ಮಹಾರಾಣಿ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿನಿಯೊರ್ವಳಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿ ಪರ ಗೊತ್ತಿಲ್ಲದೇ ಪತ್ರಕೊಟ್ಟು ತಪ್ಪು ಮಾಡಿದ್ದೇನೆ, ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರರವರು ತಿಳಿಸಿದ್ದಾರೆ.
ಇನ್ನೊಂದೆಡೆ ಆರೋಪಿ ದ್ವಿತಿಯ ದರ್ಜೆ ಸಹಾಯಕ ಜಯರಾಮುನನ್ನು ಅಮಾನತು ಮಾಡಿರುವುದನ್ನು ತೆರವುಗೊಳಿಸುವುದಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಅನಿರುದ್ಧ್ ಶ್ರವಣ್ ತಿಳಿಸಿದ್ದಾರೆ.
ನಾನುಗೌರಿ.ಕಾಂನೊಂದಿಗೆ ಮಾತನಾಡಿದ ಅವರು ನಮಗೆ ಅಮಾನತು ಆದೇಶ ವಾಪಸ್ ತೆಗೆದುಕೊಳ್ಳಿ ಎಂದು ಯಾವುದೇ ಆದೇಶ ಬಂದಿಲ್ಲ. ಅಲ್ಲದೇ ವಿಚಾರಣೆ ಪ್ರಗತಿಯಲ್ಲಿದೆ. ಹಾಗಾಗಿ ಪೂರ್ಣ ವಿಚಾರಣೆ ಮುಗಿಯುವವರೆಗೂ ಯಾವುದೇ ಕಾರಣಕ್ಕೂ ನಾವು ಅಮಾನತನ್ನು ರದ್ದು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಆರೋಪಿಯಾಗಿ ಅಮಾನತು ಆಗಿರುವ ಕಾಲೇಜಿನ ದ್ವಿತಿಯ ದರ್ಜೆ ಸಹಾಯಕ ಜಯರಾಮುರವರು ಮೈಸೂರಿನ ಚಾಮರಾಜ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರರವರಿಂದ ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್‌ರವರಿಗೆ ಅಮಾನತು ರದ್ದುಪಡಿಸುವಂತೆ ಪತ್ರ ಬರೆದಿದ್ದರು. ದಿನಾಂಕ 16-12-2019ರಂದು ಪತ್ರ ಬರೆದಿದ್ದ ಶಾಸಕರು ಕಾಲೇಜಿನಲ್ಲಿ ಜಯರಾಮುರವರಿಗೆ ಆಗದ ಪ್ರಾಧ್ಯಾಪಕರು ಅಮಾನತ್ತಿಗೆ ಕಾರಣರಾಗಿದ್ದಾರೆ. ಕೂಡಲೇ ಅಮಾನತ್ತು ರದ್ದುಪಡಿಸಿ ಅದೇ ಕಾಲೇಜಿಗೆ ಅವರನ್ನು ನಿಯುಕ್ತಿ ಮಾಡಬೇಕೆಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ಮಹಾರಾಣಿ ಕಾಲೇಜು: ಲೈಂಗಿಕ ಕಿರುಕುಳ ನಡೆಸಿದ ಆರೋಪಿಯ ಪರ ಬಿಜೆಪಿ ಶಾಸಕ ನಾಗೇಂದ್ರ ವಕಾಲತ್ತು..
ಈ ಕುರಿತು ನಾನುಗೌರಿ.ಕಾಂ ಶಾಸಕ ನಾಗೇಂದ್ರರವರನ್ನು ಸಂಪರ್ಕಿಸಿತು. ದಿನನಿತ್ಯ ನೂರಾರು ಜನರು ನನ್ನ ಕಛೇರಿ ಬಂದು ಪತ್ರ ಕೇಳುತ್ತಾರೆ. ಹಾಗಾಗಿ ಆತನಿಗೆ ಪತ್ರ ಕೊಟ್ಟಿದ್ದೇನೆ, ಹುಡುಗಿಯೇ ವಾಪಸ್ ಕೇಸು ಪಡೆದಿದ್ದಾಳೆ. ಕೇಸು ಮುಗಿದಿದೆಯಲ್ಲವೇ ಎಂದು ಜಾರಿಕೊಳ್ಳಲು ಪ್ರಯತ್ನಿಸಿದರು. ನೀವು ಒಬ್ಬ ಶಾಸಕ ಸ್ಥಾನದಲ್ಲಿದ್ದುಕೊಂಡು ಅನ್ಯಾಯಕ್ಕೆ ಒಳಗಾದವರಿಗೆ ಬೆಂಬಲಿಸಬೇಕೆ ಅಥವಾ ಆರೋಪಿಗೋ? ಹೆಣ್ಣು ಮಕ್ಕಳ ವಿಷಯದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಲ್ಲವೇ? ಶಾಸಕರೇ ಹೀಗೆ ಮಾತನಾಡಿದರೆ ಹೇಗೆ, ಆ ಆಡಿಯೋ ಪೂರ್ಣವಾಗಿ ಕೇಳಿದ್ದೀರಾ ಎಂದು ಅವರನ್ನು ಪ್ರಶ್ನಿಸಲಾಯಿತು.

ಆಗ ಎಚ್ಚೆತ್ತುಕೊಂಡ ಅವರು ನನಗೆ ಈ ವಿಚಾರದ ಬಗ್ಗೆ ಪೂರ್ಣ ಅರಿವಿಲ್ಲದೇ ಪತ್ರ ಕೊಟ್ಟು ತಪ್ಪು ಮಾಡಿದ್ದೇನೆ. ಆನಂತರ ಆತ ತಪ್ಪು ಮಾಡಿದ್ದಾನೆಂದು ಗೊತ್ತಾಗಿದೆ. ಹಾಗಾಗಿ ಆತನಿಗೆ ಶಿಕ್ಷೆಯಾಗಬೇಕೆಂದು ಮತ್ತೊಂದು ಪತ್ರ ಬೇಕಾದರೆ ಕೊಡುತ್ತೇನೆ. ಆತ ನಮ್ಮೂರಿನವನೇ ಆಗಿದ್ದು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ, ಎಚ್ಚರಿಕೆ ವಹಿಸುತ್ತೇನೆ ಎಂದು ತಿಳಿಸಿದ್ದಾರೆ.
ತನಗಾದ ಅನ್ಯಾಯದ ವಿರುದ್ಧ ವಿದ್ಯಾರ್ಥಿನಿಯು ಪ್ರಾಂಶುಪಾಲರಿಗೆ ದೂರು ನೀಡಿದ್ದರು. ತದನಂತರ ಕಾಲೇಜಿನ ಮಹಿಳಾ ದೌರ್ಜನ್ಯ ತಡೆ ಸಮಿತಿಯು ಈ ಕುರಿತು ವಿಚಾರಣೆ ನಡೆಸಿ ಆರೋಪ ಸಾಬೀತಾಗಿದ್ದು ಆರೋಪಿಯ ಮೇಲೆ ಕ್ರಮ ಜರುಗಿಸುವಂತೆ ವರದಿ ನೀಡಿತ್ತು. ಅದರ ಆಧಾರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾದ ಅನಿರುದ್ಧ್ ಶ್ರವಣ್‌ರವರು ಸಂಪೂರ್ಣ ವಿಚಾರಣೆಗೆ ಆದೇಶಿಸಿ 12-12-2019 ರಂದು ಆರೋಪಿ ಜಯರಾಮುನನ್ನು ಅಮಾನತ್ತುಗೊಳಿಸಿದ್ದರು.
ನಾನುಗೌರಿ.ಕಾಂ ಈ ಕುರಿತು ಮಹಿಳಾ ಆಯೋಗದ ಮಾಜಿ ಅಧ್ಯಕ್ಷರು ಮತ್ತು ವಕೀಲರಾದ ಮಂಜುಳ ಮಾನಸರವನ್ನು ಮಾತನಾಡಿಸಲಾಯಿತು. “ಯಾರೇ ತಪ್ಪು ಮಾಡಿದರೂ ಅದು ತಪ್ಪೆ. ತಪ್ಪೆಂದು ಗೊತ್ತಿದ್ದು ಅದನ್ನು ಬೆಂಬಲಿಸುವುದು ಅದು ದೊಡ್ಡ ತಪ್ಪು. ಆ ರೀತಿಯಲ್ಲಿ ನೋಡಿದರೆ ಶಾಸಕರಾದ ನಾಗೇಂದ್ರರವರ ಈ ನಡೆ ತೀವ್ರ ಖಂಡನೀಯ. ಬಿಜೆಪಿಯ ಶಾಸಕರು ಒಬ್ಬ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ ಎಂದು ಗೊತ್ತಿದ್ದರೂ ಕೂಡ ಆರೋಪಿಯ ಪರ ಪತ್ರ ಬರೆಯುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.

ಅಮಾನತ್ತನ್ನು ತಕ್ಷಣವೇ ತೆರವುಗೊಳಿಸಿ ಎನ್ನುವುದರ ಮೂಲಕ ಶಾಸಕರು ಯಾವ ಸಂದೇಶ ಕೊಡುತ್ತಿದ್ದಾರೆ? ಒಬ್ಬ ಶಾಸಕರಾಗಿ ನನಗೆ ಗೊತ್ತಿಲ್ಲದೇ ಹೀಗೆ ಮಾಡಿದ್ದೇನೆ ಎಂದು ತಪ್ಪಿಸಿಕೊಳ್ಳಬಾರದು. ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಬೇಕಾದ ಜವಾಬ್ದಾರಿ ಇಡೀ ಸಮಾಜದ್ದು. ಅಂತದ್ದರಲ್ಲಿ ಶಾಸಕ ಸ್ಥಾನದಲ್ಲಿರುವವರು ಆರೋಪಿಗೆ ಬೆಂಬಲ ನೀಡುವುದನ್ನು ಯಾವ ಸಮಾಜವೂ ಒಪ್ಪುವುದಿಲ್ಲ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಅಮಾನತ್ತು ಯಾವ ಕಾರಣಕ್ಕೂ ರದ್ದಾಗಬಾರದು. ಸಮಗ್ರ ತನಿಖೆ ನಡೆಯಬೇಕು, ಆ ವಿದ್ಯಾರ್ಥಿನಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ಸಮಿತಿಯ ಸದಸ್ಯರು ಆಗಿದ್ದ, ವಕೀಲರಾದ ಸುಮನರವರು ಪ್ರತಿಕ್ರಿಯಿಸಿದ್ದು, ಈ ಪ್ರಕರಣದಲ್ಲಿ ಆರೋಪಿ ಜಯರಾಮು ಮಾತ್ರವಲ್ಲ. ಅವರ ಪರ ನಿಂತ ಶಾಸಕ ಎಲ್.ನಾಗೇಂದ್ರ, ನಮ್ಮ ಸಮಿತಿಯನ್ನು ಯಾರಿಗೆ ತಿಳಿಸದೇ ಮುಚ್ಚಿರುವ ಪ್ರಾಂಶುಪಾಲರು ಸಹ ಆರೋಪಿಯಾಗಿದ್ದಾರೆ. ಇನ್ನು ವಿಚಾರಣೆ ಜಾರಿಯಲ್ಲಿರುವಾಗಲೇ ಪ್ರಾಶುಪಾಲರು ಸಮಿತಿಯನ್ನು ವಿಸರ್ಜಿಸಿ ಆರೋಪಿ ಪರ ವಹಿಸಿರುವುದು ದುರದೃಷ್ಠಕರ, ಹಾಗೆಯೇ ಶಾಸಕರು ಆರೋಪಿ ಪರ ಪತ್ರ ನೀಡಿರುವುದು ನಾಚಿಕೇಕೇಡು ಎಂದು ಕಿಡಿಕಾರಿದ್ದಾರೆ. ನಿಷ್ಪಕ್ಷಪಾತ ತನಿಖೆ ನಡೆದು ಆರೋಪಿಗಳೆಲ್ಲರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.


