ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವರದಿ ಮಾಡುತ್ತಿದ್ದ ಸಿಎನ್‌ಎನ್ ಮಾಧ್ಯಮ ಸಂಸ್ಥೆಯ ಪತ್ರಕರ್ತರ ಮೇಲೆ ಇಸ್ರೇಲಿ ಸೈನಿಕರು ನಡೆಸಿದ ದೌರ್ಜನ್ಯವನ್ನು ಮಾಧ್ಯಮ ಒಕ್ಕೂಟ ಫಾರಿನ್ ಪ್ರೆಸ್ ಅಸೋಸಿಯೇಷನ್ (ಎಫ್‌ಪಿಎ) ತೀವ್ರವಾಗಿ ಖಂಡಿಸಿದೆ.
ಪ್ಯಾಲೆಸ್ತೀನ್‌ನ ತಯಾಸಿರ್ ಗ್ರಾಮದ ಬಳಿ ಇಸ್ರೇಲಿ ವಸಾಹತುಗಾರರು ನಡೆಸಿದ ದಾಳಿ ಮತ್ತು ಅಕ್ರಮ ಹೊರಠಾಣೆ ನಿರ್ಮಾಣದ ನಂತರದ ಪರಿಸ್ಥಿತಿಯ ಬಗ್ಗೆ ಗುರುವಾರ (ಮಾ.26) ವರದಿ ಮಾಡುತ್ತಿದ್ದ ಸಿಎನ್‌ಎನ್ ತಂಡವನ್ನು ಇಸ್ರೇಲಿ ಸೈನಿಕರು ಬಂಧಿಸಿದ್ದಾರೆ ಎಂದು ಶನಿವಾರ (ಮಾ.28) ಎಫ್‌ಪಿಎ ಹೇಳಿದೆ.
ಇಸ್ರೇಲಿ ಸೈನಿಕರು ಪ್ಯಾಲೆಸ್ತೀನಿಯನ್ನರ ಮೇಲೆ ಆಕ್ರಮಣಕಾರಿ ಧೋರಣೆ ತೋರಿದ್ದು, ಪತ್ರಕರ್ತರು ತಮ್ಮ ಗುರುತನ್ನು ತಿಳಿಸಿದ ನಂತರವೂ ಅವರತ್ತ ಬಂದೂಕು ತೋರಿಸಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇಸ್ರೇಲಿ ರಕ್ಷಣಾ ಪಡೆಯ (ಐಡಿಎಫ್) ಸೈನಿಕನೊಬ್ಬ ಸಿಎನ್‌ಎನ್ ಫೋಟೋ ಜರ್ನಲಿಸ್ಟ್ ಸಿರಿಲ್ ಥಿಯೋಫಿಲೋಸ್ ಅವರ ಕುತ್ತಿಗೆ ಪಟ್ಟಿ ಹಿಡಿದು ನೆಲಕ್ಕೆ ತಳ್ಳಿದ್ದಲ್ಲದೆ, ಅವರ ಕ್ಯಾಮರಾವನ್ನೂ ಹಾನಿಗೊಳಿಸಿದ್ದಾನೆ ಎನ್ನಲಾಗಿದೆ.
ಸಿಎನ್‌ಎನ್ ತನ್ನದೇ ವರದಿಯಲ್ಲಿ ಈ ಘಟನೆಯ ವಿವರಗಳನ್ನು ದೃಢಪಡಿಸಿದ್ದು, ಫೋಟೋ ಜರ್ನಲಿಸ್ಟ್ ಅನ್ನು ಸಿರಿಲ್ ಥಿಯೋಫಿಲೋಸ್ ಎಂದು ಹೇಳಿದೆ.
ಸಿಎನ್‌ಎನ್ ತಂಡವು ತಯಾಸಿರ್ ಗ್ರಾಮದಲ್ಲಿ ವಸಾಹತುಗಾರರ ಹಿಂಸಾಚಾರವನ್ನು ದಾಖಲಿಸುತ್ತಿತ್ತು. ವರದಿಗಾರ ಜೆರೆಮಿ ಡೈಮಂಡ್ ಪ್ರಕಾರ, ಸೈನಿಕರು ವಸಾಹತುಗಾರರನ್ನು ತಡೆಯುವ ಬದಲು ಪತ್ರಕರ್ತರನ್ನೇ ಗುರಿಯಾಗಿಸಿಕೊಂಡಿದ್ದಾರೆ.
ಈ ಘಟನೆಯ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿರುವ ಎಫ್‌ಪಿಎ “ಇದು ಅಚಾತುರ್ಯದಿಂದ ನಡೆದ ದಾಳಿಯಲ್ಲ. ಪತ್ರಕರ್ತರು ಎಂದು ಗೊತ್ತಾದ ಮೇಲೂ ಉದ್ದೇಶಪೂರ್ವಕವಾಗಿ ಹಿಂಸಾತ್ಮಕ ಹಲ್ಲೆ ನಡೆಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ ಎಂದಿದೆ.
ಇಸ್ರೇಲಿ ಸೈನಿಕರ ಬಲಪ್ರಯೋಗವು ಅತಿಯಾದದ್ದು ಮತ್ತು ಅಪಾಯಕಾರಿಯಾಗಿತ್ತು. ಪತ್ರಕರ್ತರು ಮತ್ತು ನಾಗರಿಕರತ್ತ ಬಂದೂಕುಗಳನ್ನು ತೋರಿಸುವುದು, ಕ್ಯಾಮರಾಮ್ಯಾನ್ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿರುವುದು ಮತ್ತು ಸಿಬ್ಬಂದಿಯನ್ನು ಬಂಧಿಸಿರುವುದು ಎಲ್ಲಾ ಮಿತಿಗಳನ್ನು ಮೀರಿದ ಕ್ರಮಗಳಾಗಿವೆ ಎಂದು ಹೇಳಿದೆ.
ಇಂತಹ ವರ್ತನೆಯು ಮಾಧ್ಯಮಗಳ ಬಗ್ಗೆ ಇರುವ ಆಳವಾದ ಆತಂಕಕಾರಿ ದ್ವೇಷದ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದನ್ನು ಯಾವುದೇ ಸಂದರ್ಭದಲ್ಲೂ ಸಹಿಸಲು ಸಾಧ್ಯವಿಲ್ಲ ಎಂದು ಖಂಡಿಸಿದೆ.
ಇಸ್ರೇಲಿ ಮಿಲಿಟರಿಯು ಈ ಘಟನೆಯ ಬಗ್ಗೆ ತನಿಖೆ ನಡೆಸುವುದಾಗಿ ತಿಳಿಸಿದ್ದು, ಸೈನಿಕರ ಈ ವರ್ತನೆಯು ಐಡಿಎಫ್ ಮೌಲ್ಯಗಳಿಗೆ ವಿರುದ್ಧವಾದುದು ಎಂದು ಹೇಳಿದೆ.
“ಈ ಘಟನೆಯಲ್ಲಿ ಸೈನಿಕರ ನಡವಳಿಕೆ ಮತ್ತು ಹೇಳಿಕೆಗಳು ಐಡಿಎಫ್ ಅನ್ನು ಪ್ರತಿನಿಧಿಸುವುದಿಲ್ಲ. ಇದು ಐಡಿಎಫ್ ಸೈನಿಕರಿಂದ ನಿರೀಕ್ಷಿಸುವ ಶಿಸ್ತಿಗೆ ವಿರುದ್ಧವಾಗಿದೆ ಮತ್ತು ಈ ಬಗ್ಗೆ ತನಿಖೆ ನಡೆಸಲಾಗುವುದು” ಎಂದು ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾದವ್ ಶೋಶಾನಿ ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಮುಂದುವರಿದು, “ನಾನು ಖಾಸಗಿಯಾಗಿ ಕ್ಷಮೆಯಾಚಿಸಿದ್ದೇನೆ. ಮತ್ತೆ ಹೇಳುತ್ತಿದ್ದೇನೆ, ಇದು ಸಂಭವಿಸಬಾರದಿತ್ತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಕೆಲಸ, ಅದರಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅವಕಾಶ ನೀಡುವುದೂ ಸೇರಿದೆ” ಎಂದಿದ್ದಾರೆ.
ಈ ತಿಂಗಳಲ್ಲಿ ಸಿಎನ್‌ಎನ್ ಪತ್ರಕರ್ತರ ಮೇಲೆ ಇಸ್ರೇಲಿ ಸೈನಿಕರು ದಾಳಿ ನಡೆಸಿದ ಎರಡನೇ ಪ್ರಕರಣ ಇದಾಗಿದೆ.
ಕೆಲವು ದಿನಗಳ ಹಿಂದೆ ರಂಝಾನ್ ತಿಂಗಳಲ್ಲಿ, ಪೂರ್ವ ಜೆರುಸಲೇಂನ ಓಲ್ಡ್ ಸಿಟಿಯ ಗೋಡೆಗಳ ಹೊರಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ ಜನರ ಬಗ್ಗೆ ವರದಿ ಮಾಡುತ್ತಿದ್ದಾಗ ಪತ್ರಕರ್ತರ ಮೇಲೆ ದಾಳಿ ಮಾಡಲಾಗಿತ್ತು.
ಇಸ್ರೇಲಿ ಪೊಲೀಸ್ ಅಧಿಕಾರಿಗಳು ನಡೆಸಿದ ಅಪ್ರೊಚೋದಿತ ದಾಳಿಯಿಂದ ಸಿಎನ್‌ಎನ್ ಪ್ರೊಡ್ಯೂಸರ್ ಒಬ್ಬರ ಮಣಿಕಟ್ಟು ಮುರಿದಿತ್ತು.
ಅಕ್ಟೋಬರ್ 2025ರಲ್ಲಿ ಗಾಝಾ ಕದನ ವಿರಾಮವಾದರೂ, ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಸೈನಿಕರು ದೌರ್ಜನ್ಯ ಮುಂದುವರಿಸಿದ್ದಾರೆ. ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದ, ಇಸ್ರೇಲಿ ವಸಾಹತುಗಾರರಿಂದ ಪ್ಯಾಲೆಸ್ತೀನಿಯರ ಮೇಲೆ ಪ್ರಾಣಹಾನಿ ಉಂಟುಮಾಡುವ ಹೊಸ ಸರಣಿ ದಾಳಿಗಳು ನಡೆಯುತ್ತಿವೆ. ಇಸ್ರೇಲಿ ಸೈನಿಕರು ಇದನ್ನು ತಡೆಯುವ ಬದಲು, ದಾಳಿಕೋರರನ್ನು ಪ್ರಚೋದಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.


