ಉತ್ತರ ಪ್ರದೇಶ ಪೊಲೀಸರು ತಮ್ಮ ವಿರುದ್ಧ ಹೂಡಿರುವ ಆರು ಪ್ರಕರಣಗಳನ್ನು ರದ್ದುಗೊಳಿಸುವಂತೆ ಅಂತಾರಾಷ್ಟ್ರೀಯ ಖ್ಯಾತಿಯ ಫ್ಯಾಕ್ಟ್‌ಚೆಕ್ಕರ್, ಪತ್ರಕರ್ತ ಮೊಹಮ್ಮದ್ ಜುಬೇರ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಜೊತೆಗೆ ಪ್ರಕರಣಗಳ ತನಿಖೆಗೆ ರಚಿಸಿರುವ ವಿಶೇಷ ತನಿಖಾ ತಂಡವನ್ನೂ ರದ್ದುಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಅವರ ವಿರುದ್ಧ ದಾಖಲಾದ ಆರು ಪ್ರಕರಣಗಳ ಪೈಕಿ ಮೂರು ಪ್ರಕರಣಗಳು ಲಖಿಂಪುರ ಖೇರಿ, ಹತ್ರಾಸ್ ಮತ್ತು ಸೀತಾಪುರ್‌ನಲ್ಲಿ ದಾಖಲಾಗಿತ್ತು. ಈ ಪ್ರಕರಣವು ಬಿಜೆಪಿ ಬೆಂಬಲಿತ ಬಲಪಂಥೀಯ ನಾಯಕರನ್ನು “ದ್ವೇಷದ ದೊರೆಗಳು” ಎಂದು ಕರೆದ ಟ್ವೀಟ್‌ನ ವಿರುದ್ಧ ದಾಖಲಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಗಳವಾರದಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ದಾಖಲಾದ ಪ್ರಕರಣದಲ್ಲಿ ಅವರ ಮಧ್ಯಂತರ ಜಾಮೀನನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ಈ ಪ್ರಕರಣದಲ್ಲಿ ಜುಬೇರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಆದರೆ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಅವರ ವಿರುದ್ಧ ದಾಖಲಾಗಿರುವ ಇತರ ಪ್ರಕರಣಗಳಲ್ಲಿ ಅವರಿಗೆ ಜಾಮೀನು ನೀಡಲಾಗಿಲ್ಲ. ಹೀಗಾಗಿ ಅವರು ಇನ್ನೂ ಜೈಲಿನಲ್ಲಿದ್ದಾರೆ. ಈ ನಡುವೆ ಜುಬೇರ್ ಅವರು ತನಗೆ ಜೀವ ಬೆದರಿಕೆ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು.
ಇದನ್ನೂ ಓದಿ: ಜುಬೇರ್ ಪ್ರಕರಣ: ಜಾಮೀನು ನೀಡಲು ನ್ಯಾಯಾಧೀಶರು ಹೆದರುತ್ತಿದ್ದಾರೆ- ಜಸ್ಟೀಸ್ ದೀಪಕ್ ಗುಪ್ತಾ
ಅದೇ ದಿನ, ಉತ್ತರ ಪ್ರದೇಶ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಅವರ ವಿರುದ್ಧದ ಅನೇಕ ಪ್ರಕರಣಗಳನ್ನು ತನಿಖೆ ಮಾಡಿದ್ದಾರೆ. ಶೀಘ್ರ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಿದ್ದಾರೆ.
1983 ರಲ್ಲಿ ಬಿಡುಗಡೆಯಾದ ಜನಪ್ರಿಯ ಹಿಂದಿ ಚಲನಚಿತ್ರದ ಸ್ಕ್ರೀನ್‌ಶಾಟ್ ಅನ್ನು ನಾಲ್ಕು ವರ್ಷಗಳ ಹಿಂದೆ ಜುಬೇರ್ ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮಾಡಿದ್ದಕ್ಕಾಗಿ ಅವರನ್ನು ಜೂನ್ 27 ರಂದು ದೆಹಲಿ ಪೊಲೀಸರು ಬಂಧಿಸಿದ್ದರು.
ಬಿಜೆಪಿಯ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್ ಶರ್ಮಾ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ವೀಡಿಯೊವನ್ನು ಜುಬೇರ್ ವೈರಲ್ ಮಾಡಿದ ನಂತರ ವಿಶ್ವದಾದ್ಯಂತ ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇದು ಆಡಳಿತರೂಢ ಬಿಜೆಪಿಗೆ ತೀವ್ರ ಮುಗರಕ್ಕೀಡು ಮಾಡಿತ್ತು. ಇದಾಗಿ ಕೆಲವೇ ದಿನಗಳ ನಂತರ ಜುಬೇರ್ ಬಂಧನ ನಡೆದಿದೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪತ್ರಕರ್ತ ಜುಬೇರ್ ವಿರುದ್ಧ ತನಿಖೆಗೆ ಎಸ್‌ಐಟಿ ರಚನೆ
ಮಂಗಳವಾರದ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಎಸ್ ಬೋಪಣ್ಣ ಅವರ ಪೀಠವು ಮೊಹಮ್ಮದ್ ಜುಬೇರ್ ಅವರ ಮನವಿಗೆ ಪ್ರತಿಕ್ರಿಯೆ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 7 ರಂದು ನಡೆಯಲಿದೆ.


