ಸ್ಯಾಂಡಲ್‌ವುಡ್ ನಟ ದರ್ಶನ್ ಅವರನ್ನು ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿದೆ. ಪ್ರಸ್ತುತ ದರ್ಶನ್, ಅವರ ಆಪ್ತೆ ಪೌವಿತ್ರಾ ಗೌಡ ಸೇರಿದಂತೆ ಪ್ರಕರಣದ 13 ಆರೋಪಿಗಳನ್ನು ನ್ಯಾಯಾಲಯ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಪೌವಿತ್ರಾ ಗೌಡಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದಕ್ಕೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಎಂಬಾತನಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಆರೋಪ ದರ್ಶನ್ ಮತ್ತು ಇತರರ ಮೇಲಿದೆ.
ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾಗಿದೆ ಎಂಬ ವಿಷಯ ಹೊರ ಬೀಳುತ್ತಿದ್ದಂತೆ ರಾಜ್ಯಾಧ್ಯಂತ ದರ್ಶನ್ ವಿರುದ್ದ ದೊಡ್ಡ ಮಟ್ಟದಲ್ಲಿ ಜನಾಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರದುರ್ಗ, ಮಂಡ್ಯ ಸೇರಿದಂತೆ ಕೆಲವೆಡೆ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಕಾನೂನು ಕ್ರಮ ಒಂದೆಡೆಯಾದರೆ, ದರ್ಶನ್ ಅವರನ್ನು ಕನ್ನಡ ಚಿತ್ರ ರಂಗದಿಂದ ಹೊರ ಹಾಕಬೇಕು ಎಂಬ ಆಗ್ರಹಗಳು ಎಲ್ಲೆಡೆ ವ್ಯಕ್ತವಾಗುತ್ತಿದೆ.
ಆದರೆ, ಈ ಕುರಿತು ಪ್ರತಿಕ್ರಿಯಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ” ನಮಗೂ ಕೆಲವು ದೂರುಗಳು ಬಂದಿವೆ. ಅದಕ್ಕಾಗಿ ಕಲಾವಿದರ ಸಂಘ ಇದೆ. ಚಲನಚಿತ್ರ ವಾಣಿಜ್ಯ ಮಂಡಳಿ ಇರುವುದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರಿಗಾಗಿ ಮಾತ್ರ. ಅದಾಗ್ಯೂ ನಾವು ಈ ಬಗ್ಗೆ ಪ್ರತಿಕ್ರಿಯಿಸಲು ಪ್ರಯತ್ನಿಸಿದ್ದೇವೆ. ನಾವು ಕಲಾವಿದರ ಸಂಘದೊಂದಿಗೆ ಮಾತನಾಡಿದ್ದೇವೆ. ಚರ್ಚೆಗೆ ನಾನು ಸಭೆ ಕರೆಯುತ್ತೇನೆ. ಪೊಲೀಸ್ ತನಿಖೆ ಮುಗಿದು. ಅವರು ಚಾರ್ಜ್ ಶೀಟ್ ಸಲ್ಲಿಸುವವರೆಗೂ ಆರೋಪಿಗಳು ಅಪರಾಧಿಯಾಗುವುದಿಲ್ಲ. ಪೊಲೀಸ್ ಕಾನೂನು ಕ್ರಮ ಮುಗಿದ ನಂತರ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ” ಎಂದಿದ್ದಾರೆ.
ನಿಕಿತಾರನ್ನು ಮೂರು ವರ್ಷ ಬ್ಯಾನ್ ಮಾಡಲಾಗಿತ್ತು
ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ನಡುವೆ ವಿವಾದ ಸೃಷ್ಟಿಸಿದ ಆರೋಪದ ಮೇಲೆ ನಟಿ ನಿಕಿತಾ ತುಕ್ರಾಲ್ ಅವರ ಮೇಲೆ 2011ರಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ಮೂರು ವರ್ಷಗಳ ಕಾಲ ನಿಷೇಧ ಹೇರಿತ್ತು. ಬಳಿಕ ವಾಪಸ್ ಪಡೆದಿತ್ತು.
ಅಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂಘದ ಕಾರ್ಯದರ್ಶಿ ಸೂರಪ್ಪ ಬಾಬು, ಕನ್ನಡ ಚಿತ್ರರಂಗ ಮತ್ತು ವಿಜಯಲಕ್ಷ್ಮಿ ಅವರ ಹಿತದೃಷ್ಟಿಯಿಂದ ಹಾಗೂ ಮಾನವೀಯ ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

“ವಿಜಯಲಕ್ಷ್ಮಿಗೆ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ನಿಕಿತಾ ಪಾತ್ರದ ಬಗ್ಗೆ ಎಲ್ಲರಿಗೂ ತಿಳಿದಿದೆ. ಹೀರೋಗಳು ಮತ್ತು ಅವರ ಪತ್ನಿಯರ ನಡುವೆ ಸಮಸ್ಯೆ ಸೃಷ್ಟಿಸುವ ನಾಯಕಿಯರು ನಮಗೆ ಬೇಡ” ಎಂದು ಸೂರಪ್ಪ ಬಾಬು ಹೇಳಿದ್ದರು. ನಿಕಿತಾಗೆ ಮೂರು ವರ್ಷಗಳ ಕಾಲ ಯಾವುದೇ ಕನ್ನಡ ಚಿತ್ರದಲ್ಲಿ ನಟಿಸಲು ಅವಕಾಶ ನೀಡುವುದಿಲ್ಲ ಎಂದು ಆಗ ಹೇಳಲಾಗಿತ್ತು. ಈ ಕ್ರಮ ಕೈಗೊಳ್ಳುವ ವೇಳೆ ದರ್ಶನ್ ಅಭಿನಯದ ‘ಸಂಗೊಳ್ಳಿ ರಾಯಣ್ಣ’ ಚಿತ್ರಕ್ಕೆ ನಾಯಕಿಯಾಗಿ ನಿಕಿತಾ ನಟಿಸುತ್ತಿದ್ದರು. ಈ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು.
ಯಾವ ಜಾರ್ಜ್ ಶೀಟ್ ಮೇಲೆ ನಿಕಿತಾರನ್ನು ಬ್ಯಾನ್ ಮಾಡಿದ್ರಿ?
“ದರ್ಶನ್ ಮೇಲೆ ಆರೋಪ ಕೇಳಿ ಬಂದಿದೆ. ಪೊಲೀಸ್ ತನಿಖೆ ಮುಗಿದು, ಅವರು ಚಾರ್ಜ್ ಶೀಟ್ ಸಲ್ಲಿಸುವವರೆಗೂ ಆರೋಪಿಗಳು ಅಪರಾಧಿಯಾಗುವುದಿಲ್ಲ. ಪೊಲೀಸ್ ಕಾನೂನು ಕ್ರಮ ಮುಗಿದ ನಂತರ ನಾವು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಹೇಳಿದ್ದಾರೆ. ಹಾಗಾದರೆ, ನಿಕಿತಾ ಅವರನ್ನು ಯಾವ ಚಾರ್ಜ್ ಶೀಟ್ ಮೇಲೆ ಬ್ಯಾನ್ ಮಾಡಿದ್ದರು? ಎಂದು ಜನರು ಪ್ರಶ್ನೆ ಮಾಡಿದ್ದಾರೆ.

ದರ್ಶನ್ ವಿರುದ್ದ ಗಂಭೀರ ಕೊಲೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಿದ್ದಾರೆ. ಆದರೆ, ನಿಕಿತಾ ವಿರುದ್ದ ಯಾವುದೇ ಕ್ರಿಮಿನ್ ಪ್ರಕರಣ ದಾಖಲಾಗಿರಲಿಲ್ಲ. ಆದರೂ, ಇದೇ ದರ್ಶನ್ ವಿಚಾರದಲ್ಲಿ ನಿಕಿತಾರನ್ನು ಬ್ಯಾನ್ ಮಾಡಿದ್ದು ಹೇಗೆ? ಎಂಬ ಪ್ರಶ್ನೆಗಳು ವ್ಯಕ್ತವಾಗಿದೆ.
ದರ್ಶನ್ ಪ್ರಭಾವಿ ಎಂದು ವಿನಾಯಿತಿ?
ನಟಿ ನಿಕಿತಾಗೆ ಹೋಲಿಸಿದ್ರೆ ದರ್ಶನ್ ಪ್ರಭಾವಿ ವ್ಯಕ್ತಿ. ಕನ್ನಡ ಚಿತ್ರ ರಂಗದ ಪ್ರಮುಖ ನಟನಾಗಿರುವ ದರ್ಶನ್ ಭಾರೀ ಅಭಿಮಾನಿಗಳನ್ನೂ ಹೊಂದಿದ್ದಾರೆ. ಅವರಿಗೆ ವಿವಿಧ ಪಕ್ಷಗಳ ರಾಜಕೀಯ ನಾಯಕರ ಸಂಪರ್ಕವೂ ಇದೆ. ಈ ಎಲ್ಲಾ ಕಾರಣಕ್ಕೆ ಅವರ ವಿರುದ್ದ ಕ್ರಮ ಕೈಗೊಳ್ಳಲು ಮಿನಾಮೇಷ ಎನಿಸಲಾಗುತ್ತಿದ್ದೆಯಾ? ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ : ಅಗತ್ಯ ಬಿದ್ದರೆ ಬಿ.ಎಸ್.ಯಡಿಯೂರಪ್ಪ ಬಂಧನ: ಡಾ.ಜಿ.ಪರಮೇಶ್ವರ್


