ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ-ಹತ್ಯೆಗೀಡಾದ ಟ್ರೈನಿ ವೈದ್ಯೆಯ ತಂದೆಯು ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, “ತನ್ನ ಮಗಳನ್ನು ಬೇರೆ ಯಾವುದೋ ಕೋಣೆಯಲ್ಲಿ ಕೊಂದ ನಂತರ ಆಕೆಯ ಶವವನ್ನು ಸೆಮಿನಾರ್ ಹಾಲ್‌ಗೆ ತರಲಾಗಿದೆ” ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯ ತುರ್ತು ಕಟ್ಟಡದಲ್ಲಿರುವ ಎದೆಗೂಡಿನ ವಿಭಾಗದ ಮೂರನೇ ಮಹಡಿಯ ಸೆಮಿನಾರ್ ಹಾಲ್ ನವೀಕರಣದ ನೆಪದಲ್ಲಿ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂಬ ಆರೋಪದ ನಡುವೆ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಂತ್ರಸ್ತೆಯ ತಂದೆ, “ನಾವು ಪೊಲೀಸರಿಂದ ಲೋಪವನ್ನು ಕಂಡು ಸಿಬಿಐಗೆ ತಿಳಿಸಿದ್ದೇವೆ. ಈಗ ಆಕೆಯನ್ನು ಸೆಮಿನಾರ್ ಹಾಲ್‌ನಲ್ಲಿ ಕೊಲೆ ಮಾಡಲಾಗಿದೆಯೇ ಎಂದು ನಮಗೆ ಅನುಮಾನವಿದೆ. ಅವಳನ್ನು ಬೇರೆಡೆ ಕೊಲ್ಲಲಾಗಿದೆ” ಎಂದು ಹೇಳಿದರು.
ಆಗಸ್ಟ್ 9 ರಂದು ದೇಹದ ಮೇಲೆ ಅನೇಕ ಗಾಯಗಳೊಂದಿಗೆ ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾದ 31 ವರ್ಷದ ವೈದ್ಯೆಯ ತಂದೆ, ಸಿಬಿಐ ತನಿಖೆಯಲ್ಲಿ ನನಗೆ ನಂಬಿಕೆಯಿದೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.
ಆಸ್ಪತ್ರೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರುತ್ತೇನೆ, ತನಿಖಾ ತಂಡದ ಮೇಲೆ ನಮಗೆ ನಂಬಿಕೆ ಇದೆ. ನನ್ನ ಒಬ್ಬ ಹೆಣ್ಣು ಮಗಳು ಕಳೆದು ಹೋಗಿದ್ದಾಳೆ. ಆದರೆ, ನನ್ನ ಸಾವಿರಾರು ಕೋಟಿ ಗಂಡು-ಹೆಣ್ಣು ಮಕ್ಕಳು ಬೀದಿಗಿಳಿದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಬಾಂಗಾಳದಿಂದ ಇಡೀ ಜಗತ್ತಿಗೆ ಈ ಬಗ್ಗೆ ಚಳುವಳಿ ನಡೆಯುತ್ತಿದೆ, ನಮಗೆ ನ್ಯಾಯ ಬೇಕು” ಎಂದು ಸಂತ್ರಸ್ತೆಯ ತಂದೆ ಆಗ್ರಹಿಸಿದರು.
ಶುಕ್ರವಾರ, ಕಲ್ಕತ್ತಾ ಹೈಕೋರ್ಟ್ ಕೂಡ ಅಪರಾಧದ ಸ್ಥಳದ ಬಳಿ ನವೀಕರಣ ಕಾರ್ಯದ “ತುರ್ತು” ಬಗ್ಗೆ ಬಂಗಾಳ ಸರ್ಕಾರವನ್ನು ಪ್ರಶ್ನಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯ ಸರ್ಕಾರ, “ಆರೋಪ ಸರಿಯಲ್ಲ, ವೈದ್ಯರಿಗೆ ವಿಶ್ರಾಂತಿ ಕೊಠಡಿ ನಿರ್ಮಿಸಲು ನವೀಕರಣ ಮಾಡಲಾಗುತ್ತಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದೆ.
ಬುಧವಾರ ರಾತ್ರಿ ಹಿಂಸಾತ್ಮಕ ಜನಸಮೂಹವು ಆಸ್ಪತ್ರೆ ಆವರಣಕ್ಕೆ ನುಗ್ಗಿ ಮುಖ್ಯ ಕಟ್ಟಡದ ತುರ್ತು ಚಿಕಿತ್ಸಾ ವಿಭಾಗ, ಮೊದಲ ಮಹಡಿಯಲ್ಲಿನ ವಾರ್ಡ್ ಮತ್ತು ಎರಡನೇ ಮಹಡಿಯಲ್ಲಿ ಇಎನ್‌ಟಿ ವಿಭಾಗವನ್ನು ಧ್ವಂಸಗೊಳಿಸಿದ ನಂತರ ಅಪರಾಧದ ಸ್ಥಳವನ್ನು ನಾಶಪಡಿಸುವ ಪ್ರಯತ್ನ ನಡೆದಿದೆ ಎಂಬ ಆರೋಪಗಳಿಗೆ ಪುಷ್ಠಿ ಸಿಕ್ಕಿತು
ಆಸ್ಪತ್ರೆಯ ಹಲವಾರು ಇಂಟರ್ನ್‌ಗಳು ಮತ್ತು ವೈದ್ಯರು ಅಪರಾಧದಲ್ಲಿ ಭಾಗಿಯಾಗಿರಬಹುದು ಎಂದು ವೈದ್ಯರ ಪೋಷಕರು ಸಿಬಿಐಗೆ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
“ತಮ್ಮ ಮಗಳ ಕೊಲೆಯ ಹಿಂದೆ ಅನೇಕ ವ್ಯಕ್ತಿಗಳ ಕೈವಾಡವಿದೆ ಎಂದು ಅವರು ಶಂಕಿಸಿದ್ದಾರೆ ಎಂದು ಪೋಷಕರು ನಮಗೆ ತಿಳಿಸಿದ್ದಾರೆ. ಅವರು ಆಸ್ಪತ್ರೆಯಲ್ಲಿ ಅವಳೊಂದಿಗೆ ಕೆಲಸ ಮಾಡಿದ ಕೆಲವು ಇಂಟರ್ನ್‌ಗಳು ಮತ್ತು ವೈದ್ಯರ ಹೆಸರನ್ನು ನೀಡಿದ್ದಾರೆ” ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ; ಕೋಲ್ಕತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ: 5 ಪ್ರಮುಖ ಬೇಡಿಕೆಗಳನ್ನಿಟ್ಟು ರಾಷ್ಟ್ರವ್ಯಾಪಿ ಮುಷ್ಕರ ಆರಂಭಿಸಿದ ವೈದ್ಯರು


