ಸೋಮಶೇಖರ್ ಚಲ್ಯ ||
ನಡುವೆ ಅಂತರವಿರಲಿ. ಎಲ್ಲಾ ವಾಹನಗಳ ಹಿಂದೆಯೂ ಈ ಸಾಲು ಇದ್ದೇ ಇರುತ್ತದೆ. ಇದನ್ನ ಸಿನಿಮಾದ ಆರಂಭದಲ್ಲಿಯೂ ಮೆನ್ಷನ್ ಮಾಡಿದ್ದಾರೆ. ಹಾಗೆಯೇ ಈ ಅಂತರ ಪ್ರೀತಿಯಲ್ಲಿಯೂ ಇರಬೇಕಾದ ಅಗತ್ಯ ಮತ್ತು ಅನಿವಾರ್ಯತೆ ಇದ್ದೇ ಇರುತ್ತದೆ.
ಪ್ರೀತಿ ಎಂಬುದು ಸುಂದರವಾದ ಅನುಬಂಧ, ಎರಡು ಮನಸುಗಳ ಸುಮಧುರ ಸಮ್ಮಿಲನ. ಪ್ರೀತಿ ಕಣ್ಣಾಮಚ್ಚಾಲೆಯ ಆಟವಲ್ಲ. ಆದರೆ ಇಂದು ಕಾಮದ ಸೆಳೆತದ ಮುಸುಕಿನಲ್ಲಿ ಕಮರಿಹೋಗುತ್ತಿದೆ. ಮನಸ್ಸುಗಳನ್ನು ಭಾವನೆಗಳನ್ನು ಬೆಸೆಯುವ ಮಾನದಂಡವಾಗಿದ್ದ ಪ್ರೀತಿಯನ್ನು ದೈಹಿಕ ಆಕರ್ಷಣೆಯೊಳಗೆ ಎಳೆದು ನಿಲ್ಲಿಸುವುದರ ಅಪಾಯವನ್ನು ಬಿಚ್ಚಿಡುವ ಪ್ರಯತ್ನವನ್ನು ನಡುವೆ ಅಂತರವಿರಲಿ ಚಿತ್ರತಂಡ ಮಾಡಿದೆ.
ಮದುವೆ ಎಂಬುದು ಹೇಗೆ ಬದುಕಿನ ಟರ್ನಿಂಗ್ ಪಾಯಿಂಟ್ ಎಂದು ಕರೆಯುತ್ತೇವೋ ಅದು ಈಗ ಪ್ರೀತಿಯೆಡೆಗೆ ವಾಲಿದೆ. ಪ್ರೀತಿ ಗಟ್ಟಿಯಾಗಿ ಬೇರೂರಿದಾಗಲೇ ಬದುಕು ಮುಂದೆ ಸಾಗಲು ಸಾಧ್ಯ. ಪರಿಚಯದ ಮುಂದುವರಿದ ಭಾಗವಾಗಿ ಪ್ರೀತಿ ಬೆಳೆಯುತ್ತದೆ. ಪರಸ್ಪರ ಅಭಿರುಚಿ, ಆಲೋಚನೆ, ಅಭಿವ್ಯಕ್ತಿಗಳಲ್ಲಿ ಸಾಮತ್ಯ ಇದ್ದಾಗ ಪರಿಚಯ ಗಟ್ಟಿಯಾಗುತ್ತಾ ಸಾಗುತ್ತದೆ. ಈ ಹಾದಿಯಲ್ಲಿ ಅದು ಸ್ನೇಹವೋ, ಪ್ರೀತಿಯೋ ಎಂದು ಗುರುತಿಸಲ್ಪಡುತ್ತದೆ. ಗಟ್ಟಿಯಾದ ಸ್ನೇಹ ಪ್ರೀತಿಯಾಗಿ ಬದಲಾಗಲು ಸಾಧ್ಯವಿಲ್ಲ. ಅಂತೆಯೇ ಪ್ರೀತಿ ಸ್ನೇಹವಾಗಲೂ ಆಗುವುದಿಲ್ಲ. ಮನಸ್ಸಿನ ಭಾವನೆಗಳ ಸಮ್ಮಿಲನದಿಂದ ಹುಟ್ಟುವ ಪ್ರೀತಿಗೆ ಕಾಮದ ಆತುರತೆಯ ಹಂಗಿರುವುದಿಲ್ಲ. ಸ್ನೇಹದಲ್ಲೂ ಪ್ರೀತಿ ಇರುತ್ತದೆ, ಪ್ರೀತಿಯಲ್ಲೂ ಪ್ರೀತಿ ಇರುತ್ತದೆ. ಆದರೆ ಅವೆರೆಡರ ಮಧ್ಯೆ ಕೆಲವು ವ್ಯತ್ಯಾಸಗಳಿರುತ್ತವೆ. ಹೆಣ್ಣು ಗಂಡಿನ ನಡುವಿನ ಗಟ್ಟಿಯಾದ ಸ್ನೇಹವನ್ನು ಅರ್ಥೈಸಿಕೊಳ್ಳುವಲ್ಲಿ ಎಲ್ಲರೂ ಎಡವುತ್ತಾರೆ. ಸ್ನೇಹವನ್ನು ಪ್ರೀತಿಯೆಂದು ಭಾವಿಸಿ ಪ್ರೀತಿಯ ಅಲೆಯಲ್ಲಿ ಜಾರುತ್ತಾ ಸ್ನೇಹ-ಪ್ರೀತಿ ಎರಡೂ ಒಂದೇ ಎಂಬಂತೆ ಬಿಂಬಿಸಲಾಗುತ್ತಿದೆ. ಇಂತಹ ಒಡನಾಟದಲ್ಲಿ ಒಮ್ಮೆ ಮನಸ್ಸಿನಲ್ಲಿ ಮೂಡಿದ ಭಾವನೆ ತನ್ನಿಷ್ಟಕ್ಕೆ ತಕ್ಕಂತೆ ಬದಲಾಗಲಾರದು. ಒಡನಾಟದಿಂದ ಹುಟ್ಟುವ ಪ್ರೀತಿ ಇಂದು ‘ಲವ್ ಅಟ್ ಫಸ್ಟ್ ಸೈಟ್’ ಪ್ರೀತಿಯಾಗಿ ಬದಲಾಗಿದೆ. ಇಂತಹ ಪ್ರೀತಿಗೆ ನೆಲೆಯಿಲ್ಲ. ಅಕ್ಚುಯಲಿ ನೋಡಿದ ಕ್ಷಣದಲ್ಲಿ ಹುಟ್ಟುವುದು ಪ್ರೀತಿಯೇ ಅಲ್ಲ ಅದು ದೈಹಿಕ ಸೆಳೆತವಷ್ಟೇ. ಇಂತಹ ಸೆಳೆತದಿಂದ ಹುಟ್ಟುವ ಪ್ರೀತಿಯ ಒಳ-ಹೊರಗು ಈ ಚಿತ್ರದ ಕಥೆಯಾಗಿದೆ.
ನೋಡಿದ ತಕ್ಷಣ ಹುಟ್ಟುವ ಪ್ರೀತಿಯೇ ಆಗಿರಲಿ ಅಥವಾ ಒಡನಾಟದಲ್ಲಿ ಹುಟ್ಟಿದ ಪ್ರೀತಿಯೇ ಆಗಿರಲಿ ಆ ಪ್ರೀತಿಯಲ್ಲಿ ಕಣ್ಣಾ ಮುಚ್ಚಾಲೆಯ ಆಟ ಇರಬಾರದು. ಆದರೆ ಇಂದಿನ ಪ್ರೇಮಿಗಳ ಪ್ರೀತಿಯೆಂದರೆ ಅದು ಕಣ್ಣಾ ಮುಚ್ಚಾಲೆಯ ಆಟವಾಗಿ, ಪ್ರೀತಿ ತನ್ನ ಅರ್ಥವನ್ನೇ ಕಳೆದುಕೊಂಡಿದೆ. ಪ್ರೀತಿಯೆಂದರೆ ಆತಂಕ ಪಡುವ ಸನ್ನಿವೇಶ ಎದುರಾಗುತ್ತಿವೆ. ಪ್ರೀತಿಯಲ್ಲಿ ಜಾರುವ ಮುನ್ನ ಸ್ನೇಹಿತ ಗುಂಪಿನಲ್ಲಿರುತ್ತಿದ್ದ ಗೆಳೆಯ/ತಿ ಗುಂಪಿನಿಂದ ಮಾಯವಾಗುತ್ತಾರೆ. ಏಕಾಂತದ ಹೆಸರಲ್ಲಿ ಪ್ರೀತಿಯ ಸುತ್ತಾ ಗಿರಕಿ ಹೊಡೆಯುತ್ತಾ, ಬದುಕಿನ ಇನ್ನೆಲ್ಲವನ್ನೂ ಮರೆತು ಪ್ರೀತಿಯೇ ಬದುಕೆಂಬಂತೆ ಮುಳುಗಿ, ಸುಳ್ಳಿನ ಸರಮಾಲೆಯನ್ನೇ ತಮ್ಮ ಸುತ್ತಾ ಹೆಣೆದುಕೊಳ್ಳುತ್ತಾರೆ. ಅದಷ್ಟೇ ಅಲ್ಲ, ಎಂದಾದರೂ ಹೊರಬರಲೇ ಬೇಕಾದ ಪ್ರೀತಿಯೂ ಗೌಪ್ಯವಾಗಿರುತ್ತದೆ. ಪ್ರೀತಿ ಬಚ್ಚಿಟ್ಟುಕೊಂಡು ಆಡುವ ಆಟವಲ್ಲ. ಅದು ಬದುಕಿನ ಭಾಗ, ಎಂದಾದರೊಮ್ಮೆ ಹೊರ ಬರಲೇಬೇಕು. ಹೀಗಿರುವಾಗ ಪ್ರೀತಿಯನ್ನು ಮುಚ್ಚಿಡುವುದರಿಂದ ಪ್ರಯೋಜನವಿಲ್ಲ. ಇಂತಹ ಮುಚ್ಚಾಟದಿಂದ ಕೂಡಿದ ಪ್ರೀತಿ ಎಂದಿಗೂ ಟ್ರೂ ಲವ್ ಎನಿಸಿಕೊಳ್ಳಲಾರದು. ಹೆತ್ತವರನ್ನು ಫೇಸ್ ಮಾಡಿ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲಾಗದವರ ಮುಚ್ಚಿಟ್ಟ ಪ್ರೀತಿಯ ಅಂತ್ಯ ಬಹಳ ಕ್ರೂರವಾಗಿರುತ್ತದೆ. ಪ್ರೀತಿ ಚಿಗುರೊಡೆಯುವ ಸಮಯದಲ್ಲೇ ಅದು ಹೆತ್ತವರ ಮುಂದೆ ತೆರೆದಿರಬೇಕೇ ವಿನಹ ಸುಳ್ಳಿನ ಪರದೆಯಲ್ಲಿ ಮಾಸಬಾರದು.
ಆಕರ್ಷಣೆಯಿಂದ ಹುಟ್ಟುವ ಪ್ರೀತಿಯೂ ಕೆಲವೊಮ್ಮೆ ಆಲೋಚನೆಗಳ ಹೊಂದಾಣಿಕೆಯಿಂದ ಯಶಸ್ವಿಯಾಗುತ್ತವೆ. ಆದರೆ ಬಹುತೇಕ ಹೊಂದಾಣಿಕೆಯಿಲ್ಲದೆ ಅರ್ಧಕ್ಕೆ ಮುರಿದು ಬೀಳುತ್ತವೆ. ಇಂತಹ ಆಕರ್ಷಣೆಯ ಪ್ರೀತಿ ಆರಂಭದಲ್ಲೇ ರೊಮ್ಯಾನ್ಸ್ ಎಡೆಗೆ ತಿರುಗಿ ಅದೇ ಪ್ರೀತಿ ಎಂಬಂತೆ ಬಿಂಬಿತವಾಗುತ್ತದೆ. ಈ ಪ್ರೀತಿ ವiನಸ್ಸಿನ ಹೊಂದಾಣಿಕೆಯ ಮೊದಲ ಹಂತ ದಾಟುವ ಮೊದಲೆ ಪ್ರೇಮಿಗಳೆಂದುಕೊಂಡ ಜೋಡಿ ತಮ್ಮ ಎಲ್ಲೆಯನ್ನು ಮೀರಿ ದೈಹಿಕ ಹೊಂದಾಣಿಕೆಗೆ ಶರಣಾಗುತ್ತಾರೆ. ಇಷ್ಟೆಲ್ಲಾ ಅಂತರವನ್ನು ಮೀರಿದ ಪ್ರೀತಿಯನ್ನು ಉಳಿಸಿಕೊಳ್ಳಲೂ ಆಗದೆ, ಬಿಡಲೂ ಆಗದೆ ಒದ್ದಾಡುತ್ತಾ ಕೊನೆಗೆ ಕಮರಿ ಹೋಗುತ್ತದೆ. ಇದೆಲ್ಲದರೊಳಗೆ ಒಂದು ಜೀವ ಸೃಷ್ಟಿಯಾಗಿ ಆ ಜೀವದ ಭವಿಷ್ಯ ಆರಂಭದಲ್ಲೇ ಬದುಕಿದ್ದೂ ಹೇಗೆ ಅಂತ್ಯವಾಗುತ್ತದೆ ಎಂಬುದನ್ನು ನಿರ್ದೇಶಕ ರವೀಣ್ ಕುಮಾರ್ ಚಿತ್ರಿಸಿದ್ದಾರೆ.
ತನ್ನಂತೆಯೇ ತನ್ನ ಸ್ನೇಹಿತೆ ಆಕರ್ಷಣೆಯ ಪ್ರೀತಿಗೆ ತುತ್ತಾಗಬಾರದೆಂದು ಕಾಳಜಿ ತೋರುವ ಪ್ರೀತಿಯಿಂದ ಮೋಸವಾದ ಗೆಳತಿ. ಆ ಗೆಳತಿಗೆ ತಿಳಿಯದಂತೆ ಕದ್ದುಮುಚ್ಚಿ ಪ್ರೀತಿಸುವ ನಿತ್ಯ, ಇವರ ಪ್ರೀತಿಯ ವಿಷಯ ತಿಳಿದ ಗೆಳತಿ ನಿತ್ಯಳ ಅಮ್ಮ-ಅಪ್ಪರಿಗೆ ವಿಷಯ ತಿಳಿಸಿದಾಗ. ತನ್ನ ಸ್ನೇಹಿತೆಯ ನಡತೆಯೇ ಸರಿಯಿಲ್ಲ ಎಂದು ವಾದಿಸಿ ನುಣುಚಿಕೊಂಡ ನಿತ್ಯ. ತಂದೆತಾಯಿ ಅವಳ ಮೇಲಿಟ್ಟಿದ್ದ ಅಪಾರ ನಂಬಿಕೆಯನ್ನ ಅಳಿಸಿ ಹಾಕುವಂತೆ ಕಣ್ಣಾಮುಚ್ಚಾಲೆಯ ಪ್ರೀತಿ. ತಪ್ಪು ಮಾಡುವ ವಯಸ್ಸಿನಲ್ಲಿ ತಪ್ಪು ಮಾಡಿದರೆ ಅದು ತಪ್ಪೇ ಅಲ್ಲವೆಂದು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದು ದೈಹಿಕ ತೃಷೆಗೆ ಒಳಗಾಗಿ ತನ್ನ ಹೊಟ್ಟೆಯಲ್ಲಿ ಮತ್ತೊಂದು ಜೀವ ಚಿಗುರೊಡೆದ ಮೇಲೆ ಮತ್ತದೆ ಗೆಳತಿಯ ಅಂಗಲಾಚುತ್ತಾಳೆ. ತನ್ನ ಮಗಳು ಮದುವೆಗೂ ಮುಂಚೆಯೇ ತಾಯಿಯಾಗಿದ್ದಾಳೆಂದು ತಿಳಿದರೂ ನೋವನ್ನು ಸಹಿಸಿಕೊಂಡು ಶಾಕ್‍ನಿಂದ ಹೊರಬರಲಾರದೆ ಮಗಳಿಗೆ ಮದುವೆ ಮಾಡಲು ಮಗಳ ಲವರ್ ಸಂಜಯ್ ಮನೆಯಲ್ಲಿ ಅಂಗಲಾಚುವ ಪೋಷಕರು. ಆದರೆ ನಿತ್ಯ – ಸಂಜಯ್ ನಡುವಿನ ಈಗೋಗಳಿಂದ ಕೊನೆಗೂ ಅವರಿಬ್ಬರ ಮದುವೆ ಆಗುವುದೇ ಇಲ್ಲ. ನಿತ್ಯ ಮಗುವಿಗೆ ಜನ್ಮ ನೀಡುತ್ತಾಳೆ. ಹುಟ್ಟಿದ ಮಗುವನ್ನು ಅನಾಥ ಆಶ್ರಮದಲ್ಲಿ ಬಿಟ್ಟು ಮತ್ತೊಂದು ಮದುವೆಯಾಗುತ್ತಾರೆ. ಇಂತಹ ದೈಹಿಕ ಆಕರ್ಷಣೆಯ ಪ್ರೀತಿಗೆ ಬಲಿಯಾಗುವುದು ಏನು ಅರಿಯದ ಮಗುವೆಂದು ಸಿನಿಮಾದಲ್ಲಿ ಕಥೆ ಎಣೆದಿದ್ದರೂ. ಇಂತಹ ಲವ್ ಸ್ಟೋರಿಗಳಿಗೆ ಬಲಿಯಾಗುವುದು ಹೆಣ್ಣು ಮಕ್ಕಳೇ. ಗಂಡು ತಪ್ಪು ಮಾಡುತ್ತಾನೆ, ಅವನೊಂದಿಗೆ ಮಲಗುವಾಗ ನಿಮ್ಮ ಮಗಳ ಬುದ್ಧಿ ಎಲ್ಲಿ ಹೋಗಿತ್ತು ಎಂಬ ಮಾತು ಈ ಸಮಾಜ ಎಲ್ಲಾ ತಪ್ಪುಗಳನ್ನು ಹೆಣ್ಣಿನ ಮೇಲೆ ಏರುವುದನ್ನು ಬಿಂಬಿಸುತ್ತದೆ. ಗಂಡು ರಸಿಕನಾದರೆ, ಹೆಣ್ಣು ನಡತೆಗೆಟ್ಟವಳಾಗುತ್ತಾಳೆ.
ತಮ್ಮ ಮಕ್ಕಳು ತಮ್ಮ ನಡುವಿನ ಅಂತರವನ್ನು ಮೀರಿ ಮುಂದುವರೆದಿದ್ದಾರೆಂದು ತಿಳಿದರೂ ಜಾತಿ ಪ್ರತಿಷ್ಠೆಗಾಗಿ ಅವರಿಬ್ಬರನ್ನು ದೂರ ಮಾಡುವ ಸಂಚು ಹಾಕುವ ಸಂಜಯ್ ಪೋಷಕರು, ಇಂದಿನ ಮರ್ಯಾದಾ ಹತ್ಯೆಗಳನ್ನು ಪ್ರತಿನಿಧಿಸುತ್ತಾರೆ. ಜಾತಿ-ವರ್ಗಗಳ ತಾರತಮ್ಯದ ಗಡಿಗಳನ್ನು ಮೀರಿ ಪ್ರೀತಿ ಬೆಳೆಯಬೇಕು. ಆದರೆ ಆ ಪ್ರೀತಿ ತನ್ನನ್ನು ಉಳಿಸಿಕೊಳ್ಳುವುದರೊಳಗೆ ಅದು ಮತ್ತೊಂದು ತಪ್ಪಿಗೆ ಅವಕಾಶ ನೀಡಬಾರದು. ಪ್ರೇಮಿಗಳು ಬಾಳ ಸಂಗಾತಿಗಳಾಗುವವರೆಗೆ ಅಂತಹ ತಪ್ಪುಗಳಿಂದ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ರೀತಿ ಬದುಕಿನ ಒಂದು ಭಾಗವಾಗಿರಬೇಕೆ ಹೊರತು ಪ್ರೀತಿಯೇ ಬದುಕಾಗಬಾರದು. ಸ್ನೇಹವನ್ನೇ ಮರೆತು ಪ್ರೀತಿಯಲ್ಲಿ ಬಿದ್ದು ಅದರೊಳಗೆ ಈಜುತ್ತಾ ಬಾವಿಯೊಳಗಿನ ಕಪ್ಪೆಯಾಗಬಾರದು. ಪ್ರೀತಿಯ ಜೊತೆಗೆ ಸ್ನೇಹವೂ ಇರಬೇಕು. ಪ್ರೀತಿಯ ಬಗೆಗೆ ಹಾಗೂ ಅದರಾಚೆಗೂ ಸ್ನೇಹಿತರು, ಪೋಷಕರ ಸಲಹೆಗಳನ್ನು ಪ್ರೀತಿಯ ಗುಂಗಿನಿಂದ ನೆಗ್ಲೆಟ್ ಮಾಡಬಾರದು ಹಾಗಂತ ಎಲ್ಲವನ್ನೂ ಕೇಳಲೇಬೇಕೆಂದಲ್ಲ ಅವುಗಳ ಬಗೆಗೆ ಯೋಚಿಸಿ ತೀರ್ಮಾನ ಮಾಡುವಂತಾದರೂ ಇರಬೇಕು. ಪ್ರೀತಿ ಮುಚ್ಚಿಡುವ ವಿಷಯವಲ್ಲ, ಪ್ರೀತಿಯಲ್ಲಿ ಯಾವುದು ಇರಬಾರದು, ಯಾವುದು ಇರಬೇಕು ಎಂಬುದನ್ನು ಚಿತ್ರ ಪರದೆಯ ಮೇಲೆ ತೋರಿಸಿದೆ.
ಇಂದಿನ ಲವ್ ಸ್ಟೋರಿಗಳಲ್ಲಿ ಪ್ರೀತಿಯನ್ನು ಉಳಿಸಿಕೊಳ್ಳಲು ಮನೆಯಿಂದ ಓಡಿಹೋಗುವ, ಕೈ ಕತ್ತರಿಸಿಕೊಳ್ಳುವ, ಪ್ರೀತಿಯಲ್ಲಿ ಏನೇ ಮಾಡಿದರೂ ಸರಿ ಎಂದು ತೋರಿಸುವ ಸಿನಿಮಾಗಳ ಮಧ್ಯೆ ಪ್ರೀತಿಯಲ್ಲೂ ಆಗುವ ತಪ್ಪುಗಳು, ಪ್ರೀತಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳನ್ನು ನಡುವೆ ಅಂತರವಿರಲಿ ಚಿತ್ರತಂಡ ಯುವಜನರ ಮನಸ್ಸಿನಲ್ಲಿ ಹೊಸ ಆಲೋಚನೆಗಳು, ಎಚ್ಚರಿಕೆಗಳನ್ನು ಹುಟ್ಟುಹಾಕಿದೆ.


