ಪ್ಯಾಲೆಸ್ಟೈನ್ ಮತ್ತು ಲೆಬನಾನ್ ಅನ್ನು ಯಹೂದಿ ನಾಯಕ ‘ಗ್ಯಾಸ್ ಚೇಂಬರ್’ಗಳನ್ನಾಗಿ ಮಾಡಿರುವುದರಿಂದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು “ಅಡಾಲ್ಫ್ ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ” ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಹೇಳಿದ್ದಾರೆ.
ಮೆಹಬೂಬಾ ಈ ಹಿಂದೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯನ್ನು ಖಂಡಿಸಿದ್ದರು. ಲೆಬನಾನ್ ಮತ್ತು ಪ್ಯಾಲೆಸ್ಟೈನ್ ಜನರಿಗೆ ಬೆಂಬಲ ನೀಡಲು ತನ್ನ ಚುನಾವಣಾ ಪ್ರಚಾರವನ್ನು ಒಂದು ದಿನದ ಮಟ್ಟಿಗೆ ರದ್ದುಗೊಳಿಸಿದ್ದರು.
“ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನೆತನ್ಯಾಹು ವಿರುದ್ಧ ತೀರ್ಪು ನೀಡಿದೆ. ಈ (ಲೆಬನಾನ್‌ನಲ್ಲಿ ನಡೆದ ದಾಳಿ) ಘಟನೆಯು ಪ್ಯಾಲೆಸ್ಟೈನ್‌ನಲ್ಲಿ ಸಾವಿರಾರು ಜನರನ್ನು ಕೊಂದ ಮತ್ತು ಈಗ ಲೆಬನಾನ್‌ನಲ್ಲಿ ಅದೇ ರೀತಿ ಮಾಡುತ್ತಿರುವ ಅಪರಾಧಿ ಎಂದು ಸಾಬೀತುಪಡಿಸಿದೆ. ಇದಕ್ಕೆ ಯಾವುದೇ ಖಂಡನೆ ಸಾಕಾಗುವುದಿಲ್ಲ” ಎಂದು ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ನೆತನ್ಯಾಹುವನ್ನು “ಹಿಟ್ಲರ್ ನಂತರದ ಅತಿದೊಡ್ಡ ಭಯೋತ್ಪಾದಕ” ಎಂದು ಕರೆದ ಮಾಜಿ ಮುಖ್ಯಮಂತ್ರಿ, “ಹಿಟ್ಲರ್ ಜನರನ್ನು ಕೊಲ್ಲಲು ಗ್ಯಾಸ್ ಚೇಂಬರ್‌ಗಳನ್ನು ಸ್ಥಾಪಿಸಿದನು. ಆದರೆ, ನೆತನ್ಯಾಹು ಪ್ಯಾಲೆಸ್ತೀನ್ ಮತ್ತು ಲೆಬನಾನ್ ಅನ್ನು ಗ್ಯಾಸ್ ಚೇಂಬರ್‌ಗಳಾಗಿ ಪರಿವರ್ತಿಸಿದ್ದಾನೆ. ಅಲ್ಲಿ ಅವರು ಸಾವಿರಾರು ಜನರನ್ನು ಕೊಲ್ಲುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ನೆತನ್ಯಾಹು ಆಡಳಿತದೊಂದಿಗೆ ಸಂಬಂಧ ಹೊಂದುವ ಸರ್ಕಾರದ ನಿರ್ಧಾರ ತಪ್ಪು ಎಂದು ಮೆಹಬೂಬಾ ಹೇಳಿದರು.
“ನಾವು ಮಹಾತ್ಮ ಗಾಂಧಿಯವರ ಕಾಲದಿಂದಲೂ ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದೇವೆ. ಆಡಳಿತದೊಂದಿಗೆ ಸಂಬಂಧವನ್ನು ಹೊಂದಿದ್ದು ಮತ್ತು ಜನರನ್ನು ಕೊಲ್ಲಲು ಬಳಸುತ್ತಿರುವ ಶಸ್ತ್ರಾಸ್ತ್ರಗಳು, ಡ್ರೋನ್‌ಗಳನ್ನು ಪೂರೈಸುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳಿದರು.
“ಬಿಜೆಪಿ ನನಗೆ ಏನು ಹೇಳುತ್ತದೆ? ಅವರು ಕಥುವಾದಲ್ಲಿ ಎಂಟು ವರ್ಷದ ಬಾಲಕಿಯ ಅತ್ಯಾಚಾರಿಗಳ ಬೆಂಬಲಕ್ಕೆ ನಿಂತವರು. ಆ ಅಪರಾಧಿಗಳು ಇಂದು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅತ್ಯಾಚಾರಿಗಳನ್ನು ಬೆಂಬಲಿಸಿದ್ದಕ್ಕಾಗಿ ನಾನು ಅವರ ಇಬ್ಬರು ಮಂತ್ರಿಗಳನ್ನು ತೆಗೆದುಹಾಕಬೇಕಾಯಿತು” ಎಂದು ಪಿಡಿಪಿ ಮುಖ್ಯಸ್ಥರು ಹೇಳಿದರು.
ಪ್ಯಾಲೆಸ್ತೀನ್ ಜನರಿಗಾಗಿ ನಸ್ರಲ್ಲಾ ನಡೆಸಿದ ಸುದೀರ್ಘ ಹೋರಾಟದ ಬಗ್ಗೆ ಅವರಿಗೆ (ಬಿಜೆಪಿ) ಏನು ಗೊತ್ತು? ಕಾಶ್ಮೀರ, ಲಕ್ನೋ ಮತ್ತು ದೇಶದ ಇತರ ಭಾಗಗಳಲ್ಲಿ ಎಷ್ಟು ಜನರು ಹುತಾತ್ಮರಿಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ ಎಂಬುದನ್ನು ಅವರು ನೋಡಬೇಕು” ಎಂದು ಅವರು ಹೇಳಿದರು.
ಇದನ್ನೂ ಓದಿ; ಮಧ್ಯ ಬೈರುತ್‌ನಲ್ಲಿ ಇಸ್ರೇಲ್ ದಾಳಿಗೆ ಕನಿಷ್ಠ ನಾಲ್ವರು ಬಲಿ; ನಗರ ಮಿತಿಯೊಳಗೆ ಮೊದಲ ವೈಮಾನಿಕ ಕಾರ್ಯಾಚರಣೆ


