ರೈತ ಸಂಘಟನೆ ಸಂಯುಕ್ತ ಕಿಸಾನ್ ಮೋರ್ಚಾ, ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಿರುವ ಕಿಸಾನ್ ಸಂಸತ್ ಕೂಡ ಮಾನ್ಸೂನ್ ಅಧಿವೇಶನದಂತೆ ಸೋಮವಾರ (ಜುಲೈ 26) ಮುಂದುವರೆಯಲಿದೆ. ಇದರ ಜೊತೆಗೆ ದೆಹಲಿಯ ಹೊರ ಭಾಗಗಳಲ್ಲಿಯೂ ಮಿನಿ ಕಿಸಾನ್ ಸಂಸತ್‌ಗಳು ನಡೆಯುತ್ತಿದ್ದು ಯುವಜನತೆಯನ್ನು ಸೆಳೆಯುತ್ತಿವೆ ಎಂದು ಎಸ್‌ಕೆಎಂ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಜಂತರ್ ಮಂತರ್‌ನಲ್ಲಿರುವ ಕಿಸಾನ್ ಸಂಸತ್‌ನಲ್ಲಿ ಜುಲೈ 22 ಮತ್ತು 23 ರಂದು ರೈತ ವಿರೋಧಿ ಎಪಿಎಂಸಿ ಬೈಪಾಸ್ ಕಾಯ್ದೆ ಕುರಿತು ಚರ್ಚಿಸಿ ಅದನ್ನು ತಕ್ಷಣ ರದ್ದುಗೊಳಿಸುವ ನಿರ್ಣಯವನ್ನು ಅಂಗೀಕರಿಸಲಾಗಿದೆ. ಕಿಸಾನ್ ಸಂಸತ್‌ನ ಚರ್ಚೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರರವು ಅಸ್ತಿತ್ವದಲ್ಲಿರುವ ಎಪಿಎಂಸಿ ಮಂಡಿ ವ್ಯವಸ್ಥೆಯನ್ನು ಸುಧಾರಿಸಬೇಕಾಗಿದೆ. ಇದಕ್ಕೆ ಒಕ್ಕೂಟ ಸರ್ಕಾರದ ಬಜೆಟ್ ಬೆಂಬಲ ಪಡೆಯಬೇಕು ಎಂದು ಎಸ್‌ಕೆಎಂ ಹೇಳಿದೆ.
ಮಿನಿ ಕಿಸಾನ್ ಸಂಸತ್‌ಗಳು ಇತರ ಸ್ಥಳಗಳಲ್ಲಿಯೂ ಆಯೋಜಿಸಲಾಗುತ್ತಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಕಿಲಾ ರಾಯ್ಪುರದ ಪ್ರತಿಭಟನಾ ಸ್ಥಳದಲ್ಲಿ ನಡೆಸಲಾಗಿದೆ. ಮಕ್ಕಳು ಕೂಡ ಕಿಸಾನ್ ಸಂಸತ್‌ಗಳನ್ನು ನಡೆಸಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಮಾನ್ಸೂನ್ ಅಧಿವೇಶನ: ಇಂದಿನಿಂದ ಜಂತರ್ ಮಂತರ್‌ನಲ್ಲಿ ಕಿಸಾನ್ ಸಂಸತ್ ಆರಂಭ
ಶನಿವಾರ ಮತ್ತೆ ಸಿಂಘು ಬಾರ್ಡರ್ ಪ್ರತಿಭಟನಾ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಅನೇಕ ಟೆಂಟ್‌ಗಳು ನಾಶವಾಗಿವೆ. ಆದರೂ, ರೈತರ ಮನೋಭಾವದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರತಿಭಟನೆ ಮುಂದುವರೆಯುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
Fire at Singhu border. pic.twitter.com/YfiDvYFFDz
— Sandeep Singh (@PunYaab) July 24, 2021
Fire at Singhu border protest site. pic.twitter.com/u1k2xOl7Dx
— Sandeep Singh (@PunYaab) July 24, 2021
ಶನಿವಾರ ಸಂಜೆ ಹೊತ್ತಿಗೆ ಸಿಂಘು ಗಡಿಯಲ್ಲಿನ ರೈತರ ಟ್ರಾಲಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದು ಅಕ್ಕ ಪಕ್ಕದ ಟೆಂಟ್‌ಗಳಿಗೂ ತಾಗಿದೆ. ಅಪಾರ ಪ್ರಮಾಣದ ಹಾನಿಯುಂಟಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
’ಇಂತಹ ಪರಿಸ್ಥಿತಿಯ ಹೊರತಾಗಿಯೂ, ನಮ್ಮ ಹಕ್ಕುಗಳಿಗಾಗಿ ನಾವು ನಿಲ್ಲುತ್ತೇವೆ. ಸರ್ಕಾರ ಇಂತಹ ಕೃತ್ಯಗಳನ್ನು ಮಾಡಿ ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ’ ಎಂದು ರೈತರು ಹೇಳಿದ್ದಾರೆ.
ಇದನ್ನೂ ಓದಿ: ಸಂಸತ್ತನ್ನು ಹೇಗೆ ನಡೆಸಬೇಕೆಂದು ನಾವು ಒಕ್ಕೂಟ ಸರ್ಕಾರಕ್ಕೆ ತೋರಿಸುತ್ತೇವೆ – ಯೋಗೇಂದ್ರ ಯಾದವ್


