2002 ರ ಗುಜರಾತ್ ಗಲಭೆಯಲ್ಲಿ ಬಿಲ್ಕಿಸ್ ಬಾನೋ ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಅವರ ಕುಟುಂಬವನ್ನು ಕೊಂದ 11 ಆರೋಪಿಗಳ ಬಿಡುಗಡೆಯನ್ನು ಒಕ್ಕೂಟ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸಮರ್ಥಿಸಿಕೊಂಡಿದ್ದಾರೆ. ಅಪರಾಧಿಗಳ ಬಿಡುಗಡೆಗೆ ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಒಪ್ಪಿಗೆ ನೀಡಿತ್ತು ಎಂದು ಗುಜರಾತ್ ಸರ್ಕಾರವು ಸುಪ್ರಿಂಕೋರ್ಟ್‌ನಲ್ಲಿ ಹೇಳಿದ್ದು, ಇದರ ನಂತರ ವಿರೋಧ ಪಕ್ಷಗಳು ಮೋದಿ ನೇತೃತ್ವದ ಸರ್ಕಾರ ಮೇಲೆ ವಾಗ್ದಾಳಿ ನಡೆಸುತ್ತಿವೆ.
ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ವೇಳೆ ಅತ್ಯಾಚಾರಿಗಳ ಬಿಡುಗಡೆಯನ್ನು ಸಮರ್ಥಿಸಿಕೊಂಡ ಧಾರವಾಡ ಸಂಸದರೂ ಆಗಿರುವ ಪ್ರಹ್ಲಾದ್ ಜೋಶಿ,“ಇದು ಸರ್ಕಾರ ಮತ್ತು ಸಂಬಂಧಪಟ್ಟವರು ತೆಗೆದುಕೊಂಡ ನಿರ್ಧಾರ. ಇದು ಕಾನೂನಿನ ಪ್ರಕ್ರಿಯೆಯಾಗಿರುವುದರಿಂದ ನನಗೆ ಅದರಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ” ಎಂದು ಎನ್‌ಡಿಟಿವಿ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಜೈಲಿನಲ್ಲಿ ‘ಸಾಕಷ್ಟು ಸಮಯ’ ಕಳೆದ ಅಪರಾಧಿಗಳನ್ನು, ಬಿಡುಗಡೆ ಮಾಡುವ ‘ಕಾನೂನು’ ಇದೆ. ಈ ಕಾನೂನಿನ ಪ್ರಕಾರ ಅವರನ್ನು ಬಿಡುಗಡೆ ಮಾಡಲಾಗುತ್ತದೆ” ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಒಪ್ಪಿದ ಮೋದಿ ಸರ್ಕಾರ; ಏನೇನಾಯ್ತು ಈ ವರೆಗೆ? | ಸಂಕ್ಷಿಪ್ತ ವರದಿ
ಘೋರ, ಹೇಯ ಮತ್ತು ಗಂಭೀರ ಅಪರಾಧ ಎಂದು ಸಿಬಿಐ ಕರೆದಿರುವ ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳ ಅವಧಿಪೂರ್ವ ಬಿಡುಗಡೆಗೆ ವ್ಯಕ್ತವಾದ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಗುಜರಾತ್ ಸರ್ಕಾರ ಹೇಳಿದ್ದ ‘ಉತ್ತಮ ನಡವಳಿಕೆ’ ವಾದವನ್ನು ಪುನರುಚ್ಚರಿಸಿದರು.
“ಕೆಲವು ಕಾಲ ಜೈಲಿನಲ್ಲಿದ್ದ ನಂತರ, ಅವರ ನಡವಳಿಕೆಯ ಬಗ್ಗೆ … ಹಲವಾರು ಘಟನೆಗಳು ಇವೆ, ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ” ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಜೂನ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಪಾಟಿದಾರ್ ನಾಯಕ ಹಾರ್ದಿಕ್ ಪಟೇಲ್ ಕೂಡಾ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸಿದ್ದಾರೆ. “ರಾಜ್ಯ ಸರ್ಕಾರವು ಕೈದಿಗಳನ್ನು ಉತ್ತಮ ನಡವಳಿಕೆಗಾಗಿ ಬಿಡುಗಡೆ ಮಾಡುವ ಅಧಿಕಾರವನ್ನು ಹೊಂದಿದೆ. ಇದನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ತೋರಿಸಲಾಗುತ್ತಿದೆ ಎಂದು ನಾನು ನಂಬುತ್ತೇನೆ. ಯಾವುದೇ ಅಪರಾಧಿಯು ಅವರ ಕೃತ್ಯಗಳಿಗೆ ಶಿಕ್ಷೆಗೆ ಅರ್ಹರು” ಎಂದು ಹಾರ್ದಿಕ್ ಪಟೇಲ್ ಹೇಳಿದ್ದಾರೆ.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಅತ್ಯಾಚಾರಿಗಳ ಬಿಡುಗಡೆಗೆ ಕೇಂದ್ರದಿಂದ ಅನುಮೋದನೆ: ಗುಜರಾತ್ ಸರ್ಕಾರದ ಅಫಿಡವಿಟ್‌ನಲ್ಲಿ ಉಲ್ಲೇಖ
ಪ್ರಹ್ಲಾದ್ ಜೋಶಿ ಮತ್ತು ಹಾರ್ದಿಕ್ ಪಟೇಲ್ ಅವರೊಂದಿಗೆ ಪ್ರಚಾರ ಮಾಡುತ್ತಿದ್ದ ಮತ್ತೊಬ್ಬ ಬಿಜೆಪಿ ನಾಯಕ ಅಲ್ಪೇಶ್ ಠಾಕೋರ್ ಮಾತ್ರ ಅಪರಾಧಿಗಳ ಬಿಡುಗಡೆಯನ್ನು ಬೆಂಬಲಿಸದೆ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಅಪರಾಧಿಗಳನ್ನು ಮುಕ್ತಗೊಳಿಸುವುದು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.
“ಇದನ್ನು ನಾನು ಒಪ್ಪಿಕೊಳ್ಳುವುದಿಲ್ಲ. ಅಂತಹ ವ್ಯಕ್ತಿಗಳನ್ನು ಬಿಡುಗಡೆ ಮಾಡಲು ಕೇವಲ ಉತ್ತಮ ನಡವಳಿಕೆಯು ಸಾಕಾಗುವುದಿಲ್ಲ. ಅವರು ಜೈಲಿನಿಂದ ಹೊರ ಬಂದಾಗ ಅವರಿಗೆ ಸಿಹಿತಿಂಡಿ ನೀಡಿರುವುದು ನಾಚಿಕೆಗೇಡಿನ ಸಂಗತಿ” ಎಂದು ಠಾಕೋರ್ ತಿಳಿಸಿದ್ದಾರೆ.-
14 ವರ್ಷಗಳ ಕಾಲ ಜೈಲಿನಲ್ಲಿದ್ದ ಕಾರಣ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಗುಜರಾತ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ; ಅವರ ನಡವಳಿಕೆಯು ಒಳ್ಳೆಯದು ಎಂದು ಕಂಡುಬಂದಿದ್ದು ಮತ್ತು ಕೇಂದ್ರವು ಅದನ್ನು ಅನುಮೋದಿಸಿತು ಎಂದು ಹೇಳಿದೆ.
ಇದನ್ನೂ ಓದಿ: ಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?
ರಾಷ್ಟ್ರವ್ಯಾಪಿ ಆಕ್ರೋಶದ ನಡುವೆ ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಅಪರಾಧಿಗಳು ಬಿಡುಗಡೆಯಾಗಿದ್ದು, ಗುಜರಾತಿನ ಜೈಲಿನ ಹೊರಗೆ ಹೂಮಾಲೆ ಹಾಕಿ ಸಿಹಿ ಹಂಚಿ ಅವರನ್ನು ಸ್ವಾಗತಿಸಲಾತ್ತು.


