ಲೋಕಸಭಾ ಚುನಾವಣೆ ನಂತರವೂ ಬಿಜೆಪಿ ನಾಯಕರ ದ್ಷೇಷ ಭಾಷಣ ಮುಂದುವರಿದಿದ್ದು, “ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸದೆ ಬಾಂಗ್ಲಾದೇಶ ಮೂಲದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿವಾದಾತ್ಮಕ ಹೇಳಿಕೆ ಹೇಳಿದ್ದಾರೆ. “ಅಸ್ಸಾಂನಲ್ಲಿ ಕೋಮುವಾದದಲ್ಲಿ ತೊಡಗಿರುವ ಏಕೈಕ ಸಮುದಾಯ ಇದಾಗಿದೆ” ಎಂದು ಅವರು ಕೋಮು ಪ್ರಚೋದಕ ಹೇಳಿಕೆ ನೀಡಿದ್ದಾರೆ.
ಪಕ್ಷದ ರಾಜ್ಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿಜೇತ ಅಭ್ಯರ್ಥಿಗಳ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಮೈತ್ರಿಕೂಟವು ಸುಮಾರು ಶೇಕಡಾ 47 ರಷ್ಟು ಮತಗಳನ್ನು ಗಳಿಸಿದೆ. ಆದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಶೇಕಡಾ 39 ರಷ್ಟು ಮತಗಳನ್ನು ಗಳಿಸಿವೆ.
ಬಿಜೆಪಿ-ಎಜಿಪಿ-ಯುಪಿಪಿಎಲ್ ಸಮ್ಮಿಶ್ರವು ರಾಜ್ಯದ 14 ಲೋಕಸಭಾ ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆದ್ದುಕೊಂಡಿದೆ, ಉಳಿದ ಮೂರನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.
”ಕಾಂಗ್ರೆಸ್‌ನ ಶೇಕಡಾ 39 ಮತಗಳನ್ನು ವಿಶ್ಲೇಷಿಸಿದರೆ, ಅದು ರಾಜ್ಯಾದ್ಯಂತ ಹರಡಿಲ್ಲ; ಅದರಲ್ಲಿ ಶೇಕಡಾ 50 ರಷ್ಟು ಅಲ್ಪಸಂಖ್ಯಾತರ ಪ್ರಾಬಲ್ಯವಿರುವ 21 ವಿಧಾನಸಭಾ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾಗಿದೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಈ ಕ್ಷೇತ್ರಗಳಲ್ಲಿ ಬಿಜೆಪಿ ಶೇಕಡಾ 3 ರಷ್ಟು ಮತಗಳನ್ನು ಪಡೆದುಕೊಂಡಿದೆ” ಅವರು ಸಮರ್ಥಿಸಿಕೊಂಡರು.
“ಹಿಂದೂಗಳು ಕೋಮುವಾದಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಇದು ಸಾಬೀತುಪಡಿಸುತ್ತದೆ. ಅಸ್ಸಾಂನಲ್ಲಿ ಯಾರಾದರೂ ಕೋಮುವಾದವನ್ನು ನಡೆಸಿದರೆ ಅದು ಒಂದೇ ಸಮುದಾಯ, ಒಂದು ಧರ್ಮ, ಬೇರೆ ಯಾವುದೇ ಧರ್ಮದವರು ಅದನ್ನು ಮಾಡುವುದಿಲ್ಲ” ಎಂದು ಮುಖ್ಯಮಂತ್ರಿ ಯಾವುದೇ ಧರ್ಮವನ್ನು ಹೆಸರಿಸದೆ ದ್ವೇಷ ಭಾಷಣ ಮಾಡಿದ್ದಾರೆ.
ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ರಸ್ತೆಯಿಲ್ಲದಿರಬಹುದು, ವಿದ್ಯುತ್ ಇಲ್ಲದಿರಬಹುದು. ಆದರೆ, ಅವರು ಕಾಂಗ್ರೆಸ್‌ಗೆ ಹೆಚ್ಚಿನ ಮತ ನೀಡಿದ್ದಾರೆ ಎಂದು ಹೇಳಿದರು.
ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿ ಅಸ್ಸಾಮಿ ಜನರು ಮತ್ತು ಬುಡಕಟ್ಟು ಜನಾಂಗದವರಿಗಾಗಿ ಕೆಲಸ ಮಾಡುತ್ತಿದ್ದರೂ, ಈ ಸಮುದಾಯಗಳು ಕೇಸರಿ ಪಕ್ಷಕ್ಕೆ 100 ಪ್ರತಿಶತ ಮತ ನೀಡಿಲ್ಲ ಎಂದು ಅವರು ಹೇಳಿದರು.
“ಕರೀಂಗಂಜ್ ಹೊರತುಪಡಿಸಿ, ಬಾಂಗ್ಲಾದೇಶ ಮೂಲದ ಬಹುಸಂಖ್ಯಾತರನ್ನು ಹೊಂದಿರುವ ಕೇಂದ್ರಗಳನ್ನು ನಾವು ಪರಿಗಣಿಸಿದರೆ, ಶೇಕಡಾ 99 ರಷ್ಟು ಮತಗಳು ಕಾಂಗ್ರೆಸ್‌ಗೆ ಬಂದಿವೆ” ಎಂದು ಅವರು ಹೇಳಿದರು.
“ಅವರು (ಅಲ್ಪಸಂಖ್ಯಾತ ಜನರು) (ಪ್ರಧಾನಿ ನರೇಂದ್ರ) ಮೋದಿಯವರು ನೀಡಿದ ಮನೆಗಳಲ್ಲಿ ವಾಸಿಸುತ್ತಿರಬಹುದು, ಮೋದಿ ಅವರು ಒದಗಿಸಿದ ವಿದ್ಯುತ್ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆದರೆ ಅವರು ಮತ ಚಲಾಯಿಸಲು ಹೋದಾಗ ಅವರು ಕಾಂಗ್ರೆಸ್‌ಗೆ ಮತ ಹಾಕುತ್ತಾರೆ” ಎಂದು ಶರ್ಮಾ ಹೇಳಿದ್ದಾರೆ.
ಬಾಂಗ್ಲಾದೇಶ ಮೂಲದ ಸಮುದಾಯವು ಕಾಂಗ್ರೆಸ್‌ಗೆ ಮತ ಹಾಕುತ್ತದೆ. ಏಕೆಂದರೆ, ಅವರು “ಮುಂದಿನ 10 ವರ್ಷಗಳಲ್ಲಿ ರಾಜ್ಯವನ್ನು ನಿಯಂತ್ರಿಸಲು” ಬಯಸುತ್ತಾರೆ ಎಂದು ಅವರು ಸಮರ್ಥಿಸಿಕೊಂಡರು.
ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವಾಗಿನಿಂದ ಬಿಜೆಪಿ ಸರ್ಕಾರ ನಿಷ್ಕ್ರಿಯವಾಗಿದ್ದಾಗ ಸಮುದಾಯದ ಸದಸ್ಯರು ಬಾರ್ಪೇಟಾದ ಹಳ್ಳಿಯಾದ ಲಖಿಂಪುರದ ಪೊಲೀಸ್ ಠಾಣೆಯ ಮೇಲೆ ದಾಳಿ ಮಾಡಿದರು; ಕೊಕ್ರಜಾರ್‌ನಲ್ಲಿ ಭೂಮಿಯನ್ನು ಅತಿಕ್ರಮಿಸಲು ಪ್ರಯತ್ನಿಸಿದರು ಎಂದು ಶರ್ಮಾ ಆರೋಪಿಸಿದರು.
‘ಬಿಜೆಪಿ ಸರ್ಕಾರ ಇಲ್ಲದಿರುವಾಗ ಇಂತಹ ದಾಳಿಗಳು ಎಷ್ಟು ನಡೆಯುತ್ತವೆ ಎಂಬುದನ್ನು ಊಹಿಸಬಹುದು’ ಎಂದು ಅವರು ಹೇಳಿದರು.
ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 126 ವಿಧಾನಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ಇದು ರಾಜ್ಯದಲ್ಲಿ ಯಾವುದೇ ಆಡಳಿತಾರೂಢ ಮೈತ್ರಿಕೂಟಕ್ಕೆ ಇದುವರೆಗೆ ಅತ್ಯಧಿಕವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
“ಈ ಬಾರಿ, ನಾವು ಶೇಕಡಾ 47 ರಷ್ಟು ಮತಗಳನ್ನು ಪಡೆದಿದ್ದೇವೆ. 2026ರ ರಾಜ್ಯ ಚುನಾವಣೆಯಲ್ಲಿ ಶೇಕಡಾ 50 ರಷ್ಟು ಮತಗಳನ್ನು ಪಡೆಯುವುದು ನಮ್ಮ ಗುರಿಯಾಗಿದೆ” ಎಂದು ಬಿಜೆಪಿ ನಾಯಕ ಹೇಳಿದರು.
ಬಿಜೆಪಿಯು ರಾಷ್ಟ್ರ ನಿರ್ಮಾಣಕ್ಕಾಗಿ ರಾಜಕೀಯದಲ್ಲಿದೆ; ಆ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿ ಗೆದ್ದಿರಲಿ ಅಥವಾ ಗೆಲ್ಲದಿರಲಿ, ಎಲ್ಲ ಭಾಗಗಳ ಅಭಿವೃದ್ಧಿಗಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದರು.
ಇದನ್ನೂ ಓದಿ; ‘ದಯವಿಟ್ಟು ನ್ಯಾಯ ಕೊಡಿಸಿ, ನೀವೇ ನಮ್ಮ ಕೊನೆಯ ಭರವಸೆ..’; ಪ್ರಧಾನಿ ಮೋದಿಗೆ ಮನವಿ ಮಾಡಿದ ನೀಟ್ ಆಕಾಂಕ್ಷಿಗಳು


