ನಿಗೂಢ ಅನಾರೋಗ್ಯದಿಂದ ಒಬ್ಬರ ಹಿಂದೆ ಒಬ್ಬರಂತೆ ಸಾವನ್ನಪ್ಪುತ್ತಿರುವ ಹಿನ್ನೆಲೆ ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಬಾಧಲ್ ಗ್ರಾಮದ ಸುಮಾರು 400-500 ನಿವಾಸಿಗಳನ್ನು ಸರ್ಕಾರ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರಿಸಿದೆ.
ಡಿಸೆಂಬರ್ 2024ರಿಂದ ಇದುವರೆಗೆ ನಿಗೂಢ ಅನಾರೋಗ್ಯದಿಂದ ಬಾಧಲ್ ಗ್ರಾಮದಲ್ಲಿ 17 ಜನರು ಸಾವನ್ನಪ್ಪಿದ್ದಾರೆ ಮತ್ತು 11 ಮಂದಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಹೊಸದಾಗಿ ಐವರು ಅನಾರೋಗ್ಯಕ್ಕೆ ಒಳಗಾದ ಹಿನ್ನೆಲೆ, ರಾಜೌರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗ್ರಾಮವನ್ನು ಕಂಟೈನ್ಮೆಂಟ್ ವಲಯವೆಂದು ಘೋಷಿಸಿ ಅನಾರೋಗ್ಯಕ್ಕೆ ತುತ್ತಾದವರ ಕುಟುಂಬಸ್ಥರು ಮತ್ತುಅವರ ಸಂಬಂಧಿಕರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದ್ದಾರೆ.
“ಇಡೀ ಗ್ರಾಮಸ್ಥರನ್ನು ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಿಲ್ಲ. ಅನಾರೋಗ್ಯಕ್ಕೆ ಒಳಗಾದವರು, ಅವರ ಸಂಬಂಧಿಕರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ಮಾಡಿದ್ದೇವೆ” ಎಂದು ಶಾಸಕ ಜಾವೇದ್ ಇಕ್ಬಾಲ್ ಹೇಳಿದ್ದಾರೆ.
ಗ್ರಾಮಸ್ಥರನ್ನು ಜಿಎಂಸಿ ರಾಜೌರಿ, ಹಳೆಯ ಆಸ್ಪತ್ರೆ ರಾಜೌರಿ, ನರ್ಸಿಂಗ್ ಕಾಲೇಜು ರಾಜೌರಿ ಮತ್ತು ಬಾಲಕರ ಹೈಯರ್ ಸೆಕೆಂಡರಿ ಶಾಲೆಯ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ಅಲ್ಲಿ ಸರ್ಕಾರದ ವತಿಯಿಂದ ನಿಯಮಿತ ತಪಾಸಣೆ, ಆಹಾರ ಹಾಗೂ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ 2, 2024ರಂದು ಫಝಲ್ ಹುಸೇನ್ ಎಂಬವರ ಮನೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಊಟ ಮಾಡಿದ್ದ ಜನರು, ಡಿಸೆಂಬರ್ 7, 2024ರ ಹೊತ್ತಿಗೆ ನಿಗೂಢ ಕಾಯಿಲೆಗೆ ತುತ್ತಾಗಿದ್ದರು. ಅನಾರೋಗ್ಯಕ್ಕೆ ಒಳಗಾಗಿದ್ದವರಲ್ಲಿ ಫಝಲ್ ಮತ್ತು ಅವರ ನಾಲ್ವರು ಹೆಣ್ಣುಮಕ್ಕಳು ಐದು ದಿನಗಳಲ್ಲಿ ನಿಧನರಾಗಿದ್ದರು.
ಜನವರಿ 9ರಂದು, ನಿವಾಸಿಗಳು ಶೋಕ ಆಚರಿಸುವ ವೇಳೆ ಫಝಲ್ ಅವರ ಮನೆಯಲ್ಲಿ ಮತ್ತೊಂದು ಸಾಮುದಾಯಿಕ ಭೋಜನವನ್ನು ನೀಡಲಾಗಿತ್ತು. ಹಲವು ಗ್ರಾಮಸ್ಥರು ಈ ಕೂಟದಲ್ಲಿ ಭಾಗವಹಿಸಿದ್ದರು. ಆದರೆ, ಕೇವಲ ಮೂರು ಕುಟುಂಬಗಳ ಸದಸ್ಯರು ಅಸ್ವಸ್ಥರಾಗಿ ಸಾವನ್ನಪ್ಪಿದ್ದರು.
ಜನವರಿ 15ರಂದು, ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ವಿಷಯದ ಬಗ್ಗೆ ತನಿಖೆ ನಡೆಸಲು ಪೊಲೀಸ್ ಅಧಿಕಾರಿಗಳು ಮತ್ತು ವೈದ್ಯಕೀಯ ತಜ್ಞರನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆ ಬಳಿಕವೂ ಸರಣಿ ಸಾವು ಮುಂದುವರೆದಿದೆ. ಇದುವರೆಗೆ 17 ಜನರು ಸಾವಿಗೀಡಾಗಿದ್ದಾರೆ.
ಜನ್ಮದತ್ತ ಪೌರತ್ವ ಹಕ್ಕು ರದ್ದು | ಟ್ರಂಪ್ ಆದೇಶ ಜಾರಿಗೂ ಮುನ್ನ ಸಿಸೇರಿಯನ್ ಹೆರಿಗೆಗೆ ಧಾವಿಸುತ್ತಿರುವ ಮಹಿಳೆಯರು


