enter your name here