Homeಮುಖಪುಟಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ: ಮನೆಯೇ ಇಲ್ಲದವರು ಏನು ಮಾಡಬೇಕು?

ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ: ಮನೆಯೇ ಇಲ್ಲದವರು ಏನು ಮಾಡಬೇಕು?

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಡೆದ ವಸತಿರಹಿತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 39.21 ಲಕ್ಷ ಜನರಿಗೆ ವಾಸಿಸಲು ಸೂರಿಲ್ಲ.

- Advertisement -
- Advertisement -

ಭಾರತ ದೇಶವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಲಕ್ಷಾಂತರ ಜನರ ವಿರೋಚಿತ ಹೋರಾಟದ ಫಲವಾಗಿ ಬ್ರಿಟಿಷ್ ವಸಾಹತುಶಾಹಿಯಿಂದ ವಿಮೋಚನೆಗೊಂಡು ಸ್ವತಂತ್ರ ರಾಷ್ಟ್ರದ ಅಸ್ತಿತ್ವ ಪಡೆದಿದ್ದೇವೆ. ಅದರ ಆಧಾರದಲ್ಲಿ ಶಿಕ್ಷಣ, ಆರೋಗ್ಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಮೋಘ ಸಾಧನೆಗೈದಿದ್ದೇವೆ. ಆದರೂ ಎಲ್ಲರಿಗೂ ಶಿಕ್ಷಣ ಮತ್ತು ಉದ್ಯೋಗ, ಆರೋಗ್ಯ ಮತ್ತು ವಸತಿ ಹಾಗು ಆತ್ಮಗೌರವದಿಂದ ಬದುಕಲು ಸಾಧ್ಯವಾಗಿದೆಯೆ ಎಂದರೆ ನಾವು ಸಾಗಬೇಕಾದ ಹಾದಿ ಇನ್ನೂ ದೂರ ಅನಿಸುತ್ತದೆ.

ಭಾರತ ಸ್ವಾತಂತ್ರ್ಯ ಗಳಿಸಿದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆ ಮೂಲಕ ಜನರು ರಾಷ್ಟ್ರಭಕ್ತಿಯನ್ನು ಪ್ರದರ್ಶನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅದಕ್ಕಾಗಿ ತ್ರಿವರ್ಣ ಧ್ವಜಗಳನ್ನು ಮಾರಲು ರಾಜ್ಯ ಬಿಜೆಪಿ ಸರ್ಕಾರಗಳು ಮುಂದಾಗಿವೆ. ಅದರೆ ಅದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಬಂದು 75 ವರ್ಷ ಆದರೂ ವಾಸಿಸಲು ಕನಿಷ್ಠ ಮನೆ ಇಲ್ಲದವರು ಏನು ಮಾಡಬೇಕು? ಅವರು ಎಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂಬ ಪ್ರಶ್ನೆ ಎದ್ದಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಡೆದ ವಸತಿರಹಿತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ 39.21 ಲಕ್ಷ ಜನರಿಗೆ ವಾಸಿಸಲು ಸೂರಿಲ್ಲ. 21.78 ಲಕ್ಷ ಗ್ರಾಮೀಣ ಭಾಗದ ಜನರು ವಸತಿ ವಂಚಿತರಾದರೆ, 18.17 ಲಕ್ಷ ಜನರು ನಗರ ಭಾಗಗಳಲ್ಲಿ ಸೂರು ವಂಚಿತರಾಗಿದ್ದಾರೆ.

ಕಳೆದ ವರ್ಷ ವಿಧಾನ ಪರಿಷತ್‌ನಲ್ಲಿ ಸದಸ್ಯ ವಿಜಯ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣನವರು, “ರಾಜ್ಯದ ಕೇವಲ ನಗರ ಪ್ರದೇಶಗಳಲ್ಲಿಯೇ 14,15,121 ಜನರು ವಸತಿಗಾಗಿ ಅರ್ಜಿ ಸಲ್ಲಿಸಿದ್ದಾರೆ” ಎಂದು ಉತ್ತರಿಸಿದ್ದರು. ಗ್ರಾಮೀಣ ಪ್ರದೇಶದಲ್ಲಿ 18,71,691 ಮನೆಗಳ ಬೇಡಿಕೆಯಿದೆ ಎಂದು ಅವರು ಅಂಕಿ ಅಂಶಗಳನ್ನು ನೀಡಿದ್ದರು.

ಚಾಮರಾಜನಗರ, ಬೀದರ್ ಜಿಲ್ಲೆಗಳಲ್ಲಿ ಮನೆಗಳಿಗಾಗಿ ಅತಿ ಹೆಚ್ಚು ಅರ್ಜಿಗಳು ಬಂದಿವೆ, ಜಿಪಿಎಸ್ ಮೂಲಕ ನಿವೇಶನಗಳನ್ನು ಪತ್ತೆ ಹಚ್ಚಲಾಗಿದೆ ಎಂಬ ವರದಿಗಳು ಪ್ರಕಟವಾಗುತ್ತಲೇ ಇವೆ. ಇವೆಲ್ಲವೂ ರಾಜ್ಯದಲ್ಲಿ ವಸತಿ ರಹಿತರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅಭಿವೃದ್ದಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿರುವ ಕರ್ನಾಟಕದ ಪರಿಸ್ಥಿತಿಯೇ ಇಷ್ಟು ಕೆಟ್ಟದಿರಬೇಕಾದರೆ ಇನ್ನು ಒಟ್ಟಾರೆ ಭಾರತದ ಪರಿಸ್ಥಿತಿ ಎಷ್ಟು ಕೆಟ್ಟದಾಗಿರಬೇಕು ಅಲ್ಲವೇ?

ಉದ್ಯೋಗ ಸಿಗದ ಕಾರಣಕ್ಕೆ ನಗರ ಪ್ರದೇಶಗಳಿಗೆ ವಲಸೆ ಹೋಗಿ ಅಲ್ಲಿ ನೆಲೆ ಸಿಗದೆ ಸ್ಲಂಗಳಲ್ಲಿ ವಾಸಿಸುತ್ತಿರುವ ಜನರ ಲೆಕ್ಕ ಅಷ್ಟು ಸುಲಭಕ್ಕೆ ಸಿಗುವುದಿಲ್ಲ. ನಗರ ಪ್ರದೇ‍ಶಗಳಲ್ಲಿ ನೂರಾರು ವರ್ಷಗಳಿಂದ ಸ್ಲಂಗಳಲ್ಲಿ ವಾಸಿಸುತ್ತ ದುಡಿಯುತ್ತಿರುವ ಜನರು ಸಣ್ಣ ಸಣ್ಣ ಗುಡಿಸಲುಗಳನ್ನ ಹಾಕಿಕೊಂಡು ವಾಸಿಸುತ್ತಿದ್ದಾರೆ. ಆದರೆ ಅಂತಹ 90% ಜನರು ವಾಸಿಸುವ ಮನೆಗಳಿಗೆ ಇನ್ನೂ ಹಕ್ಕುಪತ್ರ ಸಿಕ್ಕಿಲ್ಲ. ಅವರನ್ನು ಯಾವ ಸಂದರ್ಭದಲ್ಲಿ ಬೇಕಾದರೂ ಅಲ್ಲಿಂದ ಎತ್ತಂಗಡಿ ಮಾಡಬಹುದು ಎನ್ನುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.

ಇನ್ನು ಮಹಾನಗರಗಳಲ್ಲಿ ದುಡಿಯಲು ಬಂದವರು ಚಿಕ್ಕ ಪುಟ್ಟ ಬಾಡಿಗೆ ಮನೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೆ ಜೀವನಪೂರ್ತಿ ದಿನದೂಡುತ್ತಿದ್ದಾರೆ. ಇನ್ನು ಮನೆ ಇಲ್ಲದ ನಿರ್ಗತಿಕರು, ಭಿಕ್ಷುಕರು ಇವರೆಲ್ಲರೂ ತ್ರಿವರ್ಣ ಧ್ವಜ ಹಾರಿಸಬೇಕು ಸರಿ, ಆದರೆ ಅವರ ಪರಿಸ್ಥಿತಿಗಳು ಬದಲಾಗುವುದು ಯಾವಾಗ?

ಜನರ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರ- ಸಿರಿಮನೆ ನಾಗರಾಜ್

ದೇಶದಲ್ಲಿ ಕೋಟ್ಯಾನುಕೋಟಿ ಕುಟುಂಬಗಳಿಗೆ ಮನೆಗಳಿಲ್ಲ. ಇದ್ದ ಬದ್ದ ಮನೆಗಳನ್ನು ಅನಧಿಕೃತ ಎಂದು ಅಧಿಕಾರಿಗಳು ಪೊಲೀಸ್ ಪಹರೆಯಲ್ಲಿ ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿದ್ದಾರೆ. ಸರ್ಕಾರಿ ನಿವೇಶನಗಳಲ್ಲಿ ಗುಡಿಸಲು ಹಾಕಿಕೊಂಡು ಬದಕುತ್ತಿರುವವರಿಗೆ ಅಕ್ರಮ-ಸಕ್ರಮ ಯೋಜನೆಯಡಿ ಹಕ್ಕುಪತ್ರ ನೀಡುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ ಹೊರತು ಇದುವರೆಗೂ ಸಮರ್ಪಕವಾಗಿ ಜನರಿಗೆ ಮನೆಗಳ ಹಸ್ತಾಂತರ ಮಾಡಿಲ್ಲ. ಈ ಮಳೆಗಾಲದಲ್ಲಿ ಅಲ್ಲಿನ ಜನರ ಪರಿಸ್ಥಿತಿ ಹೇಳಲು ಅಸಾಧ್ಯ. ಆ ಬಡಜನರು ಯಾವ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಪ್ರಶ್ನಿಸುತ್ತಾರೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪರವಾಗಿ ದಶಕಗಳಿಂದ ಹೋರಾಡುತ್ತಿರುವ ಹಿರಿಯ ಹೋರಾಟಗಾರ ಸಿರಿಮನೆ ನಾಗರಾಜ್.

ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಹಿಂದೆ ಆಳಿದ ಕಾಂಗ್ರೆಸ್ ಮತ್ತು ಜನತಾ ಪಕ್ಷಗಳಿಗಾಗಲಿ, ಈಗ ಆಳುತ್ತಿರುವ ಬಿಜೆಪಿ ಪಕ್ಷಕ್ಕಾಗಲಿ ಬಡಜನರಿಗೆ ಕನಿಷ್ಠ ಸೂರು ಒದಗಿಸುವ ಯೋಗ್ಯತೆ ಇಲ್ಲ. ಬದಲಿಗೆ ಹರ್‌ ಘರ್‌ ಪೆ ತಿಂರಂಗ ಎಂಬ ನಕಲಿ ಘೋಷಣೆಗಳನ್ನು ಹೇಳಿ ಜನರನ್ನು ಮರಳು ಮಾಡುತ್ತಿದ್ದಾರೆ. ಇದೊಂದು ಅಪ್ಪಟ ಜನದ್ರೋಹದ ಕೆಲಸವಾಗಿದೆ. ಇಂತಹ ಪೊಳ್ಳು ಯೋಜನೆಗಳ ಬದಲಿಗೆ ಜನರಿಗೆ ನೆತ್ತಿಯ ಮೇಲೆ ಸೂರು, ದುಡಿದು ಬದುಕಲು ತುಂಡು ಭೂಮಿ ನೀಡಿ ಘನತೆಯಿಂದ ಬದಕುವ ಹಕ್ಕು ನೀಡಬೇಕೆಂದು ಒತ್ತಾಯಿಸಬೇಕು” ಎಂದರು.

ಮೋದಿ ಸರ್ಕಾರ ಈ ತಂತ್ರದ ಮೂಲಕ ದಿನನಿತ್ಯದ ಸಮಸ್ಯೆ, ಬವಣೆಗಳಿಂದ ಜನಸಾಮಾನ್ಯರ ಗಮನವನ್ನು ಬೇರೆಕಡೆ ತಿರುಗಿಸುತ್ತಿದೆ. ಆ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ತಾನು ಬಗೆದ ದ್ರೋಹದ ಕತೆಯನ್ನು ಮರೆಮಾಚಿ, ತಾವೇ ದೊಡ್ಡ ದೇಶಪ್ರೇಮಿಗಳೆಂದು ಬಿಂಬಿಸಿಕೊಳ್ಳುತ್ತಿದೆ. ಅದು ಇಡೀ ಸ್ವಾತಂತ್ರ್ಯ ಚಳವಳಿಯನ್ನೂ ಈಗಲೂ ಅಲ್ಲಗಳೆಯುತ್ತ ಅದರ ಧೀರೋದಾತ್ತ ಚರಿತ್ರೆಯನ್ನು ಅಳಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಪ್ರಸ್ತುತಗೊಳಿಸಲು ಬಿಜೆಪಿ ತಾನು ನಡೆಸುತ್ತಿರುವ ಪ್ರಯತ್ನದ ಭಾಗವಾಗಿ, ಸ್ವಾತಂತ್ರ್ಯ ಚಳವಳಿಯ ಅವಿಭಾಜ್ಯ ಭಾಗವೇ ಆಗಿರುವ ಖಾದಿಯನ್ನೂ ಕೊಲ್ಲಲು ಪ್ರಯತ್ನಿಸುತ್ತಿದೆ. ಅದಕ್ಕಾಗಿ ದೇಶಾದ್ಯಂತ ಪ್ರಜ್ಞಾವಂತರು ಎಷ್ಟು ಮನವಿ ಮಾಡಿದರೂ ಕೇಳದೆ ಖಾದಿಯ ಮೇಲೆ ಜಿಎಸ್‌ಟಿ ತೆರಿಗೆ ಹಾಕಿದೆ. ಅದಕ್ಕೋಸ್ಕರವೇ ಪಾಲಿಯೆಸ್ಟರ್ ಧ್ವಜಕ್ಕೆ ಅನುಮತಿ ನೀಡಿದೆ. ಸಂವಿಧಾನದ ವಿಧಿಗೆ ವಿರುದ್ಧವಾಗಿ, ಖಾದಿಯ ಬದಲು ಪಾಲಿಯೆಸ್ಟರ್ ಬಟ್ಟೆಯ ಧ್ವಜಗಳಿಗೆ ಅನುಮತಿ ನೀಡುವ ಮೂಲಕ ಅಂಬಾನಿಯ ಪಾಲಿಯೆಸ್ಟರ್ ಬಟ್ಟೆ ಉದ್ಯಮಕ್ಕೆ ಸಾವಿರಾರು ಕೋಟಿ ರೂಪಾಯಿಗಳ ದಿಡೀರ್ ಲಾಭ ಮಾಡಿಕೊಡಲು ಹವಣಿಸುತ್ತಿದೆ ಎಂದು ಸಹ ಸಿರಿಮನೆ ನಾಗರಾಜ್ ಆರೋಪಿಸಿದ್ದಾರೆ.

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಐತಿಹಾಸಿಕ ಸಂದರ್ಭದಲ್ಲಿ ಇದುವರೆಗೆ ಆಗಿರುವ ಸಾಧನೆಗಳು ಮತ್ತು ಮುಂದೆ ಮಾಡಬೇಕಿರುವ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಬೇಕು. ಆ ಮೂಲಕ ದೇಶವಾಸಿಗಳ ಕಲ್ಯಾಣಕ್ಕೆ ಪಣ ತೊಡಬೇಕು. ಆದರೆ ಮೋದಿ ಸರ್ಕಾರ ಕೇವಲ ಹೆಸರು ಬದಲಾವಣೆ, ಕೆಲಸಕ್ಕೆ ಬಾರದ ಹೊಸ ಘೋಷಣೆಗಳಲ್ಲಿ ಮುಳುಗಿದೆ. ಆ ಪಟ್ಟಿಗೆ ಹೊಸ ಸೇರ್ಪಡೆ ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಆಗಿದೆ.

ಇದನ್ನೂ ಓದಿ: ದೊರೆಸ್ವಾಮಿ ಮತ್ತು ಬಡಜನರ ಭೂಮಿ-ವಸತಿ ಹೋರಾಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಖಂಡಿತ ನಿಮ್ಮ ಮಾಹಿತಿ ಸತ್ಯ ಆದರೆ ಇವರ ವಂಚಿತರಾಗಲು ರಾಜಕೀಯ ಮುಖಂಡರುಗಳೇ ಮುಖ್ಯ ಕಾರಣ ಅವರಿಗೆ ಸುಮಾರು 50 ಲಕ್ಷದಿಂದ 500 ಕೋಟಿ ವರೆಗೂ ಸಹ ಆಸ್ತಿಗಳನ್ನು ಹೊಂದಿರುತ್ತಾರೆ, ಆದರೂ ಸಹ ಸರ್ಕಾರದ ಕಟ್ಟ ಕಡೆಯ ವ್ಯಕ್ತಿಗೆ ತಲುಪಬೇಕಾದ ಅಂದರೆ ತಲುಪಬೇಕಾದ ವಸತಿಗಳು ಅಥವಾ ನಿವೇಶನಗಳು ಮುಖಂಡರುಗಳ ಪಾಲಾಗುತ್ತಿದೆ ಇದು ನನಗೆ ತಿಳಿದಿರುವ ಕಹಿ ಸತ್ಯ

  2. ಹೌದು ಸರ್ ನಿಮ್ಮ ಮಾತು ಒಪ್ಪೋಣ.
    ಕಾಂಗ್ರೇಸ್ ಪಕ್ಷದ ಸ್ವಾತಂತ್ರ್ಯ ದ ಹೋರಾಟದ ಕೊಡುಗೆಯನ್ನು ಮರೆಮಾಚುತ್ತಿದ್ದಾರೆ ನೀವು ನಿಮ್ಮ ಲೇಖನದಲ್ಲಿ ಅಷ್ಟು ಜನಕ್ಕೆ ಸೂರಿಲ್ಲದಿರುವುದಕ್ಕೆ ಮೋದಿಯೇ ಕಾರಣ ಕಾಂಗ್ರೇಸ್ ಪಾತ್ರವಿಲ್ಲ ಎಂದು ಬಿಂಬಿಸಬೇಡಿ. ಈಗಿನ ಕಾಂಗ್ರೇಸ್ ಹಾಗೂ ಸ್ವಾತಂತ್ರ್ಯ ಪೂರ್ವ ಕಾಂಗ್ರೇಸ್ ಎರಡೂ ಬೇರೆ ಎಂದು ಒಪ್ಪಿಕೊಳ್ಳಿ .

  3. ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ..
    ಪ್ರಜಾಪ್ರಭುತ್ವವನ್ನು ಮರೆಮಾಚಿ ನಿರಂಕುಶ ಪ್ರಭುತ್ವ ಆಡಳಿತ ನಡೆಸುತ್ತಿರುವ ಮನುವಾದಿಗಳು ಹೇಗೆ ತಾನೇ ದೇಶ ಪ್ರೇಮಿಗಳು ಆಗಲೂ ಸಾಧ್ಯ

LEAVE A REPLY

Please enter your comment!
Please enter your name here

- Advertisment -

Must Read

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ | Naanu Gauri

ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

0
ಗುಜರಾತ್‌ನಾದ್ಯಂತ ನಡೆದ ಹೈನುಗಾರಿಕೆ ನಡೆಸುವ ಸಮುದಾಯದ ಪ್ರತಿಭಟನೆಯ ನಂತರ ರಾಜ್ಯ ವಿಧಾನಸಭೆಯು ಗೋವು ನಿಯಂತ್ರಣ ಮಸೂದೆಯನ್ನು ಸರ್ವಾನುಮತದಿಂದ ಹಿಂಪಡೆದಿದೆ. ಸುಮಾರು ಐದು ತಿಂಗಳ ಹಿಂದೆ ರಾಜ್ಯದ ನಗರ ಪ್ರದೇಶಗಳ ರಸ್ತೆಗಳು ಮತ್ತು ಸಾರ್ವಜನಿಕ...