Homeನ್ಯಾಯ ಪಥಮೋದಿಗಿಂತ ಮುಂಚೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಟ್ಟಿದವರ ಮೂಲೆಗುಂಪು: ಅಡ್ವಾಣಿ ಜೋಷಿಗೆ ಟಿಕೆಟ್ ಇಲ್ಲ

ಮೋದಿಗಿಂತ ಮುಂಚೆ ರಾಷ್ಟ್ರಮಟ್ಟದಲ್ಲಿ ಬಿಜೆಪಿ ಕಟ್ಟಿದವರ ಮೂಲೆಗುಂಪು: ಅಡ್ವಾಣಿ ಜೋಷಿಗೆ ಟಿಕೆಟ್ ಇಲ್ಲ

- Advertisement -
- Advertisement -

ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆ ನಡೆಸುತ್ತಿದ್ದ ಸಂದರ್ಭದಲ್ಲಿ ಭಾಷಣ ಮಾಡುತ್ತಿದ್ದಾಗ ಅವರಿಗೆ ಮೈಕ್ ಹಿಡಿಯುತ್ತಿದ್ದವರು ಯಾರು ಗೊತ್ತೇ? ಬೇರ್ಯಾರು ಅಲ್ಲ, ಈಗಿನ ಪ್ರಧಾನಿ ನರೇಂದ್ರ ಮೋದಿ. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿರವರು ಪ್ರಧಾನಿಯಾಗಿದ್ದಾಗ ಅಡ್ವಾಣಿ ನಂತರದ ಮೂರನೇ ಸ್ಥಾನದಲ್ಲಿದ್ದ ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕರೆಂದರೆ ಮುರಳಿ ಮನೋಹರ್ ಜೋಶಿ. ಮಾಜಿ ಕೇಂದ್ರ ಸಚಿವ ದಿವಂಗತ ಅನಂತ್ ಕುಮಾರ್‍ರವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಬಿಜೆಪಿಗಾಗಿ ಸಾಕಷ್ಟು ದುಡಿದವರು.

ಈ ಮೂವರನ್ನು ಈಗ ನೆನೆಸಿಕೊಳ್ಳುತ್ತಿರುವುದಕ್ಕೆ ಒಂದು ಮಹತ್ತರ ಕಾರಣವಿದೆ. ಅದೇನೆಂದರೆ ಈ ಮೂವರಿಗೂ ಬಿಜೆಪಿ ಈ ಚುನಾವಣೆಯಲ್ಲಿ ಬೇಕಂತಲೇ ಟಿಕೇಟ್ ನಿರಾಕರಿಸಿದೆ. 80 ದಾಟಿದ ಹಿರಿಯರು ಈ ಇಳಿವಯಸ್ಸಿನಲ್ಲಿ ಸಂಸತ್ ಚುನಾವಣೆಯಲ್ಲಿ ನಿಂತು ಗೆಲ್ಲಲೇಬೇಕೆಂಬ ಯಾವುದೆ ಅನಿವಾರ್ಯತೆಗಳಿಲ್ಲದಿದ್ದರೂ ಅವರಿಗೆ ಟಿಕೆಟ್ ನೀಡುವಾಗ ಬಿಜೆಪಿ ಮತ್ತು ಮೋದಿ-ಷಾ ಜೋಡಿ ನಡೆದುಕೊಂಡ ರೀತಿ, ಪ್ರಕ್ರಿಯೆ ನೋಡಿದರೆ ತಮಗಾಗದವರನ್ನು ಹೇಗೆ ನಿರ್ನಾಮ ಮಾಡುತ್ತಾರೆ ಅನ್ನುವುದಕ್ಕೆ ತಾಜಾ ಉದಾಹರಣೆಯಂತಿದೆ.

ಈ ಕುರಿತು ಲಾಲ್ ಕೃಷ್ಣ ಅಡ್ವಾಣಿ ಬಹಿರಂಗವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ‘ಲೋಕಸಭೆಗೆ ತಾನು ಹೋಗುವ ಅಗತ್ಯವಿರಲಿಲ್ಲ. ಆದರೆ, ನಿಮಗೆ ಟಿಕೆಟ್ ಇಲ್ಲ ಎಂಬ ಕನಿಷ್ಠ ಮಾತುಕತೆಯನ್ನೂ ಮಾಡದೇ, ಮೀಡಿಯಾದಿಂದ ತಿಳಿದುಕೊಳ್ಳಬೇಕಾಗಿ’ ಬಂದುದಕ್ಕೆ ನೊಂದುಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಮುರಳಿ ಮನೋಹರ್ ಜೋಶಿಯವರು ತಮ್ಮ ಕ್ಷೇತ್ರದ ಮತದಾರರಿಗೆ ಪತ್ರ ಬರೆದು ತನಗೆ ಇಲ್ಲಿ ಅಥವಾ ಎಲ್ಲಿಯೂ ಸ್ಪರ್ಧಿಸದಿರಲು ಪಕ್ಷ ಸೂಚಿಸಿದೆಯೆಂದು ಸೂಕ್ಷ್ಮವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೇ ವೇದಿಕೆಗಳಲ್ಲಿ ಅಡ್ವಾಣಿಯನ್ನು ವೇದಿಕೆಯ ಮೇಲೆ ಮೋದಿ ನಡೆಸಿಕೊಳ್ಳುತ್ತಿದ್ದ ದಾರುಣ ವಿಡಿಯೋಗಳು ವೈರಲ್ ಆಗಿದ್ದವು. ಅಡ್ವಾಣಿಯೇ ಮೋದಿಗೆ ಕೈ ಮುಗಿದರೂ ತಿರುಗಿಯೂ ನೋಡದೆ ಮೋದಿ ನಡೆದುಬಿಡುತ್ತಿದ್ದ. ಈಗ ಅವರು ಪ್ರತಿನಿಧಿಸುತ್ತಿದ್ದ ಗಾಂಧಿನಗರ ಕ್ಷೇತ್ರವನ್ನು ಮೋದಿ ಅವರಿಂದ ಕಿತ್ತು ಅಮಿತ್ ಷಾ ಗೆ ನೀಡಿದ್ದಾರೆ.

ಅಬ್ದುಲ್ ಕಲಾಂರವರೊಂದಿಗೆ ಕೆಲಸ ಮಾಡಿದ ಅನುಭವವಿದೆ ಎಂದು ಹೇಳಲಾಗುತ್ತಿರುವ ತೇಜಸ್ವಿನಿ ಅನಂತ್ ಕುಮಾರ್‍ರವರು ತಮ್ಮ ಪತಿಯ ನಿಧನದ ಬಳಿಕ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆಂದು ಹೇಳಿರಲಿಲ್ಲ. ಆದರೆ, ಹಲವು ಮುಖಂಡರು ಒತ್ತಾಯಿಸಿದ ನಂತರ ಟಿಕೆಟ್ ಆಕಾಂಕ್ಷಿಯಾಗಿದ್ದರು. ಬಿಜೆಪಿಯು ಸಹ ಟಿಕೆಟ್ ನೀಡುವ ಭರವಸೆ ನೀಡಿತ್ತಲ್ಲದೇ ಸಿದ್ಧತೆ ನಡೆಸುವಂತೆ ಸೂಚಿಸಿತ್ತು. ಕಳೆದ ಒಂದು ತಿಂಗಳಿಂದ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರ ತಿರುಗಿ ಭರ್ಜರಿ ಪ್ರಚಾರ ಮಾಡಿಯೇ ಬಿಟ್ಟಿದ್ದರು. ಆದರೆ ಬಿಜೆಪಿ ಬೆಂಗಳೂರು ದಕ್ಷಿಣದ ಟಕೇಟ್ ಅನ್ನು ಯಾರಿಗೆಂದು ಘೋಷಿಸಿರಲಿಲ್ಲ. ಮೋದಿ ನಿಲ್ಲುತ್ತಾರೆಂದು ಪುಕಾರು ಸಹ ಎಬ್ಬಿಸಲಾಗಿತ್ತು. ನಾಮಪತ್ರ ಸಲ್ಲಿಕೆಯ ಕೊನೆದಿನ ತೇಜಸ್ವಿನಿಗೆ ವಂಚಿಸಿ ಕೋಮುವಾದಿ ಭಾಷಣಕಾರ ತೇಜಸ್ವಿ ಸೂರ್ಯನೆಂಬ ಎಳಸನಿಗೆ ನೀಡಿದೆ.

ಮುಂಚೆಯೇ ತೇಜಸ್ವಿ ಸೂರ್ಯನಿಗೆ ಟಿಕೆಟ್ ಕೊಟ್ಟರೆ ಅಸಮಾಧಾನ ಭುಗಿಲೇಳುತ್ತದೆ, ಬಂಡಾಯವನ್ನು ತಡೆಯಲು ಸಾಧ್ಯವಿಲ್ಲ ಎಂಬುದನ್ನರಿತಿದ್ದ ಹೈಕಮ್ಯಾಂಡ್ ಕೊನೆ ಕ್ಷಣದಲ್ಲಿ ಕೈ ಕೊಟ್ಟಿದ್ದಾರೆ. ಆದರೂ ತೇಜಸ್ವಿನಿರವರ ಅಭಿಮಾನಿಗಳು ಬೀದಿಗಿಳಿದು ಪ್ರತಿಭಟನೆಯನ್ನೇ ಮಾಡಿದ್ದಾರೆ. ತೇಜಸ್ವಿ ಸೂರ್ಯ ತೇಜಸ್ವಿನಿರವರ ಮನೆಗೆ ಆರ್ಶಿವಾದ ಪಡೆಯಲು ಹೋದಾಗ ಮನೆ ಬಾಗಿಲಿನಲ್ಲೇ ಬಿಜೆಪಿ ಕಾರ್ಯಕರ್ತರು ಅಡ್ಡಗಟ್ಟಿ ನೀನ್ಯಾರು ನಮಗೆ ಗೊತ್ತೆ ಇಲ್ಲ ಎಂದು ಅವಾಜ್ ಹಾಕಿದ್ದಾರೆ. ಮಾತಿಗೆ ಪಕ್ಷದ ಹೈಕಮಾಂಡ್ ಮಾತಿಗೆ ಬದ್ಧ ಎಂದು ತೇಜಸ್ವಿನಿರವರು ಹೇಳುತ್ತಿದ್ದರೂ ಅವರೊಳಗೆ ಕುದಿಯುತ್ತಿರುವ ಆಕ್ರೋಶ ತಣ್ಣಗಾಗುವ ಸೂಚನೆಗಳು ಕಾಣುತ್ತಿಲ್ಲ.

ಜೆಡಿಎಸ್‍ನ ಕುಟುಂಬ ರಾಜಕಾರಣದ ಬಗ್ಗೆ ಪುಂಖಾನುಪುಂಖವಾಗಿ ಪುಂಗಿ ಊದುತ್ತಿದ್ದ ಬಿಜೆಪಿಯವರು ಒಂದೇ ಮನೆಯಲ್ಲಿ ವಾಸವಿರುವ ಬಸವನಗುಡಿ ಶಾಸಕ ರವಿ ಸುಬ್ರಮಣ್ಯನವರ ಅಣ್ಣನ ಮಗ ತೇಜಸ್ವಿ ಸೂರ್ಯನಿಗೆ ಟಿಕೆಟ್ ಕೊಟ್ಟಿದ್ದು ಮಾತ್ರ ಅಪ್ಪಟ ಪ್ರಜಾಪ್ರಭುತ್ವವಂತೆ. ಈ ತೇಜಸ್ವಿ ಸೂರ್ಯನೋ ಮೈಕ್ ಮುಂದೆ ಬೊಬ್ಬಿರಿಯುವ ಭಾಷಣಕಾರ ಅಷ್ಟೆ. ಸಂಘಕ್ಕೆ ನಿಷ್ಟನಾಗಿದ್ದುದು, ತಮ್ಮ ಚಿಕ್ಕಪ್ಪ ಬಿಜೆಪಿಯಲ್ಲಿದ್ದುದು ಮಾತ್ರ ಈತನ ಅರ್ಹತೆ. ಇವನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಬಿಜೆಪಿಯ ಬಾಡಿಗೆ ಭಾಷಣಕಾರ ಚಕ್ರವರ್ತಿ ಸೂಲಿಬೆಲೆಗೆ ಹೊಟ್ಟೆಯಲ್ಲಿ ಮೆಣಸಿನಕಾಯಿ ಅರೆದ ಹಾಗೆ ಆಗುತ್ತಿದೆ ಎಂದು ಸೋಷಿಯಲ್ ಮಿಡೀಯಾದಲ್ಲಿ ಟ್ರೋಲ್‍ಗಳು ಹರಿದಾಡುತ್ತಿವೆ.

ಮೇಲೆ ತಿಳಿಸಿದ ಮೂವರಿಗೆ ಟಿಕೇಟ್ ಸಿಗದಿರಲು ಸ್ಪಷ್ಟ ಕಾರಣಗಳಿವೆ. ಈ ಮೂವರು ಮೋದಿ ಕ್ಯಾಂಪ್ ಅಲ್ಲ. ಅಡ್ವಾಣಿ, ಜೋಶಿ, ಅನಂತ್ ಕುಮಾರ್ ಮೋದಿಗಿಂತ ಮುಂಚೆ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗಿದ್ದವರು. 2012ರ ನಂತರ ದಿಢೀರನೇ ಇಡೀ ಪಕ್ಷದ ಮೇಲೆ ಹಿಡಿತ ಸಾಧಿಸಿದ ಮೋದಿಗೆ ಆ ಮುಂಚಿನವರ್ಯಾರೂ ಬೇಕಿರಲಿಲ್ಲ. ಹಾಗಾಗಿಯೇ ಜಸ್ವಂತ್‍ಸಿಂಗ್, ಯಶ್ವಂತ್ ಸಿನ್ಹಾ, ಉಮಾಭಾರತಿ ಮತ್ತಿತರೆಲ್ಲರೂ ಮೂಲೆಗುಂಪಾದರು. ಸುಷ್ಮಾ ಸ್ಮರಾಜ್‍ರಿಗೆ ಸಹಾ ರಾಜಕೀಯವೇ ಸಾಕಪ್ಪ ಎನ್ನುವಂತಾಗಿ ನಿವೃತ್ತಿಯ ಮಾತುಗಳನ್ನಾಡುತ್ತಿದ್ದಾರೆ.

80 ದಾಟಿದ ಹಿರಿಯರು ಲೋಕಸಭೆಯಲ್ಲಿ ಇರುವ ಅಗತ್ಯವಿಲ್ಲ. (ಈ ಮಾತು ದೇವೇಗೌಡರಿಗೂ ಅನ್ವಯಿಸಬೇಕು). ಆದರೆ, ಹಿರಿಯರನ್ನು ನಡೆಸಿಕೊಳ್ಳುವುದಕ್ಕೆ ಇರಬೇಕಾದ ರೀತಿ-ನೀತಿಗಳೂ ಬಿಜೆಪಿ ಪಕ್ಷದಲ್ಲಿದ್ದಂತಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...