Homeಮುಖಪುಟಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?

ಬಿಲ್ಕಿಸ್ ಬಾನೋ ಪ್ರಕರಣ: ಕೊಲೆ, ಅತ್ಯಾಚಾರದಂತಹ ಹೀನಕೃತ್ಯ ಎಸಗಿದವರಿಗೆ ಕ್ಷಮಾದಾನ ಸರಿಯೇ?

- Advertisement -
- Advertisement -

ದೇಶಾದ್ಯಂತ ಆಕ್ರೋಶ ಹುಟ್ಟುಹಾಕಿದ್ದ 2012ರ ದೆಹಲಿಯ ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ 4 ಅಪರಾಧಿಗಳಿಗೆ 2020ರಲ್ಲಿ ಗಲ್ಲು ಶಿಕ್ಷೆ ವಿಧಿಸಲಾಯಿತು. ಆದರೆ 2002ರ ಗುಜರಾತ್‌ನ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಮತ್ತು 7 ಜನರ ಕೊಲೆಯ 11 ಅಪರಾಧಿಗಳನ್ನು 2022ರ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲಾಯಿತು. ಅವರಿಗೆ ಹಾರ ಹಾಕಿ, ಸಿಹಿ ತಿನ್ನಿಸಿ ಸ್ವಾಗತಿಸಲಾಯಿತು. ಒಂದೇ ಭಾರತದ ಇಬ್ಬರೂ ಹೆಣ್ಣುಮಕ್ಕಳಿಗೆ ಹೀನಮಟ್ಟದ ದೌರ್ಜನ್ಯ ನಡೆದಿರುವಾಗ, ಎರಡೂ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಸಿಗಬೇಕಿದ್ದ ನ್ಯಾಯದಲ್ಲಿಯೂ ಈ ಮಟ್ಟದ ತಾರತಮ್ಯ ಏಕೆ ಎಸಗಲಾಯಿತು ಎಂಬುದರ ಬಗ್ಗೆ ಈಗ ದೇಶ ಚರ್ಚಿಸುತ್ತಿದೆ.

ಅದು 2002ನೇ ಇಸವಿಯ ಫೆಬ್ರವರಿ 27ನೇ ತಾರೀಖು. ಅಯೋಧ್ಯಯಿಂದ ಹಿಂತಿರುಗುತ್ತಿದ್ದ ಕರಸೇವಕರಿಂದ ತುಂಬಿದ್ದ ಸಬರಮತಿ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಅಲ್ಲಿಂದ ಆರಂಭವಾದ ಗುಜರಾತ್ ಗಲಭೆ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ರಾಜ್ಯದೆಲ್ಲೆಡೆ ಹಬ್ಬಿತ್ತು. ಎಲ್ಲೆಡೆ ಮಾರಣಹೋಮಗಳು ನಡೆದು ಭಯಭೀತವಾದ ವಾತಾವರಣ ನಿರ್ಮಾಣವಾಗಿತ್ತು. ಟ್ರಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಕುಟುಂಬವೊಂದನ್ನು 20ರಿಂದ 30 ಜನರಿದ್ದ ಗುಂಪೊಂದು ಅಡ್ಡಗಟ್ಟಿತು. 21 ವರ್ಷ ವಯಸ್ಸಿನ 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ತನ್ನ ತೋಳಿನಲ್ಲಿ 3 ವರ್ಷದ ಮಗಳನ್ನು ಹಿಡಿದಿದ್ದರು. ಆ ಗುಂಪಿನ ವ್ಯಕ್ತಿಯೊಬ್ಬ ಆ ಮಗುವನ್ನು ಕಿತ್ತುಕೊಂಡು ನೆಲಕ್ಕೆ ಬಡಿದು ಸಾಯಿಸಿದ. ಬಿಲ್ಕಿಸ್ ಬಾನೋ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಯಿತು. ಆಕೆಯನ್ನು ಬೆತ್ತಲುಗೊಳಿಸಿ ಪ್ರಜ್ಞೆ ತಪ್ಪುವವರೆಗೂ ಅಮಾನುಷವಾಗಿ ಥಳಿಸಲಾಯಿತು. ಅವರ ಕುಟುಂಬದ 7 ಜನರನ್ನು ಕ್ರೂರವಾಗಿ ಕೊಂದುಹಾಕಲಾಯಿತು. ಕುಟುಂಬದ ಎಲ್ಲರೂ ಕೊನೆಯುಸಿರೆಳೆದರೂ ಬಿಲ್ಕಿಸ್ ಬದುಕುಳಿದರು. ಅವರು ಕಣ್ಣುಬಿಟ್ಟಾಗ ಅವರ ಕುಟುಂಬದವರ ಹೆಣಗಳ ಮಧ್ಯೆ ಬೆತ್ತಲೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.

ತುಂಡು ಬಟ್ಟೆ ಹೊದ್ದು ಹತ್ತಿರದಲ್ಲಿದ್ದ ಬೆಟ್ಟದಲ್ಲಿ ಆಕೆ ಇಡೀ ರಾತ್ರಿ ಕಳೆದರು. ಮಾರನೆಯ ದಿನ ಅಲ್ಲಿದ್ದ ಆದಿವಾಸಿ ಮಹಿಳೆಯೊಬ್ಬಳು ಬಟ್ಟೆ-ನೀರು ನೀಡಿದಳು. ಬಿಲ್ಕಿಸ್ ಪೊಲೀಸ್ ಠಾಣೆಗೆ ತೆರಳಿ ತನಗಾದ ಅನ್ಯಾಯದ ವಿರುದ್ಧ ದೂರು ನೀಡಿದರೂ ದಾಖಲಿಸಿಕೊಳ್ಳಲಿಲ್ಲ. ಅವರನ್ನು ನಿರಾಶ್ರಿತರ ಶಿಬಿರಕ್ಕೆ ಕಳಿಸಲಾಯಿತು. ಅಲ್ಲಿದ್ದ ಆಕೆ ತನ್ನ ಪತಿಯೊಡನೆ ಸೇರಿ ಹೋರಾಡುವ ನಿರ್ಧಾರ ಮಾಡಿ ಮಾನವ ಹಕ್ಕುಗಳ ಆಯೋಗ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದರು. ಸುಪ್ರೀಂ ಕೋರ್ಟ್ 2003ರ ಡಿಸೆಂಬರ್‌ನಲ್ಲಿ ಸಿಬಿಐ ತನಿಖೆಗೆ ಆದೇಶಿಸಿತು. ನಂತರ 20 ಆರೋಪಿಗಳನ್ನು ಬಂಧಿಸಲಾಯ್ತು. ಆದರೂ, ತಾನಿದ್ದ ಊರಿನಲ್ಲಿ ತಮ್ಮ ಜೀವಕ್ಕೆ ಅಪಾಯವಿದೆ ಮತ್ತು ಸಾಕ್ಷ್ಯ ನಾಶದ ಸಂಭವವಿದೆ ಎಂದು ಬಿಲ್ಕಿಸ್ ಮನವರಿಕೆ ಮಾಡಿಕೊಟ್ಟ ನಂತರ ಸುಪ್ರೀಂ 2004ರ ಆಗಸ್ಟ್‌ನಲ್ಲಿ ಪ್ರಕರಣದ ತನಿಖೆಯನ್ನು ಮುಂಬೈಗೆ ವರ್ಗಾಯಿಸಿತು.

2008ರಲ್ಲಿ ವಿಚಾರಣಾ ನ್ಯಾಯಾಲಯವು 11 ಜನರನ್ನು ಅಪರಾಧಿಗಳೆಂದು ಘೋಷಿಸಿ ಅವರಿಗೆ ಜೀವಾವಧಿ ಶಿಕ್ಷೆ ಘೋಷಿಸಿತು. ಆರಂಭದಲ್ಲಿ ದೂರು ದಾಖಲಿಸಲು ನಿರಾಕರಿಸಿದ ಪೊಲೀಸರಿಗೂ 3 ವರ್ಷಗಳ ಸಜೆ ವಿಧಿಸಿತು. ಆದರೂ ಬಿಲ್ಕಿಸ್ ನ್ಯಾಯ ಸಿಕ್ಕಿತ್ತೆಂದು ನಿಟ್ಟುಸಿರು ಬಿಡಲು ಸಾಧ್ಯವಾಗಲಿಲ್ಲ. ಏಕೆಂದರೆ ಅಪರಾಧಿಗಳು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದರು. ಅದೃಷ್ಟವಶಾತ್ ಬಾಂಬೆ ಹೈಕೋರ್ಟ್ ಕೂಡ 2017ರಲ್ಲಿ 11 ಜನರ ಅಪರಾಧವನ್ನು ಎತ್ತಿಹಿಡಿದು ಜೀವಾವಧಿ ಶಿಕ್ಷೆಯನ್ನು ಮಾನ್ಯ ಮಾಡಿತು. ನ್ಯಾಯ ಸಿಕ್ಕಿತು ಎಂಬು ಬಿಲ್ಕಿಸ್ ನೆಮ್ಮದಿ ಪಡುವಷ್ಟರಲ್ಲಿಯೇ ಕೇವಲ 5 ವರ್ಷಗಳಲ್ಲಿ ಆ ಎಲ್ಲಾ ಅಪರಾಧಿಗಳು ಜೈಲಿನಿಂದ ಹೊರಬಂದಿದ್ದಾರೆ. ಬಿಲ್ಕಿಸ್ ಇರುವ ಊರಿನಲ್ಲಿ ರಾಜಾರೋಷವಾಗಿ ಓಡಾಡಲಿದ್ದಾರೆ. ಇದನ್ನು ಬಿಲ್ಕಿಸ್ ಹೇಗಾದರೂ ಸಹಿಸಲು ಸಾಧ್ಯ?

ಕ್ಷಮಾದಾನ ದೊರೆತಿದ್ದು ಹೇಗೆ?

11 ಜನ ಅತ್ಯಾಚಾರಿಗಳಲ್ಲಿ ಒಬ್ಬನಾದ ರಾಧೆ ಶ್ಯಾಮ್ ಶಾ ಎಂಬಾತ ತಮಗೆ ಕ್ಷಮಾದಾನ ನೀಡಬೇಕೆಂದು ಗುಜರಾತ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದ ಕಾರಣವನ್ನು ಉಲ್ಲೇಖಿಸಿ ಹೈಕೋರ್ಟ್ ಅರ್ಜಿ ವಜಾಗೊಳಿಸಿತು. ಆನಂತರ ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ. “1992ರ ಗುಜರಾತ್ ಸರ್ಕಾರದ ಸುತ್ತೋಲೆಯೊಂದನ್ನು 2012ರಲ್ಲಿ ಗುಜರಾತ್ ಹೈಕೋರ್ಟ್ ಉಲ್ಲೇಖಿಸಿದೆ. ಅದರನ್ವಯ, 1978ರ ನಂತರ ಜೀವಾವಧಿ ಶಿಕ್ಷೆಗಳಲ್ಲಿ 14 ವರ್ಷ ಪೂರ್ತಿ ಶಿಕ್ಷೆ ಅನುಭವಿಸಿದವರಿಗೆ ಅವಧಿಗೆ ಮುನ್ನ ಬಿಡುಗಡೆ ಮಾಡಬಹುದು ಎಂದು ಹೇಳಲಾಗಿದೆ. ನಾನು ಈಗಾಗಲೇ 15 ವರ್ಷ ಜೈಲಿನಲ್ಲಿ ಕಳೆದಿರುವೆ. ಹಾಗಾಗಿ ಕ್ಷಮಾದಾನ ನೀಡಬೇಕು” ಎಂದು ವಾದಿಸಿದ್ದನು. ಆ ಆಧಾರದಲ್ಲಿ ಸುಪ್ರೀಂ ಕೋರ್ಟ್ ಗುಜರಾತ್ ಸರ್ಕಾರ ನಿರ್ಧಾರ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿತ್ತು.

ಗುಜರಾತ್ ಸರ್ಕಾರ ಗೋಧ್ರಾ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇಬ್ಬರು ಬಿಜೆಪಿ ಶಾಸಕರು, ಬಿಜೆಪಿ ಕೌನ್ಸಿಲರ್ ಮತ್ತು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆಯನ್ನೊಳಗೊಂಡ ಸಮಿತಿಯನ್ನು ರಚಿಸಿತು. ಆ ಸಮಿತಿಯು ಬಿಲ್ಕಿಸ್ ಪ್ರಕರಣದ ಎಲ್ಲಾ ಅಪರಾಧಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆ ಮಾಡುವಂತೆ ಸರ್ವಾನುಮತದಿಂದ ರಾಜ್ಯ ಗೃಹ ಇಲಾಖೆಗೆ ವರದಿ ಸಲ್ಲಿಸಿತು. ಅಪರಾಧಿಗಳು ಹೊರಬಂದಾಗ ಸಮಿತಿಯಲ್ಲಿದ್ದ ಬಿಜೆಪಿ ಶಾಸಕ ಸಿ.ಕೆ ರೌಲ್ಜಿ ಎಂಬುವವರು, “ಅವರು ಬ್ರಾಹ್ಮಣರು ಉತ್ತಮ ಸಂಸ್ಕಾರವುಳ್ಳವರು, ಹಾಗಾಗಿ ಅವರನ್ನು ಬಿಡುಗಡೆ ಮಾಡಬಹುದು” ಎಂದು ಸಮರ್ಥಿಸಿಕೊಂಡರು!

ಸಿ.ಕೆ ರೌಲ್ಜಿ

ಸಿಆರ್‌ಪಿಸಿ 432 ಮತ್ತು 433 ಸೆಕ್ಷನ್‌ಗಳ ಆಧಾರದಲ್ಲಿ ಕ್ಷಮಾದಾನ ನೀಡಿದ್ದೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ ಅದೇ ಸಿಆರ್‌ಪಿಸಿ ಸೆಕ್ಷನ್ 435ರ ಪ್ರಕಾರ ಕೇಂದ್ರೀಯ ಕಾಯಿದೆಯ ಅಡಿಯಲ್ಲಿನ ಅಪರಾಧವನ್ನು ಯಾವುದೇ ಕೇಂದ್ರಿಯ ತನಿಖಾ ಸಂಸ್ಥೆಗಳು ನಡೆಸಿದ್ದಲ್ಲಿ ಆಗ ರಾಜ್ಯಗಳು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದೆ. ಅಲ್ಲದೆ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶರ ಅಭಿಪ್ರಾಯವನ್ನೂ ಪರಿಗಣಿಸಬೇಕು ಎನ್ನಲಾಗಿದೆ. ಆದರೆ ಈ ಕುರಿತು ಕೇಂದ್ರ ಸರ್ಕಾರವಾಗಲಿ, ನ್ಯಾಯಾಧೀಶರಾಗಲಿ ಪ್ರತಿಕ್ರಿಯಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಅಲ್ಲದೆ 2014ರ ಕೇಂದ್ರ ಗೃಹ ಇಲಾಖೆಯ ನಿಯಮಗಳ ಪ್ರಕಾರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಶಿಕ್ಷೆಗೊಳಗಾದ ವ್ಯಕ್ತಿಯನ್ನು ಅವಧಿಗೆ ಮುಂಚಿತವಾಗಿ ಬಿಡುಗಡೆ ಮಾಡುವಂತಿಲ್ಲ ಎಂದು ವಕೀಲ ಮಿಹಿರ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಪ್ರಕರಣದ ಸಂತ್ರಸ್ತೆಯಾದ ಬಿಲ್ಕಿಸ್ ಬಾನೊರವರ ಅಭಿಪ್ರಾಯವನ್ನು ಸಹ ಸರ್ಕಾರ ಪರಿಗಣಿಸಿಲ್ಲ.

ಕ್ಷಮಾದಾನ ಪ್ರಶ್ನಿಸಿ ಸುಪ್ರೀಂನಲ್ಲಿ ಮೇಲ್ಮನವಿ

ಸಿಪಿಎಂ(ಎಂ) ನಾಯಕಿ ಸುಭಾಷಿಣಿ ಅಲಿ ಮತ್ತು ಸ್ವತಂತ್ರ ಪತ್ರಕರ್ತೆ ರೇವತಿ ಲಾಲ್ ಕ್ಷಮಾದಾನ ವಿರೋಧಿಸಿ ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅಲ್ಲದೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಕೂಡ ಎರಡನೇ ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಜೆಐ ಎನ್.ವಿ ರಮಣರವರು ಇದರ ಬಗ್ಗೆ ಪರಿಶೀಲಿಸಿ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.

ಇದು ಭಾರತದ ನೈತಿಕತೆಯ ಮೇಲಿನ ದಾಳಿ- ಡಾ.ಎಚ್.ಎನ್ ನಾಗಮೋಹನ್‌ದಾಸ್

“ಗುಜರಾತ್ ಸರ್ಕಾರ ತೆಗೆದುಕೊಂಡ ಈ ಕ್ರಮವು ದುರದೃಷ್ಟಕರ ಸಂಗತಿಯಾಗಿದ್ದು, ಕಾನೂನಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ದೇಶದ ನೈತಿಕತೆ ಮೇಲೆ ನಡೆಸಿದ ಪ್ರಹಾರವಾಗಿದೆ” ಎನ್ನುತ್ತಾರೆ ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಡಾ.ಎಚ್.ಎನ್ ನಾಗಮೋಹನ್‌ದಾಸ್‌ರವರು.

“ನಾವು ಕ್ಷಮಾದಾನವನ್ನು ಒಪ್ಪುತ್ತೇವೆ. ಏಕೆಂದರೆ ಜೈಲು ಶಿಕ್ಷೆಯ ಉದ್ದೇಶ ಮನುಷ್ಯನ ಮನಪರಿವರ್ತನೆ ಮಾಡುವುದಾಗಿದೆ. ಆದರೆ ಮಕ್ಕಳು ಮತ್ತು ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರದಂತಹ ಹೀನ ಕೃತ್ಯಗಳಲ್ಲಿ ಭಾಗಿಯಾದ ಅಪರಾಧಿಗಳಿಗೆ ಕ್ಷಮಾದಾನ ನೀಡುವುದು ಸಮಾಜಕ್ಕೆ ತಪ್ಪು ಸಂದೇಶ ನೀಡಿದಂತಾಗುತ್ತದೆ” ಎಂದರು.

ಡಾ.ಎಚ್.ಎನ್ ನಾಗಮೋಹನ್‌ದಾಸ್

“ಈ ಪ್ರಕರಣವನ್ನು ಸುಪ್ರೀಂ ಆದೇಶದ ಮೇರೆಗೆ ಮಹಾರಾಷ್ಟ್ರದ ಸಿಬಿಐ ಕೋರ್ಟ್ ತನಿಖೆ ನಡೆಸಿ ಶಿಕ್ಷೆ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಗುಜರಾತ್ ಸರ್ಕಾರ ಕೇಂದ್ರದೊಂದಿಗೆ ಸಮಾಲೋಚನೆ ನಡೆಸಿ ನಿರ್ಧಾರಕ್ಕೆ ಬರಬೇಕಾಗುತ್ತದೆ. ಆದರೆ ಗುಜರಾತ್ ಸರ್ಕಾರ ಈ ನಿಯಮ ಪಾಲಿಸಿಲ್ಲ. ದುರಾದೃಷ್ಟವೆಂದರೆ ಈ ಕುರಿತು ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಮಧ್ಯಪ್ರವೇಶ ಮಾಡಿ ಅಪರಾಧಿಗಳ ಬಿಡುಗಡೆ ತಡೆಯಬಹುದಿತ್ತು. ಪ್ರಧಾನಿ ಮೋದಿಯವರು ಆಗಸ್ಟ್ 15ರಂದು ಕೆಂಪು ಕೋಟೆಯಲ್ಲಿ ಮಹಿಳೆಯರ ಸಬಲೀಕರಣದ ಕುರಿತು ದೊಡ್ಡದೊಡ್ಡ ಮಾತುಗಳನ್ನಾಡಿದ ದಿನವೇ ಈ ಅಪರಾಧಿಗಳು ಬಿಡುಗಡೆಯಾದರು. ಇದಲ್ಲವೇ ದೇಶದ ಪ್ರಧಾನಿಗಳ ಮಾತಿಗೆ ಸಿಕ್ಕ ಗೌರವ?” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಈಗಿನ ಕೇಂದ್ರ ಸರ್ಕಾರ 2014ರಲ್ಲಿ ಒಂದು ಸುತ್ತೋಲೆಯನ್ನು ಹೊರಡಿಸಿ, 11 ಅಪರಾಧ ಪ್ರಕರಣಗಳಲ್ಲಿ ತಮ್ಮ ಅನುಮತಿ ಇಲ್ಲದೆ ಕ್ಷಮಾದಾನ ನೀಡುವಂತಿಲ್ಲ ಎಂದಿದೆ. ಅಲ್ಲದೇ ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ, ಇಡಿ, ಎನ್‌ಐಎ ತರಹದ ತನಿಖಾ ಸಂಸ್ಥೆಗಳು ತನಿಖೆ ಮಾಡಿ ಶಿಕ್ಷೆ ವಿಧಿಸಲಾಗಿದ್ದರೆ ಕೇಂದ್ರದೊಂದಿಗೆ ಸಮಾಲೋಚನೆ ಇಲ್ಲದೆ ಕ್ಷಮಾದಾನ ನೀಡಬಾರದು ಎಂದು ಹೇಳಿದೆ. ಈ ಯಾವುದನ್ನೂ ಪರಿಗಣಿಸದೇ ಗುಜರಾತ್ ಸರ್ಕಾರ ತಪ್ಪಿತಸ್ಥರನ್ನು ಬಿಡುಗಡೆ ಮಾಡಿರುವುದು ತಪ್ಪು. ಕೇಂದ್ರ ಈ ಕುರಿತು ಮಾತನಾಡದಿರುವುದು ತಪ್ಪು. ಈ ತಪ್ಪನ್ನು ಸುಪ್ರೀಂ ಕೋರ್ಟ್ ಸರಿಪಡಿಸಬೇಕಿದೆ. ಇಲ್ಲದಿದ್ದಲ್ಲಿ ಸಮಾಜದಲ್ಲಿ ಕೆಟ್ಟ ಮಾದರಿ ಸೃಷ್ಟಿಯಾಗುತ್ತದೆ” ಎಂದರು.

“ಮನಪರಿವರ್ತನೆಯನ್ನು ನಾನು ಒಪ್ಪುತ್ತೇನೆ. ಆದರೆ ಅದನ್ನು ದುರುಪಯೋಗ ಮಾಡಿಕೊಳ್ಳಬಾರದು. ಅಲ್ಪಸಂಖ್ಯಾತ ಮಹಿಳೆ ಮೇಲೆ ಕ್ರೌರ್ಯ ನಡೆದು, ಆಕೆ ಧೈರ್ಯದಿಂದ ಮುಂದೆ ಬಂದು ದೂರು ನೀಡಿ, ಎಲ್ಲಾ ಸಾಕ್ಷಾಧಾರಗಳ ಜೊತೆ ಎರಡು ನ್ಯಾಯಾಲಯಗಳಲ್ಲಿ ಶಿಕ್ಷೆಯಾಗಿರುವಾಗ ಅಪರಾಧಿಗಳನ್ನು ಏಕಾಏಕಿ ಬಿಡುಗಡೆ ಮಾಡುವುದು ಯಾವ ನೈತಿಕತೆ” ಎಂದು ಪ್ರಶ್ನಿಸುತ್ತಾರೆ ಜಸ್ಟಿಸ್ ದಾಸ್‌ರವರು.

ಗುಜರಾತ್ ಸರ್ಕಾರದ ಪ್ರಾಯೋಜಿತ ಸಾಮೂಹಿಕ ಅತ್ಯಾಚಾರ – ಎಸ್ ಬಾಲನ್

“ಬಿಲ್ಕಿಸ್ ಬಾನೊ ಮೇಲೆ ಕ್ರೂರ ಸಾಮೂಹಿಕ ಅತ್ಯಾಚಾರವಾಗಲು ಕಾರಣವೇನು? ಆಕೆ ಈ ದೇಶದಲ್ಲಿ, ಗುಜರಾತ್ ರಾಜ್ಯದಲ್ಲಿ ಹುಟ್ಟಿದ್ದು ತಪ್ಪೇ? ಆಕೆ ಮುಸ್ಲಿಂ ಧರ್ಮದಲ್ಲಿ ನಂಬಿಕೆಯಿಟ್ಟಿದ್ದು ತಪ್ಪೇ? ಆಕೆ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಸಾಮೂಹಿಕ ಅತ್ಯಾಚಾರ ನಡೆಸುತ್ತಾರೆ, ಆಕೆಯ ಕುಟುಂಬವನ್ನು ಕೊಲ್ಲುತ್ತಾರೆ. ಅಷ್ಟು ಮಾತ್ರವಲ್ಲದೇ ಆಕೆ ದೂರು ನೀಡಿದರೆ ಪೊಲೀಸರು ತೆಗೆದುಕೊಳ್ಳುವುದಿಲ್ಲ. ಆ ನಂತರ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿ, ಸುಪ್ರೀಂ ಕೋರ್ಟ್ ಸಿಬಿಐ ತನಿಖೆ ನಡೆಸಲು ಆದೇಶಿಸುತ್ತದೆ. 11 ಜನ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗುತ್ತದೆ. ಆ ಶಿಕ್ಷೆಯನ್ನು ಅದೇ ಗುಜರಾತ್ ಸರ್ಕಾರ ಹಿಂಪಡೆದು ಅವರನ್ನು ಬಿಡುಗಡೆ ಮಾಡಿದೆ. ಇದನ್ನು ನಾನು ಗುಜರಾತ್ ಸರ್ಕಾರ ಪ್ರಾಯೋಜಿತ ಸಾಮೂಹಿಕ ಅತ್ಯಾಚಾರ, ಸರ್ಕಾರಿ ಪ್ರಾಯೋಜಿತ ಕೊಲೆಗಳು, ಸರ್ಕಾರಿ ಪ್ರಾಯೋಜಿತ ನರಮೇಧ, ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ಎಂದು ಕರೆಯುತ್ತೇನೆ” ಎಂದು ಹಿರಿಯ ವಕೀಲರಾದ ಎಸ್. ಬಾಲನ್ ಆಕ್ರೋಶ ವ್ಯಕ್ತಪಡಿಸಿದರು.

“ಅದೇ ಗುಜರಾತ್ ಸರ್ಕಾರ ಈಗ ಸಮಿತಿಯೊಂದನ್ನು ರಚಿಸಿ ಸಿಆರ್‌ಪಿಸಿ ಸೆಕ್ಷನ್ 432, 433ಅನ್ನು ಬಳಸಿಕೊಂಡು ಅಕ್ರಮವಾಗಿ ಆ ಕ್ರೂರ ಅಪರಾಧವೆಸಗಿದವರನ್ನು, ಸಂವಿಧಾನ ವಿರೋಧಿಗಳು, ಮಾನವ ವಿರೋಧಿಗಳನ್ನು ಹೊರಗೆ ಬಿಟ್ಟಿದೆ. ಇದರಿಂದ ಮುಂದಾಗುವ ಅಪಾಯಗಳಿಗೆ ಹೊಣೆ ಯಾರು” ಎಂದು ಪ್ರಶ್ನಿಸಿದರು.

ಎಸ್ ಬಾಲನ್

“ನಿರ್ಭಯ ಪ್ರಕರಣದ ಸಾಮೂಹಿಕ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಯ್ತು. ಅಪರಾಧಿಗಳು ದಲಿತರು, ಹಿಂದುಳಿದ ಸಮುದಾಯದವರಾದರೆ ಅವರ ಪ್ರಾಣ ತೆಗೆಯುತ್ತೀರಿ. ಬಿಲ್ಕಿಸ್ ಪ್ರಕರಣದಲ್ಲಿ ಅಪರಾಧಿಗಳು ಬ್ರಾಹ್ಮಣರು ಅಂತ ಅವರನ್ನು ಬಿಡುಗಡೆ ಮಾಡುತ್ತೀರಾ? ಹೈದರಾಬಾದ್ ದಿಶಾ ಪ್ರಕರಣದಲ್ಲಿ 4 ಆರೋಪಿಗಳನ್ನು ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದರು. ಆಗ ಆರ್‌ಎಸ್‌ಎಸ್ ಮಹಿಳೆಯರು ಎನ್‌ಕೌಂಟರ್‌ಅನ್ನು ಸಂಭ್ರಮಿಸಿದರು. ಆದರೆ ಗುಜರಾತ್‌ನ ಬಿಲ್ಕಿಸ್ ಅತ್ಯಾಚಾರ ಆರೋಪಿಗಳನ್ನು ಎನ್‌ಕೌಂಟರ್ ಮಾಡಲಿಲ್ಲ ಏಕೆ? ಗುಜರಾತ್ ಪೊಲೀಸರು ಏನು ಮಾಡುತ್ತಿದ್ದಾರೆ? ಗುಜರಾತ್‌ನ ಎನ್‌ಕೌಂಟರ್ ಸ್ಪೆಷಲಿಸ್ಟ್ ವಂಜಾರ ಈಗ ಎಲ್ಲಿದ್ದಾನೆ” ಎಂದರು.

“ಜರ್ಮನಿಯಲ್ಲಿ, ಆಸ್ಟ್ರಿಯಾದಲ್ಲಿ ನಾಜಿವಾದಿ ಹಿಟ್ಲರ್ 1200 ಯಹೂದಿ ಮಹಿಳೆಯರನ್ನು ಒಂದೇ ಸ್ಥಳದಲ್ಲಿ ಅತ್ಯಾಚಾರಗೈಯಲು, ಕೊಲೆ ಮಾಡಲು ಕರೆ ನೀಡಿದ್ದ. ಅತ್ಯಾಚಾರಿಗಳಿಗೆ ಬೆಂಬಲ ನೀಡಿದ್ದ. ಅಲ್ಲಿ ಪ್ರಭುತ್ವ ಪ್ರಾಯೋಜಿತ ಅತ್ಯಾಚಾರ-ಕೊಲೆ ನಡೆದಿದ್ದವು. ಅದೇ ರೀತಿ ಇಲ್ಲಿಯೂ ಸರ್ಕಾರವೇ ಮುಂದೆ ನಿಂತು ಅತ್ಯಾಚಾರಿಗಳನ್ನು ಬೆಂಬಲಿಸುತ್ತಿದೆ. ಹಿಟ್ಲರ್‌ಗೂ ಇಲ್ಲಿನ ಬಿಲ್ಕಿಸ್ ಅಪರಾಧಗಳಿಗೆ ಕ್ಷಮೆ ನೀಡಿದ ಸರ್ಕಾರಕ್ಕೂ ಏನು ವ್ಯತ್ಯಾಸ? ಭಾರತದಲ್ಲಿ ಅತಿ ದೊಡ್ಡ ಮಾನವ ಹಕ್ಕು ಉಲ್ಲಂಘನೆಯನ್ನು ಸರ್ಕಾರವೇ ಮುಂದೆ ನಿಂತು ಮಾಡಿದೆ. ಹಾಗಾಗಿ ಅದು ಇಡೀ ರಾಷ್ಟ್ರವೇ ತಲೆ ತಗ್ಗಿಸುವ ಕೃತ್ಯವಾಗಿದೆ” ಎನ್ನುತ್ತಾರೆ ಬಾಲನ್‌ರವರು.


ಇದನ್ನೂ ಓದಿ: ಬಿಲ್ಕಿಸ್ ಬಾನೋಳ ಮುಗಿಯದ ವನವಾಸ ಮತ್ತು ಸಂಸ್ಕಾರವಂತ ಅತ್ಯಾಚಾರಿಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

’ಹಿಂದುತ್ವಕ್ಕೆ ಮರುಳಾಗಿರುವ “ಜಾತಿ” ಬಿಜೆಪಿಯ ಜತೆಗೆ ಇದೆ’; ಗುಜರಾತ್ ಕಾಂಗ್ರೆಸ್ ಮುಖಂಡ ಜಿಗ್ನೇಶ್ ಅವರೊಂದಿಗೆ...

ದಲಿತ ಹೋರಾಟಗಾರ-ಮುಖಂಡ ಜಿಗ್ನೇಶ್ ಮೇವಾನಿ ಗುಜರಾತಿನ ವಡಗಾಂ ಕ್ಷೇತ್ರದ ಶಾಸಕ. ಸದ್ಯಕ್ಕೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷರಾಗಿರುವ ಅವರು ತಮ್ಮ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5ರಂದು ನಡೆಯುವ ವಿಧಾನಸಭಾ ಚುನಾವನೆಯಲ್ಲಿ ಕಾಂಗ್ರೆಸ್‌ಅನ್ನು ಗೆಲ್ಲಿಸಿ...