ಉತ್ತರ ಪ್ರದೇಶದ ಆಗ್ರಾದ 57 ವರ್ಷದ ಮುಸ್ಲಿಂ ಟ್ಯಾಕ್ಸಿ ಚಾಲಕನೊಬ್ಬ ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದ್ದಕ್ಕಾಗಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಒಂದು ವಾರದ ನಂತರ, ಪ್ರಮುಖ ಆರೋಪಿ ರೋಹಿತ್ ಠಾಕೂರ್ನನ್ನು ಬಂಧಿಸಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಮುಸ್ಲಿಮರ ಮೇಲೆ ನಿರಂತರ ಕಿರುಕುಳ ನಡೆಯುತ್ತಿರುವ ನಡುವೆಯೇ ಈ ಘಟನೆ ನಡೆದಿದೆ. ಮುಸ್ಲಿಂ ಸಮುದಾಯದ ಸದಸ್ಯರನ್ನು ಬೆನ್ನಟ್ಟಿ ಜೈ ಶ್ರೀರಾಮ್ ಎಂದು ಕೂಗುವಂತೆ ಒತ್ತಾಯಿಸಲಾಗುತ್ತಿದೆ.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ, ಬಿಜೆಪಿ ಕಾರ್ಯಕರ್ತ ಎನ್ನಲಾದ ಆರೋಪಿ ಠಾಕೂರ್, ಡ್ರೈವರ್ ರಹೀಶ್ ಖಾನ್ ಎಂಬ ವೃದ್ಧ ವ್ಯಕ್ತಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ. ಕ್ಯಾಬ್ ಚಾಲಕ ದುಃಖ ವ್ಯಕ್ತಪಡಿಸಿ, “ನಿಮ್ಮ ಕೆಲಸ ನೋಡಿಕೊಳ್ಳಿ” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಠಾಕೂರ್, “ಎರಡು ಅಥವಾ ಮೂರು ದಿನಗಳಲ್ಲಿ, ನೀವು ಜೈ ಶ್ರೀರಾಮ್ ಎಂದು ಹೇಳಬೇಕಾಗುತ್ತದೆ” ಎಂದು ಹೇಳಿದ್ದಾನೆ.
ಠಾಕೂರ್ ತನ್ನ ಫೇಸ್ಬುಕ್ ಪುಟದಲ್ಲಿ, “ಇವರು ನಿಜವಾದ ಭಯೋತ್ಪಾದಕರು” ಎಂಬ ಶೀರ್ಷಿಕೆಯೊಂದಿಗೆ ಆತನೇ ವೀಡಿಯೊ ಅಪ್ಲೋಡ್ ಮಾಡಿದ್ದಾನೆ.
ವರದಿಗಳ ಪ್ರಕಾರ, ಮತ್ತೊಬ್ಬ ವ್ಯಕ್ತಿಯೊಂದಿಗೆ ಬಂದ ಠಾಕೂರ್ ಮುಸ್ಲಿಂ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ. “… ನಾನು ಜೈ ಶ್ರೀರಾಮ್ ಎಂದು ಹೇಳಲು ನಿರಾಕರಿಸಿದಾಗ, ಅವರು ನನ್ನ ಗಡ್ಡವನ್ನು ಎಳೆದು ನನ್ನ ಕೆನ್ನೆಗೆ ಹೊಡೆದರು” ಎಂದು ಅವರು ಹೇಳಿದರು.
ಈ ಮಧ್ಯೆ, 38 ವರ್ಷಗಳಿಂದ ಕ್ಯಾಬ್ ಚಾಲಕರಾಗಿರುವ ಖಾನ್ ಒಂದು ತಿಂಗಳ ಹಿಂದೆ ಸಾಲದ ಮೇಲೆ ಸ್ವಂತ ಕಾರು ಖರೀದಿಸಿದ್ದರು ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. ಘಟನೆಯ ದಿನ, ಅವರು ಆಗ್ರಾ ಕ್ಯಾಂಟ್ ರೈಲ್ವೆ ನಿಲ್ದಾಣದಿಂದ ತಾಜ್ ಮಹಲ್ ಮೆಟ್ರೋ ಪಾರ್ಕಿಂಗ್ಗೆ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದರು. ಅವರು ಕಾರನ್ನು ನಿಲ್ಲಿಸುತ್ತಿದ್ದಾಗ, ಠಾಕೂರ್ ಮತ್ತು ಅವರ ಸಹಚರರು ಅವರ ಬಳಿಗೆ ಬಂದು ಕಿರುಕುಳ ನೀಡಿದ್ದಾರೆ.
ಉತ್ತರ ಪ್ರದೇಶದ ಪತ್ರಕರ್ತ ಮದನ್ ಮೋಹನ್ ಸೋನಿ ಪ್ರಕಾರ, ಡಿಸೆಂಬರ್ 2 ರಂದು ಠಾಕೂರ್ ಅವರನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಠಾಕೂರ್ ಅವರ ಫೇಸ್ಬುಕ್ ಪುಟದಲ್ಲಿ, ಅವರು ಬಿಜೆಪಿ ಮತ್ತು ನರೇಂದ್ರ ಮೋದಿಗೆ ತಮ್ಮ ಬೆಂಬಲವನ್ನು ಬಹಿರಂಗವಾಗಿ ತೋರಿಸಿದ್ದಾರೆ. ಘಟನೆಯ ಸ್ವಲ್ಪ ಸಮಯದ ನಂತರ ಅವರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಕೆಂಪು ಕೋಟೆಯಲ್ಲಿ ಮುಸ್ಲಿಂ ಸಂದರ್ಶಕರನ್ನು ಚಿತ್ರೀಕರಿಸುವಾಗ, ಠಾಕೂರ್ ಇಸ್ಲಾಮೋಫೋಬಿಕ್ ನಿಂದನೆ ಬಳಸುವುದು ಸೆರೆಯಾಗಿದೆ. ಒಂದು ಹಂತದಲ್ಲಿ, ಅವರು ಒಬ್ಬ ವ್ಯಕ್ತಿಯನ್ನು ನಿಲ್ಲಿಸಿ ಅದೇ ರೀತಿಯಲ್ಲಿ ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಿಸಿದ್ದಾನೆ.
ಆತ ತನ್ನ ಫೇಸ್ಬುಕ್ ಪುಟದಲ್ಲಿ ಮುಸ್ಲಿಂ ಪುರುಷರಿಗೆ ಕಿರುಕುಳ ನೀಡುವುದು, ಜೈ ಶ್ರೀರಾಮ್ ಎಂದು ಜಪಿಸುವಂತೆ ಒತ್ತಾಯಿಸುವುದು ಅಥವಾ ಇಸ್ಲಾಮೋಫೋಬಿಕ್ ನಿಂದನೆಗಳನ್ನು ಬಳಸುವುದು ಮುಂತಾದ ವೀಡಿಯೊಗಳಿವೆ. ನವೆಂಬರ್ 24 ರಂದು ಅಪ್ಲೋಡ್ ಮಾಡಲಾದ ಒಂದು ವೀಡಿಯೊದಲ್ಲಿ, ತಾಜ್ ಮಹಲ್ ವಾಸ್ತವವಾಗಿ ತೇಜೋ ಮಹಾಲಯ ಎಂದು ಆತ ಜೋರಾಗಿ ಹೇಳಿಕೊಳ್ಳುತ್ತಿದ್ದಾನೆ.


