Homeಮುಖಪುಟ’ಮಾಂಸ ಭಕ್ಷಿಸುವ ಕಾಳಿಮಾತೆ’ ವಿವಾದದ ಹಿನ್ನೆಲೆ; ಸನಾತನ ಧರ್ಮದಲ್ಲಿ ಮಾಂಸ ಭಕ್ಷಣೆಯ ಕುರುಹುಗಳು

’ಮಾಂಸ ಭಕ್ಷಿಸುವ ಕಾಳಿಮಾತೆ’ ವಿವಾದದ ಹಿನ್ನೆಲೆ; ಸನಾತನ ಧರ್ಮದಲ್ಲಿ ಮಾಂಸ ಭಕ್ಷಣೆಯ ಕುರುಹುಗಳು

- Advertisement -
- Advertisement -

ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ಸಿನ ಲೋಕಸಭಾ ಸದಸ್ಯೆ ಮೊಹುವಾ ಮೊಯಿತ್ರಾ ಅವರು ’ನನ್ನ ಕಾಳಿ ಮಾಂಸ ಭಕ್ಷಿಸುವ, ಸುರಾಪಾನ ಮಾಡುವ ದೇವತೆ’ ಎಂದು ಹೇಳಿದುದಕ್ಕೆ, ಇದು ಕಾಳೀ ದೇವತೆಯ ಅವಮಾನ ಎಂದೆಲ್ಲ ಹಿಂದುತ್ವವಾದಿಗಳು ಕೂಗೆಬ್ಬಿಸಿದ್ದರು. ಮೊಯಿತ್ರಾ ಅವರ ಮೇಲೆ ಹಲವು ಕಡೆ ಮೊಕದ್ದಮೆಗಳನ್ನೂ ಹೂಡಿದ್ದಾರೆಂದು ವರದಿಯಾಗಿದೆ. ಇದೆಲ್ಲ ಹಿಂದೂ ದೇವತೆಗಳನ್ನು ತಮ್ಮ ಶಾಖಾಹಾರಿ ಆಹಾರ ಪದ್ಧತಿಗೆ ಒಗ್ಗಿಸಿಕೊಳ್ಳಬಯಸುತ್ತಿರುವ ಬ್ರಾಹ್ಮಣ ಸಂಸ್ಕೃತಿಯ ಹುನ್ನಾರ. ಆದರೆ ಹಿಂದೆ ಇದೇ ಸನಾತನ ಧರ್ಮದ ಅನುಯಾಯಿಗಳು ಹೇರಳವಾಗಿ ಮಾಂಸಾಹಾರ ಸೇವಿಸುತ್ತಿದ್ದರು ಎಂದು ಋಗ್ವೇದದಿಂದ ಮೊದಲುಮಾಡಿ ರಾಮಾಯಣ ಮಹಾಭಾರತಗಳೂ ಸೇರಿದಂತೆ ಸರಿಸುಮಾರು ಎಲ್ಲಾ ಹಿಂದೂ ಧರ್ಮ ಗ್ರಂಥಗಳೂ ಹೇಳುತ್ತವೆ. ಕಾಳೀ ಕೂಡ ಮಾಂಸವನ್ನು ತಿನ್ನುತ್ತಿದ್ದಳಲ್ಲದೇ ಸುರಾಪಾನವನ್ನೂ ಮಾಡುತ್ತಿದ್ದಳು ಎನ್ನುವುದಕ್ಕೆ ಹಿಂದೂ ಧರ್ಮ ಶಾಸ್ತ್ರಗಳಲ್ಲಿ, ಪುರಾಣಗಳಲ್ಲಿ ಪ್ರಸ್ತಾಪವಿದೆ. ಇದೆಲ್ಲ ಈ ಹಿಂದುತ್ವವಾದಿಗಳಿಗೆ ಗೊತ್ತಿದೆಯೋ ಇಲ್ಲವೋ ಅಥವಾ ಇದು ಜಾಣ ಅಜ್ಞಾನವೋ ಗೊತ್ತಿಲ್ಲ.

ಇಂಗ್ಲಿಷ್ ಹಾಗೂ ಸಂಸ್ಕೃತ ಎರಡೂ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ರಾಜಾ ರಾಮಮೋಹನ ರಾಯ್ ಅವರು “ಹಸುವನ್ನು ಕೊಲ್ಲುವುದನ್ನು ಹಾಗೂ ಅದರ ಮಾಂಸವನ್ನು ತಿನ್ನುವುದನ್ನು ಪುರಸ್ಕರಿಸುವ ಹಿಂದೂ
ಗ್ರಂಥಗಳು” ಎಂಬ ಒಂದು ಲೇಖನವನ್ನೇ ಬರೆದಿದ್ದರು. “ಪುರಾತನ ವಿಧಿ-ವಿಧಾನಗಳ ಪ್ರಕಾರ ಹಸುವನ್ನು ಯಜ್ಞದಲ್ಲಿ ಬಲಿಕೊಟ್ಟು ಅದರ ಮಾಂಸವನ್ನು ತಿನ್ನದೇ ಇರುವವನು ಉತ್ತಮ ಹಿಂದೂ ಆಗಲಾರ ಎಂದು ನಾನು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು” ಎಂದಿದ್ದರು ಸ್ವಾಮಿ ವಿವೇಕಾನಂದ. (ದಿ ಕಂಪ್ಲೀಟ್ ವರ್ಕ್ಸ ಆಫ್ ಸ್ವಾಮಿ ವಿವೇಕಾನಂದ. ಸಂಪುಟ 3. ಪುಟ. 444).

ಮೊಹುವಾ ಮೊಯಿತ್ರಾ

ಸನಾತನಿಗಳು ಮಾಂಸವನ್ನು ಸೇವಿಸುತ್ತಿದ್ದುದರ ಉಲ್ಲೇಖ ಋಗ್ವೇದದಲ್ಲಿ ಅಶ್ವಮೇಧ ಯಜ್ಞದ ಸಂದರ್ಭದಲ್ಲಿ ಸ್ಪಷ್ಟವಾಗುತ್ತದೆ. ಅಶ್ವಮೇಧ ಯಜ್ಞ ಎಂದರೆ ಯಜ್ಞದಲ್ಲಿ ಕುದುರೆಯನ್ನು ಕೊಲ್ಲುವುದು ಹಾಗೂ ಅದರ ಮಾಂಸವನ್ನು ಯಜ್ಞದ ದೇವತೆಗಳಿಗೆ ಹವಿಸ್ಸಿನ ರೂಪದಲ್ಲಿ ನೀಡಿ ತಾವೂ ಅದನ್ನು ತಿನ್ನುವುದು ಎಂದರ್ಥ. ಋಗ್ವೇದವನ್ನು ವಿದ್ವಾನ್ ಎಚ್.ಪಿ.ವೆಂಕಟರಾಯರು ಕನ್ನಡಕ್ಕೆ ಅನುವಾದಿಸಿ, ಸಾಯಣಾಚಾರ್ಯರು ಮಾಡಿದ ಭಾಷ್ಯವನ್ನೂ ಉಲ್ಲೇಖಿಸಿ, ತಾವೂ ಅದರ ಮೇಲೆ ವಿವರವಾದ ಭಾಷ್ಯವನ್ನು ಬರೆದಿದ್ದಾರೆ. ಇದನ್ನು ಮೈಸೂರು ಮಹಾರಾಜರು ಪ್ರಕಟಿಸಿದ್ದಾರೆ.

ಋಗ್ವೇದದ 1ನೆಯ ಮಂಡಲದ 162ನೆಯ ಸೂಕ್ತ ಅಶ್ವಮೇಧ ಯಜ್ಞಕ್ಕೆ ಸಂಬಂಧಿಸಿದೆ. ಅದರ 12ನೆಯ ಋಕ್ಕಿನಲ್ಲಿ ಅಥವಾ ಮಂತ್ರದಲ್ಲಿ ಹೀಗೆ ಹೇಳಲಾಗಿದೆ: “ಯೇ ವಾಜಿನಂ ಪರಿಪಶ್ಯಂತಿ ಪಕ್ವಂ ಯ ಈಮಾಹುಃ ಸುರಭಿರ್ನಿರ್ಹರೇತಿ, ಯೇ ಚಾರ್ವತೋ ಮಾಂಸಭಿಕ್ಷಾಮುಪಾಸತ ಉತೋ ತೇಷಾಮಭಿಗೂರ್ತಿರ್ನ ಇನ್ವತು”. ಈ ಮಂತ್ರವನ್ನು ವೆಂಕಟರಾಯರು ಹೀಗೆ ಅನುವಾದಿಸಿದ್ದಾರೆ: “ಅಶ್ವದ ಅವಯವಗಳೂ ಮಾಂಸವೂ ಬೇಯುತ್ತಿರುವುದನ್ನು ಬಹಳ ಆಸಕ್ತಿಯಿಂದ ಯಾರು ನೋಡುತ್ತಿರುವರೋ, ಮಾಂಸವು ಚೆನ್ನಾಗಿ ಬೆಂದು ಸುವಾಸನೆಯನ್ನು ಬೀರುತ್ತಿದೆಯಾದ್ದರಿಂದ ಅದನ್ನು ಬೆಂಕಿಯಿಂದ ಕೆಳಗಿಳಿಸಿ ದೇವತೆಗಳಿಗೆ ಅರ್ಪಿಸಿ ತಮಗೂ ಕೊಡಬೇಕೆಂದು ಯಾರು ಅಪೇಕ್ಷಿಸುವರೋ ಅವರ ಕೋರಿಕೆಗಳೆಲ್ಲಾ ನೆರವೇರಲಿ”.

ಋಗ್ವೇದದಲ್ಲಿ ಇಂದ್ರನೇ ಪರಮಾರಾಧ್ಯ ದೇವತೆ. ಅವನನ್ನು 2911 ಸಲ ಉಲ್ಲೇಖಿಸಲಾಗಿದೆ. ಅವನ ಬಗ್ಗೆ ಋಗ್ವೇದ 5.29.8 ಹೀಗೆ ಹೇಳುತ್ತದೆ: “ತ್ರೀ ಯಚ್ಛತಾ ಮಹಿಷಾಣಾಮಘೋ ಮಾಸ್ತ್ರೀ ಸರಾಂಸಿ ಮಘವಾ ಸೋಮ್ಯಾಪಾಃ. ಕಾರಂ ನ ವಿಶ್ವೇ ಅಹ್ವಂತ ದೇವಾ ಭರಮಿಂದ್ರಾಯ ಯದಹಿಂ ಜಘಾನ”. ಈ ಮಂತ್ರವನ್ನು ವೆಂಕಟರಾಯರು ಹೀಗೆ ಅನುವಾದಿಸಿದ್ದಾರೆ: “ಎಲೈ ಇಂದ್ರನೇ, ಯಾವಾಗ ನೀನು ಮುನ್ನೂರು ಮಹಿಷರೂಪವಾದ ಪಶುಗಳ ಮಾಂಸವನ್ನು ಭಕ್ಷಿಸಿದೆಯೋ ಧನವಂತನಾದ ನೀನು ಯಾವಾಗ ಮೂರು ದ್ರೋಣಕಲಶಗಳಲ್ಲಿಯೂ ತುಂಬಿದ್ದ ಸೋಮವನ್ನೆಲ್ಲ ಪಾನಮಾಡಿದೆಯೋ ಮತ್ತು ಇಂದ್ರರೂಪನಾದ ನೀನು ಯಾವಾಗ ವೃತ್ರನನ್ನು ಕೊಂದೆಯೋ, ಆಗ ಸಮಸ್ತ ದೇವತೆಗಳೂ ಸಹ ಸೋಮಪಾನದಿಂದ ಭರಿತನಾದ ಇಂದ್ರನನ್ನು ಸ್ವಾಮಿಗಳು ಭೃತ್ಯನನ್ನು ಕರೆಯುವಂತೆ ಯುದ್ಧಾರ್ಥವಾಗಿ ಕರೆದರು”.

ಬಲಪಂಥೀಯ ಇತಿಹಾಸಕಾರರಾದ ಡಾ. ಅರ್.ಸಿ.ಮಜುಮದಾರ ಅವರೂ ದ ಹಿಸ್ಟರಿ ಎಂಡ್ ಕಲ್ಚರ್ ಆಫ್ ಇಂಡಿಯನ್ ಪೀಪಲ್ ಎಂಬ ಗ್ರಂಥದ ಮೊದಲ ಸಂಪುಟ ’ದಿ ವೇದಿಕ್ ಏಜ್’ನಲ್ಲಿ “ಅತಿಥಿಗಳನ್ನು ಹಸುಗಳ ಮಾಂಸದಿಂದ ಸತ್ಕರಿಸಲಾಗುತ್ತಿತ್ತು” ಎಂದು ಹೇಳುತ್ತಾರೆ. (ಪುಟ 392).

ಇದಲ್ಲದೇ ರಾಮಾಯಣದಲ್ಲೂ ಮಾಂಸಾಹಾರದ ಪ್ರಸ್ತಾಪವಿದೆ. ಕಾಡಿಗೆ ಹೋಗಲು ತಾಯಿಯ ಅನುಮತಿ ಕೇಳಲು ಬಂದಾಗ ರಾಮ ಹೀಗೆ ಹೇಳುತ್ತಾನೆ: “ಚತುರ್ದಶ ಹಿ ವರ್ಷಾಣಿ ವತ್ಸ್ಯಾಮಿ ವಿಜನೇ ವನೇ, ಮಧು ಮೂಲ ಫಲೈ ಜೀವನ ಹಿತ್ವಾ ಮುನಿವದ ಆಮಿಷಮ”. ಅಂದರೆ ನಾನು ಹದಿನಾಲ್ಕು ವರ್ಷ ಕಾಡಿನಲ್ಲಿ ಮುನಿಗಳಂತೆ ಮಾಂಸ ತಿನ್ನುವುದನ್ನು ತ್ಯಜಿಸಿ ಬರಿ ಕಂದಮೂಲಗಳನ್ನು ಹಾಗೂ ಹಣ್ಣುಗಳನ್ನು ತಿಂದು ಬದುಕುತ್ತೇನೆ ಎಂದು ಹೇಳುತ್ತಾನೆ. (ವಾಲ್ಮೀಕಿ ರಾಮಾಯಣ 2.20.29).

ಇನ್ನೊಂದು ಕಡೆ ವಾಲ್ಮೀಕಿ ಹೀಗೆ ಬರೆಯುತ್ತಾರೆ: “ತಾಂ ತಥಾ ದರ್ಶಯಿತ್ವಾ ತು ಮೈಥಿಲೀಂ ಗಿರಿನಿಮ್ನಗಾಮ್, ನಿಷಸಾದ ಗಿರಿಪ್ರಸ್ಥೆ ಸೀತಾಂ ಮಾಂಸೇನ ಚಂದಯನ್, ಅಂದರೆ “ಆ ರೀತಿ ಮಂದಾಕಿನೀ ನದಿಯನ್ನು ಮಿಥಿಲೆಯ ಮಗಳಾದ ಸೀತೆಗೆ ತೋರಿಸಿದ ರಾಮನು ಮಾಂಸದ ಒಂದು ತುಂಡಿನಿಂದ ಅವಳ ಹಸಿವನ್ನು ಹಿಂಗಿಸಲು ಬೆಟ್ಟದ ಇಳಿಜಾರಿನ ಮೇಲೆ ಕುಳಿತುಕೊಂಡನು”. ಇದಲ್ಲದೇ ಶ್ಲೋಕ 2.96.2ರಲ್ಲಿ “ಈ ಮಾಂಸವು ಬೆಂಕಿಯಲ್ಲಿ ಸುಡಲ್ಪಟ್ಟಿದ್ದು ಅತ್ಯಂತ ರುಚಿಕರವಾಗಿದೆ” ಎಂದು ರಾಮನು ಸೀತೆಗೆ ಹೇಳಿದನೆಂದೂ, 7.41.13ರಲ್ಲಿ ರಾಮನು ಸೀತೆಗೆ ಮದ್ಯವನ್ನೂ ಮಾಂಸವನ್ನೂ ಕೊಟ್ಟನೆಂದೂ ಹೇಳಲಾಗಿದೆ.

ಮಹಾಭಾರತದಲ್ಲೂ ಮಾಂಸಾಹಾರದ ಪ್ರಸ್ತಾಪವಿದೆ. ಮಹಾಭಾರತದ ಅರಣ್ಯ ಪರ್ವದ ಅಧ್ಯಾಯ 199ರಲ್ಲಿ ಹೀಗೆ ಹೇಳಲಾಗಿದೆ. “ರಾಜ್ಞೋ ಮಹಾನಸೆ ಪೂವಂ ರಂತಿದೇವಸ್ಯ ವೈ ದ್ವಿಜ. ದ್ವೆ ಸಹಸ್ರೇ ತು ವಧ್ಯೇತೆ ಪಶೂನಾಮನ್ವಹಂ ತದಾ. ಸಮಾಸಂ ದದತೊ ಹ್ಯಾನ್ನಂ ರಂತಿದೇವಸ್ಯ ನಿತ್ಯಶಃ. ಅ ತುಲಾ ಕೀರ್ತಿರಭವನ್ನೃಪಸ್ಯ ದ್ವಿಜಸತ್ತಮ”. ಅಂದರೆ “ಆ ಕಾಲದಲ್ಲಿ ರಂತಿದೇವನ ಅಡುಗೆ ಮನೆಯಲ್ಲಿ ಪ್ರತಿದಿನ ಎರಡು ಸಾವಿರ ಪ್ರಾಣಿಗಳನ್ನೂ, ಹಾಗೆಯೇ ಎರಡು ಸಾವಿರ ಹಸುಗಳನ್ನೂ ಸಾಯಿಸಲಾಗುತ್ತಿತ್ತು”. ಇದನ್ನು ಮೇಲೆ ಹೇಳಿದ ಗ್ರಂಥದ ಎರಡನೆಯ ಸಂಪುಟದ ಪುಟ 578ನಲ್ಲಿ ಡಾ. ಅರ್.ಸಿ.ಮಜುಮದಾರು ಪುಷ್ಟೀಕರಿಸುತ್ತಾರೆ. ಮಹಾಭಾರತದಲ್ಲಿ ಸತ್ತುಹೋದ ಪಿತೃಗಳೂ ಪಿಂಡದಲ್ಲಿ ಮಾಂಸ ಕೇಳುತ್ತವೆ. “ತದಹಃ ಪಿತರಶ್ಚೈನ ಮೂಚುರ್ಜಹಿ ಮೃಗಾನೀತಿ, ತಂ ರಾಜಸತ್ತಮಂ ಪ್ರೀತಾಸ್ತದಾ ಮತಿಮತಾಂ ವರಮ್”. ಅದೇ ದಿನ ಜಾಣನಾದ ವಸುವಿನ ಹತ್ತಿತ ಬಂದು ತಮ್ಮ ಶ್ರಾದ್ಧಕ್ಕಾಗಿ ಒಂದು ಜಿಂಕೆಯನ್ನು ಕೊಲ್ಲಬೇಕೆಂದು ಪಿತೃಗಳು ಕೇಳಿಕೊಂಡವು. (ಆದಿಪರ್ವ, ಅಧ್ಯಾಯ 57 ಶ್ಲೋಕ 37).

ಮಹಾಭಾರತದ ಇನ್ನೊಂದು ಪ್ರಸಂಗದಲ್ಲಿ ಭೀಷ್ಮ ಹೇಳುತ್ತಾರೆ: “ಯಜುಷಾ ಸಂಸ್ಕೃತಂ ಮಾಂಸಂ ನಿವೃತ್ತೊ ಮಾಂಸಭಕ್ಷಣಾತ್, ನಭಕ್ಷಯೆದ್ವೃಥಾಮಾಂಸಂ ಪೃಷ್ಠಮಾಂಸಂ ಚ ವರ್ಜಯೆತ್ ಅಂದರೆ “ಯಾವೊಂದು ವ್ರತದ ಪ್ರಕಾರ ಮಾಂಸ ತಿನ್ನುವುದನ್ನು ಬಿಟ್ಟುಕೊಟ್ಟಿರುವವನು, ಅದು ಯಜುರ್ವೇದದ ಮಂತ್ರಗಳಿಂದ ಶುದ್ಧ ಮಾಡಲಾಗಿದ್ದರೂ ತಿನ್ನಬಾರದು. ಯಾವುದೇ ಪ್ರಾಣಿಯ ಬೆನ್ನುಮೂಳೆಯ ಮಾಂಸವನ್ನು ಹಾಗೂ ಯಜ್ಞಕ್ಕಾಗಿಯಲ್ಲದೇ ಕೊಂದ ಪ್ರಾಣಿಗಳ ಮಾಂಸವನ್ನು ತಿನ್ನಬಾರದು”. (ಮಹಾಭಾರತ 12.186.13).

ಸನಾತನಿಗಳು ಮಾಂಸ ತಿನ್ನುತ್ತಿದ್ದರು ಎನ್ನುವುದಕ್ಕೆ ಪುರಾತಾತ್ವಿಕ ಪುರಾವೆಗಳೂ ದೊರೆತಿವೆ. ಹಸ್ತಿನಾಪುರದಲ್ಲಿ ಉತ್ಖನನ ನಡೆಸಿದ ಬಲಪಂಥೀಯ ಪುರಾತತ್ವ ಶಾಸ್ತ್ರಜ್ಞ ಬಿ.ಬಿ.ಲಾಲ ಅವರು ಉತ್ಖನನದಲಿ, ದನಗಳು, ಎಮ್ಮೆಗಳು, ಕುರಿಗಳು ಹಾಗೂ ಹಂದಿಗಳ ಸುಟ್ಟುಹೋದ ಎಲುಬುಗಳು ದೊರೆತಿದ್ದವು ಹಾಗೂ ಅವುಗಳ ಮೇಲೆ ಅವುಗಳನ್ನು ಕುಯ್ದ ಗುರುತುಗಳು- ಅವುಗಳನ್ನು ತಿನ್ನಲಾಗುತ್ತಿತ್ತೆಂಬುದನ್ನು ಸೂಚಿಸುತ್ತಿದ್ದವು ಎನ್ನುತ್ತಾರೆ.

ಸನಾತನಿಗಳ ಮಾಂಸಾಹಾರ ಬರಿ ಹೊಟ್ಟೆ ಹೊರೆದುಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅದರ ಬೇರೆ ಪ್ರಯೋಜನಗಳೂ ಇದ್ದವು. ನಿಮಗೊಬ್ಬ ಯೋಗ್ಯ ಗಂಡು ಮಗು ಬೇಕಿದ್ದರೆ ಏನು ಮಾಡಬೇಕು ಎಂದು ಬೃಹದಾರಣ್ಯಕ ಉಪನಿಷತ್ತು 6.4.18 ಹೇಳುತ್ತದೆ. “ಅಥ ಯ ಇಚ್ಚೇತ್ಪುತ್ರೊ ಮೆ ಪಂಡಿತೊ ವಿಗೀತಃ ಸಮಿತಿಂಗಮಃ ಶುಶ್ರೂಷಿತಾಂ ವಾಚಂ ಭಾಷಿತಾ ಜಾಯೇತ್, ಸರ್ವಾನ್ವೇದಾನನುಬ್ರುವೀತ, ಸರ್ವ ಮಾಯುರಿಯಾದಿತಿ, ಮಾಂಸೋದನಂ ಪಾಚಯಿತ್ವಾ ಸರ್ಪಿಷ್ಮನ್ತಮಶ್ರೀಯಾತಾಮ್; ಈಶ್ವರೌ ಜನಯಿತವೈ, ಅಉಕ್ಶೇಣ ವಾರ್ಷಭೇಣ ವಾ”. ಒಬ್ಬ ಪ್ರಖ್ಯಾತ ವಿದ್ವಾಂಸನೂ, ಸಭೆಗಳಿಗೆ ಪದೇಪದೇ ಹೋಗುವವನೂ, ಸಂತೋಷಕರ ಮಾತುಗಳನ್ನು ಮಾತನಾಡುವಂತಹನೂ, ಎಲ್ಲಾ ವೇದಗಳನ್ನು ಅಧ್ಯಯನ ಮಾಡುವಂತಹನೂ ಮತ್ತು ಪೂರ್ಣ ಅವಧಿಯವರೆಗೆ ಬದುಕುವಂತಹನೂ ಆದ ಗಂಡು ಮಗುವನ್ನು ಪಡೆಯಲಿಚ್ಛಿಸುವವನು ಯುವ ಅಥವಾ ಸ್ವಲ್ಪ ವಯಸ್ಸಾದ ಗೂಳಿಯ ಮಾಂಸದೊಂದಿಗೆ ಅಕ್ಕಿಯನ್ನು ಬೇಯಿಸಿ, ಅದನ್ನು ತುಪ್ಪದೊಂದಿಗೆ ಬೆರೆಸಿ ಹೆಂಡತಿಯ ಜೊತೆಗೂಡಿ ತಿನ್ನಬೇಕು. ಆಗ ಅಂತಹ ಮಗು ಹುಟ್ಟುತ್ತದೆ.

ವಸಿಷ್ಠ ಧರ್ಮ ಸೂತ್ರದ ಅಧ್ಯಾಯ 10ರ ಸೂತ್ರ 34 ಹೀಗೆ ಹೇಳುತ್ತದೆ: “ನಿಯುಕ್ತಸ್ತು ಯದಾ ಶ್ರಾದ್ಧೆ ದೈವೆ ವಾ ಮಾಂಸಮುತ್ಸುಜೇತ್, ಯಾವನ್ತಿ ಪಶುರೋಮಾಣಿ ತಾವನ್ನರಕಮುಚ್ಛತಿ”. ಶ್ರಾದ್ಧದಲ್ಲಿ ಅಥವಾ ದೈವಾರಾಧನೆಯಲ್ಲಿ ಅಹ್ವಾನಿತನಾದ ಬ್ರಾಹ್ಮಣನು ಅವನಿಗೆ ನೀಡಲಾದ ಮಾಂಸವನ್ನು ತಿನ್ನಲು ನಿರಾಕರಿಸಿದರೆ ಆ ಪ್ರಾಣಿಯ ಮೈಮೇಲೆ ಕೂದಲುಗಳಿರುವಷ್ಟು ವರ್ಷ ನರಕವನ್ನು ಅನುಭವಿಸುತ್ತಾನೆ. ಇಲ್ಲಿ ಮನು ಸ್ವಲ್ಪ ಲಿಬರಲ್ ಆಗಿದ್ದಾನೆ. ಅವನ ಪ್ರಕಾರ “ನಿಯುಕ್ತಸ್ತು ಯಥಾನ್ಯಾಯಂ ಯೊ ಮಾಂಸಂ ನಾತ್ತಿ ಮಾನವಃ, ಸ ಪ್ರೇತ್ಯ ಪಶುತಾಂ ಯಾತಿ ಸಂಭವಾನೇಕವಿಂಶತಿಮ್, ಅಂದರೆ ಶಾಸ್ತ್ರೋಕ್ತವಾಗಿ ಕರೆಯಲಾದ ಅತಿಥಿಯು ಮಾಂಸವನ್ನು ತಿನ್ನಲು ನಿರಾಕರಿಸಿದರೆ ಅವನು ಸತ್ತ ನಂತರ 21 ಜನ್ಮಗಳಲ್ಲಿ ಪಶುವಾಗಿ ಹುಟ್ಟುತ್ತಾನೆ. (ಮನುಸ್ಮೃತಿ 5.35).

ಆದರೆ ಕಾಳಿಯೂ ಮಾಂಸವನ್ನು ತಿನ್ನುತ್ತಿದ್ದಳೇ, ಮದ್ಯಪಾನ ಮಾಡುತ್ತಿದ್ದಳೇ? ಇದಕ್ಕೆ ಶಿವಪುರಾಣದಲ್ಲಿ ಉಲ್ಲೇಖ ಸಿಕ್ಕುತ್ತದೆ. ಶಿವ ಪುರಾಣದ ರುದ್ರ ಸಂಹಿತೆಯ ಐದನೆಯ ಖಂಡದ ಅಧ್ಯಾಯ 38ರ ಶ್ಲೋಕ 2 ಹೀಗೆ ಹೇಳುತ್ತದೆ: “ಅಟ್ಟಾಟ್ಟಹಾಸಮಶಿವಂ ಚಕಾರ ಚ ಪುನಃ ಪುನಃ, ತದಾ ಪಪೌ ಚ ಮಾಧ್ವೀಕಂ ನನರ್ತ ರಣಮೂರ್ಧನಿ”. ಆಕೆಯು ಶತ್ರುಗಳಿಗೆ ಅನಿಷ್ಟವನ್ನು ಸೂಚಿಸುವಂತಹ ವಿಕಟ್ಟಾಟಹಾಸವನ್ನು ಮತ್ತೆಮತ್ತೆ ಮಾಡತೊಡಗಿದಳು. ಅನಂತರ ಮಾಧ್ವೀಕವೆಂಬ ಮದ್ಯವನ್ನು ಪಾನ ಮಾಡಿ ರಣಾಗ್ರದಲ್ಲಿ ನರ್ತಿಸತೊಡಗಿದಳು.

3ನೆಯ ಶ್ಲೋಕದಲ್ಲಿ ಕಾಳಿಯ ರೂಪಗಳಾದ ಯೋಗಿನಿಯರು ಮದ್ಯ ಸೇವಿಸಿದುದರ ಪ್ರಸ್ತಾಪವಿದೆ. “ಉಗ್ರದಂಷ್ಟ್ರಾ ಚೋಗ್ರದಂಡಾ ಕೋಟವೀ ಚ ಪಪೌ ಮಧು, ಅನ್ಯಾಶ್ಚ ದೇವ್ಯಸ್ತತ್ರಾಜೌ ನನೃತುರ್ಮಧು ಸಂಪಪುಃ. ಉಗ್ರದಂಷ್ಟ್ರೆ, (ಉಗ್ರವಾದ ಕೋರೆಹಲ್ಲುಗಳುಳ್ಳವಳು) ಉಗ್ರದಂಡೆ, (ಉಗ್ರವಾದ ಕೋಲು ಹಿಡಿದುಕೊಂಡವಳು) ಕೋಟವೀ (ಬೆತ್ತಲೆ ಇರುವವಳು) ಎಂಬ ಆ ಭದ್ರಕಾಳಿಯ ಯೋಗಿನಿಯರು (ಅಭಿವ್ಯಕ್ತಿಗಳು) ಉತ್ಸಾಹವರ್ಧಕವಾದ ಮಧುಪಾನ ಮಾಡಿದರು.

ಆ ಯುದ್ಧದಲ್ಲಿ ನೆರೆದ ಇತರ ಯೋಗಿನಿಯರೂ ಸ್ವಚ್ಛಂದವಾಗಿ ಮಧುವನ್ನು ಪಾನ ಮಾಡಿ ನರ್ತಿಸತೊಡಗಿದರು. 2.5.38.3. ಇಲ್ಲಿ ಕೋಟವೀ ಶಬ್ದದ ಅರ್ಥ ಬೆತ್ತಲೆ ಎಂದಿರುತ್ತದೆ. ಅಂದರೆ ಕೋಟವೀ ರೂಪದಲ್ಲಿ ಕಾಳಿಯು ಬೆತ್ತಲೆ ಇದ್ದಳು ಎಂದರ್ಥ. ದೇವತೆಗಳನ್ನು ಬೆತ್ತಲೆ ಚಿತ್ರಿಸಿದ್ದಕ್ಕೆ ಖ್ಯಾತ ಚಿತ್ರಕಾರ ಎಮ್.ಎಫ್.ಹುಸೇನ್ ಅವರನ್ನು ದೇಶದಿಂದ ಓಡಿಹೋಗುವಂತೆ ಮಾಡಿದ ಹಿಂದುತ್ವವಾದಿಗಳು ಇದಕ್ಕೆ ಏನು ಹೇಳುತ್ತಾರೋ ಗೊತ್ತಿಲ್ಲ. ಶಿವ ಪುರಾಣದ ಕರ್ತೃ ವ್ಯಾಸ ಮಹರ್ಷಿಯನ್ನೇ ದೇಶದಿಂದ ಓಡಿಸುತ್ತಾರೋ?

ಇನ್ನು ಶ್ಲೋಕ 33, 36 ಮತ್ತು 37 ಹೀಗೆ ಹೇಳುತ್ತವೆ: “ದಾನವಾನಾಂ ಹಿ ಕ್ಷತಜ ಸಾ ಪಪೌ ಕಾಲಿಕಾ ಕ್ಷುಧಾ, ಏತಸ್ಮಿನ್ನಂತರೇ ತತ್ರ ವಾಗ್ಭೂವಾಶರೀರಿಣಿ”. ಆ ಭದ್ರಕಾಳಿಯು ಹಸಿವಿನಿಂದ ಅಲ್ಲಿರುವ ದಾನವರ ನೆತ್ತರವನ್ನು ಹೀರಿ ಕುಡಿದಳು. ಇಷ್ಟರಲ್ಲಿ ಆ ರಣಭೂಮಿಯಲ್ಲಿ ಅಶರೀರವಾಣಿಯು ಕೇಳಿಸಿತು. ಹೀಗೆ ಆಕಾಶದಿಂದ ಹೊರಬಿದ್ದ ಅಶರೀರವಾಣಿಯನ್ನು ಕೇಳಿ ಆ ಭದ್ರಕಾಳಿಯು ಆ ಅನೇಕ ಮಂದಿ ದಾನವರ ಮಾಂಸವನ್ನು ತಿಂದು ಅವರ ನೆತ್ತರವನ್ನು ಕುಡಿದು ಅನಂತರ ಶಿವನ ಸನ್ನಿಧಿಗೆ ಬಂದು ಶಿವನಿಗೆ ಆ ರಣರಂಗದಲ್ಲಿ ನಡೆದ ಸಂಗತಿಯೆಲ್ಲವನ್ನೂ ಕ್ರಮವಾಗಿ ತಿಳಿಸಿದಳು.

“ನಾನು ನಿಮಗೆ ಹೇಳಿದರೆ ಆಶ್ಚರ್ಯವಾಗಬಹುದು. ಹಳೆಯ ಆಚರಣೆಗಳ ಪ್ರಕಾರ, ಗೋಮಾಂಸವನ್ನು ತಿನ್ನದ ವ್ಯಕ್ತಿ ಒಳ್ಳೆಯ ಹಿಂದೂ ಆಗಿರುವುದು ಸಾಧ್ಯವಿರಲಿಲ್ಲ. ಕೆಲವು ಸಂದರ್ಭಗಳಲ್ಲಿ ಅವನು ಒಂದು ಗೂಳಿಯನ್ನು ಬಲಿಕೊಟ್ಟು ತಿನ್ನಲೇಬೇಕಿತ್ತು. ಅದೆಲ್ಲ ಈಗ ಅಸಹ್ಯಕರವಾಗಿದೆ. ಭಾರತದ ಹಿಂದೂಗಳಲ್ಲಿ ಪರಸ್ಪರ ಭಿನ್ನತೆ ಇರಬಹುದು. ಆದರೆ ಒಂದು ವಿಷಯದಲ್ಲಿ ಅವರೆಲ್ಲರೂ ಒಂದೇ – ಗೋಮಾಂಸವನ್ನು ತಿನ್ನುವ ವಿಷಯದಲ್ಲಿ. ಪ್ರಾಚೀನ ಯಜ್ಞಗಳು, ಮತ್ತು ಪ್ರಾಚೀನ ದೇವರುಗಳು, ಅವೆಲ್ಲವೂ ಈಗ ಹೊರಟುಹೋಗಿವೆ. ಇಂದು ಆಧುನಿಕ ಭಾರತವು ವೇದಗಳ ಆಧ್ಯಾತ್ಮಿಕ ಭಾಗಕ್ಕೆ ಸೇರಿದೆ” ಎಂದಿದ್ದರು ಸ್ವಾಮಿ ವಿವೇಕಾನಂದ. (ಸಂಪೂರ್ಣ ಕೃತಿಗಳು, ಸಂಪುಟ.3, ಪುಟ. 444).

ಆದರೆ ಸನಾತನಿಗಳು ಇಂದಿಗೂ ಮಾಂಸಾಹಾರ ಮಾಡುತ್ತಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಸುಮಾರು 6 ವರ್ಷಗಳ ಹಿಂದೆ ಮತ್ತೂರಿನಲ್ಲಿ ಸಂಕೇತಿ ಬ್ರಾಹ್ಮಣರು ಸೋಮಯಾಗವನ್ನು ನಡೆಸಿ, ನಂತರ ಸೋಮರಸದ ಸೇವನೆಯೊಂದಿಗೆ ಯಜ್ಞಕುಂಡದಲ್ಲಿ ಬೆಂದ ಮೇಕೆಯ ಮಾಂಸವನ್ನು ಪ್ರಸಾದವನ್ನಾಗಿ ಸೇವಿಸಿದರೆಂಬ ಸುದ್ದಿಯನ್ನು ಪ್ರಜಾವಾಣಿ ಪ್ರಕಟಿಸಿತ್ತು. ನಂತರ ಆ ಬಗ್ಗೆ ಲಕ್ಷ್ಮೀಪತಿ ಕೋಲಾರ ಅವರ ಒಂದು ಸ್ವಾರಸ್ಯಕರವಾದ ದೀರ್ಘ ಲೇಖನವನ್ನೂ ಪ್ರಜಾವಾಣಿ ಪ್ರಕಟಿಸಿತ್ತು. ಅದರಲ್ಲಿ “’ನಿಗಮೋಕ್ತ ಯಜ್ಞಗಳನ್ನು ನಿರ್ವಹಿಸಬೇಕಾದ ಯಜನ ಧರ್ಮದ ವೈದಿಕರು ತಮ್ಮ ಆರ್ಯಮೂಲಕ್ಕೆ ಯಾವ ರೀತಿಯಲ್ಲೂ ಸಂಬಂಧಪಟ್ಟಿರದಿದ್ದ ದ್ರಾವಿಡಭಾಷಿಕರ ಪೂಜನ ಧರ್ಮದ ವಿಧಿಗಳನ್ನು ನಿರ್ವಹಿಸುವುದೆಂದರೆ ಇದು ಸ್ಪಷ್ಟವಾಗಿ ಧಮಾಂತರವೇ’ ಎಂದು ಆಂಧ್ರದ ಕಡುಸಂಪ್ರದಾಯನಿಷ್ಟ ವೈದಿಕ ಬ್ರಾಹ್ಮಣ ನರಸಿಂಹ ಶಾಸ್ತ್ರಿಗಳು ಅಭಿಪ್ರಾಯ ಪಡುತ್ತಿದ್ದರು ಎಂದು ಅವರ ಮಗ ರಾಣಿ ಶಿವಶಂಕರ ಶರ್ಮ ಅವರು ತಮ್ಮ ತಂದೆಯವರ ಕುರಿತು ಬರೆದಿರುವ ’ಕೊನೆಯ ಬ್ರಾಹ್ಮಣ’ದಲ್ಲಿ ಹೇಳಿದ್ದಾರೆ” ಎಂದು ಲಕ್ಷ್ಮೀಪತಿಯವರು ದಾಖಲಿಸಿದ್ದಾರೆ.

ಆದುದರಿಂದ ಇಂದು ಹಿಂದೂಗಳು ಸನಾತನಿಗಳಂತೆ ಮಾಂಸಾಹಾರವನ್ನು ಒಪ್ಪಿಕೊಳ್ಳಬೇಕೆ ಅಥವಾ ಸನಾತನ-ಧರ್ಮ-ಭ್ರಷ್ಟ ಹಿಂದೂಗಳಂತೆ ಮಾಂಸಾಹಾರವನ್ನು ವಿರೋಧಿಸಬೇಕೆ, ಕಾಳಿ ಮಾಂಸಾಹಾರ ಮಾಡುತ್ತಿದ್ದಳು ಎಂದು ಮೊಹುವಾ ಮೊಯಿತ್ರಾ ಹೇಳುತ್ತಿರುವುದನ್ನು ಸನಾತನಿಗಳಂತೆ ಒಪ್ಪಿಕೊಳ್ಳಬೇಕೇ ಅಥವಾ ಸನಾತನ ಧರ್ಮದಿಂದ ಧರ್ಮಾಂತರಗೊಂಡಿರುವ ಹಿಂದೂಗಳಂತೆ ವಿರೋಧಿಸಬೇಕೆ ಎನ್ನುವುದನ್ನು ಇಂದಿನ ಹಿಂದೂಗಳೇ ನಿರ್ಧರಿಸಿಕೊಳ್ಳಬೇಕು.

ಬಾಪು ಹೆದ್ದೂರಶೆಟ್ಟಿ

ಬಾಪು ಹೆದ್ದೂರಶೆಟ್ಟಿ
ವಕೀಲರು ಹಾಗೂ ಸಮಾಜವಾದಿ ಚಿಂತಕ-ಲೇಖಕ-ಚಳವಳಿಕಾರ. ’ಲೋಹಿಯಾ – ವ್ಯಕ್ತಿ ಮತ್ತು ವಿಚಾರ’, ’ಗಾಂಧಿ-ಅಂಬೇಡ್ಕರ್ ಮತ್ತು ಸಮಾಜವಾದ’, ’ಸಮಾಜವಾದ: ವಾದ-ವಿವಾದ’ ಅವರ ಪುಸ್ತಕಗಳಲ್ಲಿ ಕೆಲವು.


ಇದನ್ನೂ ಓದಿ: ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ: ಮನೆಯೇ ಇಲ್ಲದವರು ಏನು ಮಾಡಬೇಕು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...