ಮೆಕ್ಸಿಕೋದ ಆಡಳಿತಾರೂಢ ಎಡಪಂಥೀಯ ‘ಮೊರೆನಾ’ ಪಕ್ಷದ ಕ್ಲೌಡಿಯಾ ಶೀನ್‌ಬಾಮ್ ಅವರು ದೇಶದ ಮೊದಲ ಮಹಿಳಾ ಅಧ್ಯಕ್ಷೆಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಚುನಾವಣಾ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಮೆಕ್ಸಿಕೋ ನಗರದ ಡೌನ್‌ಟೌನ್ ಹೋಟೆಲ್‌ನಲ್ಲಿ ಪ್ರತಿಕ್ರಿಯೆ ನೀಡಿದ ಶೀನ್‌ಬಾಮ್, “ನಾನು ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗಲಿದ್ದೇನೆ. ನಾನು ಈ ಸಾಧನೆಯನ್ನು ಏಕಾಂಕಿಯಾಗಿ ಮಾಡಿಲ್ಲ. ನನ್ನ ತಾಯಂದಿರು, ನಮ್ಮ ಹೆಣ್ಣು ಮಕ್ಕಳು ಮತ್ತು ಮೊಮ್ಮಕ್ಕಳು ತಾಯ್ನಾಡನ್ನು ನನಗೆ ನೀಡಿದ್ದಾರೆ” ಎಂದು ಹೇಳಿದ್ದಾರೆ.
ಅಧ್ಯಕ್ಷೀಯ ಸ್ಥಾನಕ್ಕೆ ನಡೆದ ಚುನಾವಣೆಯ ಕ್ಷಿಪ್ರ ಮಾದರಿ ಮತ ಎಣಿಕೆಯಲ್ಲಿ 60.7 ಶೇಖಡ ಮತಗಳನ್ನು ಪಡೆಯುವ ಮೂಲಕ ಕ್ಲೌಡಿಯಾ ಶೀನ್‌ಬಾಮ್ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪಿಎನ್ ಪಕ್ಷದ ಕ್ಸೊಕಿಟಿ ಗಲ್ವೇಝ್ ಅವರು ಶೇ.58.3ರಷ್ಟು ಮತಗಳನ್ನು ಪಡೆದಿದ್ದಾರೆ. ಇದು ದೇಶದ ಪ್ರಜಾಸತ್ತಾತ್ಮಕ ಇತಿಹಾಸದಲ್ಲಿಯೇ ಅತ್ಯಧಿಕ ಮತದಾನವಾಗಿದೆ.
ಕ್ಲೌಡಿಯಾ ಶೀನ್‌ಬಾಮ್ ಅವರು ವಿರೋಧ ಪಕ್ಷಗಳ ಒಕ್ಕೂಟವನ್ನು ಪ್ರತಿನಿಧಿಸುವ ಸಂಪ್ರದಾಯವಾದಿ ಪಿಎನ್ ಪಕ್ಷದ ಕ್ಸೊಕಿಟಿ ಗಲ್ವೇಝ್ ಅವರನ್ನು ಸೋಲಿಸಿದ್ದಾರೆ. ಕಣದಲ್ಲಿದ್ದ ಮೂರನೇ ಅಭ್ಯರ್ಥಿ ಜಾರ್ಜ್ ಅಲ್ವಾರೆಝ್ ಮೇನೆಜ್ ಅವರು ಮಧ್ಯ-ಎಡ ನಾಗರಿಕರ ಚಳವಳಿಯನ್ನು ಪ್ರತಿನಿಧಿಸಿದ್ದರು.
ಮೆಕ್ಸಿಕೋದ ಇತಿಹಾಸದಲ್ಲೇ ಅತಿ ದೊಡ್ಡ ಚುನಾವಣೆಯು ಹಿಂಸಾಚಾರದಿಂದ ರಕ್ತಸಿಕ್ತವಾಗಿತ್ತು. ಅಧಿಕಾರದಲ್ಲಿರುವವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಕ್ರಿಮಿನಲ್ ಸಂಘಟನೆಗಳಿಂದ ಹಲವಾರು ರಾಜಕೀಯ ಮುಖಂಡರು ಕೊಲ್ಲಲ್ಪಟ್ಟಿದ್ದಾರೆ. ಕನಿಷ್ಠ 38 ಅಭ್ಯರ್ಥಿಗಳು ಸಾವನಪ್ಪಿದ್ದಾರೆ. ಪ್ರಜಾಪ್ರಭುತ್ವದ ಹಬ್ಬದಲ್ಲಿ ಡ್ರಗ್ ಕಾರ್ಟೆಲ್‌ಗಳ ಬೆದರಿಕೆ ಕಳವಳ ಉಂಟು ಮಾಡಿತ್ತು ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ರಾಷ್ಟ್ರೀಯ ಚುನಾವಣಾ ಸಂಸ್ಥೆಯ ಪ್ರಕಾರ, ಮೈಕೋಕಾನ್ ಮತ್ತು ಚಿಯಾಪಾಸ್ ಪ್ರಾಂತ್ಯದಲ್ಲಿ ಭದ್ರತೆಯ ಕಾರಣದಿಂದ ಅದು ಸುಮಾರು 170 ಮತಗಟ್ಟೆಗಳನ್ನು ರದ್ದುಗೊಳಿಸಲಾಗಿದೆ.
ಪ್ಯೂಬ್ಲಾದಲ್ಲಿ ನಾಲ್ವರು ಶಸ್ತ್ರಸಜ್ಜಿತ ದಾಳಿಕೋರರು ಮತಯಂತ್ರಗಳನ್ನು ಕದಿಯಲು ಮತಗಟ್ಟೆಗಳನ್ನು ಸ್ಥಾಪಿಸಿದ ಶಾಲೆಗೆ ನುಗ್ಗಲು ಪ್ರಯತ್ನಿಸಿದ್ದರು. ಪಶ್ಚಿಮ ಮೆಕ್ಸಿಕೋದಲ್ಲಿ ಮತದಾನ ನಡೆಯುವ ಗಂಟೆಗಳ ಮೊದಲು ಜೂನ್ 1ರಂದು ಸ್ಥಳೀಯ ಅಭ್ಯರ್ಥಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ಭಾನುವಾರ ನಡೆದ ಚುನಾವಣೆಯಲ್ಲಿ ಸುಮಾರು 100 ಮಿಲಿಯನ್ ಮೆಕ್ಸಿಕನ್ನರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದರು. ಅಧ್ಯಕ್ಷೀಯ ಸ್ಪರ್ಧೆಯನ್ನು ಹೊರತುಪಡಿಸಿ, ಮೆಕ್ಸಿಕೋ ನಗರದ ಮೇಯರ್, ಎಂಟು ಗವರ್ನರ್ ಸ್ಥಾನಗಳು ಮತ್ತು ಎರಡು ಸಂಸತ್ ಸ್ಥಾನಗಳಿಗೆ ಚುನಾವಣೆ ನಡೆದಿದೆ. ಸುಮಾರು 1.4 ಮಿಲಿಯನ್ ಮೆಕ್ಸಿಕನ್ನರು ವಿದೇಶದಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು ಎಂದು ಸಿಎನ್‌ಎನ್ ವರದಿ ಮಾಡಿದೆ. ಸುಮಾರು 20,000 ಸ್ಪರ್ಧಿಗಳು ಕಣದಲ್ಲಿದ್ದರು. ಇದು ಮೆಕ್ಸಿಕೋದ ಇತಿಹಾಸದಲ್ಲಿಯೇ ಅತಿ ಹೆಚ್ಚು ಎಂದು ರಾಯಿಟರ್ಸ್ ವರದಿ ಮಾಡಿದೆ.
ಕ್ಲೌಡಿಯಾ ಶೀನ್‌ಬಾಮ್ ಅಧ್ಯಕ್ಷೆಯಾದ ಬಳಿಕ ದೇಶದಲ್ಲಿ ಸಂಘಟಿತ ಹಿಂಸಾಚಾರವನ್ನು ತಡೆಗಟ್ಟುವ ಸವಾಲು ಹೊಂದಿದ್ದಾರೆ. ಏಕೆಂದರೆ, ಅವರ ಪಕ್ಷದ ಲೋಪೆಝ್ ಒಬ್ರಡಾರ್ ಅವರ ಆಡಳಿತಾವಧಿಯಲ್ಲಿ ದೇಶದಲ್ಲಿ ಹೆಚ್ಚಿನ ಜನರು ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದಾರೆ.
ಕ್ಲೌಡಿಯಾ ಶೀನ್‌ಬಾಮ್ ಹಿನ್ನೆಲೆ
ಜೂನ್ 24,1962ರಲ್ಲಿ ಜನಿಸಿದ ಕ್ಲೌಡಿಯಾ ಶೀನ್‌ಬಾಮ್ ಪರ್ಡೊ ಮೆಕ್ಸಿಕನ್ ರಾಜಕಾರಣಿ, ವಿಜ್ಞಾನಿ ಮತ್ತು ಶೈಕ್ಷಣಿಕ ತಜ್ಞೆಯಾಗಿದ್ದಾರೆ. ಎಡಪಂಥೀಯ ರಾಜಕೀಯ ಪಕ್ಷ ಮೊರೆನಾದ ಸದಸ್ಯರಾಗಿರುವ ಶೀನ್‌ಬಾಮ್, 2018 ರಿಂದ 2023ರವರೆಗೆ ರಾಜ್ಯ ಗವರ್ನರ್ ಹುದ್ದೆಗೆ ಸಮಾನವಾದ ಮೆಕ್ಸಿಕೋ ಸಿಟಿಯ ಸರ್ಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಇದೀಗ 2024ರ ಮೆಕ್ಸಿಕನ್ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸುವ ಮೂಲಕ ದೇಶದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸ ಸೃಷ್ಟಿಸಿದ್ದಾರೆ.
ಇದನ್ನೂ ಓದಿ : ಪ್ಯಾಲೆಸ್ತೀನ್ ಪರ ಜಾಗೃತಿ ಕಾರ್ಯಕ್ರಮದಲ್ಲಿದ್ದವರ ಮೇಲೆ ಹಲ್ಲೆ: ಬೆಂಗಳೂರು ಪೊಲೀಸರ ವಿರುದ್ಧ ಆರೋಪ


