ನಿನ್ನೆ ಮತ್ತು ಇಂದ ಕರ್ನಾಟಕಕ್ಕೆ ಬಂದ ಪ್ರಧಾನಿ ಮೋದಿಯವರು ಪ್ರವಾಹ ಸಂತ್ರಸ್ತರ ಬಗ್ಗೆ ಒಂದೂ ಮಾತಾಡದೇ ಮೋದಿ ಬರೀ ಸುಳ್ಳು ಹೇಳಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಮೋದಿಯವರು ಪ್ರವಾಹ ಪರಿಹಾರಕ್ಕೆ ಹಣ ಘೋಷಣೆ ಮಾಡುತ್ತಾರೆ ಎಂದು ನಿರೀಕ್ಷೆ ಇತ್ತು. ಆದರೆ ಅವರು ಅದರ ಬಗ್ಗೆ ಪರೀಶೀಲನೆ ಮಾಡುತ್ತೇನೆ ಎಂದೂ ಸಹ ಹೇಳಲಿಲ್ಲ. ಇದರಿಂದ ಕರ್ನಾಟಕದ ಬಗ್ಗೆ ಅವರಿಗಿರುವ ಅಸಡ್ಡೆ, ನಿರ್ಲಕ್ಷ್ಯ ಎಷ್ಟು ಎಂಬುದು ಅರಿವಾಗಲಿದೆ. ಅವರ ನಡವಳಿಕೆಯಿಂದ ಸ್ಪಷ್ಟವಾಗಿ ಗೊತ್ತಾಗಲಿದೆ ಎಂದು ಕಿಡಿಕಾರಿದ್ದಾರೆ.
ಪ್ರವಾಹ ಪೀಡಿತರಿಗೆ ಪರಿಹಾರ ಕೊಡಲು ನಮ್ಮ ಬಳಿ ಹಣವಿಲ್ಲ, ದಯವಿಟ್ಟು ಕೇಂದ್ರದಿಂದ ಹಣ ಕೊಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಗೋಗೆರೆಯುತ್ತಿದ್ದಾರೆ. ಆದರೂ ಮೋದಿ ಪ್ರತಿಕ್ರಿಯಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಗೆ ಮೊದಲು ಕರ್ನಾಟಕದ ಬಿಜೆಪಿಯ 28 ಬಿಜೆಪಿ ಅಭ್ಯರ್ಥಿಗಳು ನಮಗೆ ಓಟು ಕೊಡಬೇಡಿ, ನರೇಂದ್ರ ಮೋದಿಯವರಿಗೆ ಓಟು ಕೊಡಿ ಎಂದು ಕೇಳಿದ್ದರು. ರಾಜ್ಯದ ಜನ ನರೇಂದ್ರ ಮೋದಿಯವರ ಮುಖ ನೋಡಿ ಓಟು ಹಾಕಿಬಿಟ್ರು. ಆದರೆ ಇವತ್ತು ಮೋದಿ ಕರ್ನಾಟಕ್ಕೆ ದೊಡ್ಡ ದ್ರೋಹ ಮಾಡಿದ್ದಾರೆ ಎಂದು ಸಿದ್ದು ಆರೋಪಿಸಿದ್ದಾರೆ.
ನಾನು ಇದನ್ನು ಹೇಳಿದರೆ ಬಿಜೆಪಿಯವರಿಗೆ ಕೋಪ ಬರುತ್ತದೆ. ಆದರೆ ಮೋದಿಯವರು ಶಾಲಾಮಕ್ಕಳ ಜೊತೆಗೆ ಏನು ಮಾತಾಡಬೇಕು? ವಿದ್ಯಾಭ್ಯಾಸ, ಅವರ ಭವಿಷ್ಯದ ಬಗ್ಗೆ ಮಾತಾಡಬೇಕು. ಅಲ್ಲಿ ಹೋಗಿ ರಾಜಕೀಯ ಭಾಷಣ ಮಾಡಿದರೆ ಹೇಗೆ? ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತಾಡುವುದು ಎಷ್ಟು ಔಚಿತ್ಯ, ಸಮರ್ಪಕ? ಎಂದು ಸಿದ್ದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ನವರು ಮತ್ತು ಮಿತ್ರಪಕ್ಷಗಳು ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತಾಡಿ ಎಂದು ಮೋದಿ ಹೇಳಿದ್ದಾರೆ. ಪಾಕಿಸ್ತಾನ ಒಂದು ದುಷ್ಟ ರಾಷ್ಟ್ರ ಎಂದು ನಾನು ಒಪ್ಪಿಕೊಳ್ಳುತ್ತೇನೆ. ಅಲ್ಲಿ ಅವರು ಅಲ್ಪಸಂಖ್ಯಾತರರಿಗೆ ತೊಂದರೆ ಕೊಡುತ್ತಿದ್ದಾರೆ ಸರಿ. ಆದರೆ ಭಾರತದಲ್ಲಿರುವ ಅಲ್ಪಸಂಖ್ಯಾತರರ ಮೇಲೆ ನೀವು ಏನು ಮಾಡುತ್ತಿದ್ದೀರಿ ನರೇಂದ್ರ ಮೋದಿಯವರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಂವಿಧಾನದ ವಿರುದ್ಧವಾಗಿ ಸಿಎಎ ಕಾನೂನು ಮಾಡುವುದು ಸರಿಯೇ? ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡುವುದು ಸರಿಯೇ? ಮಕ್ಕಳ ಮುಂದೆ ರಾಜಕೀಯ ಭಾಷಣ ಮಾಡಬಹುದೆ? ಎಂದ ಅವರು, ಒಬ್ಬ ಪ್ರಧಾನ ಮಂತ್ರಿಯಾಗಿ ಮೋದಿ ಭಾಷಣದಲ್ಲಿ ಶೂರರು. ಅದರಲ್ಲಿ ಎರಡು ಮಾತಿಲ್ಲ. ಆದರೆ ಅವರು ವಿದ್ಯಾರ್ಥಿಗಳ ಮುಂದೆಯೂ, ಸಾರ್ವಜನಿಕರ ಮುಂದೆಯೂ, ರೈತರ ಬಗ್ಗೆಯೂ ಅದೇ ಭಾಷಣ ಮಾಡಿದರೆ ಅದು ಸಲ್ಲದು ಎಂದಿದ್ದಾರೆ.
ನೀವು ದೇಶದ ಸಮಸ್ಯೆಗಳ ಬಗ್ಗೆ ಮಾತಾಡಬೇಕು. ಆರ್ಥಿಕ ಪರಿಸ್ಥಿತಿ ಏನಾಗಿದೆ, ನೀವು ಕೊಟ್ಟ ಭರವಸೆಗಳು ಏನಾಗಿವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಸೃಷ್ಟಿ ಏನಾಯಿತು, ರೈತರ ಆದಾಯ ದುಪ್ಪಟ್ಟು ಮಾಡುವುದು ಏನಾಯ್ತು? 2020ಕ್ಕೆ ರೈತರ ಆದಾಯ ದುಪ್ಪಟ್ಟು ಆಗಿದೆಯೇ? ಇದಕ್ಕೆ ಉತ್ತರಕೊಡಿ. ರೈತರ ಸಂಕಷ್ಟ ದುಪ್ಪಟ್ಟು ಆಗಿದೆಯೇ ಹೊರತು ಆದಾಯವಲ್ಲ. ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಮುಂದುವರೆದಿದೆ. ರೈತರ ಸಾಲಾಮನ್ನ ಆಗಿಲ್ಲ. ಮಹಾದಾಯಿ ವಿವಾದ ಬಗೆಹರಿದಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ, ಜಾವಡೇಕರ್ ಸಹ ಸುಳ್ಳು ಹೇಳುತ್ತಾರೆ. ಅವರು ಬಾಯಿ ಬಿಟ್ಟರೆ ಬರೀ ಸುಳ್ಳು.. ಮೋದಿಯವರು ಕೊಟ್ಟ 90% ಭರವಸೆಗಳನ್ನು ಈಡೇರಿಸಿಲ್ಲ. ಕರ್ನಾಟಕಕ್ಕೆ ಬಂದಾಗಲೆಲ್ಲ ಸುಳ್ಳು ಹೇಳುತ್ತಾರೆ. ಸುಳ್ಳುಗಳಿಂದ ಸ್ವರ್ಗ ಸೃಷ್ಟಿ ಮಾಡಿಬಿಡುತ್ತಾರೆ. ಆದರೆ ನರೇಂದ್ರ ಮೋದಿಯವರ ಇಂತಹ ಮಾತುಗಲಿಂದ ಜನರ ಹೊಟ್ಟೆತುಂಬುವುದಿಲ್ಲ.. ನಿರುದ್ಯೋಗ ಬಗೆಹರಿಯುವುದಿಲ್ಲ ಅಲ್ಲವೇ ಎಂದಿದ್ದಾರೆ.
ಇಂದು ಜಿಡಿಪಿ ಅತ್ಯಂತ ತಳಮಟ್ಟಕ್ಕೆ ಹೋಗಿಬಿಟ್ಟಿದೆ. ಅವರು 4.5 ಇದೆ ಅನ್ನುತ್ತಿದ್ದಾರೆ. ಆದರೆ ನನ್ನ ಪ್ರಕಾರ ಅದು 2.5 ಅಷ್ಟೇ ಇರುವುದು. ಮನಮೋಹನ್ ಸಿಂಗ್ ಕಾಲದಲ್ಲಿ ಜಿಡಿಪಿ 8-9 ಇತ್ತು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಐದುವರೆ ವರ್ಷಗಳಲ್ಲಿ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿಯತ್ತ ತೆಗೆದುಕೊಂಡು ಹೋಗಿದ್ದಾರೆ. ಜಿಎಸ್‌ಟಿ ಪರಿಹಾರ ಬಂದಿಲ್ಲ. ಕುಡಿಯುವ ನೀರಿನ ಹಣ ಬಂದಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.


