ಸುಮಾರು ಹತ್ತು ವರ್ಷಗಳ ಹಿಂದೆ ಮುಜಾಫರ್‌ನಗರ ಜಿಲ್ಲೆಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜಾಫರ್‌ನಗರದ ನ್ಯಾಯಾಲಯವು ಶನಿವಾರ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2011ರ ಜನವರಿ 25ರಂದು ಹಳೆ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಗ್ರಾಮದ ಪ್ರಧಾನ್ ಬ್ರಿಜೇಂದ್ರ ಅವರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪದ ಮೇಲೆ ಬಹಾವಡಿ ಗ್ರಾಮದ ನಿವಾಸಿಗಳಾದ ಚರಣ್ ಸಿಂಗ್, ಬ್ರಿಜ್ಪಾಲ್, ಸೊರನ್, ನರೇಶ್ ಮತ್ತು ವಿವೇಕ್ ಅವರಿಗೆ ವಿಶೇಷ ನ್ಯಾಯಾಧೀಶರಾದ ಜಮ್‌ಶೆಡ್ ಅಲಿ ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಐವರು ಅಪರಾಧಿಗಳಿಗೆ ತಲಾ 14,000 ರೂಪಾಯಿ ದಂಡ ವಿಧಿಸಿದ್ದಾರೆ.
ಇದನ್ನೂ ಓದಿ: ಭಗತ್‌ಸಿಂಗ್‌ಗೆ ಗಲ್ಲುಶಿಕ್ಷೆಯಾಗಲು ಆರ್‌ಎಸ್‌ಎಸ್ ನಾಯಕ ಹೆಡ್ಗೆವಾರ್ ಸಹವರ್ತಿ ಕಾರಣವೆ?
ಐವರನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯವು ಇತರ ಮೂವರು ಆರೋಪಿಗಳಾದ ಬಸಂತ್, ಬಂಟಿ ಮತ್ತು ಉಮಿತ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮೂವರನ್ನು ಖುಲಾಸೆಗೊಳಿಸಿದೆ ಎಂದು ಸರ್ಕಾರಿ ವಕೀಲ ಯಶಪಾಲ್ ಸಿಂಗ್ ಹೇಳಿದ್ದಾರೆ.
2011ರ ಜನವರಿ 25ರಂದು ಹಳೆ ದ್ವೇಷದ ಹಿನ್ನೆಲೆ ಜಿಲ್ಲೆಯ ಬಹಾವಡಿ ಗ್ರಾಮದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಗ್ರಾಮದ ಪ್ರಧಾನ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಎಂಟು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಈ ಎಂಟು ಮಂದಿ ಆರೋಪಿಗಳ ವಿರುದ್ಧ ಕೊಲೆ, ಕೊಲೆ ಯತ್ನ, ಮಾರಕಾಸ್ತ್ರಗಳನ್ನು ಬಳಸಿ ಗಲಭೆ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದ ಆವರಣದಲ್ಲೇ ಗುಂಡು ಹಾರಿಸಿ ಹತ್ಯೆಗೈಯಲಾಗಿದ್ದ ದೇವೇಂದ್ರ ಎನ್ನುವವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.


