Homeಮುಖಪುಟಬೆಳ್ಳಿ ಚುಕ್ಕಿ; ವಿಸ್ಮಯಕಾರಿಯಾದ ಅಜ್ಞಾತ ರೇಡಿಯೊ ತರಂಗಗಳು

ಬೆಳ್ಳಿ ಚುಕ್ಕಿ; ವಿಸ್ಮಯಕಾರಿಯಾದ ಅಜ್ಞಾತ ರೇಡಿಯೊ ತರಂಗಗಳು

- Advertisement -
- Advertisement -

ಒಂದು ಸೆಕೆಂಡಿಗೆ 100 ಟ್ರಿಲಿಯನ್ ಅಷ್ಟು ನ್ಯೂಟ್ರಿನೋ ಕಣಗಳು, ನಿಮ್ಮ ದೇಹದ ಯಾವ ಅಂಗಗಳ (ಕಣಗಳ) ಜೊತೆಗೂ ಸಂವಹಿಸದೆ ಚಲಿಸುತ್ತಿದೆ ಅಂದರೆ ನೀವು ನಂಬುತ್ತೀರಾ? ನೀವು ನಂಬಿ ಅಥವಾ ಬಿಡಿ, ಇದು ಸತ್ಯ. ನಾವು ನ್ಯೂಟ್ರಿನೋ ಕಣಗಳ ಸಮುದ್ರದಲ್ಲಿ ಮುಳುಗಿ ಹೋಗಿದ್ದೇವೆ ಎಂಬುದನ್ನು ಅಧ್ಯಯನದ ಮೂಲಕ ಕಂಡುಕೊಂಡಿದ್ದೇವೆ. ಈ ನ್ಯೂಟ್ರಿನೋಗಳು ಮೂಲಭೂತ ಕಣಗಳು (Fundamental Particles). ಅಣುಗಳಲ್ಲಿನ ನ್ಯೂಕ್ಲಿಯಸ್ ವಿಭಜನೆಯಾಗುವ ಮತ್ತು ಎರಡು ಅಣುಗಳು ಕೂಡಿಕೊಳ್ಳುವ ಸಮಯದಲ್ಲಿ ಉಂಟಾಗುವ ಮೂಲಭೂತ ಕಣಗಳು ಇವು. ಸೂರ್ಯ ಮತ್ತಿತರ ನಕ್ಷತ್ರಗಳು ಸೇರಿದಂತೆ ಎಲ್ಲೆಲ್ಲಿ ನ್ಯೂಕ್ಲಿಯಾರ್ ರಿಯಾಕ್ಷನ್ ನಡೆಯುತ್ತಿರುತ್ತದೆಯೋ ಅಲ್ಲೆಲ್ಲವೂ ಈ ನ್ಯೂಟ್ರಿನೋ ಕಣಗಳು ಇವೆ.

ಆದರೆ, ಈ ನ್ಯೂಟ್ರಿನೋ ಕಣಗಳು ಇತರ ಕಣಗಳೊಂದಿಗೆ ಸಂವಹಿಸುವುದು ತೀರ ಎಂದರೆ ತೀರ ಕಡಿಮೆ. ಇಲ್ಲಿ ಸಂವಹನ ಎಂದರೆ: ಎರಡು ಚೆಂಡುಗಳನ್ನು ನೀವು ಕಣ ಎಂದು ತಿಳಿದರೆ, ಅವು ವಿರುದ್ಧ ದಿಕ್ಕಿನಿಂದ ಬಂದು, ಒಂದಕ್ಕೊಂದು ಡಿಕ್ಕಿ ಹೊಡೆದು ಬೇರೆ ದಿಕ್ಕಿನಲ್ಲಿ ಚಲಿಸಿದರೆ, ಅದನ್ನು ವಿಜ್ಞಾನನ ಭಾಷೆಯಲ್ಲಿ ಸಂವಹನವಾದವು (interact) ಎಂದು ಹೇಳುತ್ತೇವೆ. ನೀರಿಗೆ ಉಪ್ಪನ್ನು ಬೆರೆಸಿದಾಗ, ಉಪ್ಪು ನೀರಿನಲ್ಲಿ ಕರಗುತ್ತದೆ, ನಂತರ ನೀರಿನ ರುಚಿ ಉಪ್ಪಾಗಿರುತ್ತದೆ. ಉಪ್ಪಿನ ಕಣಗಳು, ನೀರಿನ ಕಣಗಳೊಂದಿಗೆ ಸಂವಹನಗೊಂಡು ಉಪ್ಪು-ನೀರಾಯಿತು ಎಂದು ಹೇಳಬಹುದು. ಒಟ್ಟಿನಲ್ಲಿ, ಒಂದು ವಸ್ತುವಿನ ಇರುವಿಕೆಯನ್ನು ಗುರುತಿಸಬೇಕಾದರೆ, ಆ ವಸ್ತುವು ಇತರೆ ವಸ್ತುವಿನ (ಕಣಗಳ) ಮೇಲೆ ಏನಾದರೆ ಕ್ರಿಯೆಯನ್ನು, ಬದಲಾವಣೆಯನ್ನು, ಚಲನೆಯನ್ನು ಮಾಡಬೇಕಾಗುತ್ತಿದೆ. ಆಗ ಮಾತ್ರ ವಸ್ತುಗಳ ಇರುವಿಕೆಯನ್ನು ಗ್ರಹಿಸಬಹುದು. ಬರಿಗಣ್ಣಿಗೆ ಕಾಣುವ ವಸ್ತುಗಳ ಸಂವಹನಗಳನ್ನು ಸುಲಭವಾಗಿ ಗುರುತಿಸಬಹುದು ಮತ್ತು ತಿಳಿದುಕೊಳ್ಳಬಹುದು. ಆದರೆ, ಬರಿಗಣ್ಣಿಗೆ ಕಾಣದೆ ನಡೆಯುವ ಅನೇಕ ವಿದ್ಯಮಾನಗಳನ್ನು ಗುರುತಿಸಲು ಮತ್ತು ಇತರ ಕಾಯಗಳೊಂದಿಗೆ ಸಂವಹನ ನಡೆಸದೆ ಸಾಗುವ ಕಣಗಳ ಅಧ್ಯಯನಕ್ಕೆ ಪತ್ತೆಕಾರಕಗಳನ್ನು (Detector) ಬಳಸುತ್ತೇವೆ. ವಸ್ತುಗಳ ಭೌತಿಕ ಮತ್ತು ರಾಸಾಯನಿಕ ಗುಣಗಳ ಮೇಲೆ ಈ ವಿವಿಧ ರೀತಿಯ ಪತ್ತೇಕಾರಕಗಳನ್ನು ರೂಪಿಸಬಹುದಾಗಿರುತ್ತದೆ. ಬರಿಗಣ್ಣಿಗೆ, ಭೌತಿಕವಾಗಿ ನಡೆಯುವ ಪ್ರಕ್ರಿಯೆಗಳಿಗೆ ಕೆಲವೊಮ್ಮೆ ನಮ್ಮ ಕಣ್ಣುಗಳೇ ಪತ್ತೇಕಾರಕವಾಗಿ ಕೆಲಸ ಮಾಡುತ್ತವೆ.

ಇರಲಿ, ನಮ್ಮ ಇಡೀ ಜೀವನದುದ್ದಕ್ಕೂ ಪ್ರತಿ ಕ್ಷಣವು ನಮ್ಮ ದೇಹದ ಮುಖಾಂತರ ಕೋಟ್ಯಂತರ ನ್ಯೂಟ್ರಿನೋಗಳು ಸಾಗುತ್ತಿದ್ದರೂ, ನಾವು ಅದನ್ನು ಗ್ರಹಿಸಲು ಸಾಧ್ಯವಾಗುತ್ತಿಲ್ಲ. ಅಂತೆಯೇ ಸಾಮಾನ್ಯವಾಗಿ ಗ್ರಹಿಸಲಾಗದೆ ಇರುವ ಇಂತಹ ಸಾವಿರಾರು ವಿದ್ಯಮಾನಗಳು ವಿವಿಧ ರೀತಿಯಲ್ಲಿ ಭೂಮಿಯಲ್ಲಿ ನಡೆಯುತ್ತಿವೆ ಅಥವಾ ಇನ್ಯಾವುದೋ ರೀತಿಯಲ್ಲಿ ಭೂಮಿಗೆ ಬಂದು ಅಪ್ಪಳಿಸುತ್ತಿವೆ. ಅವುಗಳ ಅಧ್ಯಯನಗಳು ಈ ವಿಶ್ವದ ಮೂಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದಕ್ಕೆ ಪ್ರಯೋಗಗಳಂತೆ.

ನಮ್ಮ ಕಣ್ಣನ್ನು ನಾವು ಪತ್ತೇಕಾರಕ ಎಂದು ತಿಳಿದರೆ, ಈ ಪತ್ತೇಕಾರಕದ ವ್ಯಾಪ್ತಿ ಬಹಳ ಚಿಕ್ಕದು. ಏಕೆಂದರೆ, ನಮ್ಮ ಕಣ್ಣು ಕೇವಲ Visible Radiationಅನ್ನು ಮಾತ್ರ ಪತ್ತೆಹಚ್ಚಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಆದರೆ, Invisible Radiationಗಳನ್ನು ಪತ್ತೆಹಚ್ಚಲು ನಾವು ಇತರೆ ಪತ್ತೆಕಾರಕಗಳನ್ನು ಬಳಸಬೇಕಾಗಿರುತ್ತದೆ. ಒಂದು ಸೊಳ್ಳೆ ಮನುಷ್ಯನನ್ನು ಕಚ್ಚಲು ಬರುವುದಕ್ಕೆ ಸಾಧ್ಯವಾಗುವುದು, ಅದರ ಕಣ್ಣು ಮನುಷ್ಯನನ್ನು ಪೂರ್ಣವಾಗಿ ನೋಡುವುದರಿಂದಲ್ಲ. ಬದಲಾಗಿ ಸೊಳ್ಳೆಯ ಕಣ್ಣು ಇನ್ಫ್ರಾರೆಡ್ ಕಿರಣಗಳನ್ನು ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಮುಖಾಂತರ, ಮನುಷ್ಯನ ಅಂಗಾಗಳ ತಾಪಮಾನ ಸುತ್ತುಮುತ್ತ ಇರುವ ಇತರೆ ಬೇರೆ ವಸ್ತುಗಳ ತಾಪಮಾನಕ್ಕಿಂತಲೂ ಹೆಚ್ಚಿರುವುದನ್ನು ಗ್ರಹಿಸಿಬಂದು, ಕಚ್ಚಿ, ರಕ್ತ ಹೀರಿ ಹೋಗುತ್ತದೆ. ಇದೇ ರೀತಿ ಹಾವುಗಳು ಕೂಡ ಇನ್ಫ್ರಾರೆಡ್ ಕಿರಣಗಳನ್ನು ಸಂವೇದಿಸುವ ಸಾಮರ್ಥ್ಯವನ್ನು ಹೊಂದಿದೆ. ಇಷ್ಟೆಲ್ಲಾ ಪೀಠಿಕೆ ಏತಕ್ಕಾಗಿ ಎಂದರೆ, ನಮ್ಮ ಆಕಾಶ ವೀಕ್ಷಣೆ ಕೇವಲ visible radiationನಲ್ಲಿ ಮಾತ್ರ ಕೈಗೊಂಡರೆ, ನಾವು ವಿಶ್ವದ ಬಗಿಗಿನ ಹಲವು ಮಹತ್ವದ ವಿಷಯಗಳನ್ನು ತಿಳಿಯುವುದರಲ್ಲಿ ಹಿಂದೆ ಬೀಳುತ್ತೇವೆ.

Electromagnetic Spectrum ವ್ಯಾಪ್ತಿಯಲ್ಲಿ Visible Radiation (ನಾವು ನೀವು ಪ್ರಪಂಚವನ್ನು ನೋಡುವುದಕ್ಕೆ ಬಳಕೆಯಾಗುವ ಬೆಳಕಿನ ಕಿರಣಗಳು) ಬಹಳ ಚಿಕ್ಕದು. ಇನ್ನುಳಿದವೆಲ್ಲವೂ ನಮಗೆ Invisible radiationಗಳೇ. ಹಾಗಾಗಿ, ಬಾಹ್ಯಾಕಾಶದಲ್ಲಿನ ಕಾಯದ ಅಧ್ಯಯನಗಳನ್ನು ಈ Invisible Radiationಗಳ ಮೂಲಕವೂ ನಾವು ಮಾಡಬೇಕಾಗುತ್ತದೆ. ಇದಕ್ಕಾಗಿ ವಿಶೇಷವಾದ ಪತ್ತೇಕಾರಕಗಳನ್ನು ರೂಪಿಸಬೇಕಾಗಿರುತ್ತದೆ. ಅಲ್ಲದೆ, ಇವುಗಳಿಂದ ದೊರಕುವ ಅಧ್ಯಯನದ ಮಾಹಿತಿಯೂ ಅಷ್ಟೆ ವಿಸ್ಮಯಕಾರಿಯಾಗಿರುತ್ತದೆ.

ರಾತ್ರಿ ಆಕಾಶವನ್ನು ಬರಿಗಣ್ಣಿನಲ್ಲಿ ನೋಡಿದಾಗ, ನಕ್ಷತ್ರಗಳು, ನಕ್ಷತ್ರ ಪುಂಜಗಳು, ನಕ್ಷತ್ರ ಪುಂಜಗಳಲ್ಲಿ ಮಿನುಗುತ್ತಿರುವ ಚುಕ್ಕಿಗಳಾದ ಗ್ರಹಗಳು, ಕೆಲವು ನಕ್ಷತ್ರ ಸಮೂಹಗಳನ್ನು ನೋಡಬಹುದು. ಆದರೆ ಇವುಗಳ ಸವಿಸ್ತಾರ ವಿವರಗಳನ್ನು ನಾವು ಬರಿಗಣ್ಣಿನಿಂದ ಗ್ರಹಿಸುವುದು ಅತ್ಯಂತ ಕಷ್ಟ. ಆ ಕಾರಣದಿಂದ, ನಮ್ಮ ಕಣ್ಣಿನಂತೆಯೇ ಕೆಲಸ ಮಾಡುವ, ಆದರೆ ಅದಕ್ಕಿಂತಲೂ ತೀಕ್ಷ್ಣವಾಗಿ ಮತ್ತು ದೂರದ ವಸ್ತುವನ್ನು ಹತ್ತಿರದಲ್ಲಿ ಇರುವಂತೆ ತೋರಿಸುವ ಪತ್ತೇಕಾರಕ ದೂರದರ್ಶಕವನ್ನು ಕಂಡುಹಿಡಿದೆವು. ವಿ॒ಶ್ವದ ಎಷ್ಟೋ ಅಗೋಚರ ವಿಸ್ಮಯ ರಹಸ್ಯಗಳನ್ನೆಲ್ಲ ದೂರದರ್ಶಕ ಒಮ್ಮೆಲೆ ರಟ್ಟುಮಾಡಿಬಿಟ್ಟಿತು. ಇದರಿಂದ ಮನುಷ್ಯನಿಗೆ ದೊರೆತ ಮತ್ತು ದೊರೆಯುತ್ತಿರುವ ಮಾಹಿತಿ ಅಗಾಧವಾದದ್ದು. ಹೀಗಿದ್ದರೂ, ಈ ದೂರದರ್ಶಕ ಕಾರ್ಯನಿರ್ವಹಿಸುತ್ತಿದ್ದಿದ್ದು, Visible Radiationನಲ್ಲಿ. ಅಂದರೆ, ನಾವು ನೀವು ನೋಡುವ ಬೆಳಕಿನ ಕಿರಣಗಳಲ್ಲಿಯೇ. ಮನುಷ್ಯನ ಕಣ್ಣಿಗೆ ಅಂದರೆ Visible Radiationನಲ್ಲಿ ಕಾಣುವ ವಿಶ್ವವು invisible radiationನಲ್ಲಿ ವಿಭಿನ್ನವಾಗಿತ್ತು.

ಈ visible radiationಗಳೆಂದರೆ, ಎಕ್ಸ್ ರೇ, ಇನ್ಫ್ರಾರೆಡ್, ಅಲ್ಟ್ರಾವಾಯ್ಲೆಟ್, ಮೈಕ್ರೋವೇವ್ ಹಾಗೂ ರೇಡಿಯೋ ಕಿರಣಗಳು. ಈ Visible Radiation ಜೊತೆಗೆ, ಇನ್ನಿತರ radiationಗಳನ್ನು ಪತ್ತೆಹಚ್ಚುವ ದೂರದರ್ಶಕಗಳನ್ನು ತಯಾರಿಸಿ, ಆಕಾಶದ ಕಡೆ ತಿರುಗಿಸಿದಾಗ ನಮಗೆ ಅಚ್ಚರಿಯೇ ಕಾದಿತ್ತು! ಕಲ್ಪನೆಯಲ್ಲೂ ಇರದ, ಯೋಚಿಸಿಯೂ ಇರದ ಅದೆಷ್ಟೋ ಅನಂತ ಕಾಯಗಳು ವಿಶ್ವದಲ್ಲಿ ತನ್ನ ಇರುವಿಕೆಯ ಅಸ್ತಿತ್ವವನ್ನು invisible radiationನಿಂದ ಕೂಗಿ ಹೇಳುತ್ತಿದ್ದವು. ನಕ್ಷತ್ರ, ಗ್ಯಾಲಾಕ್ಸಿಗಳ ಮತ್ತು ವಿಶ್ವದ ಹುಟ್ಟನ್ನು ಅರ್ಥ ಮಾಡಿಕೊಳ್ಳಲು ಹೊಸ ಸಿದ್ಧಾಂತಗಳನ್ನೇ ಹುಟ್ಟುಹಾಕಿ, ವಿಶ್ವದ ಅನೇಕ ನಿಗೂಢ ವಿಚಾರಗಳನ್ನು ಈ invisible radiationಗಳ ಮೂಲಕ ಅರ್ಥಮಾಡಿಕೊಂಡೆವು.

ಸೂರ್ಯನನ್ನು visible radiationನಲ್ಲಿ ನೋಡಿದರೆ, ಸೂರ್ಯನ chromosphere ಮತ್ತು corona ಪದರದ ಬಗ್ಗೆ ಅಷ್ಟು ಮಾಹಿತಿ ಸಿಗುವುದಿಲ್ಲ, ಅದರ ಇರುವಿಕೆಯನ್ನು ಕೂಡ ವಿವರವಾಗಿ ಗ್ರಹಿಸುವುದೂ ಕಷ್ಟ. ಆದರೆ, ಇದೇ ಸೂರ್ಯನನ್ನು ರೇಡಿಯೋ ತರಂಗದಿಂದ ನೋಡಿದರೆ, ಈ ಪದರಗಳ ಸೂಕ್ಷ್ಮ ವಿವರಗಳನ್ನು ಅತ್ಯಂತ ಸುಲಭವಾಗಿ ಗುರುತಿಸಿ, ಅಧ್ಯಯನ ಮಾಡಬಹುದು. ಹೀಗೆ ಸೂರ್ಯನನ್ನು ವಿವಿಧ ರೀತಿಯ radiationಗಳ ಮೂಲಕ ಅಧ್ಯಯನ ಕೈಗೊಳ್ಳುವುದರಿಂದ, ಸೂರ್ಯನ ಬಗ್ಗೆ ಅನೇಕ ವಿವರಗಳನ್ನು ತಿಳಿದುಕೊಳ್ಳಬಹುದು. ಕಳೆದ ಐದಾರು ದಶಕಗಳಿಂದಲೂ visible ಮತ್ತು invisible radiationಗಳಲ್ಲಿ ಕೆಲಸ ಮಾಡುವ ಅನೇಕ ದೂರದರ್ಶಕಗಳನ್ನು ತಯಾರಿಸಲಾಗಿದ್ದು, ಬಾಹ್ಯಾಕಾಶಕ್ಕೂ ಹಾರಿಸಲಾಗಿದೆ. ಇವುಗಳು ರಾತ್ರಿ ಆಕಾಶವನ್ನು ಒಂದಿಂಚೂ ಬಿಡದೆ ಸ್ಕ್ಯಾನ್ ಮಾಡಿ ದತ್ತಾಂಶವನ್ನು ಕಲೆ ಹಾಕುತ್ತಿವೆ. ವಿಜ್ಞಾನಿಗಳು ಈ ದತ್ತಾಂಶಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಹೆಚ್ಚು ಅಧ್ಯಯನಗಳು ಕೈಗೊಂಡಂತೆ, ವಿಶ್ವದ ಬಗ್ಗೆ ಹೆಚ್ಚೆಚ್ಚು ವಿಸ್ಮಯಕಾರಿ ಅಂಶಗಳು ನಮ್ಮ ಮುಂದೆ ತೆರೆದುಕೊಳ್ಳುತ್ತಾ ಬಂದಿವೆ.

ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾನಿಲಯದ ಪಿ.ಎಚ್.ಡಿ. ಸಂಶೋಧನಾ ವಿದ್ಯಾರ್ಥಿಗಳು, ASKAP ಎನ್ನುವ ರೇಡಿಯೋ ದೂರದರ್ಶಕದಿಂದ ಕಲೆಹಾಕಿದ್ದ ದತ್ತಾಂಶಗಳಲ್ಲಿ ಅಡಕವಾಗಿದ್ದ ಸುಮಾರು 2 ಮಿಲಿಯನ್ ಆಕಾಶಕಾಯಗಳ ಬಗ್ಗೆ ಅಧ್ಯಯನ ಕೈಗೊಂಡರು. ಈ ದತ್ತಾಂಶಗಳೆಲ್ಲವನ್ನೂ 2020ರ ಆಸುಪಾಸಿನಲ್ಲಿ ರೆಕಾರ್ಡ್ ಮಾಡಲಾಗಿತ್ತು. ಈ 2 ಮಿಲಿಯನ್ ಆಕಾಶಕಾಯಗಳ ಅಧ್ಯಯನ ಕೈಗೊಂಡಾಗ, ಹಲವು ನಕ್ಷತ್ರಗಳು ತಮ್ಮ ಜೀವಿತಾವಧಿಯ ವಿವಿಧ ಹಂತದಲ್ಲಿ ಇದ್ದದ್ದನ್ನು ಗುರುತಿಸಲಾಯಿತು. ಕೆಲವು ನಕ್ಷತ್ರಗಳು ಸಾಯುವ ಸ್ಥಿತಿಯಲ್ಲಿದ್ದದ್ದನ್ನೂ ಗುರುತಿಸಿದರು. ಒಟ್ಟು 2 ಮಿಲಿಯನ್ ಕಾಯಗಳಲ್ಲಿ ಅವರ ದೃಷ್ಟಿ ನೆಟ್ಟಿದ್ದು, ನಾವು ಇರುವ ಹಾಲು ಹಾದಿ ಗ್ಯಾಲಾಕ್ಸಿಯ ಕೇಂದ್ರ ಭಾಗದಲ್ಲಿ ಇದ್ದ ಒಂದು ಕಾಯ ಮತ್ತು ಇದು ವಿಶಿಷ್ಟವಾಗಿ ಹೊರಹಾಕುತ್ತಿದ್ದ ರೇಡಿಯೋ ತರಂಗಗಳ ಬಗ್ಗೆ. ಇದು ಒಂಭತ್ತು ತಿಂಗಳಿನಲ್ಲಿ ಆರು ಬಾರಿ ಶಕ್ತಿಯುತವಾದ ರೇಡಿಯೋ ಸಿಗ್ನಲ್‌ಗಳನ್ನು ಹೊರಹಾಕಿ ಸುಮ್ಮನಾಗಿತ್ತು. ಇದುವರೆಗೂ ನಮಗೆ ಅರ್ಥವಾಗಿದ್ದ ಯಾವ ಕಾಯದ ಪ್ರಕಾರವು ಈ ಕಾಯವು ವರ್ತಿಸುತ್ತಿರಲಿಲ್ಲ.

ಈ ಕಾಯದ ಇರುವಿಕೆಯನ್ನು ಇತರೆ ಯಾವ ದೂರದರ್ಶಕ ಅಂದರೆ, ಎಕ್ಸ್ ರೇ, ಇನ್ಫ್ರಾರೆಡ್ ಮತ್ತು visible radiationನಲ್ಲಿಯೂ ಗುರುತಿಸಲು ಸಾಧ್ಯವಾಗಲಿಲ್ಲ. ಈ ಕಾಯಗಳಿಗೆ Galactic Center Radio Transients (GCRTs) ಎಂದು ಕರೆದರು. ಏಕೆಂದರೆ, ಇದು ಗ್ಯಾಲಾಕ್ಸಿಯ ಕೇಂದ್ರ ಭಾಗದಿಂದ ಹೊರಹೊಮ್ಮುತ್ತಿದ್ದ ಸಿಗ್ನಲ್ ಆಗಿತ್ತು. ಈ ಕಾಯದ ಹೆಸರು ಕೇವಲ ಅದರ ಇರುವಿಕೆಯ ಸ್ಥಾನವನ್ನು ಮಾತ್ರ ಸೂಚಿಸುತ್ತಿತ್ತು. ಆದರೆ, ಆ ಕಾಯದ ಬಗ್ಗೆ ಯಾವ ಮಾಹಿತಿಯು ಇನ್ನೂ ನಮ್ಮ ಬಳಿ ಇಲ್ಲ. ಇಂತಹ ರೇಡಿಯೋ ಸಿಗ್ನಲ್‌ಗಳು ಏಲಿಯನ್‌ಗಳಿಂದ ಬರುತ್ತಿರಬೇಕು ಎಂದೂ ಊಹಿಸಲಾಯಿತು. ಆದರೂ ನಮಗೆ ಬರುತ್ತಿರುವ ಈ ರೇಡಿಯೋ ಸಿಗ್ನಲ್‌ಗಳ ವ್ಯಾಪ್ತಿ ದೊಡ್ಡದಾಗಿದ್ದು, ಏಲಿಯನ್‌ಗಳಾಗಿದ್ದರೆ, ಅತ್ಯಂತ ಕಡಿಮೆ ವ್ಯಾಪ್ತಿಯ ರೇಡಿಯೋ ಸಿಗ್ನಲ್‌ಗಳನ್ನು ಬಳಸುತ್ತಿದ್ದರು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಈ Galactic Center Radio Transients (GCRTs)ಗಳು ನಕ್ಷತ್ರ ಜೀವತಾವಧಿಯ ಒಂದು ಹಂತದ ಕಾಯವೇ ಆಗಿರಬೇಕು ಎಂಬುದರ ಬಗ್ಗೆಯೂ ಅಧ್ಯಯನಗಳು ನಡೆಯುತ್ತಿದ್ದರೂ, ಇಂದಿಗೂ ಈ ಕಾಯಗಳ ಬಗ್ಗೆ ಮಾಹಿತಿ ಅಸ್ಪಷ್ಟವಾಗಿಯೇ ಇದೆ.

ಇದೇ ರೀತಿ ಈ ವರ್ಷದ ಜನವರಿ 26ರಂದು Natureನಲ್ಲಿ ಪ್ರಕಟಗೊಂಡ ಮತ್ತೊಂದು ಅಧ್ಯಯನ ಅಚ್ಚರಿ ಮೂಡಿಸಿತು. ಇಲ್ಲೂ ಕೂಡ ಒಂದು ಆಕಾಶ ಕಾಯವು 4000 ಜೋತಿರ್ವಷ ದೂರದಲ್ಲಿದ್ದು, 18 ನಿಮಿಷಕ್ಕೊಮ್ಮೆ ರೇಡಿಯೋ ತರಂಗಗಳನ್ನು ಹೊರಸೂಸಿ ಸುಮ್ಮನಾಗುತ್ತಿದೆ ಎಂದು ತಿಳಿಸಲಾಗಿತ್ತು. ಇಷ್ಟು ನಿಧಾನವಾಗಿ ರೇಡಿಯೋ ತರಂಗಗಳನ್ನು ಹೊರಸೂಸಿ ಸುಮ್ಮನಾಗುವ ಕಾಯವನ್ನು ಇದುವರೆಗೂ ನಾವು ಗುರುತಿಸಿಲ್ಲ. ಪಲ್ಸಾರ್ಸ್, ಮತ್ತು ರೊಟೇಟಿಂಗ್ ನ್ಯೂಟ್ರಾನ್ ನಕ್ಷತ್ರಗಳು ಇದೇ ರೀತಿ ರೇಡಿಯೋ ತರಂಗಗಳನ್ನು ಹೊರಸೂಸಿದರೂ, ಅವು ಸೆಕೆಂಡಿಗೆ ಹಲವು ಬಾರಿ ರೇಡಿಯೋ ತರಂಗಗಳನ್ನು ಹೊರಹಾಕುತ್ತವೆ.

ಆದರೆ, ಈಗ ಗುರುತಿಸಿರುವ ಕಾಯಗಳು, ನಾವು ಇಲ್ಲಿಯವರೆಗೂ ಅಧ್ಯಯನ ನಡೆಸಿ ತಿಳಿದುಕೊಂಡಿರುವ ಕಾಯಗಳಿಗಿಂತಲೂ ವಿಭಿನ್ನವಾಗಿವೆ. ಇದುವರೆಗೂ ನಾವು ವಿಶ್ವದಲ್ಲಿ ಗುರುತಿಸದೇ ಇರುವ ಕಾಯಗಳೂ ಇವುಗಳಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಒಂದರ್ಥದಲ್ಲಿ ಇವುಗಳು ನಮಗೆ Mystery Objectಗಳೇ! ಇಂತಹಾ ಅದೆಷ್ಟು ವಿಸ್ಮಯಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆಯೋ ಈ ನಮ್ಮ ವಿಶ್ವ!


ಇದನ್ನೂ ಓದಿ: 60ಕ್ಕೂ ಹೆಚ್ಚು ಸಾಮಾಜಿಕ ಮಾಧ್ಯಮ ಖಾತೆಗಳ ನಿರ್ಬಂಧ: ರಾಜ್ಯಸಭೆಗೆ ಸರ್ಕಾರದ ಮಾಹಿತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...