ಜಮ್ಮು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಹೇಮಂತ್ ಕುಮಾರ್ ಲೋಹಿಯಾ ಅವರನ್ನು ಸ್ನೇಹಿತರ ಮನೆಯಲ್ಲಿ ಕೊಲೆಗೈಯಲಾಗಿದೆ. ಅವರ ಕುತ್ತಿಗೆ ಸೀಳಿ, ದೇಹಕ್ಕೆ ಬೆಂಕಿ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಜಮ್ಮು ಕಾಶ್ಮೀರದ ಕಾರಾಗೃಹಗಳ ಉಸ್ತುವಾರಿ ಅಧಿಕಾರಿಯಾಗಿದ್ದ ಅವರು ತಮ್ಮ ಮನೆಯನ್ನು ರಿಪೇರಿ ಮಾಡಿಸುತ್ತಿದ್ದ ಕಾರಣ ಜಮ್ಮು ಹೊರವಲಯದ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರ ಸಹಾಯಕ ಕೊಲೆಗೈದಿರಬಹುದು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಇಂದಿನಿಂದ ಮೂರು ದಿನಗಳ ಕಾಲ ಜಮ್ಮು ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾರವರೆ ಕೊಲೆಯ ಹೊಣೆ ಹೊರಬೇಕೆಂದು ಪೀಪಲ್ಸ್ ಆಂಟಿ ಫ್ಯಾಸಿಸ್ಟ್ ಫ್ರಂಟ್ ಎಂಬ ತೀವ್ರವಾದಿ ಸಂಘಟನೆ ಹೇಳಿಕೆ ನೀಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ರಾಥಮಿಕ ವಿಚಾರಣೆ ಮತ್ತು ಸಿಸಿಟಿವಿ ದಾಖಲೆಗಳ ಪ್ರಕಾರ 57 ವರ್ಷದ ಪೊಲೀಸ್ ಅಧಿಕಾರಿಯ ಸಹಾಯಕನಾಗಿದ್ದ 23 ವರ್ಷದ ಯಾಸಿರ್ ಅಹಮದ್ ಕಣ್ಮರೆಯಾಗಿದ್ದು, ಆತನೆ ಕೊಲೆಗೈದಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಕೊಲೆ ಹಿಂದೆ ಭಯೋತ್ಪಾದನಾ ನಂಟನ್ನು ತಳ್ಳಿ ಹಾಕಿದ್ದಾರೆ.
ಘಟನಾ ಸ್ಥಳದಲ್ಲಿ ಹೊಡೆದ ಕೆಚಪ್ ಬಾಟೆಲ್ ಪತ್ತೆಯಾಗಿದ್ದು, ಅದರಿಂದ ಕತ್ತು ಸೀಳಿರಬೇಕೆಂದು ಪೊಲೀಸರು ಊಹಿಸಿದ್ದಾರೆ. ಅಲ್ಲದೆ ಯಾಸಿರ್ ಅಹಮದ್‌ನ ಡೈರಿಯೊಂದು ದೊರಕಿದ್ದು ಆತ ತೀವ್ರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಮುಖೇಶ್ ಸಿಂಗ್ ಎಂಬುವವರು ಮಾತನಾಡಿ, “ಲೋಹಿಯಾರವರ ಕಾಲಿಗೆ ಎಣ್ಣೆ ಹಚ್ಚುವಾಗ ಅವರ ಮೇಲೆ ದಾಳಿ ನಡೆದಿದೆ. ಕೆಚಪ್ ಬಾಟೆಲ್‌ನಿಂದ ಕತ್ತು ಸೀಳಿ ನಂತರ ಬೆಂಕಿ ಹಚ್ಚಲಾಗಿದೆ. ಲೋಹಿಯಾ ಇದ್ದ ಕೊಠಡಿಯು ಒಳಗಿನಿಂದ ಚಿಲಕ ಹಾಕಲಾಗಿತ್ತು. ಬೆಂಕಿ ಕಾಣಿಸಿಕೊಂಡ ನಂತರ ರಕ್ಷಣಾ ಸಿಬ್ಬಂದಿ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ” ಎಂದು ತಿಳಿಸಿದ್ದಾರೆ.
ಯಾಸಿರ್ ಅಹಮದ್ ಆರು ತಿಂಗಳಿನಿಂದ ಲೋಹಿಯಾರವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ. ಆತನು ಓಡಿ ಹೋಗಿರುವುದು ಸಿಸಿಟಿವಿ ಯಲ್ಲಿ ದಾಖಲಾಗಿದೆ. ಆತನ ಬಂಧನಕ್ಕಾಗಿ ಫೋಟೊವನ್ನು ಎಲ್ಲಾ ಕಡೆ ಕಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಶಪಡಿಸಿಕೊಂಡಿರುವ ಡೈರಿಯಲ್ಲಿ “ಆತ್ಮೀಯ ಸಾವೆ ನನ್ನ ಜೀವನದಲ್ಲಿಯೂ ಬಾ, ದಯವಿಟ್ಟು ಕ್ಷಮಿಸಿ, ಇದು ನನ್ನ ಕೆಟ್ಟ ದಿನ, ತಿಂಗಳು, ವರ್ಷ. ನನ್ನ ಜೀವನವನ್ನು ನಾನು ದ್ವೇಷಿಸುತ್ತೇನೆ. ನನ್ನ ಜೀವನ 1%, ಪ್ರೀತಿ 0%, ಒತ್ತಡ 90%, ದುಃಖ 99%, ನಾಟಕೀಯ ನಗು 100%” ಎಂದೆಲ್ಲ ಬರೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: FLASHBACK| ಪರೇಶ್ ಮೇಸ್ತಾ ಸಾವಾದಾಗ ಬಿಜೆಪಿ ನಾಯಕರು ವರ್ತಿಸಿದ್ದು ಹೀಗೆ…


