ಸಾಂದರ್ಭಿಕ ಚಿತ್ರ

ಸೃಷ್ಟಿಪೂರ್ವದ ಭೂತಸಾಮಗ್ರಿಯ ಅವ್ಯವಸ್ಥಿತ ಸ್ಥಿತಿಯ ಗ್ರೀಕ್ ದೇವತೆ “ಅಪೋಫಿಸ್” ಹೆಸರಿನ ಈ ಉಲ್ಕಾಬಂಡೆ ತನ್ನ ವೇಗವನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ಸುಮಾರು 340 ಚ.ಮೀಟರ್, ಅಂದರೆ ಸುಮಾರು ಮೂರು ಫುಟ್ಬಾಲ್ ಮೈದಾನದಷ್ಟು, ವಿಸ್ತೀರ್ಣದ ಈ ಉಲ್ಕೆ 2068 ರಲ್ಲಿ ಭೂಮಿಗೆ ಬಂದು ಅಪ್ಪಳಿಸುವ ಸಾಧ್ಯತೆ ಇದೆ.

ಅಸಮತೋಲಿತ ಸೌರ ತಾಪಮಾನ ಹೆಚ್ಚಳಿಕೆಯಿಂದಾಗಿ ಇದು ತನ್ನ ವೇಗ ಹೆಚ್ಚಿಸಿಕೊಳ್ಳುತ್ತಿದ್ದು “ಯಾರ್ಕೊವ್ಸ್ಕಿ ಪರಿಣಾಮ” ದಿಂದಾಗಿ ಧರೆಯೆಡೆಗೆ ಮುನ್ನುಗ್ಗುತ್ತಿದೆ. ಆದರೆ  ಯಾರ್ಕೊವ್ಸ್ಕಿ ಪರಿಣಾಮದ ದೀರ್ಘಕಾಲೀನ ಭವಿಷ್ಯ ನುಡಿಯುವುದೂ ಕಷ್ಟಕರ ಎನ್ನುತ್ತಾರೆ ಹವಾಯಿ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಅಸ್ಟ್ರಾನಮಿಯ ವಿಜ್ಞಾನಿಗಳು. ಇತ್ತೀಚೆಗೆ ಅಮೇರಿಕಾದ ನಾಸಾ ಸಂಸ್ಥೆ ಉಲ್ಕೆ “ಬೆನ್ನು” ವಿನ ಬೆನ್ನೇರಿ ಅದರಿಂದ ಸ್ಯಾಂಪಲ್ ಪಡೆದ್ದಿದ್ದು ಸಹ ಈ ಯಾರ್ಕೋವ್ಸ್ಕಿ ಪರಿಣಾಮವನ್ನು ಅರಿಯುವ ಒಂದು ಪ್ರಯತ್ನವಾಗಿದೆ.

ಈ ಉಲ್ಕೆ ಧರೆಗೆ ಅಪ್ಪಳಿಸಿದ್ದೇ ಆದರೆ ಅದರಿಂದ ಸುಮಾರು 880 ಮಿಲಿಯನ್ ಟನ್ ಡೈನಾಮೈಟ್  ಅಥವಾ ಹಿರೋಶಿಮಾ ನಗರವನ್ನು ಧ್ವಂಸ ಮಾಡಿದ 65,000  ಅಣುಬಾಂಬ್‌ಗ ಳು ಏಕಕಾಲಕ್ಕೆ ಸ್ಫೋಟಗೊಂಡ ವಿಧ್ವಂಸಕ ಪರಿಣಾಮ ಬೀರುತ್ತದೆ.

ಅಮೇರಿಕದ ಅಸ್ಟ್ರೋನಾಮಿಕಲ್ ಸೊಸೈಟಿಯ ಡಿವಿಜನ್ ಆಫ್ ಪ್ಲಾನೆಟರಿ ಸೈನ್ಸ್‌ನ 2020ರಲ್ಲಿ ನಡೆದ ವರ್ಚ್ಯುಅಲ್ ಸಭೆಯಲ್ಲಿ ಮಂಡಿಸಲಾದ ಒಂದು ವೈಜ್ಞಾನಿಕ ಲೇಖನದ ಸಹ ಲೇಖಕರಾದ ಡೇವ್ ಥೋಲೆನ್ ಪ್ರಕಾರ ಸುಬಾರು ಟೆಲೆಸ್ಕೋಪ್ ಮೂಲಕ ಸಿಕ್ಕ ದತ್ತಾಂಶಗಳಿಂದ ಅಪೋಫಿಸ್ ವೇಗ ಹೆಚ್ಚುತ್ತಿರುವುದು ಮತ್ತು ತನ್ನ ಗುರುತ್ವಾಕರ್ಷಣ ವಕ್ರಪಥವನ್ನು ಬಿಟ್ಟು ವರ್ಷಕ್ಕೆ 170 ಮೀಟರ್ ಜಾರುತ್ತಿರುವುದು ತಿಳಿದುಬಂದಿದೆ. ಇದರಿಂದ ಅದು 2068ಕ್ಕೆ ಧರೆಗೆ ಅಪ್ಪಳಿಸುವುದು ಬಹುತೇಕ ಖಚಿತ ಎನ್ನುತ್ತಾರೆ.

ಸಣ್ಣ ಅಂದರೆ ಐದರಿಂದ ಹತ್ತು ಮೀಟರ್ ವಿಸ್ತೀರ್ಣದ ಉಲ್ಕೆಗಳು ಧರೆಯ ಹತ್ತಿರದಿಂದ ಹಾದು ಹೋಗುವುದು ಸಾಮಾನ್ಯ, ಆದರೆ ಇಷ್ಟು ದೊಡ್ಡ ಉಲ್ಕೆ ಅಪರೂಪವಷ್ಟೇ ಅಲ್ಲ, ಇಷ್ಟು ಸಮೀಪ ಬರುವುದಿಲ್ಲ. 2068ರಲ್ಲಿ ಧರೆಗೆ ಅಪ್ಪಳಿಸುವ ಮುನ್ನ ಅಪೋಫಿಸ್ ಏಪ್ರಿಲ್ 13, 2029ರಂದು ಧರೆಯ ಸಮೀಪದಿಂದ ಹಾದು ಹೋಗಲಿದ್ದು, ಅದನ್ನು ಬರಿಯ ಕಣ್ಣಿಂದ, ಯಾವುದೇ ಟೆಲೆಸ್ಕೋಪ್ ಅಥವಾ ಬೈನಾಕ್ಯುಲರ್ ಸಹಾಯವಿಲ್ಲದೇ ನೋಡಬಹುದಾಗಿದೆ.

2068ರಲ್ಲಿ ನಾನಂತೂ ಇರುವುದಿಲ್ಲ, ನೀವು ಇರುವುದಾದಲ್ಲಿ ನಿಮ್ಮ ಆಸೆಗಳನ್ನು ಮುಂಚಿತವಾಗಿ ಪೂರೈಸಿಕೊಳ್ಳಿ.

 

  • ಕನ್ನಡ ಅನುವಾದ: ಜಿ.ಆರ್. ವಿದ್ಯಾರಣ್ಯ

ಮೂಲ ಇಂಗ್ಲಿಷ್ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ.


ಇದನ್ನೂ ಓದಿ: ಕೈದಿಗಳ ಉಭಯ ಸಂಕಟದ ಕಥೆ: ಇದು ಕೇವಲ ಕಥೆಯಲ್ಲ, ಒಂದು ರಣನೀತಿಯೂ ಹೌದು

LEAVE A REPLY

Please enter your comment!
Please enter your name here