ಹಾಂಗ್‌ಕಾಂಗ್‌ನಲ್ಲಿ ಭಾನುವಾರ ಜಿಲ್ಲಾ ಕೌನ್ಸಿಲ್‌ಗೆ ಪ್ರಪ್ರಥಮ ಬಾರಿಗೆ ನಡೆದ “ದೇಶಭಕ್ತರಿಗೆ ಮಾತ್ರ” ಚುನಾವಣೆಯಲ್ಲಿ ಶೇ. 27.5 ಮಾತ್ರ ಮತದಾನವಾಗಿದೆ. ಪ್ರಜಾಪ್ರಭುತ್ವದ ಪರ ಇರುವ ಎಲ್ಲಾ ವಿರೋಧ ಪಕ್ಷಗಳನ್ನು ಮತದಾನ ಪ್ರಕ್ರಿಯೆಯಿಂದ ಹೊರಗಿಟ್ಟ ಬಳಿಕ ನಡೆದ ಚುನಾವಣೆಯಲ್ಲಿ ದಾಖಲೆಯ ಅತ್ಯಂತ ಕಡಿಮೆ ಮತದಾನವಾಗಿದೆ.
2019ರಲ್ಲಿ ಕೆಲ ತಿಂಗಳ ಕಾಲ ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಜನರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅದು ಹಿಂಸಾತ್ಮಕ ರೂಪ ಪಡೆದಿತ್ತು. ಆ ಬಳಿಕ ನಡೆದ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿತ್ತು. ಪ್ರಜಾಪ್ರಭುತ್ವದ ಪರ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸಿದ್ದರು. ಇದರಿಂದ ಪ್ರತಿಪಕ್ಷಗಳು ಭಾರೀ ವಿಜಯ ಸಾಧಿಸಿತ್ತು.
ಹಾಂಗ್‌ಕಾಂಗ್ ನಮ್ಮ ದೇಶದ ಭಾಗ ಎಂದು ಹೇಳುವ ಚೀನಾ 2019ರ ನಂತರ ‘ರಾಷ್ಟ್ರೀಯ ಭದ್ರತಾ ಕಾನೂನ’ನ್ನು ಜಾರಿಗೊಳಿಸಿತ್ತು. ಇದರಡಿ ವಿಪಕ್ಷ ನಾಯಕರನ್ನು ಬಂಧಿಸಿತ್ತು. ಪ್ರಜಾಪ್ರಭುತ್ವಕ್ಕಾಗಿ ಹೋರಾಡುವವರ ಧ್ವನಿಯನ್ನು ಅಡಗಿಸಿತ್ತು. ಈ ವರ್ಷದ ಮೇ ತಿಂಗಳಿನಿಂದ ಸಂಪೂರ್ಣವಾಗಿ ಜಾರಿಗೆ ಬಂಧಿರುವ ಈ ದಬ್ಬಾಳಿಕೆಯ ಕಾನೂನು, ಜಿಲ್ಲಾ ಸಮಿತಿಗಳಿಗೆ ನೇರವಾಗಿ ಆಯ್ಕೆಯಾಗುವ ಸ್ಥಾನಗಳನ್ನು 462ರಿಂದ 88ಕ್ಕೆ ಕಡಿತಗೊಳಿಸಿತ್ತು. ಉಳಿದ 382 ಸ್ಥಾನಗಳಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಅಧಿಕಾರವನ್ನು ನಗರದ ಮುಖಂಡರು, ಚೀನಾ ಸರ್ಕಾರಕ್ಕೆ ನಿಷ್ಠರಾಗಿರುವವರು ಮತ್ತು ಗ್ರಾಮೀಣ ಪ್ರದೇಶದ ಜಮೀನ್ದಾರರಿಗೆ ಮಾತ್ರ ಮೀಸಲಿಟ್ಟಿತ್ತು.
ಚುನಾವಣೆಗೆ ಸ್ಪರ್ಧಿಸಲು ಮೀಸಲಿಟ್ಟ 88 ಸ್ಥಾನಗಳಿಗೆ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಸರ್ಕಾರ ನೇಮಿಸಿದ ಸಮಿತಿ ಅನುಮೋದಿಸಿದ ಬಳಿಕವಷ್ಟೇ ಅವಕಾಶ ನೀಡಲಾಗಿತ್ತು. ಪ್ರಜಾಪ್ರಭುತ್ವದ ಪರ ಇರುವ ಅಭ್ಯರ್ಥಿಗಳಿಗೆ ಚುನಾವಣೆಗೆ ಸ್ಪರ್ಧಿಸುವ ಮತ್ತು ಮತ ಚಲಾಯಿಸುವ ಅವಕಾಶವನ್ನೇ ಕಿತ್ತುಕೊಳ್ಳಲಾಗಿತ್ತು. ಇವೆಲ್ಲದರ ಪರಿಣಾಮ ಚೀನಾ ಸರ್ಕಾರದ ಅನತಿಯಂತೆ ಕಾಟಾಚಾರದ ಚುನಾವಣೆ ನಡೆದಿದೆ. ಜನರು ಅತ್ಯಂತ ಕಡಿಮೆ ಮತದಾನ ಮಾಡುವ ಮೂಲಕ ದಬ್ಬಾಳಿಕೆಯ ಆಡಳಿತದ ವಿರುದ್ಧ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಹಾಂಗ್‌ಕಾಂಗ್‌ನ 4.3 ಮಿಲಿಯನ್ ನೋಂದಾಯಿತ ಮತದಾರರಲ್ಲಿ ಕೇವಲ 1.2 ಮಿಲಿಯನ್‌ಗಿಂತಲೂ ಕಡಿಮೆ ಮತದಾರರು ಮತ ಚಲಾಯಿಸಿದ್ದಾರೆ. “ಚುನಾವಣೆಯಲ್ಲಿ ಯಾವುದೇ ಅರ್ಥವಿಲ್ಲ ಎಂದು ಗೊತ್ತಿದ್ದ ಮೇಲೂ ಜನರು ಯಾಕೆ ಮತ ಚಲಾಯಿಸುತ್ತಾ ಎಂದು ಪ್ರಜಾಪ್ರಭುತ್ವವಾದಿಗಳಲ್ಲಿ ಒಬ್ಬರಾದ ಲೆಮನ್ ವಾಂಗ್ ಪ್ರಶ್ನಿಸಿದ್ದಾರೆ.
ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಹಾಂಗ್ ಕಾಂಗ್ ಅನ್ನು ವಿಶೇಷ ಆಡಳಿತ ಪ್ರದೇಶವನ್ನಾಗಿ ಘೋಷಿಸಿದೆ. 1997 ರಲ್ಲಿ ಇಡೀ ಪ್ರದೇಶವನ್ನು ಯುನೈಟೆಡ್ ಕಿಂಗ್‌ಡಮ್‌ನಿಂದ ಚೀನಾಕ್ಕೆ ವರ್ಗಾಯಿಸಲಾಯಿತು. ಹಾಂಗ್‌ಕಾಂಗ್ ‘ಒಂದು ದೇಶ, ಎರಡು ವ್ಯವಸ್ಥೆಗಳು’ ತತ್ವದ ಅಡಿಯಲ್ಲಿ ಚೀನಾದ ಮುಖ್ಯ ಭೂಭಾಗದಿಂದ ಪ್ರತ್ಯೇಕವಾಗಿ ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿನ ಜನರು ತಮ್ಮದು ಪ್ರತ್ಯೇಖ ಪ್ರಜಾಪ್ರಭುತ್ವ ದೇಶ ಎಂದು ವಾದಿಸುತ್ತಿದ್ದರೆ, ಚೀನಾ ಸರ್ಕಾರ ಮಾತ್ರ ಇಲ್ಲ ಹಾಂಕ್‌ಕಾಂಗ್ ನಮ್ಮ ದೇಶದ ಭೂಭಾಗ ಎಂದು ದಬ್ಬಾಳಿಕೆಯ ನಿಯಮಗಳನ್ನು ಹೇರುತ್ತಿದೆ.
ಇದನ್ನೂ ಓದಿ : ರಾಜಸ್ಥಾನದ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆ: ಮೊದಲ ಬಾರಿಯ ಶಾಸಕನಿಗೆ ಸಿಎಂ ಪಟ್ಟ


