Homeಅಂಕಣಗಳುಯೋಗ್ಯತೆ ಇದೆಯೋ ಇಲ್ಲವೋ ಮಂತ್ರಿಗಿರಿ ಬೇಕೇಬೇಕು

ಯೋಗ್ಯತೆ ಇದೆಯೋ ಇಲ್ಲವೋ ಮಂತ್ರಿಗಿರಿ ಬೇಕೇಬೇಕು

- Advertisement -
- Advertisement -

ಮಂತ್ರಿಮಂಡಲ ರಚಿಸುವ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳ ನಡುವೆ ಇತ್ತೀಚೆಗೆ ಎಲ್ಲಿಲ್ಲದ ಸಮಸ್ಯೆ ಹುಟ್ಟಿಕೊಂಡಿದೆ.
ಮಂತ್ರಿಮಂಡಲ ರಚಿಸುವ ಮುನ್ನ ಎರಡೂ ಪಕ್ಷಗಳು ತಮ್ಮ ಶಾಸಕರನ್ನು ಪ್ರತ್ಯೇಕವಾಗಿ ಕರೆದು ನಿಗದಿಯಾದ ಸ್ಥಾನಗಳಿಗೆ ತಕ್ಕಂತೆ ಮಂತ್ರಿಸ್ಥಾನಕ್ಕೆ ಆಯ್ಕೆಮಾಡುವಂತೆ ಕೋರಬಹುದಿತ್ತು. ಜಿಲ್ಲಾವಾರು ಒಬ್ಬೊಬ್ಬರನ್ನು ಆಯ್ಕೆ ಮಾಡ್ತೀರಾ? ಜಾತಿಗೊಬ್ಬೊಬ್ಬರನ್ನು ಆಯ್ಕೆಮಾಡುತ್ತೀರಾ? ಇಲ್ಲವೇ ಜನಸಂಖ್ಯೆಗನುಗುಣವಾಗಿ ಪ್ರತಿ ಜಾತಿಗೆ ಇಂತಿಷ್ಟು ಎಂದು ಆಯ್ಕೆ ಮಾಡ್ತೀರಾ ಎಂದು ಕೇಳಿ ತಿಳಿದುಕೊಳ್ಳಬಹುದಿತ್ತು. ಶಾಸಕರೇ ಮಂತ್ರಿಮಂಡಲವನ್ನು ನಿರ್ಧರಿಸುವುದರಿಂದ, ಮಂತ್ರಿ ಪದವಿ ಸಿಗದ ಶಾಸಕರು ಈಗ ಎಬ್ಬಿಸುತ್ತಿರುವ ಬೀದಿ ಗದ್ದಲವನ್ನು ತಪ್ಪಿಸಬಹುದಿತ್ತು. ಮುಖ್ಯವಾಗಿ ಪ್ರಜಾಪ್ರಭುತ್ವದ ಘನತೆಯನ್ನು ಎತ್ತಿ ಹಿಡಿಯುವ ಗುರಿಯನ್ನು ತಲುಪಬಹುದಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವವನ್ನು ಗಾಳಿಗೆ ತೂರುವಲ್ಲಿ ನಿರತವಾಗಿವೆ. ಮಂತ್ರಿಮಂಡಲ ರಚಿಸುವ ಕೆಲಸ ದೆಹಲಿಯಲ್ಲಿ ಆಗಬೇಕು, ಇಲ್ಲವೇ ದೇವೇಗೌಡರ ಮನೆಯಲ್ಲಿ ಆಗಬೇಕು, ಅಥವ ಅಂತಿಮ ತೀರ್ಮಾನ ರಾಹುಲ್ ಮಾಡಬೇಕು. ಇದು ಇಂದಿನ ಸ್ಥಿತಿ. ಹೋಗಲಿ, ರಾಹುಲ್‍ಗಾಂಧಿ ಅಥವ ದೇವೇಗೌಡರು ಕೈಗೊಂಡ ತೀರ್ಮಾನಗಳಿಗೆ ಮನ್ನಣೆ ದೊರೆಯಿತೇ ಎಂದರೆ ಅದೂ ಇಲ್ಲ.
ಈ ಶಾಸಕರೂ ಇದಕ್ಕೆ ತಕ್ಕನಾಗಿಯೇ ಇದ್ದಾರೆ. ಅವರಿಗೂ ಪ್ರಜಾಪ್ರಭುತ್ವ ಬೇಕಾಗಿಲ್ಲ. ರಾಜಕೀಯ ಮೊದಲೇ ಗೊತ್ತಿಲ್ಲ, ಅವರಿಗೆ ಗೊತ್ತಿರುವ ರಾಜಕೀಯವೆಂದರೆ ಶಾಸಕರಾಗಲು ಸೀಟು ಗಿಟ್ಟಿಸುವುದೂ, ಚುನಾವಣೆಯಲ್ಲಿ ನಾನಾಮಾರ್ಗ ಬಳಸಿ ಗೆಲ್ಲುವುದು. ಯೋಗ್ಯತೆ ಇದೆಯೇ ಇಲ್ಲವೋ ಮಂತ್ರಿಗಳಾಗುವುದು. ಮಂತ್ರಿಮಂಡಲದಲ್ಲಿ ಸ್ಥಾನ ಸಿಗಲಿಲ್ಲ್ಲವೆಂದರೆ ರೆಸಾರ್ಟ್‍ಗಳಲ್ಲಿ ಕೂತು ತಾವು ಸದಸ್ಯನಾಗಿರುವ ಸಂಸ್ಥೆಯನ್ನೇ ನಾಶಮಾಡಲು ಮಸಲತ್ತು ಮಾಡುವುದು.
ಕೆಲವರಂತೂ ಮಂತ್ರಿಗಳಾಗುವುದು ತಮ್ಮ ಆಜನ್ಮಸಿದ್ಧ ಹಕ್ಕು ಅಂತಲೇ ಅಂದುಕೊಂಡಿದ್ದಾರೆ. ಕೆಲವರು ಹತ್ತಾರು ಅವಧಿಗೆ ಶಾಸಕರಾಗಿದ್ದರೂ, ಮಂತ್ರಿಗಳಾಗಿದ್ದರೂ ಗೂಟ ಹೊಡ್ಕೊಂಡು ಸಾಯುವವರೆಗೂ ಅಧಿಕಾರದಲ್ಲಿರಬೇಕೆಂದು ಬಯಸುತ್ತಾರೆ. ಇತ್ತೀಚೆಗಂತೂ ಭೂಗಳ್ಳರು, ಸಾರ್ವಜನಿಕ ಆಸ್ತಿದೋಚಿದವರು, ಅಧಿಕಾರ ದುರುಪಯೋಗಪಡಿಸಿಕೊಂಡವರು, ಬೆಂಗಳೂರು-ಮೈಸೂರು ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್‍ನ ಅಶೋಕ್‍ಖೇಣಿ ಅವರೊಡನೆ ಮಂತ್ರಿಯಾಗಿದ್ದಾಗ ಕೈಜೋಡಿಸಿ, ಪ್ರಥಮವಾಗಿ ಮಾಡಿಕೊಂಡ ಒಪ್ಪಂದವನ್ನು ಬದಿಗಿರಿಸಿ ಖೇಣಿಗೆ ಉತ್ಕøಷ್ಟವಾದ ಭೂಮಿಯನ್ನು ನೀಡಿ, ಮಾರುವುದಕ್ಕೆ ಅವಕಾಶ ಕೊಟ್ಟು ಸಮಾಜಘಾತುಕರೂ ಇದ್ದಾರೆ. ಅನೀತಿಯುತರಾಗಿ ರಿಯಲ್ ಎಸ್ಟೇಟ್ ಏಜೆನ್ಸಿ ನಡೆಸುತ್ತಿರುವವರೂ ಅಕ್ರಮವಾಗಿ ಕೋಟ್ಯಾಂತರ ಸಂಪಾದಿಸಿ, ಈಗ ಸಭ್ಯವ್ಯಕ್ತಿಗಳಂತೆ ಪೋಸ್ ಕೊಡುವ ಛದ್ಮವೇಷಧಾರಿಗಳೂ, ಹಾಲಿ ಮಂತ್ರಿಯಾಗುವ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಈ ನೀತಿಬಾಹಿರರೂ, ಸಮಯಸಾಧಕರೂ ರಾಜಕೀಯ ಪಕ್ಷಗಳನ್ನು ಕಬ್ಜಾ ಮಾಡಿಕೊಂಡಿದ್ದಾರೆ. ಇವರಿಗೆ ನೀತಿನಿಯಮ, ಡೀಸೆನ್ಸಿ ಯಾವುವೂ ಅರ್ಥವಾಗದ ಮಾತುಗಳು. ಇವತ್ತು ಅಧಿಕಾರ ಸಿಗುತ್ತೆ ಅಂದರೆ ಈ ಸಂಸ್ಥೆಯಲ್ಲಿರುತ್ತಾರೆ, ಮತ್ತೊಂದು ಅವಧಿಗೆ ಅಲ್ಲಿ ಅಧಿಕಾರ ಸಿಗುತ್ತೆ ಅಂದರೆ ಈ ಪಕ್ಷಬಿಟ್ಟು ಆ ಪಕ್ಷಕ್ಕೇ ಹಾರಿ ಹೋಗುತ್ತಾರೆ. ರಾಜಕೀಯ ಪಕ್ಷಗಳು ತಮ್ಮ ಶಾಸಕರಿಗಿಂತಲೂ ಮುಂದೆ ಇವೆ, ಅವುಗಳೆಲ್ಲ ಧ್ಯೇಯ ಧೋರಣೆ, ಶಿಸ್ತು, ಘನತೆ ಗೌರವಗಳನ್ನೆಲ್ಲ ಗಾಳಿಗೆ ತೂರಿ ಹಸಿದ ನಾಯಿಯಂತೆ ಯಾರಾದರೂ ಭ್ರಷ್ಟರು ಬೇರೆ ಪಕ್ಷದಿಂದ ನಮ್ಮ ಪಕ್ಷಕ್ಕೆ ಬಂದಾರೇನೋ ಎಂದು ಕಾತುರದಿಂದ ಕಾಯುತ್ತಿರುತ್ತಾರೆ. ನಾಯಿ ಹಸಿದಿತ್ತು. ಹಿಟ್ಟು ಹಳಸಿತ್ತು. ಈ ದುಸ್ಥಿತಿಯಲ್ಲಿ ನೀತಿಗೆಟ್ಟ ರಾಜಕೀಯ ಪಕ್ಷಗಳು ಹಾಗೂ ಅನಾಗರಿಕ ಶಾಸಕರೂ ಇದ್ದಾರೆ.
ಇಂತಹವರೇ ಇಂದು ಎಲ್ಲ ರಾಜಕೀಯ ಪಕ್ಷಗಳ ಅಧಿಪತಿಗಳು. ಈಗ ಅಧಿಕಾರದಲ್ಲಿರುವ ಎರಡು ಪಕ್ಷಗಳ ಸಹವಾಸ ಬೇಡವೆಂದರೆ ಮೂರನೆಯ ಪಕ್ಷ ಒಂದಿದೆ. ಅದು ಮತಾಂಧರ ಭಾರತೀಯ ಜನತಾ ಪಕ.್ಷ ಅದರ ಮುಖಂಡರೂ ಕುಲಗೆಟ್ಟ ಶಾಸಕರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಳ್ಳುವುದರಲ್ಲಿ ನಿಸ್ಸೀಮರೇ. ನಂತರ ನಮ್ಮ ಪಕ್ಷದ ಧ್ಯೇಯ ಧೋರಣೆಗಳನ್ನು ಮೆಚ್ಚಿ ಸೇರ್ಪಡೆಯಾಗಿದ್ದಾರೆಂಬ ರೆಡಿಮೇಡ್ ಹೇಳಿಕೆ ಹೇಗೂ ಸಿಧ್ದವಾಗಿರುತ್ತದೆ.
ಕರ್ನಾಟಕದಲ್ಲಿ ಲಿಂಗಾಯತರು, ಒಕ್ಕಲಿಗರು ಬಲಾಢ್ಯರಾಗಿದ್ದ ಮಾತ್ರಕ್ಕೆ ಅವರೇ ಮಂತ್ರಿ ಮಂಡಲದಲ್ಲಿ ಸಿಂಹಪಾಲು ದೋಚಲು ಅರ್ಹರೇ? ಉಳಿದಂತೆ ಸಾಪೇಕ್ಷವಾಗಿ ಕಡಿಮೆ ಜನಸಂಖ್ಯೆಯ ಸಮುದಾಯಗಳು ಮತ್ತು ಅಲ್ಪಸಂಖ್ಯಾತರಲ್ಲಿ ಕೆಲವು ಪಂಗಡದವರಿಗೆ ಕಾಟಾಚಾರಕ್ಕೆ ಒಂದೋ ಎರಡೋ ಸ್ಥಾನ ನೀಡಿ ಮೂಗಿಗೆ ತುಪ್ಪ ಹಚ್ಚುವ ಕೆಲಸ ಎಷ್ಟರಮಟ್ಟಿಗೆ ಸರಿ? ಅಲ್ಪಸಂಖ್ಯಾತರನ್ನು ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳೂ ಕಡೆಗಣಿಸಿವೆ. ಬಿಜೆಪಿಯಂತೂ ತನ್ನ ಈ ದುರ್ನೀತಿಯನ್ನು ಬಹಿರಂಗವಾಗಿಯೇ ಘೋಷಿಸುವ ದಾಷ್ಟ್ರ್ಯ ತೋರಿದೆ.
ಇದು ಏಕೀಕರಣವಾದ ದಿನದಿಂದಲೂ ನಡೆದೇ ಇದೆ. ಅಲ್ಪಸಂಖ್ಯಾತರ ಜನಸಂಖ್ಯೆಗನುಗುಣವಾಗಿ ಅವರಿಗೆ ಪ್ರಾತಿನಿಧ್ಯ ಕೊಟ್ಟು ಅವರನ್ನ ಗೌರವದಿಂದ ನಡೆಸಿಕೊಳ್ಳಬೇಕೆಂಬ ಪ್ರಾಥಮಿಕ ಪ್ರಜಾತಾಂತ್ರಿಕ ತಿಳಿವಳಿಕೆ ಯಾವ ರಾಜಕೀಯ ಪಕ್ಷಕ್ಕೂ ಇಲ್ಲದಿರುವುದು ಒಂದು ದುರಂತವೇ ಸರಿ.

– ಹೆಚ್.ಎಸ್.ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...