ಮಾನ್ಸುನ್ ಅಧಿವೇಶನ ಜುಲೈ 19 ರಿಂದ ಪ್ರಾರಂಭವಾಗಲಿದ್ದು, ಅಧಿವೇಶನದಲ್ಲಿ ಕೊರೊನಾ ಸಂಬಂಧಿತ ಎಲ್ಲಾ ಪ್ರೋಟೋಕಾಲ್‌ಗಳನ್ನು ಅನುಸರಿಸಲಾಗುವುದು ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೋಮವಾರ ತಿಳಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ಲಸಿಕೆ ನೀಡದವರು ಅಧಿವೇಶನದಲ್ಲಿ ಸಂಸತ್ತಿನ ಆವರಣಕ್ಕೆ ಪ್ರವೇಶಿಸುವ ಮೊದಲು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಕೋರಲಾಗುವುದು ಎಂದು ಅವರು ಹೇಳಿದ್ದಾರೆ.
ಸಂಸತ್ತಿನ ಮಾನ್ಸೂನ್ ಅಧಿವೇಶನ ಜುಲೈ 19 ರಿಂದ ಪ್ರಾರಂಭವಾಗಿ ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ.
ಸಂಸತ್ತಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಓಂ ಬಿರ್ಲಾ, 323 ಸಂಸದರು ಕೊರೊನಾ ವೈರಸ್ ವಿರುದ್ಧದ ಲಸಿಕೆಯನ್ನು ಸಂಪೂರ್ಣವಾಗಿ ಪಡೆದಿದ್ದು, 23 ಮಂದಿ ಕೆಲವು ವೈದ್ಯಕೀಯ ಕಾರಣಗಳಿಂದಾಗಿ ತಮ್ಮ ಲಸಿಕೆಯ ಮೊದಲ ಡೋಸ್ ಅನ್ನು ಕೂಡಾ ಪಡೆಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜ.26 ರ ಘಟನೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದರೆ, ವಿಶ್ವಸಂಸ್ಥೆ ಬಳಿ ಹೋಗುವುದಿಲ್ಲ-ರಾಕೇಶ್ ಟಿಕಾಯತ್
ಉಭಯ ಸದನಗಳು ಏಕಕಾಲದಲ್ಲಿ ನಡೆಯಲಿದ್ದು, ಬೆಳಿಗ್ಗೆ 11 ರಿಂದ ಅಧಿವೇಶನ ಆರಂಭವಾಗಲಿದೆ ಎಂದು ಓಂ ಬಿರ್ಲಾ ತಿಳಿಸಿದ್ದಾರೆ.
ಈ ಮಧ್ಯೆ, ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ, 200 ಮಂದಿ ರೈತರು ಜುಲೈ 22 ರಿಂದ ಸಂಸತ್ ಭವನದ ಬಳಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಶನಿವಾರ ಹೇಳಿದ್ದರು.
“ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನುಗಳ ಕುರಿತು ಚರ್ಚೆ ನಡೆಸಲು ಬಯಸಿದರೆ, ನಾವು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ಮಾತುಕತೆ ನಡೆಯದಿದ್ದರೆ, ರೈತರ ಪರವಾಗಿ ನಿರ್ಧಾರ ಬರದಿದ್ದರೆ, ಜುಲೈ 22 ರಿಂದ 200 ಮಂದಿ ರೈತರು ಸಂಸತ್ತಿನ ಬಳಿ ಪ್ರತಿಭಟನೆ ನಡೆಸುತ್ತಾರೆ” ಎಂದು ಟಿಕಾಯತ್ ಹೇಳಿದ್ದರು.
ಇದನ್ನೂ ಓದಿ: ರಾಜಕೀಯಕ್ಕೆ ಬರುವುದಿಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್!: ಆರ್‌ಎಂಎಂ ವಿಸರ್ಜನೆ
“ಕೃಷಿ ಕಾನೂನುಗಳನ್ನು ಹಿಂಪಡೆಯದ ಸರ್ಕಾರ, ರೈತ ಪ್ರತಿಭಟನೆಯನ್ನು ಕೊನೆಗೊಳಿಸಲು ಹೇಳುತ್ತಿದ್ದಾರೆ. ರೈತರು 8 ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿರುವುದು ಸರ್ಕಾರದ ಆದೇಶಗಳನ್ನು ಪಾಲಿಸಲು ಅಲ್ಲ. ಸರ್ಕಾರ ಮಾತನಾಡಲು ಬಯಸಿದರೆ, ರೈತರ ಜೊತೆಗೆ ಮಾತನಾಡಬಹುದು, ಆದರೆ ಯಾವುದೇ ಷರತ್ತು ವಿಧಿಸಬಾರದು” ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಕಳೆದ ವರ್ಷ ನವೆಂಬರ್‌ನಿಂದ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘಟನೆಗಳ ಮುಖಂಡರು ಮತ್ತು ಸರ್ಕಾರದ ನಡುವೆ ಹತ್ತಕ್ಕೂ ಹೆಚ್ಚು ಸುತ್ತಿನ ಚರ್ಚೆಗಳು ನಡೆದಿವೆ, ಆದರೆ ಇಲ್ಲಿಯವರೆಗೂ ಸರ್ಕಾರದ ಯಾವುದೇ ಷರತ್ತುಗಳಿಗೂ ರೈತರು ಒಪ್ಪಿಲ್ಲ.
ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಸಂಸತ್ತಿನ ಮೂರು ಅಧಿವೇಶನಗಳನ್ನು ಮೊಟಕುಗೊಳಿಸಲಾಗಿದ್ದು, ಕಳೆದ ವರ್ಷ ಚಳಿಗಾಲದ ಅಧಿವೇಶನವನ್ನು ರದ್ದುಗೊಳಿಸಲಾಯಿತು. ಸಾಮಾನ್ಯವಾಗಿ ಜುಲೈನಲ್ಲಿ ಪ್ರಾರಂಭವಾಗುವ ಮಾನ್ಸೂನ್ ಅಧಿವೇಶನವು ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಿತ್ತು.
ಇದನ್ನೂ ಓದಿ: ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದು ಕೂಡಾ ‘ಜಿಹಾದ್’ – ಅಸ್ಸಾಂ ಸಿಎಂ


