ಗಾಂಧಿ

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಹೋರಾಟಕ್ಕೆ ಮಹಾತ್ಮ ಗಾಂಧಿಜಿಯ ಮೊಮ್ಮಗಳು ತಾರಾ ಗಾಂಧಿ ಭಟ್ಟಾಚಾರ್ಯ ಅವರು ಶನಿವಾರ ಗಾಜಿಪುರ ಗಡಿಗೆ ತೆರಳಿ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಭೇಟಿಯನ್ನು ಅವರು ರಾಜಕೀಯ ರಹಿತ ಭೇಟಿ ಎಂದು ಬಣ್ಣಿಸಿದ್ದಾರೆ.

ಗಾಂಧಿ ಪ್ರತಿಷ್ಠಾನದ ಇತರ ಪದಾಧಿಕಾರಿಗಳೊಂದಿಗೆ ಗಾಜಿಪುರ ಗಡಿಗೆ ತೆರಳಿದ ಅವರು, ಕೃಷಿ ಕಾನೂನುಗಳ ಬಗ್ಗೆ ಮಾತನಾಡಿದರು. “ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಇಲ್ಲಿಗೆ ಬಂದಿಲ್ಲ. ನಮ್ಮೊಂದಿಗೆ ಯಾವುದೇ ಪೊಲೀಸ್ ಬೆಂಗಾವಲು ಇಲ್ಲ. ನಾನು ಈ ದೇಶದ 87 ವರ್ಷದ ಹಿರಿಯ ನಾಗರಿಕಳಾಗಿದ್ದು, ರೈತರಿಗಾಗಿ ಇಲ್ಲಿಗೆ ಬಂದಿದ್ದೇನೆ. ರೈತರು ನಮ್ಮ ಜೀವನದುದ್ದಕ್ಕೂ ಆಹಾರವನ್ನು ನೀಡುತ್ತಾರೆ. ರೈತರಿಗೆ ಪ್ರಯೋಜನ ಸಿಗದಿದ್ದರೆ, ದೇಶಕ್ಕೂ ಯಾವುದೇ ಪ್ರಯೋಜನವಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟೂಲ್‌ಕಿಟ್ ಪ್ರಕರಣ: ಬೆಂಗಳೂರಿನ ವಿದ್ಯಾರ್ಥಿನಿಯನ್ನು ಬಂಧಿಸಿದ ದೆಹಲಿ ಪೊಲೀಸರು

“ನಾನು ಯಾವಾಗಲೂ ಸತ್ಯದೊಂದಿಗೆ ನಿಲ್ಲುತ್ತೇನೆ. ನನಗೆ ರಾಜಕೀಯದ ಬಗ್ಗೆ ಸಂಪೂರ್ಣ ಜ್ಞಾನವಿಲ್ಲ” ಎಂದು ಅವರು ಹೇಳಿದ್ದಾರೆ. ತಾರಾ ಅವರು ಗಾಜಿಪುರ ಭೇಟಿಯ ಸಮಯದಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್‌ ಅವರೊಂದಿಗೆ ತಾರಾ ಗಾಂಧಿ ವೇದಿಕೆಯನ್ನು ಹಂಚಿಕೊಂಡರು.

ಕೃಷಿಯಲ್ಲಿನ ತೊಂದರೆಗಳನ್ನು ನಿವಾರಿಸಲು ಹೊಸ ಕೃಷಿ ಕಾನೂನುಗಳನ್ನು ತರಲಾಗಿದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಎರಡೇ ದಿನಗಳ ಅಂತರದಲ್ಲಿ ಈ ಭೇಟಿ ನಡೆದಿದ್ದು, ಪ್ರತಿಭಟನಾ ನಿರತ ರೈತರು ತಮ್ಮ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಮಾತುಕತೆ ಪುನರಾರಂಭಿಸುವಂತೆ ಅವರು ಕರೆ ನೀಡಿದರು.

“ನಾವು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಮಾತುಕತೆಗೆ ಬಂದು ಸಮಸ್ಯೆಗಳನ್ನು ಬಗೆಹರಿಸುವಂತೆ ನಾನು ಮತ್ತೊಮ್ಮೆ ರೈತರನ್ನು ಒತ್ತಾಯಿಸುತ್ತೇನೆ” ಎಂದು ಲೋಕಸಭೆಯಲ್ಲಿ ಪ್ರಧಾನಿ ಹೇಳಿದ್ದರು. ಅಲ್ಲದೆ ಕೃಷಿ ಕಾನೂನುಗಳನ್ನು ಒಂದುವರೆ ವರ್ಷಗಳವರೆಗೆ ಸ್ಥಗಿತಗೊಳಿಸಲು ಸರ್ಕಾರ ಮುಂದಾಗಿದೆ ಎಂದು ಸರ್ಕಾರವು ಹೇಳಿಕೊಂಡಿತ್ತು. ಆದರೆ ರೈತರು ಇದನ್ನು ತಿರಸ್ಕರಿಸಿದ್ದು ಕಾನೂನುಗಳನ್ನು ಶಾಶ್ವತವಾಗಿ ವಾಪಾಸು ಪಡೆಯುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ:ಆಂತರಿಕ ವ್ಯವಹಾರಗಳಿಗೆ ತಲೆ ಹಾಕಬೇಡಿ: ಭಾರತಕ್ಕೆ ಮೀನಾ ಹ್ಯಾರಿಸ್ ನೀಡಿದ ಪ್ರತ್ಯುತ್ತರ ಏನು ಗೊತ್ತಾ?

LEAVE A REPLY

Please enter your comment!
Please enter your name here