Homeಅಂಕಣಗಳುಅಧಮ ಮಾರ್ಗದಲ್ಲಿ ಓಡುತ್ತಿರುವ ಮಾಧ್ಯಮ!

ಅಧಮ ಮಾರ್ಗದಲ್ಲಿ ಓಡುತ್ತಿರುವ ಮಾಧ್ಯಮ!

ಪತ್ರಕರ್ತ ಅನ್ನೋ ಶಬ್ದಕ್ಕ ಇರೋ ಮರ್ಯಾದಿ ಎಲ್ಲಾ ಹೋಗಿಬಿಟ್ಟೇತಿ. ಅಪರೂಪಕ್ಕ ಯಾರರ ಛಲೋ ಇದ್ದರ 'ಇವರೂ ಪತ್ರಕರ್ತರು. ಆದರ ಬ್ಯಾರೆದವರ ಗತೆ ಅಲ್ಲ' ಅನ್ನೋ ಪರಿಸ್ಥಿತಿ ಬಂದೇತಿ.

- Advertisement -
- Advertisement -

“ಪೊಲೀಸು, ವಕೀಲರು, ನ್ಯಾಯಾಧೀಶರು ಎಲ್ಲರ ಕೆಲಸ ನೀವ ಮಾಡೋದಾದರ ನಾವು ಯಾಕ ಇರಬೇಕು?’’ ಈ ಮಾತನ್ನು ಯಾರು ಯಾರಿಗೆ ಹೇಳಿದರು ಅಂತ ಮುಂದೆ ಒಂದು ದಿವಸ ಕಾಲೇಜು ಪರೀಕ್ಷೆಯೊಳಗೆ ಪ್ರಶ್ನೆ ಬರಬಹುದು.

ಇದರ ಉತ್ತರ ಈಗನ ತಿಳ್ಕೊಂಡುಬಿಡೋದು ಛಲೋ.

ಈ ಮಾತನ್ನ ಬಾಂಬೆ ಹೈಕೋರ್ಟು ನ್ಯಾಯಾಧೀಶರು ರಿಪಬ್ಲಿಕ್ ಅನ್ನೋ ಟಿವಿ ವಾಹಿನಿಯ ಮುಖ್ಯಸ್ಥರಿಗೆ 2020ರಾಗ ಹೇಳಿದರು. ಅದು ಯಾಕ್‍ಅಂದ್ರ ಅಷ್ಟೊತ್ತಿಗೆ ಆ ವಾಹಿನಿಯವರು ಸುಶಾಂತ ಸಿಂಗ್‍ ಅನ್ನೋ ನಟನ ಸಾವಿನ ಬಗ್ಗೆ ವಿಚಾರಣೆ ನಡೆಸಿ, ಸಾಕ್ಷಿಗಳನ್ನ ಪ್ರಶ್ನಿಸಿ, ಅವರು ತಪ್ಪು, ಇವರ ತಪ್ಪು ಅಂತ ತಮ್ಮದೇ ಆದಂತಾ ತೀರ್ಪು ಕೊಟ್ಟುಬಿಟ್ಟಿದ್ದರು.

ಆ ವಾಹಿನಿಯವರು ಜನರಿಗೆ ಬೇಕಾಗಲಿ, ಬ್ಯಾಡಾಗಲಿ, ಯಾರರ ನೋಡಲಿ, ಬಿಡಲಿ, ಅದರಿಂದ ಯಾರಿಗರ ಉಪಯೋಗ ಆಗಲಿ ಬಿಡಲಿ, ಸುಶಾಂತ ಸಿಂಗ್‍ ಅವರನ್ನ ಸಿಂಗಂ ಮಾಡಿ, ಸರ್ಕಾರನ ಪ್ರಕಾಶ್ ರೈ ಮಾಡಿ, ಮೂರು ತಿಂಗಳಗಟ್ಟಲೇ, ಹಗಲೂ ರಾತ್ರಿ ತೋರಿಸಿದರು. ಆ ಹೊತ್ತಿನಾಗ ದೇಶದಾಗ ಕೊರೊನಾದಿಂದ ಸತ್ತವರ ಕಡೆ, ಉಪವಾಸ ಬಿದ್ದವರ ಕಡೆ ನೋಡಲಾರದ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಗಾಂಧಾರಿ ಆಗಿಬಿಟ್ಟರು.

ತಾವು ಮಾಡೋ ಕೆಲಸ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಕ್ಕ ಕನ್ನಡಿ ಹಿಡಿಯೋದು ಹೊರತು ಅವರ ಮಾಡೋ ಕೆಲಸ ಹೊರಗುತ್ತಿಗೆ ಪಡಿಯೋದು ಅಲ್ಲಾ ಅಂತ ಅವರಿಗೆ ಅನ್ನಿಸಲೇ ಇಲ್ಲ.

ಅವರು ಹೋಗಲಿ ಬಿಡರಿ. ಭಾಳ ಮಂದಿ ಪತ್ರಕರ್ತರು ತಮಗ ಲೋಕಾಯುಕ್ತ, ಸಿಬಿಐ, ಸಿಐಡಿ, ಎಫ್‍ಬಿಐ, ಇತ್ಯಾದಿ ಸಂಸ್ಥೆಗಳ ಅಧಿಕಾರ ಐತಿ ಅಂತ ತಿಳಕೊಂಡುಬಿಟ್ಟಿರತಾರ. ಯಾವಾಗಲೂ ಯಮಕಿನಿಂದ ಇರ್ತಾರ, ಅವರು ತಿನ್ನೋ ರೊಕ್ಕದಾಗ ಪಾಲು ಬೇಡತಾರ. ದೊಡ್ಡವರು ಸಣ್ಣವರು ಅನ್ನೋದು ಇಲ್ಲದೇ ಸೊಕ್ಕಿನಿಂದ ಮಾತಾಡತಾರ.

ಅವರು ಸರ್ಕಾರಿ ಅಧಿಕಾರಿಗಳ ಮುಂದ ತೋಳದಂತೆ ಹಲ್ಲು ತೋರಿಸತಾರ, ಆದರ ಖಾಸಗಿ ಸಂಸ್ಥೆಗಳ ಕಾಲು ಕಾಲಾಗ ಅಡ್ಡಾಡಿ ಮುದ್ದಿನ ಬೆಕ್ಕು ಆಗತಾರ. ಪತ್ರಕರ್ತ ಅನ್ನೋ ಶಬ್ದಕ್ಕ ಇರೋ ಮರ್ಯಾದಿ ಎಲ್ಲಾ ಹೋಗಿಬಿಟ್ಟೇತಿ. ಅಪರೂಪಕ್ಕ ಯಾರರ ಛಲೋ ಇದ್ದರ ‘ಇವರೂ ಪತ್ರಕರ್ತರು. ಆದರ ಬ್ಯಾರೆದವರ ಗತೆ ಅಲ್ಲ’ ಅನ್ನೋ ಪರಿಸ್ಥಿತಿ ಬಂದೇತಿ.

ಹಂಗಾರ ಇವರ ಮೂಲ ಏನು? ಸಮಾಜದಾಗ ಇವರ ಪಾಲು ಏನು? ಇವರು ಏನು ಮಾಡಬೇಕಾಗಿತ್ತು? ಏನು ಮಾಡಾಕ ಹತ್ಯಾರ?

ಸುದ್ದಿ ಅನ್ನೋದು ಭಾಳ ಹಳೇದು. ಇದು ಮಾನವ ಇತಿಹಾಸ ಆರಂಭವಾದಗಿನಿಂದ ಐತಿ.

‘ಸುದ್ದಿಯ ಇತಿಹಾಸ’ (`ಹಿಸ್ಟರಿ ಆಫ್ ನ್ಯೂಸ್’) ಪುಸ್ತಕ ಬರೆದ ಮೈಕೆಲ್ ಸ್ಟೀಫನ್ ಅವರ ಪ್ರಕಾರ ಸುದ್ದಿ ಅಂದರೆ “ಸಾರ್ವಜನಿಕ ಹಿತಾಸಕ್ತಿಯ ವಿಷಯವೊಂದರ ಬಗ್ಗೆ ಹೊಸ ಮಾಹಿತಿ. ಇದನ್ನು ಸಮಾಜದ ಒಂದು ಭಾಗದ ಜತೆ ಹಂಚಿಕೊಳ್ಳಲಾಗಿರುತ್ತದೆ’’.

ಇಲ್ಲಿ ಕೆಲವು ವಿಷಯಗಳನ್ನು ನೀವು ಗಮನಿಸಿರಿ. ಇದು ಹೊಸದು, ಇದು ಸಾರ್ವಜನಿಕ ಹಿತಾಸಕ್ತಿಯ ವಿಷಯ, ಹಾಗೂ ಇದನ್ನು ಸಮಾಜದ ಒಂದು ಭಾಗದ ಜೊತೆ ಮಾತ್ರ ಹಂಚಿಕೊಳ್ಳಲಾಗುತ್ತದೆ. ಇದು ಇಪ್ಪತ್ತೊಂದನೇ ಶತಮಾನದ ವ್ಯಾಖ್ಯಾನ. ಹಂಗ ನೋಡಿದರ ಹಿಂದಿನ ವ್ಯಾಖ್ಯಾನಗಳಿಗೆ ಹೋಲಿಸಿದರೆ ಇದು ಭಾಳ ಏನು ಬದಲಾಗಿಲ್ಲ.

ಸುದ್ದಿ ಎಂದರೇ ಈಗ ನಮ್ಮ ಸುತ್ತ ಏನು ನಡೆಯಿತ್ತದೆ ಎನ್ನುವುದರ ದಾಖಲೆ. ಇದನ್ನು ಸಂಗ್ರಹಿಸಿ, ಇತರರಿಗೆ ನೀಡುವವರು ಸುದ್ದಿಗಾರರು, ಅನ್ನೋದು ಹಳೆಯ ವ್ಯಾಖ್ಯಾನ. ಒಂದು ಅರ್ಥದೊಳಗ ಸುದ್ದಿ ಮನುಷ್ಯನ ಸಹೋದರ. ಅವನ ಜೊತೆಗೆ ಅದು ಹುಟ್ಟಿತು. ಇದಕ್ಕೆ ಮುಖ್ಯ ಕಾರಣಗಳು ಯಾವುವು ಅಂದ್ರ ತನ್ನ ಸುಖ-ದುಃಖ ಹಂಚಿಕೊಳ್ಳೋದು ಮತ್ತು ಗಾಳಿ ಮಾತು ಮಾನವ ಸಹಜ ಸ್ವಭಾವ ಆಗಿರೋದು. ಇದು ತಮ್ಮವರ ಜೊತೆಗೆ ಅಥವಾ ಅಪರಿಚಿತರ ಜೊತಿಗೆ ಇರಬಹುದು! ಇದು ಸುದ್ದಿಯ ಬೆನ್ನಲುಬು ಅಂತ ನೀವು ವಿಚಾರ ಮಾಡೋದು ಆದರ ಅದು ಇವತ್ತಿಗೂ ಬದಲಾಗಿಲ್ಲ. ಅದರ ಸುತ್ತ ಕೆತ್ತಿದ ರೂಪ ಬದಲಾಗೇತಿ.

ಸುಮಾರು 15 ಸಾವಿರ ವರ್ಷ ಹಿಂದಿನ ಸ್ಪೇನ್ ದೇಶದ ಅಲತಾಮರಿಯದಲ್ಲಿನ ಶಿಲಾಯುಗದ ಚಿತ್ರಗಳು ಅತ್ಯಂತ ಹಳೆಯ ಸುದ್ದಿಯ ರೂಪಗಳು. ಭಾರತದ ಭೀಮ ಬೇಟಕಾದೊಳಗ ಶಿಲಾಯುಗದ ಮಾನವರು ವರ್ಣಚಿತ್ರ ಬಿಡಿಸಿದ್ದಾರ. ಅದರಾಗ ಅಂದಿನ ಜನಾಂಗ ಬೇಟೆಗೆ ಹೋಗಿದ್ದು, ಪ್ರಾಣಿಗಳ ಜೊತೆ ಹೊಡೆದಾಟ ಮಾಡಿದ್ದು, ಎಲ್ಲರ ಜತೆ ಸೇರಿ ಊಟ ಮಾಡಿದ್ದು, ಆಟ ಆಡಿದ್ದು ಎಲ್ಲವನ್ನೂ ದಾಖಲೆ ಮಾಡಿದ್ದಾರ. ಸಂಶೋಧಕರು ಇವನ್ನ ಶಿಲಾ ಯುಗದ ಸಂಸ್ಕೃತಿಯ ರೂಪಗಳು ಅಂತ ಕರೆದಿದ್ದಾರ. ಇನ್ನೊಂದು ರೀತಿಯಿಂದ ನೋಡಿದರ ಶಿಲಾಯುಗದ ಚಿತ್ರಗಳು ಇರೋ ಗುಹೆಗಳು ಅಂದಿನ ಸುದ್ದಿ ಮಾಧ್ಯಮಗಳು. ಕಲ್ಲಿನ ಪತ್ರಿಕೆಗಳು ಅಂತ ಬೇಕಾದರ ಅಂದುಕೊಳ್ರಿ.

ಅವತ್ತ ಕಲ್ಲಿನ ಗೋಡೆ ಮ್ಯಾಲೆ ಕಾಯಿ ಪಲ್ಲೆ ರಸ – ಪ್ರಾಣಿಯ ರಕ್ತದಾಗ ಕಲ್ಲಿನ ಚೂರು ಅದ್ದಿ ಮಾಡಿದ ಚಿತ್ರಗಳಿಂದ ಹಿಡಿದು ಇಂದಿನ ವಾಟಸಪ್ಪುದೊಳಗ ಇಮೋಜೀಗಳಿಂದ ಮೀಮು ಕಳಿಸೋದರ ತನಕಾ ಸುದ್ದಿ ಏನು ಬದಲು ಆಗಿಲ್ಲ. ಅದನ್ನು ನೋಡುವ, ಕಳಿಸುವ ಮನುಷ್ಯರು ಏನು ಭಾಳ ಬದಲು ಆಗಿಲ್ಲ.

ಆದರ ಆವಾಗ ಜನ ತಮ್ಮ ಸಂತೋಷಕ್ಕ ಸುದ್ದಿ ಮಾಡತಿದ್ದರು, ಈಗ ಶಕ್ತಿ ರಾಜಕೀಯದ ಸಲುವಾಗಿ ಮಾಡತಾರ. ಇದ ಮುಖ್ಯ ವ್ಯತ್ಯಾಸ.

ಇಂದಿನ ಪತ್ರಿಕೋದ್ಯಮದ ಬಗ್ಗೆ ಹಿರಿಯ ಪತ್ರಕರ್ತ, ಚಿಂತಕ ಮಹೇಶ್ ವಿಜಪುರಕರ ಅವರು ಒಂದು ಮರಿಯಲಾರದ ಮಾತು ಹೇಳಿದ್ದಾರ. ಜಗತ್ತಿನ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮೊದಲು ಕಲಿಯೋ ಪಾಠ ಸುದ್ದಿಯ ಸ್ವರೂಪದ ಬಗ್ಗೆ.

ಅದು ಏನು ಅಂದರೆ ಸುದ್ದಿಯಲ್ಲಿ ಐದು ಡಬ್ಲೂ ಒಂದು ಎಚ್ ಇರಬೇಕು ವಾಟ್, ವೆನ್, ವೇರ್, ವೈ, ಹೂ ಮತ್ತು ಹೌ- ಏನು, ಯಾವಾಗ, ಎಲ್ಲಿ, ಯಾಕೆ, ಯಾರು ಮತ್ತು ಹೇಗೆ. ಈ ಪಾಠವನ್ನು ಶಿಕ್ಷಕರು ಸಾಕಾಗುವಷ್ಟು ಹೇಳಿ ಹೋಗಿದ್ದಾರೆ. ವಿದ್ಯಾರ್ಥಿಗಳು ಕೇಳಿ ಕೇಳಿ ಸಾಕಾಗಿ ಹೋಗಿದ್ದಾರೆ. ಆದರೆ ಶಿಕ್ಷಕರು ಇನ್ನೊಂದು ಮಾತು ಹೇಳುವುದನ್ನು ಮರೆತು ಬಿಟ್ಟಿದ್ದಾರೆ – ಅದು ಏನು ಎಂದರೆ `ಒಂದು ಎಸ್’ – ಸೋ ವಾಟ್ (ಹೌದು. ಏನೀಗ?). ಇದು ಈಗ ಅತಿ ಅವಶ್ಯವಾಗಿ ಬೇಕಾಗೇದ.

ದಿ ರೈಟ್ ಅಂಡ್ ರಾಂಗ್ ಅನ್ನುವ ಬ್ಲಾಗು ಬರೆಯುವ ವಿಜಪುರಕರ ಅವರ `ಐದು ಡಬ್ಲೂ, ಒಂದು ಎಚ್, ಹಾಗೂ ಒಂದು ಎಸ್’ ಎನ್ನುವ ದಾರಿಯಲ್ಲಿ ನಾವು ನಡೆದರೆ ಇಂದಿನ ಸಮಸ್ಯೆಗಳು ಕಮ್ಮಿ ಆಗಬಹುದು’ ಅಂತಾರ.

`ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಚೇರಿಯಲ್ಲಿ ಅಲೆದಾಡಿದ ರಾವಣನ ಆತ್ಮ’ ಅನ್ನುವ ಸುದ್ದಿ ಬರೆಯುವ, `ಚಿಕ್ಕಮಗಳೂರಿನಲ್ಲಿ ಕೊರೊನಾ ಹಬ್ಬಿದ ಗರ್ಭಿಣಿ. ಕಾಫಿ ನಾಡಿನಲ್ಲಿ ಗರ್ಭಿಣಿ ಬಾಂಬ್’ ಅನ್ನುವ ಶಿರೋನಾಮೆ ಸೃಷ್ಟಿಸುವ, `ಹಾಲಿವುಡ್ ನಟಿಗೆ ಹೆಣ್ಣು ಮಗು – ನಮ್ಮ ಪ್ರತಿನಿಧಿಯಿಂದ’ ಅನ್ನುವ ರೀತಿ ವಿನ್ಯಾಸ ಹೊಂದಿಸುವ, ಪತ್ರಕರ್ತರಿಂದ ಮುಕ್ತಿ ಹೊಂದುವುದು ಇದೇ ಮಾರ್ಗದಿಂದ ಹೋದಾಗ ಮಾತ್ರ ಸಾಧ್ಯ ಅಂತ ಅನ್ನಿಸತದ.

ಇದು ಶಿಷ್ಟ ಮಾಧ್ಯಮಗಳ ಮಾತು ಆದರೆ ಎಲ್ಲರ ಫೋನಿನಲ್ಲಿ ಭೂತದಂತೆ ಹೊಕ್ಕೊಂಡಿರುವ ಸಾಮಾಜಿಕ ಮಾಧ್ಯಮಗಳ ಗತಿ ಏನು?

ಭಾರತೀಯ ಸಂಜಾತ ಸುಂದರ ಪೀಚಾಯಿ ಅವರಿಗಿನಾ ಮುಂಚೆ ಗೂಗಲ್ ಮುಖ್ಯಾಧಿಕಾರಿ ಆಗಿದ್ದ ಎರಿಕ್ ಸ್ಮಿಟ ಅವರು ಸೋಷಿಯಲ್ ಮೀಡಿಯಾ ಎಂದರೆ `ಪೆದ್ದ ವರ್ಧಕ’ (ಈಡಿಯಟ್ ಯಾಂಪ್ಲೀಫಯರ) ಅಂತ ಕರೆದಿದ್ದಾರ. `ಬ್ಯಾಟ ರಿಂಗ್ ರಾಮ್’ ಅನ್ನುವ ಹೆಸರಿನಲ್ಲಿ ಬರೆಯುವ ಬ್ಲಾಗರ್ – ವಿಕಿಪೀಡಿಯಿಯನ್ ಒಬ್ಬರು ನಿಮ್ಮ ಫೋನಿನಲ್ಲಿ ಎರಡು ಡಬ್ಲೂಗಳು ಇವೆ ಒಂದು ವಾಟಸಪ್ಪು, ಇನ್ನೊಂದು ವಿಕಿಪೀಡಿಯ. ನಾವು ಯಾವುದಕ್ಕೆ ಪ್ರಾಮುಖ್ಯತೆ ಕೊಡ್ತೇವಿ ಅನ್ನುವುದರ ಮ್ಯಾಲೆ ನಮ್ಮ ಜೀವನದ ಮುಂದಿನ ಹಾದಿ ನಿರ್ಧಾರ ಆಗತದ ಅಂತ ಹೇಳತಾರ.

ಅವರ ಮಾತು ಇಂದಿನ ಕತ್ತಲ ರಾತ್ರಿಯೊಳಗ ಬೆಳಕು ತೋರಬಹುದು.

`ನಾಸ್ತಿ ಏಧಿಸಂ ದಾನಾಂ
ಯಾಧಿಸಂ ಧಮ್ಮ ದಾನಾಂ
ಧಮ್ಮ ಸಂಸ್ತವೋ
ಧಮ್ಮ ಸಂವಿಭಾಗೋ
ಧಮ್ಮ ಸಂಬಂಧೋ’

“ನನ್ನ ಮಕ್ಕಳಂತೆ ಇರುವ ಪ್ರಜೆಗಳಿಗೆ ಯಾವ ದಾನ ಸೂಕ್ತ? ಅವರಿಗೆ ನ್ಯಾಯ-ಧರ್ಮದ ದಾನವೆ ಸೂಕ್ತ. ಆ ನ್ಯಾಯವ್ಯವಸ್ಥೆಯಲ್ಲಿ ಎಲ್ಲರೂ ಸಮಾನರು, ಎಲ್ಲರೂ ಸಹಭಾಗಿಗಳು, ಎಲ್ಲರೂ ಒಬ್ಬರಿಗೆ ಒಬ್ಬರು ಸೌಹಾರ್ದ ಸಂಬಂಧ ಇಟ್ಟುಕೊಂಡವರು’’.

ಇಂದಿಗೆ ಎರಡು 2300 ವರ್ಷಗಳ ಹಿಂದೆ ಜುನಾಗಡ್ ಪ್ರದೇಶದ ಗಿರನಾರದಲ್ಲಿ ಸಾಮ್ರಾಟ್ ಅಶೋಕ್ ಕೆತ್ತಿಸಿದ ಶಿಲಾಶಾಸನದ ಸಾಲುಗಳು ಇವು.

ಇವು ಬರೆ ಸರ್ಕಾರಕ್ಕ – ಸಮಾಜಕ್ಕ ಮಾತ್ರ ಸಂಬಂಧಪಟ್ಟಿದ್ದವಲ್ಲ. ಸಮಾಜದ ಭಾಗವಾದ ಮಾಧ್ಯಮ ಸಹಿತ ಈ ಅಮರ ನೀತಿ ಶಾಸನದ ಆಶಯದ ಪ್ರಕಾರ ನಡೆದುಕೊಳ್ಳಬಹುದು.
ಅಲ್ಲವೇ ಮನೋಲ್ಲಾಸಿನಿ?


ಇದನ್ನೂ ಓದಿ: ‘ಅಪೋಫಿಸ್’ ಧರೆಗೆ ಅಪ್ಪಳಿಸುವ ಮುನ್ನ ನಿಮ್ಮ ಎಲ್ಲಾ ಆಸೆಗಳನ್ನು ಆದಷ್ಟು ಬೇಗ ಪೂರೈಸಿಕೊಳ್ಳಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಯಲ್ಲಿ ಬೆಂಬಲಿಸಿಲ್ಲ ಎಂದು ದಲಿತರ ಮೇಲೆ ಹಲ್ಲೆ ಪ್ರಕರಣ: YSRCP ಮುಖಂಡನಿಗೆ ಜೈಲು

0
1996ರಲ್ಲಿ ನಡೆದಿದ್ದ ದಲಿತರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಮುಖಂಡ ತೋಟ ತ್ರಿಮೂರ್ತಿಲು ಸೇರಿದಂತೆ ಒಂಬತ್ತು ಮಂದಿಯನ್ನು ವಿಶಾಖಪಟ್ಟಣ ನ್ಯಾಯಾಲಯವು ದೋಷಿ ಎಂದು ಘೋಷಿಸಿ...