“ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಚುನಾವಣೆಯಲ್ಲಿ ನನ್ನ ವಿರುದ್ಧ ಸ್ಪರ್ಧಿಸಲಿ” ಎಂದು ಅಮರಾವತಿ ಸಂಸದೆ ನವನೀತ್ ರಾಣಾ ಸವಾಲು ಹಾಕಿದ್ದಾರೆ. ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಲಾರ್ಡ್ ರಾಮ ಮತ್ತು ಮುಂಬೈನ ಜನರು ಶಿವಸೇನೆಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸವಾದ ‘ಮಾತೋಶ್ರೀ’ ಹೊರಗೆ ತಮ್ಮ ಬೆಂಬಲಿಗರೊಂದಿಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನವನೀತ್ ರಾಣಾ ಮತ್ತು ಅವರ ಪತಿ ಶಾಸಕ ರವಿ ರಾಣಾ ಅವರಿಗೆ ಮೇ 4ರಂದು ಬುಧವಾರ ಜಾಮೀನು ದೊರೆತಿದೆ.
ಶಿವಸೇನೆಯ ಅಧ್ಯಕ್ಷರೂ ಆಗಿರುವ ಠಾಕ್ರೆ ಅವರು ನವೆಂಬರ್ 2019ರಲ್ಲಿ ಸಿಎಂ ಆದರು. ಅವರು ಮೇ 2020ರಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾನುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನವನೀತ್ ರಾಣಾ, “ಉದ್ಧವ್ ಠಾಕ್ರೆ ಅವರು ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಜನರಿಂದ ನೇರವಾಗಿ ಗೆದ್ದು ಬರಲಿ ಎಂದು ನಾನು ಸವಾಲು ಹಾಕುತ್ತೇನೆ. ನಾನು ಅವರ ವಿರುದ್ಧ ಹೋರಾಡುತ್ತೇನೆ” ಎಂದಿದ್ದಾರೆ.
“ನಾನು ಪ್ರಾಮಾಣಿಕತೆಯಿಂದ ಕಠಿಣ ಪರಿಶ್ರಮದಿಂದ ಚುನಾವಣೆಯಲ್ಲಿ ಗೆಲ್ಲುತ್ತೇನೆ, ಅವರಿಗೆ (ಸಿಎಂ) ಜನ ಶಕ್ತಿ ತಿಳಿಯಲಿದೆ” ಎಂದು ತಿಳಿಸಿದ್ದಾರೆ.
“ನಾನು 14 ದಿನ ಜೈಲಿನಲ್ಲಿದ್ದ ಅಪರಾಧವೇನು? ನೀವು ನನ್ನನ್ನು 14 ವರ್ಷಗಳ ಕಾಲ ಜೈಲಿನಲ್ಲಿ ಇಡಬಹುದು, ಆದರೆ ನಾನು ಭಗವಾನ್ ರಾಮ ಮತ್ತು ಹನುಮಂತನ ನಾಮಗಳನ್ನು ಜಪಿಸುವುದನ್ನು ನಿಲ್ಲಿಸುವುದಿಲ್ಲ” ಎಂದಿದ್ದಾರೆ ನವನೀತ್.
ಮುಂಬೈನಲ್ಲಿ ಪ್ರಚಾರ ಮಾಡುತ್ತೇನೆ. ಶಿವಸೇನೆಯ ಭ್ರಷ್ಟ ಆಡಳಿತವನ್ನು ಕೊನೆಗೊಳಿಸಲು ರಾಮಭಕ್ತರನ್ನು ಬೆಂಬಲಿಸುತ್ತೇನೆ ಎಂದು ನವನೀತ್ ಹೇಳಿದ್ದಾರೆ. ರಾಜ್ಯದಲ್ಲಿ ಶಿವಸೇನೆಯು ಕಾಂಗ್ರೆಸ್ ಹಾಗೂ ಎನ್‌ಸಿಪಿ ಜೊತೆ ಅಧಿಕಾರವನ್ನು ಹಂಚಿಕೊಂಡಿದೆ. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಕೂಡ ಶಿವಸೇನೆಯ ಹಿಡಿತದಲ್ಲಿದೆ.
ಸಿಎಂ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಚುನಾವಣಾ ಕಣಕ್ಕೆ ಇಳಿದ್ದರು. ಆ ಮೂಲಕ ಠಾಕ್ರೆ ಕುಟುಂಬದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ ಮೊದಲಿಗರೆಂದು ಗುರುತಿಸಿಕೊಂಡರು. ಆದಿತ್ಯ ಠಾಕ್ರೆ ಅವರು 2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದರು.
ಇದನ್ನೂ ಓದಿರಿ: ಸಿದ್ದಾಪುರ: ಸಂವಿಧಾನಕ್ಕಿಂತ ವೇದಗಳೇ ಶ್ರೇಷ್ಠ ಎಂದ ಸ್ವಾಮೀಜಿಯನ್ನು ಟೀಕಿಸಿದ್ದಕ್ಕೆ ಎಫ್‌ಐಆರ್!
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರ ಖಾಸಗಿ ನಿವಾಸ ‘ಮಾತೋಶ್ರೀ’ ಹೊರಗೆ ತಮ್ಮ ಬೆಂಬಲಿಗರೊಂದಿಗೆ ಹನುಮಾನ್ ಚಾಲೀಸಾ ಪಠಣ ಮಾಡಲು ಯತ್ನಿಸಿದ ನಂತರ ರಾಣಾ ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
“ತಲಾ ರೂ 50,000 ಜಾಮೀನು ಬಾಂಡ್ ಅನ್ನು ಒದಗಿಸಿದ ನಂತರ ಜಾಮೀನು ನೀಡಲಾಯಿತು. ಈ ಅಪರಾಧವನ್ನು ಮತ್ತೆ ಮಾಡದಂತೆ ರಾಣಾ ದಂಪತಿಗೆ ಆದೇಶಿಸಲಾಗಿದೆ” ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ರಾಣಾರನ್ನು ಏಪ್ರಿಲ್ 23 ರಂದು ಬಂಧಿಸಲಾಯಿತು. ಹನುಮಾನ್ ಚಾಲೀಸಾ ಪಠಿಸುವ ಕಾರ್ಯಕ್ರಮ ಘೋಷಿಸಿದ ನಂತರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಅಪರಾಧ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.



ಈಯಮ್ಮಂಗೆ ಇಷ್ಟೊಂದು ಅಹಂಕಾರ ಒಳ್ಳೆಯದಲ್ಲಾ…..