Homeಮುಖಪುಟರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು | ದೇವನೂರ ಮಹಾದೇವ

ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು | ದೇವನೂರ ಮಹಾದೇವ

ಕಾಯ್ದೆಗಳಲ್ಲಿ ಬಳಸಿರುವ ಒಕ್ಕಣೆಗಳೊ ಮೋಹಕವಾಗಿವೆ, ’ಪ್ರಚಾರ ಮತ್ತು ಸೌಲಭ್ಯ’ ಅಂತೆ ಹಾಗೂ ’ಸಬಲೀಕರಣ ಮತ್ತು ಸಂರಕ್ಷಣೆಯಂತೆ!’ ಬಣ್ಣಬಣ್ಣದ ಮಾತುಗಳು ಜನ ಸಾಮಾನ್ಯರಿಗೆ; ಬಂಡವಾಳ ಮಾತ್ರ ಬಂಡವಾಳಷಾಹಿಗಳಿಗೆ.

- Advertisement -
- Advertisement -

ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರು ಅವರು ಬದುಕಿದ್ದರೆ ಅವರಿಗೆ 84 ತುಂಬಿ 85 ನಡೆಯುತ್ತಿತ್ತು. ಮುವ್ವತ್ತು ವರ್ಷಗಳ ಹಿಂದೆ, ವಿಶ್ವ ವಾಣಿಜ್ಯ ಸಂಸ್ಥೆ (WTO), ಕಾರ್ಪೊರೇಟ್ ಕಂಪನಿಗಳ ಬಗ್ಗೆ ನಂಜುಂಡಸ್ವಾಮಿಯವರು ಆಡುತ್ತಿದ್ದ ಮಾತುಗಳನ್ನು ಇಂದು ಇಡೀ ದೇಶ ಮಾತಾಡುತ್ತಿದೆ, ಹಳ್ಳಿಗಾಡಿನ ಅನಕ್ಷರಸ್ಥರೂ ಕೂಡ ಮಾತಾಡುತ್ತಿದ್ದಾರೆ. ಒಬ್ಬ ವ್ಯಕ್ತಿ ಬದುಕಿರಲಿ ಅಥವಾ ಕಾಲವಶನಾಗಿರಲಿ ಇದಕ್ಕಿಂತ ದೊಡ್ಡಗೌರವ, ಇದಕ್ಕಿಂತ ಸ್ಮರಣೆ ಬಹುಶಃ ಬೇರೊಂದಿಲ್ಲವೇನೊ.

ನನಗೆ ಸುಮ್ಮನೆ ಒಂದು ಕುತೂಹಲ ಅಷ್ಟೆ – ಪ್ರೊ. ನಂಜುಂಡಸ್ವಾಮಿಯವರು ಬದುಕಿದ್ದರೆ ಈಗ ಎಲ್ಲಿರುತ್ತಿದ್ದರು? ಅಮೃತ ‌ಭೂಮಿ? ಡೆಲ್ಲಿ ಗಡಿಗಳಲ್ಲಿ ರೈತರೊಡನೆ? ಎಲ್ಲಿ ಇರುತ್ತಿದ್ದರು? ನನಗನ್ನಿಸುತ್ತದೆ, ಬಹುಶಃ ಅವರಿಗೆ ಈ ಅವಕಾಶವೇ ಸಿಗುತ್ತಿರಲಿಲ್ಲ. ನನಗೆ ಗ್ಯಾರಂಟಿ ಇದೆ, UAPA ಅಂದರೆ – Unlawful Activities (Prevantion) Act, ಅಂದರೆ ‘ಕಾನೂನು ಬಾಹಿರ (ತಡೆ) ಕಾಯ್ದೆ’ ಅಂತಾರಲ್ಲ, ಈ ಕಾಯ್ದೆ ಅನ್ವಯ ವಿಚಾರಣೆಯೂ ಇಲ್ಲದೆ ಬಂಧನದಲ್ಲಿರುತ್ತಿದ್ದರು. ಜೊತೆಗೆ ’ದೇಶದ್ರೋಹಿ’ ಅಂತಲೂ ಅನ್ನಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಟೀ ಮಾರುವವನಿಗೆ ಬಡವರ ನೋವಿನ ಅರಿವಿರುತ್ತೆ ಎಂಬ ಭ್ರಮೆಯಲ್ಲಿ ಮತ ನೀಡಿದ್ದೆವು!

ಇಂದು ಎಂ. ಡಿ. ನಂಜುಂಡಸ್ವಾಮಿ ಅವರಂತಹ ಪ್ರಖರ ಚಿಂತಕರು, ಹೋರಾಟಗಾರರು ‘ದೇಶದ್ರೋಹಿ’ಗಳು ಎಂದು ಕರೆಸಿಕೊಳ್ಳುತ್ತಾ ‘ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ’ ಅನ್ವಯ ವಿಚಾರಣೆ ಇಲ್ಲದೆ ಬಂಧನದಲ್ಲಿರುವುದನ್ನು ನೋಡಿದಾಗ ಇದನ್ನಿಸುತ್ತದೆ. ಇಂದು ಗಾಂಧಿ, ಅಂಬೇಡ್ಕರ್, ಜೆ.ಪಿ. ಬದುಕಿದ್ದರೂ ಕೂಡ ಅವರ ಗತಿಯೂ ಇದಕ್ಕಿಂತ ಭಿನ್ನವಾಗಿರುತ್ತಿತ್ತು ಎಂದು ಹೇಳುವ ಧೈರ್ಯ ನನಗಿಲ್ಲ.
ಆಗ, ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದಲ್ಲಿ ಒಂದು ಕಂಪನಿ ಸರ್ಕಾರದ ಆಳ್ವಿಕೆ ಇತ್ತು. ಇಂದು ಅಂಬಾನಿ ಅದಾನಿ ಮತ್ತಿತರ ಹತ್ತಾರು ಕಂಪನಿ ಸರ್ಕಾರಗಳ ಆಳ್ವಿಕೆ ನಡೆಯುತ್ತಿದೆಯೇನೊ ಅನ್ನಿಸುತ್ತಿದೆ.

ಜನರಿಂದ ಆಯ್ಕೆಯಾದ ಯಾವ ಲಕ್ಷಣವೂ ಮೋದಿಶಾರ ಆಳ್ವಿಕೆಯಲ್ಲಿ ಕಾಣುತ್ತಿಲ್ಲ. ಯಾಕೆಂದರೆ, ಕಳೆದ ಎರಡುವರೆ ತಿಂಗಳಿಂದಲೂ ಲಕ್ಷಾಂತರ ಜನರು ರಾಜಧಾನಿ ದೆಹಲಿ ಗಡಿಯ ಸುತ್ತಲೂ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಪ್ರಾಣವನ್ನು ಪಣಕ್ಕಿಟ್ಟು ಕುಳಿತಿದ್ದರೂ, ಆ ಧರಣಿ ಸ್ಥಳದಲ್ಲೆ ನೂರಾರು ಜನರು ಸತ್ತಿದ್ದರೂ ಇಡೀ ದೇಶವೇ ಒಕ್ಕೊರಳಿನಿಂದ ಅದೇ ಬೇಡಿಕೆಗಳನ್ನು ಕೂಗಿ ಕೂಗಿ ಹೇಳುತ್ತಿದ್ದರೂ ಮೋದಿಶಾರು ಕಲ್ಲುಹೃದಯವರಾಗಿದ್ದಾರೆ. ಅವರ ನಡೆನುಡಿಗಳಲ್ಲಿ ಜನರಿಂದ ಆಯ್ಕೆಯಾದ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಈ ಅಂಬಾನಿ ಅದಾನಿ ಬಂಡವಾಳಶಾಹಿ ಕಂಪನಿ ಸರ್ಕಾರಗಳಿಂದ ನೇಮಕಗೊಂಡವರಂತೆ ಮೋದಿಶಾರವರು ವರ್ತಿಸುತ್ತಿದ್ದಾರೆ.

ಜೊತೆಗೆ, ಇದೆಂಥ ವಂಚಕ ರಾಜಕಾರಣವೆಂದರೆ, ರಾಜ್ಯಸಭೆಯಲ್ಲಿ ಪ್ರಧಾನಮಂತ್ರಿ ಮೋದೀಜಿಯವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ಮಾತಾಡುತ್ತಾ – ’ಎಂಎಸ್‌ಪಿ ಥಾ, ಹೈ, ರಹೇಗಾ’ ಅನ್ನುತ್ತಾರೆ. ಅಂದರೆ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ ಮುಂದೆಯೂ ಇರುತ್ತೆ ಅಂತ, ಭೂತ ವರ್ತಮಾನ ಭವಿಷತ್ ಕಾಲ ನುಡಿಯುವ ಪ್ರವಾದಿಯಂತೆ ಗಂಭೀರವಾದ ಧ್ವನಿಯಲ್ಲಿ ಹೇಳುತ್ತಾರೆ.

ಇದನ್ನೂ ಓದಿ: ’ನಮ್ಮ ಮೇಲಿನ ಕೇಸುಗಳು ನಾವು ಹೋರಾಟ ನಡೆಸದಂತೆ ತಡೆಯಲು ಸಾಧ್ಯವಿಲ್ಲ’- ರೈತ ಮುಖಂಡರು

ಆಯ್ತು, ಹಾಗಾದರೆ ಡೆಲ್ಲಿ ಸುತ್ತಲೂ ಲಕ್ಷಾಂತರ ಜನರು ಮನೆ ಮಠ ಕೆಲಸಕಾರ್‍ಯ ತೊರೆದು, ನೂರಾರು ಜನರು ಅಲ್ಲೆ ಸತ್ತರೂ ಅದನ್ನು ನುಂಗಿಕೊಂಡು, ಸರ್ಕಾರ + ಪೊಲೀಸ್ + ಬಿಜೆಪಿ ಸದಸ್ಯರು ಜೊತೆಗೂಡಿ ಕೊಡುತ್ತಿರುವ ಕಷ್ಟ ಕೋಟಲೆಗಳನ್ನು ಸಹಿಸಿಕೊಂಡು ಜೀವನ್ಮರಣದ ಪ್ರಶ್ನೆ ಎಂಬಂತೆ ಕೂತಿರುವುದಾದರೂ ಯಾಕೆ? ಆ ಮೂರು ಕೃಷಿ ಕಾಯ್ದೆಗಳು ಕರಾಳ ಶಾಸನಗಳೆಂದು ಇಡೀ ದೇಶ ಒಕ್ಕೊರಲಿನಿಂದ ಕೂಗುತ್ತಿರುವುದಾದರೂ ಯಾಕೆ? ಅವರೇನೂ ಮೂಢಾತ್ಮರೆ? ಖಂಡಿತಾ ಅಲ್ಲ. ಅವರು ಕೇಳುತ್ತಿರುವುದು ಇಷ್ಟೆ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಶಾಸನ ಮಾಡಿ ಎಂದಷ್ಟೆ. ಇದನ್ನು ಮಾಡದಿದ್ದರೆ ಅದು ಇದ್ದರೂ ಇಲ್ಲದಂತೆ ಅಂತ ರೈತಾಪಿ ಜನರ ಅಹವಾಲು. ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು. ಅವರು ಬೇಕಂತಲೇ ಕೇಳಿಸಿಕೊಳ್ಳುತ್ತಿಲ್ಲ. ಮತ್ತೆ ಇದು ಅವರಿಗೆ ಗೊತ್ತಿಲ್ಲ ಅಂತಲೂ ಅಲ್ಲ.

ನಂಜುಂಡಸ್ವಾಮಿ
PC: enacademic.com

ಹಾಗಾಗಿ ಪ್ರಧಾನಿ ಮೋದಿಯವರಿಗೆ ಒಂದು ಪ್ರಾರ್ಥನೆ ಮಾಡುತ್ತೇನೆ – ನೀವು ಬೇರೆ ಯಾರ ಮಾತನ್ನೂ ಕೇಳಿಸಿಕೊಳ್ಳುವುದಿಲ್ಲ. ಒಂದು ಮಾತು, ಅದು ನಿಮ್ಮದೇ ಮಾತು, ಅದನ್ನಾದರೂ ಕೇಳಿಸಿಕೊಳ್ಳುತ್ತೀರಾ? ಇಸವಿ 2011. ನೀವು ಆಗ ಗುಜರಾತ್ ಮುಖ್ಯಮಂತ್ರಿಗಳು. ಅಂದಿನ ಕಾಂಗ್ರೆಸ್ ಸರ್ಕಾರವು ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿಗೆ ನಿಮ್ಮನ್ನೆ ಅಧ್ಯಕ್ಷರನ್ನಾಗಿ ಮಾಡಿರುತ್ತದೆ. ಆಗ ನೀವು ವರದಿ ಕೊಡುತ್ತೀರಿ – ಏನಂತ? ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಬೇಕು – ಅಂತ’. ಇನ್ನೂ ಮುಂದುವರಿದು ನೀವು, ನಿಮ್ಮ ವರದಿಯಲ್ಲಿ ’ರೈತ ಮತ್ತು ವ್ಯಾಪಾರಿಯ ನಡುವಣ ಯಾವುದೇ ಬೆಲೆಗಳಿಗೆ ಸಂಬಂಧಿಸಿದ ವ್ಯಾಪಾರಿ ಒಪ್ಪಂದವು ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಇರಬಾರದೆಂಬ ಕಾನೂನು ಮಾಡಬೇಕೆಂದು’ ಹೇಳಿರುತ್ತೀರಿ.

ಇವೆಲ್ಲಾ ನಿಮ್ಮದೇ ವರದಿಯ ಅಧಿಕೃತ ಮಾತುಗಳು. ಈಗ ಎಲ್ಲರೂ ಕೇಳುತ್ತಿರುವುದು ಇದನ್ನೆ. ಅಂದರೆ ನೀವು ವರದಿ ಕೊಟ್ಟಿದ್ದೀರಲ್ಲ ಅದನ್ನೆ. ನೀವು ಹೇಳಿದ್ದನ್ನೇ ಈಗ ರೈತರು ಒತ್ತಾಯಿಸುತ್ತಿದ್ದರೂ ನೀವು ಪಿಟೀಲು ಬಾರಿಸುತ್ತಿದ್ದೀರಿ. ಇದಕ್ಕೆ ಏನನ್ನ ಬೇಕು? ಪದಗಳು ಸಿಕ್ಕುತ್ತಿಲ್ಲ.

ಇದನ್ನೂ ಓದಿ: ಹತ್ರಾಸ್, ಬಿಜ್ನೋರ್‌ ಗಳಲ್ಲಿ ಬೃಹತ್ ಮಹಾಪಂಚಾಯತ್: ಸರ್ಕಾರದ ವಿರುದ್ಧ ರೈತರ ಗುಡುಗು

ಇನ್ನೊಂದು – ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎ.ಪಿ.ಎಂ.ಸಿ.)ಗೆ ತಂದಿರುವ ತಿದ್ದುಪಡಿಯಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಯಾರಿಗೆ ಬೇಕಾದರೂ ಮಾರಾಟ ಮಾಡಬಹುದು ಎಂದಿದೆ. ಇದು ಖಾಸಗಿಗೆ ದಿಡ್ಡಿ ಬಾಗಿಲು ತೆರೆದಂತೆ. ನಮ್ಮದೇ ಒಂದು ಉದಾಹರಣೆ: ಮುವತ್ತು ವರ್ಷಗಳ ಹಿಂದೆ – ಕಾಫಿ ಮಾರಾಟ ಮಂಡಲಿಗೇ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕಿತ್ತು. ಕಾಫಿ ಮಾರಾಟ ಮಂಡಲಿಯಲ್ಲಿ ಭ್ರಷ್ಠಾಚಾರ ತಲೆದೋರಿ ಪ್ರತಿಭಟಿಸಿದಾಗ ಇದಕ್ಕೆ ಪರಿಹಾರ ಎಂಬಂತೆ ಖಾಸಗಿ ವ್ಯಾಪಾರಸ್ಥರು ರೈತರಿಂದ ನೇರವಾಗಿ ಕೊಂಡುಕೊಳ್ಳುವ ನಿಯಮ ಜಾರಿಗೆ ಬಂತು. ಈಗ? ಕಾಫಿ ಮಾರಾಟ ಮಂಡಲಿ ಖಾಸಗಿ ಹೊಡೆತಕ್ಕೆ ಅವಶೇಷವಾಗಿದೆ.

ಆಮೇಲೆ ಈಗ 2000 ರಿಂದ 2005 ರ ಅವಧಿಯಲ್ಲಿ ಕಾಫಿಗೆ ಏನು ಬೆಲೆ ಸಿಗುತ್ತಿತ್ತೊ 2020 ರಲ್ಲಿ ಅದಕ್ಕಿಂತ ಕಡಿಮೆಯಾಗಿದೆ. ಕಾಫಿ ಬೆಳೆಗಾರ ಕಣ್ಣುಬಾಯಿ ಬಿಡುತ್ತಿದ್ದಾನೆ. ಇನ್ನು ಮುಂದೆ ಎಲ್ಲ ಕೃಷಿ ಉತ್ಪನ್ನಗಳಿಗೂ ಆಗುವುದು ಇದೇನೆ. ಲಾಭವಿಲ್ಲದೆ, ಕೆಲವೊಮ್ಮೆ ನಷ್ಟಕ್ಕೆ ಕೂಡ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತ ಜೀವಿಸುವ ಜೀವ ಈ ಭೂಮಿ ಮೇಲೆ ರೈತ ಮಾತ್ರ ಎಂದು ಕಾಣುತ್ತದೆ! ತೆರಿಗೆ ಕಟ್ಟುತ್ತೇವೆ ಎಂದು ಅಂದುಕೊಳ್ಳುವವರು, ಲಾಭವಿಲ್ಲದೆ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಸಮಾಜಕ್ಕೆ ರೈತಾಪಿ ಕೊಟ್ಟಿದ್ದೆಷ್ಟು ಎಂದೂ ನೋಡಿದರೆ ಒಳ್ಳೆಯದು.

ಇರಲಿ, ಹೀಗೆಯೇ ಖಾಸಗಿ ಎದರು ಸರ್ಕಾರಿ ಶಾಲೆ / ಕಾಲೇಜುಗಳ ಸ್ಥಿತಿಗತಿ ಏನಾಗಿದೆ? ಖಾಸಗಿ ಜಿಯೋ ಎದುರು ಸಾರ್ವಜನಿಕ ಸಹಭಾಗಿತ್ವದ ಬಿಎಸ್‌ಎನ್‌ಎಲ್ ತೆವಳುತ್ತಿಲ್ಲವೆ? ಸರ್ಕಾರವೇ ತನ್ನದೇ ಬಿಎಸ್‌ಎನ್‌ಎಲ್‌ನ ಕತ್ತು ಹಿಸುಕುತ್ತಿಲ್ಲವೆ? ಕಣ್ಣುಬಿಟ್ಟು ನೋಡಿದ ಕಡೆಗೆಲ್ಲಾ ಇಂಥವೇ ಇಂಥವೇ ಕಾಣುತ್ತವೆ. ಈಗ ವ್ಯವಸಾಯ ಉತ್ಪನ್ನಗಳಿಗೆ ಮಾರಾಟಕ್ಕೆ ಖಾಸಗಿಗೆ ಅವಕಾಶ ಕೊಟ್ಟಲ್ಲಿ ಕಾಫಿ ಬೆಳೆಗಾರರಂತೆಯೇ ಎಲ್ಲ ರೈತರೂ ಕಣ್ಣುಬಾಯಿ ಬಿಡಬೇಕಾಗುತ್ತದೆ. ಅಥವಾ? ಇಂಥಹ ಕೃಷಿ ಕಾಯ್ದೆಗಳು ಕೊನೆಗೆ ರೈತಾಪಿಯನ್ನು ಆತನ ಭೂಮಿಯಿಂದ ಕಿತ್ತು ದೂರದ ಊರಿಗೆ ಎಸೆಯುತ್ತವೆ.

ಇದನ್ನೂ ಓದಿ: ರೈತ ಹೋರಾಟಕ್ಕೆ ಮಹಾತ್ಮಾ ಗಾಂಧಿ ಮೊಮ್ಮಗಳ ಬೆಂಬಲ: ಅವರು ಹೇಳಿದ್ದೇನು?

ಹಾಗೆಯೇ ಇನ್ನೊಂದು. ರೈತ ಮತ್ತು ಕಂಪನಿಗಳ ನಡುವೆ ಏರ್ಪಡುವ ಕೃಷಿ ಒಪ್ಪಂದಕ್ಕೆ ಅನುಗುಣವಾಗಿ ಈ ಭೂಮಿ ಮೇಲೆ ಎಲ್ಲೂ ಕಂಪನಿಗಳು ನುಡಿದಂತೆ ನಡೆದುಕೊಂಡ ಉದಾಹರಣೆಗಳು ವಿರಳ. ಇಲ್ಲಿಯದೇ ಒಂದು ಉದಾಹರಣೆ: ಹಾರೋಹಳ್ಳಿ ರೈತರೊಬ್ಬರು (ನಿವೃತ್ತ ಮಿಲಿಟರಿಯವರು) ಬಿಡದಿ ಹತ್ತಿರ ಒಂದು ಬೀಜದ ಕಂಪನಿಯೊಂದಿಗೆ ಕಂಟ್ರಾಕ್ಟ್ ಮಾಡಿಕೊಂಡು 7 ಲಕ್ಷ ಖರ್ಚು ಮಾಡಿ ಅಮೆರಿಕನ್ ಸೌತೆ ಬೆಳೆದು ಕುಯ್ಲು ಮಾಡಿ ತೆಗೆದುಕೊಂಡು ಹೋದಾಗ, ಕಂಪನಿಯವರು – ಕುಯ್ಲು ಒಂದು ವಾರ ಲೇಟಾಗಿದ್ದು ಈ ಸೌತೆಯಲ್ಲಿ ನೀರಿನಂಶ ಕಡಿಮೆ ಆಗಿದೆ, ಹಾಗಾಗಿ ಖರೀದಿ ಸಾಧ್ಯವಿಲ್ಲ ಎಂದು ತಿರಸ್ಕರಿಸಿದ್ದಾರೆ. ಆ ರೈತ ಏನು ಮಾಡಬೇಕು. ತನ್ನ ಕೃಷಿ ಭೂಮಿಯನ್ನೇ ಮಾರಿ ಕೈತೊಳೆದುಕೊಳ್ಳುವುದನ್ನು ಬಿಟ್ಟು ಬೇರೆ ದಾರಿ ಇದೆಯೇ? ಪರಿಣಾಮದಲ್ಲಿ ಈ ಗುತ್ತಿಗೆ ಕೃಷಿಯೂ ಕೃಷಿಕರನ್ನು ಕೃಷಿ ಭೂಮಿಯಿಂದಲೇ ಒಕ್ಕಲೆಬ್ಬಿಸುತ್ತದೆ.

ಈ ಮೂರು ಕೃಷಿ ಕಾಯ್ದೆಗಳನ್ನು ಒಪ್ಪಿಕೊಂಡರೆ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ. ಲಂಗುಲಗಾಮು ಇಲ್ಲದ ಈ ಕಾನೂನುಗಳು ಜಾರಿಯಾದರೆ ಉದಾಹರಣೆಗೆ, ಈರುಳ್ಳಿ, ಬೇಳೆ ಬೆಲೆಗಳನ್ನು ಸುಗ್ಗಿಯಲ್ಲಿ ಇಳಿಸಿ ಗೋಡಾನ್‌ನಲ್ಲಿ ತುಂಬಿಟ್ಟು ಕೃತಕ ಅಭಾವ ಸೃಷ್ಟಿಸಿ ಬೆಲೆ ಗಗನಕ್ಕೇರಿಸುತ್ತಿರುವಂತೆ ಎಲ್ಲಾ ದವಸ ಧಾನ್ಯಗಳಿಗೂ ಆಗುತ್ತದೆ. ಆಗ ಏನಾಗುತ್ತದೆ? ಇಂದಿನ ಮಧ್ಯಮವರ್ಗವು ಮುಂದೆ ಬಡತನದತ್ತ ದೂಕಲ್ಪಡುತ್ತದೆ. ಇಂದಿನ ಬಡವರು ಮುಂದೆ ಹಸಿವಿನ ದವಡೆಗೆ ಸಿಲುಕುತ್ತಾರೆ. ಜನಸಾಮಾನ್ಯರ ದಿನನಿತ್ಯದ ಜೀವನ ತತ್ತರಿಸುತ್ತದೆ. ಹೇಳಿ – ಈ ಕಾನೂನುಗಳು ಯಾರಿಗೆ ಸಂಬಂಧಿಸಿದ್ದಲ್ಲ? ಬದುಕುತ್ತಿರುವ ಎಲ್ಲರದೂ ಅಲ್ಲವೆ? ರೈತರ ಈ ಹೋರಾಟದಲ್ಲಿ ಜನಸಾಮಾನ್ಯರ ಹಿತವೂ ಅಡಗಿರುವುದನ್ನು ಗಮನಿಸಬೇಕಾಗಿದೆ.

ಈ ಕಾಯ್ದೆಗಳಲ್ಲಿ ಬಳಸಿರುವ ಒಕ್ಕಣೆಗಳೊ ಮೋಹಕವಾಗಿವೆ. ನೋಡಿ – ’ಪ್ರಚಾರ ಮತ್ತು ಸೌಲಭ್ಯ’ ಅಂತೆ. ’ಸಬಲೀಕರಣ ಮತ್ತು ಸಂರಕ್ಷಣೆಯಂತೆ!’ ಬಣ್ಣಬಣ್ಣದ ಮಾತುಗಳು ಜನ ಸಾಮಾನ್ಯರಿಗೆ; ಬಂಡವಾಳ ಮಾತ್ರ ಬಂಡವಾಳಷಾಹಿಗಳಿಗೆ. ಈ ಮಾತುಗಳು ನಿಜವಲ್ಲದಿದ್ದರೆ, ಕೋವಿಡ್ ಹಾವಳಿಯ ಜರ್ಜರಿತವಾದ ಕಾಲಮಾನದಲ್ಲೆ ಕೇವಲ ನೂರು ಜನ ಶತಕೋಟ್ಯಾದೀಶರು 12½ ಲಕ್ಷ ಕೋಟಿ ಲಾಭಗಳಿಸಲು ಹೇಗೆ ಸಾಧ್ಯ? ಹೀಗಿದ್ದೂ ಈ ಕಾಯ್ದೆಗಳು ರೈತರ ಬದುಕಿಗೆ ಮುಕ್ತಿ ನೀಡುವ ಕಾಯ್ದೆಗಳು ಎಂಬಂತೆ ಮೋದಿಶಾರು ಬಿಂಬಿಸುತ್ತಿದ್ದಾರೆ. ಹೌದು, ಸಾಯಿಸುವುದಕ್ಕೂ ’ಮುಕ್ತಿ ನೀಡುವುದು’ ಎಂಬ ಅರ್ಥವೂ ಇದೆ! ಮೈಯೆಲ್ಲ ಕಣ್ಣಾಗಿರಬೇಕಾದ ಕಾಲ ಇದು.

ಇದನ್ನೂ ಓದಿ: 3 ತಿಂಗಳಿನಿಂದ ಒಂದು ದಿನವೂ ರಜೆಯಿಲ್ಲ: ಪ್ರತಿದಿನವೂ ರೈತ ಹೋರಾಟದ ಕ್ಷಣ ಕ್ಷಣದ ಮಾಹಿತಿ ನೀಡುತ್ತಿರುವ ಯುವಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...