Homeಮುಖಪುಟಇದು ನಮ್ಮೆಲ್ಲರ ಭಾರತವಲ್ಲ, ಬದಲಿಗೆ ಅಂಬಾನಿಯ ಭಾರತವಷ್ಟೆ

ಇದು ನಮ್ಮೆಲ್ಲರ ಭಾರತವಲ್ಲ, ಬದಲಿಗೆ ಅಂಬಾನಿಯ ಭಾರತವಷ್ಟೆ

- Advertisement -
- Advertisement -

| ಮುತ್ತುರಾಜು |
ಆತನ ಹೆಸರು ಕುನಾಲ್ ಕಮ್ರ. ಭಾರತದ ಹೆಸರಾಂತ ಸ್ಟ್ಯಾಂಡಪ್ ಕಾಮಿಡಿಯನ್. ಜನರ ಪರ ಮಿಡಿಯುವ ಆತನ ಮನಸ್ಸು ಸಹಜವಾಗಿಯೇ ಮೋದಿ ಆಡಳಿತದ ವಿರುದ್ಧ. ಈತ ತನ್ನ ಒಂದು ಶೋನಲ್ಲಿ ‘ಅಲ್ಲ ನಾವು ನೇರವಾಗಿ ಅಂಬಾನಿಗೆ ಯಾಕ್ ಓಟ್ ಹಾಕೋಕೆ ಆಗೋಲ್ಲ. ಮಧ್ಯದಲ್ಲಿ ಈ ಮೋದಿ ಯಾಕೆ? ನೇರವಾಗಿ ಅಂಬಾನಿಯೇ ಪ್ರಧಾನಮಂತ್ರಿ ಆಗಬಹುದಲ್ಲ?’ ಎಂದು ಪ್ರಶ್ನೆ ಮಾಡುತ್ತಾನೆ. ಇದು ಕಾಮಿಡಿ ಶೋ ಆದರೂ ಆತ ಹೇಳಿದ ಆ ಮಾತು ಮಾತ್ರ ಅಕ್ಷರಶಃ ಸತ್ಯ. ಇಂದು ಈ ನಮ್ಮ ದೇಶವನ್ನಾಳುತ್ತಿರುವುದು ಹೆಸರಿಗೆ ಮಾತ್ರ ಮೋದಿ, ಮನಮೋಹನ್ ಸಿಂಗ್ ಆದರೂ ನಿಜವಾಗಿಯೂ ಆಳುತ್ತಿರುವುದು ಮತ್ತು ಬೃಹತ್ ಮಟ್ಟದಲ್ಲಿ ಕೊಳ್ಳೆ ಹೊಡೆಯುತ್ತಿರುವುದು ಅಂಬಾನಿ, ಅದಾನಿ, ಟಾಟಾ ಥರದ ಬೆರಳೆಣಿಕೆಯ ಕ್ರೋನಿ ಬಂಡವಾಳಿಗರು ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಬನ್ನಿ ಇದರ ಸತ್ಯಾಸತ್ಯತೆ ಬಗ್ಗೆ ವಿಚಾರ ಮಾಡೋಣ.

ಕುನಾಲ್ ಕಮ್ರ

ಬಡವನಾಗಿ ಹುಟ್ಟುವುದು ನಿಮ್ಮ ತಪ್ಪಲ್ಲ, ಆದರೆ ಬಡವನಾಗಿ ಸಾಯುವುದು ನಿಮ್ಮ ತಪ್ಪು ಎಂಬ ಹೇಳಿಕೆಗಳ ಮೂಲಕ ಯಾವುದೇ ಮಾರ್ಗವಾದರೂ ಸರಿ ಹಣ ಸಂಪಾದಿಸಿ ಎಂಬ ಕಡುಬಡತನದಿಂದ ಸಿರಿವಂತರಾದವರ ಕಥೆಗಳಲ್ಲಿ ಅಂಬಾನಿಯ ಕಥೆಯೂ ಒಂದಿದೆ. ಈ ದೇಶದಲ್ಲಿ ಭ್ರಷ್ಟಾಚಾರ ಇಲ್ಲದಿದ್ದರೆ ಏನಾಗುತ್ತಿತ್ತು? ಎಂಬ ಪ್ರಶ್ನೆಯನ್ನು ಪತ್ರಕರ್ತರೊಬ್ಬರು 1990ರ ದಶಕದಲ್ಲಿ ಧೀರೂಬಾಯಿ ಅಂಬಾನಿ ಎಂಬ ದೊಡ್ಡ ಉದ್ಯಮಿಗೆ ಕೇಳುತ್ತಾರೆ. ಆಗ ಆತ ‘ಭ್ರಷ್ಟಾಚಾರ ಇಲ್ಲದಿದ್ದರೆ ಈ ಧೀರೂಬಾಯಿ ಅಂಬಾನಿ ಇನ್ನೂ ಕೂಡ ಪೆಟ್ರೋಲ್ ಬಂಕ್‍ನಲ್ಲಿ ಪೆಟ್ರೋಲ್ ಹಾಕುವ ಕೆಲಸ ಮಾಡಿಕೊಂಡು ಇರಬೇಕಿತ್ತು ಅಷ್ಟೇ’ ಎನ್ನುತ್ತಾನೆ. ಅಂದರೆ ಅಷ್ಟರ ಮಟ್ಟಿಗೆ ಆತ ನೇರವಾಗಿ ಭ್ರಷ್ಟಾಚಾರವನ್ನು ಸಮರ್ಥಿಸಿಕೊಂಡು ಅದರಿಂದಲೇ ನಾನಿಂದು ದೊಡ್ಡ ಉದ್ಯಮಿಯಾಗಿದ್ದೇನೆಂದು ಹೇಳಿದರೂ ಕೂಡ ಬಹುತೇಕ ಮಾಧ್ಯಮಗಳು ಆತನಿಗೆ ಬಹಪರಾಕ್ ಹೇಳಿ, ಆತನನ್ನು ನಮ್ಮೆಲ್ಲರ ಉದ್ದಾರಕನೆಂಬಂತೆ ಬಿಂಬಿಸಿ ಹೊಗಳಿ ಅಟ್ಟಕೇರಿಸುತ್ತಿವೆ. ಆ ಕಡು ಭ್ರಷ್ಟಾಚಾರಿಯ ಮಕ್ಕಳೇ ಇಂದು ಹೆಚ್ಚು ಸುದ್ದಿಯಲ್ಲಿರುವ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ.

ಸಾವಿರಾರು ಜನರ ಷೇರುಗಳ ಆಧಾರದಲ್ಲಿ ಧೀರೂಬಾಯಿ ಅಂಬಾನಿ 1977ರಲ್ಲಿ ಕಟ್ಟಿದ ವಾಣಿಜ್ಯ ಕಂಪನಿಯ ಹೆಸರೇ ರಿಲಯನ್ಸ್ ಇಂಡಸ್ಟ್ರೀಸ್. ಷೇರುಗಳು, ಮೊಬೈಲ್, ಸಿಮ್, ಟಿವಿಯಿಂದ ಆರಂಭವಾಗಿ ಕೊತ್ತಂಬರಿ ಸೊಪ್ಪು, ಮೀನು ಮಾಂಸದವರೆಗೂ ಸಾವಿರಾರು ವಸ್ತುಗಳನ್ನು ಮಾರಟ ಮಾಡುವಷ್ಟರ ಮಟ್ಟಿಗೆ ಈ ಕಂಪನಿ ಬೆಳೆದು ನಿಂತಿದೆ. ಅಪರಿಮಿತ ಭ್ರಷ್ಟಾಚಾರ, ಆಳುವವರೊಂದಿಗಿನ ಅಪವಿತ್ರ ಮೈತ್ರಿ, ಸ್ವಜನ ಪಕ್ಷಪಾತತನದಿಂದ ಹೆಚ್ಚು ಲಾಭ ಗಳಿಸಿ ಬೆಳೆದ ಕಂಪನಿ 2002ರಲ್ಲಿ ಧೀರೂಭಾಯಿ ಅಂಬಾನಿಯ ಮರಣದ ನಂತರ ಅವರ ಮಕ್ಕಳಿಬ್ಬರ ನಡುವೆ ಪಾಲಾಯಿತು. ರಿಲಯನ್ಸ್ ಇಂಡಸ್ಟ್ರಿಸ್, ಪೆಟ್ರೋಲಿಯಂ ಮುಖೇಶ್ ಪಾಲಿಗೆ ಬಂದರೆ, ರಿಲಯನ್ಸ್ ಕಮ್ಯುನಿಕೇಶನ್ಸ್, ಟೆಲಿಕಾಂ ಅನಿಲ್ ಪಾಲಾಯಿತು. ಇನ್ನು ನೀನಾ ಕೊಥಾರಿ ಮತ್ತು ದೀಪ್ತಿ ಸಾಲ್ಗೋಂಕರ್ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರೂ ಸಹ ಯಥಾ ಭಾರತೀಯರಂತೆ ಅವರಿಗೇನೂ ಆಸ್ತಿಯಲ್ಲಿ ಪಾಲು ದಕ್ಕಲಿಲ್ಲ ಅಷ್ಟೆ.

ಧೀರೂಭಾಯಿ ಅಂಬಾನಿ

ಧೀರೂಭಾಯಿ ಅಂಬಾನಿ ಸಾಮಾನ್ಯ ಮನುಷ್ಯನಾಗಿದ್ದವನು ತಾನು ಸಾಯುವ 2002ರ ವೇಳೆಗೆ 6.1 ಬಿಲಿಯನ್ ಡಾಲರ್ (ಆಗಲೇ ಸುಮಾರು 60ಸಾವಿರ ಕೋಟಿ ರುಪಾಯಿಗಳು) ಆಸ್ತಿಯ ಒಡೆಯನಾಗಿದ್ದನು. ಇದು ಹೇಗೆ ಸಾಧ್ಯ ಎಂದು ಅನುಮಾನ ಬಂದರೆ ಗೂಗಲ್‍ನಲ್ಲಿ ಧೀರೂಭಾಯಿ ಅಂಬಾನಿ ಬಗೆಗಿನ ಟೀಕೆಗಳು ಎಂದು ಟೈಪ್ ಮಾಡಿ ನೊಡಿ ಸಾಕು. ಭ್ರಷ್ಟ ವ್ಯಾವಹಾರಿಕ ನಡವಳಿಕೆಗಳು, ತನ್ನ ಅಗತ್ಯಗಳಿಗಾಗಿ ಸರ್ಕಾರಿ ನೀತಿಗಳ ತಿರುಚುವಿಕೆ, ದಬ್ಬಾಳಿಕೆ ವರ್ತನೆ, ಚುನಾವಣೆಗಳಲ್ಲಿ ರಾಜಕೀಯ ಪ್ರಭಾವ ಬೀರುವುದು, ತನ್ನ ಪರವಾಗಿ ಮಾಧ್ಯಮಗಳಿಂದ ರಕ್ಷಣೆ ಮುಂತಾದ ಕ್ರಮಗಳಿಂದಲೇ ಮತ್ತು ತಾನೇ ಒಪ್ಪಿಕೊಂಡಂತೆ ಪರಮ ಭ್ರಷ್ಟಾಚಾರದ ಕಾರಣಕ್ಕಾಗಿ ಅವರು ಅಷ್ಟು ದೊಡ್ಡ ಮಟ್ಟದ ಆಸ್ತಿ ಮಾಡಲು ಸಾಧ್ಯವಾಯಿತು.
ಒಬ್ಬರನ್ನು ಮುಗಿಸಿ ಮತ್ತೊಬ್ಬರು ಏಕಾಧಿಪತ್ಯ ಸಾಧಿಸುವುದೇ ಬಂಡವಾಳಶಾಹಿ ವ್ಯವಸ್ಥೆ ಇರುವ್ಯದರಿಂದಲೇ ಆಗ ಧೀರೂಭಾಯಿ ತನ್ನ ಪ್ರತಿಸ್ಪರ್ಧಿ ನುಸ್ಲಿ ವಾಡಿಯಾರೊಂದಿಗೆ ಹಣಾಹಣಿ ನಡೆಸಿದ್ದರು. ಆನಂತರ ಇಂಡಿಯನ್ ಎಕ್ಸ್‍ಪ್ರೆಸ್‍ನ ಪ್ರಕಾಶಕ ರಾಮನಾಥ್ ಗೋಯೆಂಕಾ ನಡುವೆಯೂ ಗುದ್ದಾಟ ನಡೆದಿತ್ತು. ಇದರ ಕುರಿತ ಹೇರಳ ದಾಖಲೆಗಳು ಇತಿಹಾಸದಲ್ಲಿ ಸಿಕ್ಕಿದರೂ, ಈಗ ಅವರ ಮಕ್ಕಳು ಅದರ ಹತ್ತು ಪಟ್ಟು ಅಂದರೆ ಸುಮಾರ 6 ಲಕ್ಷಕೋಟಿ ರೂಗಳಷ್ಟು ಆಸ್ತಿಯ ಒಡೆಯರಾಗಿದ್ದಾರೆ. ಹಾಗಾಗಿ ಗತಿಸಿಹೋದವನ ಹಗರಣಗಳಿಗಿಂತ ಪ್ರಸ್ತುತ ಲೂಟಿಕೋರರ ಬಗೆಗೆ ಹೆಚ್ಚು ಚರ್ಚಿಸುವುದು ಒಳಿತು.
ಭಾರತದ ಅತಿದೊಡ್ಡ ಲೂಟಿಕೋರ ಅಂಬಾನಿ ಮಕ್ಕಳು
ತನ್ನ ತಂದೆಯ ಹಾದಿಯಲ್ಲಿ ಮತ್ತಷ್ಟು ಮುನ್ನಡೆದ ಮಕ್ಕಳು ಸಾಮ್ರಾಜ್ಯ ವಿಸ್ತರಣೆಗೆ ಹಲವು ಬಗೆಯ ಭ್ರಷ್ಟ ದಾರಿಗಳನ್ನು ಹಿಡಿದರು. ನೋಡುನೋಡುತ್ತಲೇ ಮುಖೇಶ್ ಅಂಬಾನಿ ದೇಶದ ನಂ.1 ಶ್ರೀಮಂತನಾಗಿ ಬೆಳೆದ. ಮೊದಮೊದಲು ಮೊದಲ 20 ಶ್ರೀಮಂತರ ಪಟ್ಟಿಯಲ್ಲಿರುತ್ತಿದ್ದ ಅಣ್ಣನಿಂದ ಪೂರ್ಣವಾಗಿ ದೂರ ಸರಿದ ಅನಿಲ್ ಅಂಬಾನಿ, ನಿಧಾನಕ್ಕೆ ಕೆಳಗಿಳಿದಿದ್ದಾನೆ. ಆ ರೀತಿ ದೂರ ಸರಿಯಲು ಕಾರಣವಾದ ಒಂದು ಮುಖ್ಯವಾದ ಸಂಗತಿಯನ್ನು ನೋಡೋಣ.
ಭಾರತದ ಕೃಷ್ಣ ಗೋದಾವರಿ ನದಿ ಪಾತ್ರದಲ್ಲಿರುವ ಹೇರಳವಾದ ನೈಸರ್ಗಿಕ ಮತ್ತು ತೈಲೋತ್ಪನ್ನ ಸಂಪನ್ಮೂಲಗಳ ಮೇಲೆ ಈ ಅಂಬಾನಿ ಸಹೋದರರ ಕಣ್ಣು ಬಿದ್ದಿತು. ನೆಹರೂರವರು ಪ್ರಧಾನಿಯಾಗಿದ್ದಾದ ಸ್ಥಾಪಿಸಿದ್ದ ಸರ್ಕಾರಿ ಸ್ವಾಮ್ಯದ ಒಎನ್‍ಜಿಸಿ ಅಲ್ಲಿ ತೈಲ ಮತ್ತು ಅನಿಲ ಸಂಪನ್ಮೂಲಗಳನ್ನು ಹೊರತೆಗೆದು ಸಂಸ್ಕರಣೆ ಮತ್ತು ಮಾರಾಟದ ಕಾರ್ಯನಿರ್ವಹಿಸುವ ಮೂಲಕ ಅಪಾರ ಲಾಭದ ಉದ್ದಿಮೆಯಾಗಿತ್ತು. ಅಲ್ಲಿ 2006-07 ರಿಂದ ನೆಲಬಗೆದು ಲೂಟಿ ಹೊಡೆಯಲು ಆರಂಭಿಸಿತು ಮುಖೇಶ್ ಅಂಬಾನಿ ನೇತೃತ್ವದ ರಿಲೆಯನ್ಸ್. ಅಲ್ಲಿನ ತೈಲಸಂಸ್ಕರಣಗೆ ನನಗೆ ಅವಕಾಶಕೊಡಬೇಕೆಂದು ತಮ್ಮ ಅನಿಲ್ ಅಂಬಾನಿ ತಗಾದೆ ತೆಗೆದನು. ಅಣ್ಣ ತಮ್ಮಂದಿರಿಬ್ಬರ ನಡುವೆ ಜಗಳ ಅಲ್ಲಿಂದ ಆರಂಭವಾದ ಜಗಳ ಯಾವ ಮಟ್ಟ ಹೋಯಿತೆಂದರೆ ಅದನ್ನು ಬಗೆಹರಿಸಲು ಲಾಲ್ ಕೃಷ್ಣ ಅಡ್ವಾಣಿ ಥರದವರು ಮಧ್ಯಸ್ಥಿಕೆ ವಹಿಸಬೇಕಾಗಿ ಬಂದಿತ್ತು. ಅಂದರೆ ಈ ದೇಶದ ಸಮಸ್ತ ಜನರಿಗೂ ಹಕ್ಕಿರುವ ಕೃಷ್ಣ ಗೋದಾವರಿ ನದಿಪಾತ್ರದಲ್ಲಿ ತೈಲ ಲೂಟಿ ಹೊಡೆಯಲು ‘ಅವರಪ್ಪನ ಮನೆ ಆಸ್ತಿ’ ಎಂಬಂತೆ ಅಂಬಾನಿ ಸಹೋದರರಿಬ್ಬರು ಮುಗಿಬಿದ್ದರು.
ಕೊನೆಗೆ ಅದನ್ನು ತನ್ನ ವಶಕ್ಕೆ ಪಡೆಯಲು ಯಶಸ್ವಿಯಾದ ಮುಖೇಶ್ ಅಂಬಾನಿ ಈ ದೇಶದ ಕಾನೂನಗಳನ್ನೆಲ್ಲಾ ಗಾಳಿಗೆ ತೂರಿ ಮನಸ್ಸಿಗೆ ಬಂದ ಹಾಗೆ ತೈಲ ಲೂಟಿ ಹೊಡೆಯಲು ಮುಂದಾದ. ಪೆಟ್ರೋಲಿಯಂ ಖಾತೆಯ ಜಂಟಿ ಕಾರ್ಯದರ್ಶಿಯಾಗಿದ್ದ ನಜೀಬ್ ಜಂಗ್‍ರವರು ಸರ್ಕಾರದ ಪರವಾಗಿ ಅಂಬಾನಿಯ ರಿಲೆಯನ್ಸ್‍ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದರು. ಅದಾದ ಕೆಲವೇ ದಿನಗಳಲ್ಲಿ ಅವರು ತಮ್ಮ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಿ, ಅದೇ ರಿಲೆಯನ್ಸ್ ಸೇರಿದರು ಎಂದರೆ ಅಂಬಾನಿಯ ಕುಟಿಲತೆ ಎಷ್ಟಿರಬೇಡ ನೀವೇ ಹೇಳಿ? ಲಕ್ಷಾಂತರ ಕೋಟಿ ಬೆಲೆ ಬಾಳುವ ಅಲ್ಲಿನ ಕಚ್ಛಾ ತೈಲ ಸಂಪತ್ತನ್ನು ಸರ್ಕಾರಿ ಸ್ವಾಮ್ಯದ ಒಎನ್‍ಜಿಸಿಗೆ ಕೊಡುವುದು ಬಿಟ್ಟು ಆಗಿನ ಯುಪಿಎ ಸರ್ಕಾರ ಮುಖೇಶ್ ಅಂಬಾನಿಗೆ ಬಿಡಿಗಾಸಿಗೆ ಹರಾಜು ಹಾಕಿತ್ತು.
ಈ ಕಳ್ಳ ತನ್ನ ಪಾಲಿನ ಜಾಗದಲ್ಲಿ ತೈಲ ಹೊರತೆಗೆಯುವುದಲ್ಲದೇ ಒಎನ್‍ಜಿಸಿಯ ಕೊಳವೆಗಳಿಗೂ ಕನ್ನ ಹಾಕಿ ಲಕ್ಷಾಂತರ ಕೋಟಿ ಬೆಲೆ ಬಾಳುವ ತೈಲವನ್ನು ಕದ್ದುಬಿಟ್ಟಿದ್ದನ್ನು. ಅದಕ್ಕೆ ವಿರೊಧ ವ್ಯಕ್ತಪಡಿಸಿದ ಕಾರಣಕ್ಕಾಗಿ ಆಗಿನ ಸರ್ಕಾರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ಸಚಿವರಾಗಿದ್ದ ಮಣಿಶಂಕರ್ ಅಯ್ಯರ್ ರನ್ನು ಬದಲಿಸಿ ಮುರಳಿ ದೇವ್ರಗೆ ಕೊಡಲಾಯಿತು. ಅದೂ ಸಾಲದೆಂಬಂತೆ ವೀರಪ್ಪ ಮೋಯ್ಲಿಯನ್ನು ತರಲಾಯಿತು. ಅರಣ್ಯ ಮತ್ತು ಪರಿಸರ ಸಚಿವರಾಗಿದ್ದ ಜೈರಾಂ ರಮೇಶ್ ಮತ್ತು ಜೈಪಾಲ್ ರೆಡ್ಡಿಯವರು  ಅಂಬಾನಿ ಲೂಟಿಯನ್ನು ಸುತಾರಂ ಒಪ್ಪಲಿಲ್ಲ ಮಾತ್ರವಲ್ಲ ಅಂಬಾನಿಯ ಅವ್ಯವಹಾರಗಳಿಗೆ ಕಡಿವಾಣ ಹಾಕಲು ಬಯಸಿದರು. ಆದರೆ ಈ ಅಂಬಾನಿ ಎಷ್ಟು ಪ್ರಭಾವಿಯಾಗಿದ್ದ ಎಂದರೆ ಅವರೆಲ್ಲರನ್ನು ಕೆಳಗಿಳಿಸಿ, ಇಂಧನ ಸಚಿವ ವೀರಪ್ಪ ಮೋಯ್ಲಿಯನ್ನೆ ಅರಣ್ಯ ಖಾತೆಗೂ ಸಚಿವರನ್ನಾಗಿಸಿ  ತನ್ನೆಲ್ಲಾ ಅವ್ಯವಹಾರಗಳನ್ನು ಕಾನೂನುಬದ್ಧಗೊಳಿಸಿಕೊಂಡ.
ಇಷ್ಟೆಲ್ಲಾ ಅನ್ಯಾಯಗಳನ್ನು ವಿರೋಧಿಸಿ ದೆಹಲಿಯಲ್ಲಿ ಆಮ್ ಆದ್ಮ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ ಪರಿಣಾಮ ಮುಖೇಶ್ ಅಂಬಾನಿ ಮತ್ತು ವೀರಪ್ಪ ಮೋಯ್ಲಿ ಮೇಲೆ ಎಫ್‍ಐಆರ್ ದಾಖಲಾಯಿತು. ಅರವಿಂದ್ ಕೇಜ್ರಿವಾಲ್ ನೇರವಾಗಿ ಅಂಬಾನಿಯನ್ನು ಎದರುಗೊಂಡ ಕಾರಣ ಬಹಳಷ್ಟು ಜನ ಕೇಜ್ರಿವಾಲ್ ಬೆಂಬಲಕ್ಕೆ ನಿಂತರು. ಆದರೆ ಚೌಕಿದಾರೆನೆಂದು ಕರೆದುಕೊಳ್ಳುವ ಮೋದಿ ಕೃಷ್ಣ ಗೋದಾವರಿ ಬೇಸಿನ್‍ನ ವಿಚಾರಣೆಗಳಿಗೂ ದೆಹಲಿಗೂ ಸಂಬಂಧವಿಲ್ಲವೆಂದು ಸಂಸತ್ತಿನಲ್ಲಿ ತಿದ್ದುಪಡಿ ತಂದರು. ಇದು ಮುಂದಕ್ಕೂ ಅನ್ವಯಿಸುತ್ತದೆ ಮತ್ತು ಹಿಂದಿನ ವರ್ಷಗಳಿಗೂ ಅನ್ವಯಿಸುತ್ತದೆ ಎಂದುಬಿಟ್ಟರು. ಅಂಬಾನಿ ಸೇಫ್ ಆದ, ನಾವು ಪೆಟ್ರೋಲ್ ಡೀಸೆಲ್ ಗ್ಯಾಸ್‍ಗಾಗಿ ಅತಿ ಹೆಚ್ಚಿನ ತೆರಿಗೆ ಕಟ್ಟುವ ದುಸ್ಥಿತಿ ಬಂತು.
2014ರ ಲೋಕಸಭಾ ಚುನಾವಣೆಗೂ ಮುನ್ನ ಎಲೆಕ್ಷನ್ ಪ್ರಚಾರಕ್ಕಾಗಿ 35ಸಾವಿರ ಕೋಟಿ ರೂಗಳನ್ನು ಮುಖೇಶ್ ಅಂಬಾನಿ ಮೋದಿ ಜೇಬಿಗಿಟ್ಟ ಕಾರಣಕ್ಕಾಗಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲಂತೂ ಅಂಬಾನಿ ಅದೃಷ್ಟ ಎರಡು ಪಟ್ಟು ಹೆಚ್ಚಾಯಿತು. 2013ರಲ್ಲಿ ತನ್ನ ಬ್ಲಾಕ್‍ಗಳಿಂದ ತೈಲ ಮತ್ತು ಅನಿಲ್ ಕಳ್ಳತನ ಮಾಡಿದ್ದಕ್ಕಾಗಿ ಒಎನ್‍ಜಿಸಿಯು ಅಂಬಾನಿ ರಿಲೆಯನ್ಸ್ ವಿರುದ್ಧ ದೆಹಲಿ ಹೈಕೋರ್ಟ್‍ನಲ್ಲಿ ದಾವೆ ಹೂಡಿತ್ತು. ಡಿ ಅಂಡ್ ಎಂ ಕನ್ಸಲ್ಟಿಂಗ್ ಕಂಪನಿಯ ವರದಿ ಆಧಾರದಲ್ಲಿ ಎ.ಪಿ ಶಾ ಸಮಿತಿಯು ತೈಲ ಮತ್ತು ಅನಿಲ ಕಳ್ಳತನವಾಗಿದೆ ಎಂದು ವರದಿ ನೀಡಿತ್ತು. ಹಾಗಾಗಿ ಕೋರ್ಟ್ 10,300 ಕೋಟಿ ರೂಗಳ ದೊಡ್ಡ ಮೊತ್ತದ ದಂಡವನ್ನು ಅಂಬಾನಿಯ ರಿಲೆಯನ್ಸ್‍ಗೆ ಹಾಕಿತ್ತು. ಮೋದಿ ಕೃಪೆಯಿಂದಾಗಿ ಸರ್ಕಾರ ಮತ್ತು ಒಎನ್‍ಜಿಸಿ ಈ ಕೇಸಿನಲ್ಲಿ ಸರಿಯಾಗಿ ವಾದಿಸದೇ ಸಾಕ್ಷಿಗಳನ್ನು ನಾಶಮಾಡಿ ಕೊನೆಗೆ ಅಂಬಾನಿ ದಂಡ ಕಟ್ಟದಂತೆ ನೋಡಿಕೊಂಡರು.

ಖಾಸಗಿ ಜಿಯೊ ಗೆ ಬಿಟ್ಟಿ ಜಾಹಿರಾತು ಕೊಟ್ಟ ಮೋದಿ

ಇನ್ನು ಇದೇ ಅಂಬಾನಿ 2016ರಲ್ಲಿ ಟೆಲಿಕಾಂ ಕ್ಷೇತ್ರಕ್ಕೆ ಲಗ್ಗೆಯಿಟ್ಟು ಜಿಯೋ ಸಿಮ್ ಹೊರತಂದಾಗ ಪತ್ರಿಕೆಗಳ ಮುಖಪುಟದಲ್ಲಿ ಜಾಹೀರಾತು ನೀಡಿದ್ದು ಇದೇ ಅಂಬಾನಿಯ ಪ್ರಧಾನ ಸೇವಕ ನರೇಂದ್ರ ಮೋದಿ. ಜಿಯೋ ಲಾಭಕ್ಕಾಗಿ ಯಶಸ್ವಿಯಾಗಿ ನಡೆಯುತ್ತಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಅನ್ನು ಮುಳುಗಿಸಲಾಯಿತು. ಲಕ್ಷಕ್ಕೂ ಅಧಿಕ ನೌಕರರು ಈಗ ಬೀದಿಗೆ ಬೀಳುವ ಅಪಾಯದಲ್ಲಿದ್ದಾರೆ. ಈ ದೇಶದ ಕೃಷಿ ಸಾಲಕ್ಕಾಗಿ ನಿಗಧಿಯಾದ ಹಣದಲ್ಲಿ ಮುಖೇಶ್ ಅಂಬಾನಿ ಇದುವರೆಗೂ ಒಂದು ಲಕ್ಷ ಕೋಟಿಗೂ ಅಧಿಕ ಸಾಲ ಪಡೆದು ಸದ್ದಿಲ್ಲದೇ ಮನ್ನಾವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖೇಶ್ ಅಂಬಾನಿಗೆ ನೀಡಿದ ತೆರಿಗೆ ವಿನಾಯಿತಿಗಳಿಗೆ ಲೆಕ್ಕವಿಲ್ಲ. ಅಂಬಾನಿಗೆ ನೆರವಾಗಲೆಂದು ಭೂಸ್ವಾದೀನ ಕಾಯ್ದೆಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರಲು ಮೋದಿ ಮುಂದಾಗಿದ್ದರು ಅಲ್ಲವೇ?
ಅನಿಲ್ ಅಂಬಾನಿಯ ಕಥೆ ವ್ಯಥೆ
ಮೇಲೆ ಹೇಳಿದ್ದು ಅಣ್ಣನ ಕಥೆಯಾದರೆ ತಮ್ಮ ಅನಿಲ್ ಅಂಬಾನಿದ್ದು ಭಿನ್ನವೇನೂ ಇಲ್ಲ. ಕೃಷ್ಣ ಗೋದಾವರಿ ಬೇಸಿನ್‍ನಲ್ಲಿ ಪಾಲು ಸಿಗಿದ್ದಿದ್ದಾಗ ಆತನಿಗೆ ಸಿಕ್ಕಿದ್ದು 45 ಸಾವಿರ ಕೋಟಿ ರೂಗಳ ದೊಡ್ಡ ಮೊತ್ತದ ಸರ್ಕಾರಿ ಸಾಲ. ಅಷ್ಟೇ ಅಲ್ಲದೇ ರಫೇಲ್ ಖರೀದಿ ವಿಚಾರದಲ್ಲಿ ಯು.ಪಿ.ಎ ಸರ್ಕಾರ ಆಫ್ ಸೆಟ್ ಪಾಲುದಾರನಾಗಿ ದೇಶಿಯ ಎಚ್.ಎ.ಎಲ್ ಕಂಪನಿಯನ್ನು ಆಯ್ಕೆ ಮಾಡಿದ್ದರೆ ಮೋದಿ ಬಂದ ಕೂಡಲೇ ಆ ಒಪ್ಪಂದ ರದ್ಧಾಗಿ ಅನಿಲ್ ಅಂಬಾನಿಗೋಸ್ಕರವೇ ಮತ್ತೊಂದು ಒಪ್ಪಂದ ನಡೆಯಿತು. ಒಂದೂ ವಿಮಾನ ತಯಾರಿಸದ ಅನಿಲ್ ಅಂಬಾನಿ ನೇತೃತ್ವದ ರಿಲೆಯನ್ಸ್ ಡಿಫೆನ್ಸ್‍ಗೆ ಆಫ್‍ಸೆಟ್ ಪಾಲುದಾರಿಕೆ ಮೂಲಕ 30 ಸಾವಿರ ಕೋಟಿ ರೂಗಳ ಲಾಭ ದೊರಕಿಸಲಾಯಿತು. ಆದೂ ಅನಿಲ್ ಅಂಬಾನಿ ಸಾಲದ ಸುಳಿಯಲ್ಲಿ ಸಿಲುಕಿ ದೇಶ ಬಿಡುವ ಪರಿಸ್ಥಿತಿ ತಲುಪಿಬಿಟ್ಟಿದ್ದ.
ಜೈಲಿನ ನಾಟಕ
ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿಗೆ ಎರಿಕ್ಸನ್‍ಗೆ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ 550 ಕೋಟಿ ರೂಗಳನ್ನು ಪಾವತಿಸಬೇಕಾಗಿತ್ತು. ತಾನು ಹಣಕಾಸಿನ ನಷ್ಟ ಹೊಂದಿ ದಿವಾಳಿಯಾಗಿದ್ದೇನೆಂದು ಅನಿಲ್ ಅಂಬಾನಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಈ ಹಿಂದೆ ಸುಪ್ರೀಂ ಕೋರ್ಟ್‍ನ ಮೆಟ್ಟೆಲೇರಿತ್ತು. ಆಗ ಸುಪ್ರೀ ಕೋರ್ಟ್ 2018ರ ಸೆಪ್ಟಂಬರ್ 30ರೊಳಗೆ ಹಣ ಪಾವತಿಸುವಂತೆ ಆರ್‍ಕಾಂಗೆ ಸೂಚಿಸಿತ್ತು. ಆಗ ಗಡುವು ಮುಗಿದರೂ ಹಣ ಪಾವತಿ ಮಾಡದಿದ್ದಾಗ ಎರಿಕ್ಸನ್ ಕಳೆದ ಅಕ್ಟೋಬರ್‍ನಲ್ಲಿ ಮತ್ತೆ ಕೋರ್ಟ್ ಮೋರೆ ಹೋಗಿತ್ತು. ನಂತರ ಕೋರ್ಟ್ ಡಿಸೆಂಬರ್ 15ರ ಒಳಗಾಗಿಯಾದರೂ ಹಣ ಪಾವತಿ ಮಾಡಬೇಕೆಂದು ಆದೇಶಿಸಿತ್ತು. ಆದರೆ ಆಗಲೂ ಅಂಬಾನಿ ಹಣ ಪಾವತಿ ಮಾಡಲಿಲ್ಲ. ಇದರಿಂದ ಕುಪಿತರಾದ ಎರಿಕ್ಸನ್ ಕಂಪನಿ ಆರ್‍ಕಾಂ ವಿರುದ್ಧ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ಆರ್.ಎಫ್.ನಾರಿಮನ್ ಮತ್ತು ವಿನೀತ್ ಸಹರಾನ್‍ರವರ ದ್ವಿಸದಸ್ಯ ಪೀಠ, ಅನಿಲ್ ಅಂಬಾನಿ, ಆರ್‍ಕಾಂ ನ ಮುಖ್ಯಸ್ಥ ಸತೀಶ್ ಸೇಠ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥೆ ಛಾಯಾ ವೈರನಿ ಸಹ ದೋಷಿಗಳೆಂದು ಘೋಷಿಸಿ, ಇನ್ನು ನಾಲ್ಕು ವಾರದಲ್ಲಿ ಹಣ ಪಾವತಿ ಮಾಡದಿದ್ದಲ್ಲಿ ಜೈಲಿಗೆ ಕಳಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿತ್ತು. ಜೈಲು ತಪ್ಪಿಸಿಕೊಳ್ಳಲು ಅನಿಲ್ ಅಂಬಾನಿ ಒದ್ದಾಡಿ ಸುಸ್ತಾದರೂ ಹಣ ಒಟ್ಟುಗೂಡಿಸಲು ಸಾಧ್ಯವಾಗದಿದ್ದಾಗ ಅವರ ಖಾಸಾ ಅಣ್ಣ ಮುಖೇಶ್ ಅಂಬಾನಿ ಮತ್ತು ಅತ್ತಿಗೆ ನೀತಾ ಅಂಬಾನಿ ನೆರವಿಗೆ ಬಂದಿದ್ದು ಇದರಿಂದ ಅಂಬಾನಿ 550 ಕೋಟಿ ರೂಗಳನ್ನು ಎರಿಕ್ಸನ್‍ಗೆ ಪಾವತಿ ಮಾಡಲು ಸಾಧ್ಯವಾಯಿತು ಎಂದು ತಿಳಿದುಬಂದಿದೆ. ಇದಕ್ಕಾಗಿ ಬಹಳ ಭಾವುಕರಾಗಿ ಅವರಿಬ್ಬರಿಗೂ ಅನಿಲ್ ಅಂಬಾನಿ ಧನ್ಯವಾದಗಳನ್ನು ಅರ್ಪಿಸಿದರು ಎಂದು ಬಹುತೇಕ ಮಾಧ್ಯಮಗಳು ವರದಿ ಮಾಡಿವೆ.
#ಮುಖೇಶ್‍ನೀತಾಸೇವ್‍ಅನಿಲ್ ಎಂಬ ಹ್ಯಾಷ್‍ಟ್ಯಾಗ್ ಟ್ರೆಂಡಿಂಗ್ ಹಾಸ್ಯ
ತಮ್ಮ ಜೈಲಿಗೋಗುವುದನ್ನು ಅಣ್ಣ ತಪ್ಪಿಸಿದರೆ ತಾವೇನೋ ಯುದ್ಧ ಗೆದ್ದವರಂತೆ ಎಜುಕೇಟೆಡ್ ಭಕ್ತ ಗಣ ಟ್ವಿಟ್ಟರ್‍ನಲ್ಲಿ #ಮುಖೇಶ್‍ನೀತಾಸೇವ್‍ಅನಿಲ್ ಎಂಬ ಹ್ಯಾಷ್‍ಟ್ಯಾಗ್ ಟ್ರೆಂಡಿಂಗ್ ಮಾಡಿ ಸಂಭ್ರಮಿಸಿದ್ದರು. ಇವರಿಬ್ಬರೂ ಸಹ ತಾವು ಕಟ್ಟುವ ತೆರಿಗೆ ಹಣ ಕದಿಯುತ್ತಿದ್ದಾರೆ ಎಂಬ ಕಾಮನ್ ಸೆನ್ಸ್ ಇಲ್ಲದೇ ಭಕ್ತರು ಟ್ವಿಟ್ಟರ್‍ನಲ್ಲಿ ಕುಟ್ಟುತ್ತಿದ್ದರೆ, 2016ರಲ್ಲಿ ರಿಲೆಯನ್ಸ್ ಜಿಯೋ ಮೂಲಕ ಟೆಲಿಕಾಂ ಕ್ಷೇತ್ರ ಪ್ರವೇಶಿಸಿ ಉಚಿತವಾಗಿ ಮತ್ತು ಕಡಿಮೆ ದರದಲ್ಲಿ ಸೇವೆಗಳನ್ನು ನೀಡಿ ನಂತರ ಏಕಸ್ವಾಮ್ಯ ಸಾಧಿಸಿ ತನ್ನ ತಮ್ಮನ ರಿಲೆಯೆನ್ಸ್ ಕಂಪನಿ ನಷ್ಟಕ್ಕೊಳಗಾಗಲು ಕಾರಣವಾದ ಮುಖೇಶ್ ಅಂಬಾನಿ ಮುಸಿಮುಸಿ ನಗದೇ ಇರಲಾರರು.
ಇಷ್ಟೆಲ್ಲದರ ನಡುವೆ ಮುಂಬೈನಲ್ಲಿ ಬೃಹತ್ ಮೆಗಾ ಫಿನ್‍ಟೆಕ್ ಹಬ್‍ಗೆ 14ಸಾವಿರ ಕೋಟಿ ಹೂಡಿಕೆಯ ಅವಕಾಶ ಅನಿಲ್ ಅಂಬಾನಿ ಕೈಹಿಡಿದಿದೆ. ಅದೇ ರೀತಿ ಗುಜರಾತಿನ ರಾಜ್‍ಕೋಟ್‍ನಲ್ಲಿ ಹೊಸ ವಿಮಾನ ನಿಲ್ದಾಣದ ಗುತ್ತಿಗೆಯ ಬಿಡ್ ಅನ್ನು ಅನಿಲ್ ಅಂಬಾನಿ ಕಂಪನಿ ಗೆದ್ದಿದೆ. ಅಂದರೆ ಇದು ಅಂಬಾನಿಗಳ ಅದಾನಿಗಳ ಭಾರತ ಎಂಬುದಕ್ಕೆ ಪುರಾವೇ ಬೇಕೆನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ | Naanu Gauri

ಅಂತರ್ಜಾತಿ ವಿವಾಹ; ಹೈದರಾಬಾದ್‌ನಲ್ಲಿ ಮತ್ತೊಬ್ಬ ಯುವಕನ ಕೊಲೆ

0
ಹೈದರಾಬಾದ್‌ನ ಜನನಿಬಿಡ ಬೇಗಂ ಬಜಾರ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು 21 ವರ್ಷದ ಯುವಕನನ್ನು ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ಇರಿದು ಕೊಂದಿರುವ ಘಟನೆ ಮೇ 20ರ ಶುಕ್ರವಾರದ ಸಂಜೆ ನಡೆದಿದೆ ಎಂದು ನ್ಯೂಸ್ ಮಿನಿಟ್...