ಕೋಚ್‌ಬಿಹಾರ್‌ನ ಸೀತಾಲ್ಕುಚ್ಚಿಯಲ್ಲಿ ಗೋಲಿಬಾರ್‌ನಿಂದಾಗಿ ಮೃತಪಟ್ಟವರ ಶವ ಯಾತ್ರೆಯ ರ್‍ಯಾಲಿ ನಡೆಸುವಂತೆ ಪ್ರಸ್ತಾಪಿಸುವ ಆಡಿಯೋ ಟೇಪ್ ಹೊರಬಿದ್ದ ನಂತರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ತಮ್ಮ ಫೋನ್ ಟ್ಯಾಪ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದಾರೆ.
ಚುನಾವಣಾ ರ್‍ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, “ಬಿಜೆಪಿ ಪಿತೂರಿಯಲ್ಲಿ ಭಾಗಿಯಾಗಿದೆ. ಬಿಜೆಪಿ ನಾಯಕರು ನಮ್ಮ ದೈನಂದಿನ ಸಂಭಾಷಣೆಯನ್ನು ಸಹ ಕೇಳುತ್ತಿದ್ದಾರೆ. ಅವರು ಅಡುಗೆ ಮತ್ತು ಇತರ ಮನೆಕೆಲಸಗಳ ಫೋನ್ ಕರೆಗಳನ್ನು ಟ್ಯಾಪ್ ಮಾಡುತ್ತಿದ್ದಾರೆಂದು ತೋರುತ್ತದೆ” ಎಂದು ಆರೋಪಿಸಿದ್ದಾರೆ.
“ಈ ವಿಷಯದ ಬಗ್ಗೆ ಸಿಐಡಿ ತನಿಖೆಗೆ ನಾನು ಆದೇಶ ನೀಡುತ್ತೇನೆ. ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾರನ್ನೂ ನಾನು ಬಿಡುವುದಿಲ್ಲ. ಇದರ ಹಿಂದೆ ಯಾರೆಂದು ನಾನು ಈಗಾಗಲೇ ತಿಳಿದುಕೊಂಡಿದ್ದೇನೆ” ಎಂದು ಅವರು ಗುಡುಗಿದ್ದಾರೆ.
ಇದನ್ನೂ ಓದಿ: ‘ಮಹಾರಾಷ್ಟ್ರಕ್ಕೆ ರೆಮ್‌ಡಿಸಿವಿರ್ ನೀಡಿದರೆ ಲೈಸನ್ಸ್ ರದ್ದು ಮಾಡುತ್ತೇವೆಂದು ಕಂಪನಿಗಳಿಗೆ ಕೇಂದ್ರ ಬೆದರಿಕೆ’: ಮಹಾಸಚಿವ
“ಕೆಲವು ಏಜೆಂಟರೊಂದಿಗೆ ಕೇಂದ್ರ ಪಡೆಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿವೆ ಎಂಬ ಮಾಹಿತಿಯಿದೆ. ಬಿಜೆಪಿಗೆ ಇದರಲ್ಲಿ ಯಾವುದೇ ಪಾತ್ರವಿಲ್ಲ ಎಂದು ಅವರು ಹೇಳಿಕೊಂಡರೂ, ಅದರ ಹಿಂದೆ ಅವರೇ ಇದ್ದಾರೆ ಎಂಬುದು ಸ್ಪಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಏಪ್ರಿಲ್ 10 ರಂದು ನಡೆದ ಮತದಾನದ ವೇಳೆ ಸಿಐಎಸ್ಎಫ್ ಸಿಬ್ಬಂದಿಗಳು ನಡೆಸಿದ ಗೋಲಿಬಾರ್‌ನಲ್ಲಿ ನಾಲ್ವರು ಮೃತಪಟ್ಟಿದ್ದರು. ಈ ನಾಲ್ವರ ಶವಗಳೊಂದಿಗೆ ರ್‍ಯಾಲಿಗಳನ್ನು ನಡೆಸುವಂತೆ ಮಮತಾ ಬ್ಯಾನರ್ಜಿ ಅಲ್ಲಿನ ಅಭ್ಯರ್ಥಿಗೆ ಹೇಳುತ್ತಿದ್ದಾರೆ ಎಂಬ ಆಡಿಯೋ ಕ್ಲಿಪ್ ಅನ್ನು ಬಿಜೆಪಿಯು ಬಿಡುಗಡೆ ಮಾಡಿದ ನಂತರ ವಿವಾದ ಭುಗಿಲೆದ್ದಿತ್ತು.
ಆದರೆ ಟಿಎಂಸಿ ಅಂತಹ ಸಂಭಾಷಣೆ ನಡೆದಿಲ್ಲ ಎಂದು ಹೇಳಿದ್ದು, ಆಡಿಯೊ ಕ್ಲಿಪ್‌ಅನ್ನು “ನಕಲಿ” ಎಂದು ಹೇಳಿದೆ. ಜೊತೆಗೆ ಕೇಂದ್ರವು ಮುಖ್ಯಮಂತ್ರಿಯ ಫೋನ್ ಅನ್ನು ಟ್ಯಾಪ್ ಮಾಡುತ್ತಿದೆಯೇ ಎಂದು ಪ್ರಶ್ನಿಸಿತ್ತು.
ಇದನ್ನೂ ಓದಿ: ಬಿಜೆಪಿ ನಾಯಕರು ಚುನಾವಣೆ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ, ಆಡಳಿತದ ಬಗ್ಗೆ ಅಲ್ಲ: ಸಿದ್ದರಾಮಯ್ಯ ಆಕ್ರೋಶ
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ►► ಸಾರಿಗೆ ನೌಕರರ ಮುಷ್ಕರದ ಬಗ್ಗೆ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದೇನು?



