Homeಮುಖಪುಟವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

ವೈದ್ಯವಿಜ್ಞಾನ ನೊಬೆಲ್ 2021; ನಮ್ಮ ಸುತ್ತಲಿನ ಜಗತ್ತನ್ನು ನಾವು ಹೇಗೆ ಗ್ರಹಿಸುತ್ತೇವೆ?

- Advertisement -
- Advertisement -

ಈ ವರ್ಷದ ಶರೀರಶಾಸ್ತ್ರ ಅಥವಾ ವೈದ್ಯವಿಜ್ಞಾನಕ್ಕೆ ನೀಡಲಾಗುವ ನೊಬೆಲ್ ಪಾರಿತೋಷಕವನ್ನು ತಾಪಮಾನ ಮತ್ತು ಸ್ಪರ್ಶದ ಗ್ರಾಹಕಗಳ (ರಿಸೆಪ್ಟರ್‌ಗಳ) ಸಂಶೋಧನೆಗಾಗಿ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೋಷಿಯನ್ ಅವರುಗಳಿಗೆ ನೀಡಲಾಗಿದೆ.

ನಾವು ಶಾಖ, ತಂಪು ಮತ್ತು ಸ್ಪರ್ಶವನ್ನು ಹೇಗೆ ಗ್ರಹಿಸುತ್ತೇವೆ ಎಂಬುದು ಮನುಷ್ಯಜಗತ್ತಿನ ಅತಿದೊಡ್ಡ ವಿಸ್ಮಯಗಳಲ್ಲೊಂದು ಮತ್ತು ನಮ್ಮ ಉಳಿವಿಗೆ ಹಾಗೂ ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ನಾವು ಹೇಗೆ ವ್ಯವಹರಿಸುತ್ತೇವೆಂಬುದಕ್ಕೆ ಅತಿಮುಖ್ಯ. ನಮ್ಮ ನಿತ್ಯದ ಬದುಕಿನಲ್ಲಿ ಈ ಅರಿವನ್ನು ನಾವು ಸಹಜವೆಂದು ಭಾವಿಸುತ್ತೇವೆ. ಆದರೆ, ತಾಪಮಾನ ಮತ್ತು ಒತ್ತಡವನ್ನು ಅರಿಯಲು ಸಾಧ್ಯವಾಗುವಂತೆ ನರಪ್ರಚೋದನೆಗಳು (ನರ್ವ್ ಇಂಪಲ್ಸಸ್) ಹೊರಡುವುದು ಹೇಗೆ? ಈ ಪ್ರಶ್ನೆಯನ್ನು ಈ ಬಾರಿಯ ನೊಬೆಲ್ ಪುರಸ್ಕೃತರು ಬಗೆಹರಿಸಿದ್ದಾರೆ.

ಕಣ್ಣುಗಳು ಹೇಗೆ ಬೆಳಕನ್ನು ಗುರುತಿಸುತ್ತವೆ, ಶಬ್ದತರಂಗಗಳು ನಮ್ಮ ಒಳಗಿವಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಹಾಗೂ ಹೇಗೆ ವಿವಿಧ ರಾಸಾಯನಿಕ ಸಂಯೋಜನೆಗಳು ನಮ್ಮ ಮೂಗು ಮತ್ತು ಬಾಯಿಯೊಳಗಿನ ರಿಸೆಪ್ಟರ್‌ಗಳೊಂದಿಗೆ ಪ್ರವರ್ತಿಸಿ ವಾಸನೆ ಹಾಗೂ ರುಚಿಯನ್ನು ಹುಟ್ಟಿಸುತ್ತವೆಂಬ ಪ್ರಶ್ನೆಗಳು ಶತಮಾನಗಳ ಕಾಲ ಮನುಷ್ಯರ ಮನಸ್ಸನ್ನು ದಿಗ್ಭ್ರಮೆಗೊಳಿಸಿವೆ.

ಹುಲ್ಲಿನ ಮೇಲೆ ಬರಿಗಾಲಿನಲ್ಲಿ ನಡೆಯುವ, ಗಾಳಿಯ ಬೀಸು ಮತ್ತು ಸೂರ್ಯನ ತಾಪದ ಸಂವೇದನೆಗಳನ್ನು ನಮ್ಮ ದೇಹ ಹೇಗೆ ಗ್ರಹಿಸುತ್ತದೆ; ಈ ಬದಲಾಗುವ ಪ್ರಚೋದಕಗಳು ಹಾಗೂ ತಾಪಮಾನ, ಸ್ಪರ್ಶ ಮತ್ತು ಚಲನೆಯ ಪರಿಣಾಮಗಳಿಗೆ ದೇಹ ಹೊಂದಿಕೊಳ್ಳುತ್ತದೆ ಎಂಬ ಪ್ರಶ್ನೆಗಳು ಕೂಡ.

ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಪೋಷಿಯನ್ ಅವರುಗಳ ಸಂಶೋಧನೆಗಿಂತ ಮೊದಲು, ನರವ್ಯವಸ್ಥೆ ಹೇಗೆ ಸುತ್ತಲಿನ ಪರಿಸರದ ಮತ್ತು ರಾಸಾಯನಿಕ ಪ್ರಚೋದಕಗಳನ್ನು ಗ್ರಹಿಸುತ್ತದೆ ಮತ್ತು ಅರ್ಥೈಸುತ್ತದೆ ಎಂಬುದರ ಕುರಿತ ನಮ್ಮ ತಿಳಿವಳಿಕೆಯಲ್ಲಿ ಒಂದು ಬಗೆಹರಿಯದ ಪ್ರಶ್ನೆ ಇತ್ತು; ತಾಪಮಾನ ಮತ್ತು ಯಾಂತ್ರಿಕ ಪ್ರಚೋದಕಗಳು ವಿದ್ಯುತ್ ಸಂದೇಶಗಳಾಗಿ ನಮ್ಮ ನರವ್ಯವಸ್ಥೆಯಲ್ಲಿ ಹೇಗೆ ಪರಿವರ್ತಿತವಾಗುತ್ತವೆ ಎಂಬುದು ತಿಳಿಯದ ಪ್ರಶ್ನೆಯಾಗಿ ಉಳಿದಿತ್ತು.

1990ರಲ್ಲಿ ಡೇವಿಡ್ ಜ್ಯೂಲಿಯಸ್ ಅವರು, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಕ್ಯಾಲಿಫೊರ್ನಿಯಾ ವಿಶ್ವವಿದ್ಯಾಲಯದಲ್ಲಿ, ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕ ಸಂಯುಕ್ತವು ಉರಿಯುವ ಅನುಭವವನ್ನು ಯಾಕೆ ಉಂಟುಮಾಡುತ್ತದೆಂಬುದರ ಮೇಲೆ ಕೆಲಸ ಮಾಡುತ್ತಿದ್ದರು. ಕ್ಯಾಪ್ಸೈಸಿನ್ ನರಕೋಶಗಳನ್ನು ಸಕ್ರಿಯಗೊಳಿಸುತ್ತದೆಂಬುದು ಗೊತ್ತಿದ್ದ ಸಂಗತಿಯಾಗಿತ್ತು; ಆದರೆ ಆ ಕಾರ್ಯವಿಧಾನವೇನೆಂಬುದು ಒಗಟಾಗಿತ್ತು.

ಜ್ಯೂಲಿಯಸ್ ಮತ್ತು ಅವರ ಜೊತೆಗಾರರು, ನೋವು, ಉಷ್ಣಾಂಶ ಮತ್ತು ಸ್ಪರ್ಶಕ್ಕೆ ಪ್ರತಿಕ್ರಿಯಿಸುವ ನರಕೋಶಗಳನ್ನು ಪ್ರತಿನಿಧಿಸುವ ಡಿಎನ್‌ಎ ತುಣುಕುಗಳ ಒಂದು ಸಂಗ್ರಹವನ್ನು ಸಿದ್ಧಪಡಿಸಿದರು. ಕಠಿಣವಾದ ಸಂಶೋಧನೆಯ ನಂತರ, ಜೀವಕೋಶಗಳನ್ನು ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲಗೊಳಿಸುವ ಒಂದು ವಂಶವಾಹಿಯನ್ನು (ಜೀನ್) ಗುರುತಿಸುವುದು ಸಾಧ್ಯವಾಯಿತು. ಹೀಗೆ, ಕ್ಯಾಪ್ಸೈಸಿನ್‌ಗೆ ಸಂವೇದನಾಶೀಲವಾದ ವಂಶವಾಹಿ ದೊರಕಿತು! ಈ ವಂಶವಾಹಿಯ ಪ್ರೊಟೀನ್‌ನ್ನು ಟಿಆರ್‌ಪಿವಿ1 ಎಂದು ಕರೆಯಲಾಯಿತು. ಈ ರಿಸೆಪ್ಟರ್ ಉಷ್ಣಾಂಶವನ್ನು ಗ್ರಹಿಸುವ ರಿಸೆಪ್ಟರ್ ಆಗಿತ್ತು ಮತ್ತು ನೋವುಂಟುಮಾಡಬಲ್ಲವೆಂದು ಹೇಳಬಹುದಾದ ಉಷ್ಣಾಂಶಗಳಲ್ಲಿ ಇದು ಸಕ್ರಿಯಗೊಳ್ಳುತ್ತಿತ್ತು.

ಈ ಸಂಶೋಧನೆಯು ಅತಿ ಮಹತ್ವದ್ದಾಗಿತ್ತು. ಇದು, ತಣ್ಣಗಿರುವುದನ್ನು ಗ್ರಹಿಸುವ ಇನ್ನೂ ಅನೇಕ ತಾಪಮಾನದ ರಿಸೆಪ್ಟರ್‌ಗಳ ಶೋಧಕ್ಕೆ ದಾರಿಮಾಡಿಕೊಟ್ಟಿತು. ಅನೇಕ ಪ್ರಯೋಗಾಲಯಗಳು, ಜೀವವೈಜ್ಞಾನಿಕವಾಗಿ ಮಾರ್ಪಡಿಸಲ್ಪಟ್ಟು ಈ ಹೊಸದಾಗಿ ಕಂಡುಹಿಡಿಯಲಾದ ವಂಶವಾಹಿಗಳನ್ನು ಹೊಂದಿಲ್ಲದ ಇಲಿಗಳ ಮೇಲೆ, ಸಂಶೋಧಿಸಲ್ಪಟ್ಟಿದ್ದ ಗ್ರಾಹಕಗಳು ತಾಪಮಾನ ಸಂವೇದನೆಯ ಮೇಲೆ ಬೀರುವ ಪರಿಣಾಮವೇನು ಎಂಬುದರ ಕುರಿತ ಪ್ರಯೋಗಗಳನ್ನು ಆರಂಭಿಸಿದವು. ಡೇವಿಡ್ ಜ್ಯೂಲಿಯಸ್ ಅವರು ಟಿಆರ್‌ಪಿವಿ1ನ್ನು ಕಂಡುಹಿಡಿದ ಸಂಶೋಧನೆಯು, ತಾಪಮಾನದ ವ್ಯತ್ಯಾಸಗಳು ಹೇಗೆ ನರ ವ್ಯವಸ್ಥೆಯಲ್ಲಿ ವಿದ್ಯುತ್ ಸಂದೇಶಗಳನ್ನು ಹುಟ್ಟುಹಾಕಬಲ್ಲವು ಎಂಬ ಕುರಿತು ಪಥಪ್ರವರ್ತಕವಾದುದಾಗಿತ್ತು.

ಅಮೆರಿಕದ ಕ್ಯಾಲಿಫೋರ್ನಿಯಾದ ಲಹೋಯಾದಲ್ಲಿರುವ ಸ್ಕ್ರಿಪ್ಸ್ ರಿಸರ್ಚ್ ಸಂಸ್ಥೆಯಲ್ಲಿದ್ದ ಆರ್ಡೆಮ್ ಪಟಪೋಷಿಯನ್ ಅವರು, ಯಾಂತ್ರಿಕ ಪ್ರಚೋದಕಗಳಿಂದ ಸಕ್ರಿಯಗೊಳ್ಳುವ ಅಸ್ಪಷ್ಟ ರಿಸೆಪ್ಟರ್‌ಗಳನ್ನು ಕಂಡುಹಿಡಿಯಲು ಬಯಸಿದರು.

ಒಂದು ಮೈಕ್ರೋಪಿಪೆಟ್ (ದ್ರವಪದಾರ್ಥಗಳನ್ನು ಅಳೆಯುವುದಕ್ಕೆ ಬಳಸುವ ಒಂದು ಅತಿಸಣ್ಣ ಕೊಳವೆ)ನಿಂದ ತಟ್ಟಿದಾಗ ಅಳೆಯಲು ಸಾಧ್ಯವಿರುವಷ್ಟು ಪ್ರಮಾಣದ ವಿದ್ಯುತ್ ಸಂದೇಶವನ್ನು ಹೊರಡಿಸುವ ಜೀವಕೋಶಗಳ ಸಾಲೊಂದನ್ನು ಪಟಪೋಷಿಯನ್ ಮತ್ತು ಅವರ ಜೊತೆಗಾರರು ಮೊದಲು ಕಂಡುಹಿಡಿದರು. ಕಷ್ಟಕರವಾದ ಹುಡುಕಾಟದ ನಂತರ, ಪಟಪೋಷಿಯನ್ ಮತ್ತು ಅವರ ಜೊತೆಗಾರರಿಗೆ ಮೈಕ್ರೋಪಿಪೆಟ್‌ನ ಒತ್ತುವಿಕೆಯ ಪರಿಣಾಮವನ್ನು ಮೌನವಾಗಿಸುವಂತೆ ಜೀವಕೋಶಗಳನ್ನು ಅಸಂವೇದನಾಶೀಲಗೊಳಿಸುವ ವಂಶವಾಹಿಯನ್ನು ಶೋಧಿಸುವುದು ಸಾಧ್ಯವಾಯಿತು. ಈ ವಂಶವಾಹಿಗಳು ಈ ಹಿಂದೆ ನಮಗೆ ತಿಳಿಯದಿದ್ದ ಯಾಂತ್ರಿಕ ಸಂವೇದನಾಶೀಲ ಅಯಾನ್ ಚಾನಲ್‌ಅನ್ನು ಕೋಡ್ ಮಾಡುವಂಥವಾಗಿದ್ದವು.

ಇವುಗಳನ್ನು ’ಒತ್ತಡ’ ಎಂಬುದರ ಗ್ರೀಕ್ ಪದದ ಮೇಲೆ ಪೈಜ಼ೋ1 ಹಾಗೂ ಪೈಜ಼ೋ2 ಎಂದು ಹೆಸರಿಸಲಾಯಿತು. ಇನ್ನೂ ಮುಂದುವರೆದ ಅಧ್ಯಯನಗಳು, ಪೈಜ಼ೋ1 ಮತ್ತು ಪೈಜ಼ೋ2ಗಳು ಜೀವಕೋಶದ ಕೋಶಪದರದ ಮೇಲೆ ಉಂಟಾಗುವ ಒತ್ತಡದಿಂದ ನೇರವಾಗಿ ಸಕ್ರಿಯಗೊಳ್ಳುವ ಅಯಾನ್ ಚಾನಲ್‌ಗಳೆಂಬುದು ಖಚಿತವಾಯಿತು.

ಟಿಆರ್‌ಪಿವಿ1, ಟಿಆರ್‌ಪಿಎಂ8, ಪೈಜ಼ೋ ಚಾನಲ್‌ಗಳೆಲ್ಲವನ್ನು ಕಂಡುಹಿಡಿದ ವಿನೂತನ ಮತ್ತು ಅದ್ವಿತೀಯ ಸಂಶೋಧನೆಗಳ ಮೂಲಕ ಈ ಬಾರಿಯ ನೊಬೆಲ್ ಪಾರಿತೋಷಕದ ವಿಜೇತರು, ಶಾಖ, ತಂಪು ಮತ್ತು ಯಾಂತ್ರಿಕ ಶಕ್ತಿಗಳು ಉಂಟುಮಾಡುವ ನರ ಸಂವೇದನೆಗಳು ಹೇಗೆ ಸುತ್ತಲಿನ ಪರಿಸರವನ್ನು ಗ್ರಹಿಸಲು ಮತ್ತು ಅದಕ್ಕೆ ಹೊಂದಿಕೊಳ್ಳಲು ನಮಗೆ ನೆರವಾಗುತ್ತವೆಂಬುದನ್ನು ನಾವು ಅರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಕನ್ನಡಕ್ಕೆ: ಮಲ್ಲಿಗೆ

ಡಾ. ಸ್ವಾತಿ ಶುಕ್ಲಾ

ಡಾ.ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ‘ರೋಗ ನಿರೋಧಕ’ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ.


ಇದನ್ನೂ ಓದಿ: ತಾಂಜೇನಿಯಾ ಲೇಖಕ ಅಬ್ದುಲ್ ರಜಾಕ್‌‌‌ ಅವರಿಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ-2021

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿಯಿಂದ ವಿಪಕ್ಷಗಳ ಟೀಕೆ: ರಾಜತಾಂತ್ರಿಕ ಅಧಿಕಾರಿಯ ನಿಲುವಿಗೆ ವ್ಯಾಪಕ ವಿರೋಧ

0
ಐರ್ಲೆಂಡ್‌ನಲ್ಲಿರುವ ಭಾರತೀಯ ರಾಯಭಾರಿ ಅಖಿಲೇಶ್ ಮಿಶ್ರಾ ದಿ ಐರಿಶ್ ಟೈಮ್ಸ್‌ನ ಸಂಪಾದಕೀಯಕ್ಕೆ ಪ್ರತಿಕ್ರಿಯೆಯಾಗಿ ಪ್ರತಿಪಕ್ಷಗಳನ್ನು ಟೀಕಿಸಿ, ಮೋದಿಯನ್ನು ಶ್ಲಾಘಿಸಿ ಪೋಸ್ಟ್‌ ಮಾಡಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ. ದಿ ಐರಿಶ್ ಟೈಮ್ಸ್‌ನ ಸಂಪಾದಕೀಯದಲ್ಲಿ ಪ್ರಧಾನಿ ನರೇಂದ್ರ...