ನಾಗಾಲ್ಯಾಂಡ್‌ನಲ್ಲಿ ಭಾನುವಾರ ಭದ್ರತಾ ಪಡೆಗಳು 13 ನಾಗರಿಕರನ್ನು ಗುಂಡಿಕ್ಕಿ ಕೊಂದ ಘಟನೆಯ ನಂತರ, ಈಶಾನ್ಯ ಭಾರತದಿಂದ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ-1958(AFSPA) ಅನ್ನು ಹಿಂತೆಗೆದುಕೊಳ್ಳಬೇಕು ಎಂಬ ಹೋರಾಟದ ಧ್ವನಿಗೆ ಮತ್ತಷ್ಟು ಕಾವು ಹೆಚ್ಚಾಗಿದೆ. ನಾಗರಿಕ ಹಕ್ಕುಗಳ ಹೋರಾಟಗಾರರು ಮತ್ತು ಪ್ರದೇಶದ ರಾಜಕೀಯ ಮುಖಂಡರು “ಕಠಿಣ” ಕಾನೂನನ್ನು ಹಿಂತೆಗೆದುಕೊಳ್ಳಬೇಕೆಂದು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ. ಈ ಕಾಯ್ದೆಯ ಅಡಿಯಲ್ಲಿ ಭದ್ರತಾ ಪಡೆಗಳು ಮಿತಿ ಮೀರಿ ನಡೆಯುತ್ತಿವೆ ಎಂದು ಅವರು ಆರೋಪ ಮಾಡುತ್ತಲೇ ಇದ್ದಾರೆ.
ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ (ಇಂಫಾಲ್ ಮುನ್ಸಿಪಲ್ ಕೌನ್ಸಿಲ್ ಪ್ರದೇಶವನ್ನು ಹೊರತುಪಡಿಸಿ), ಅರುಣಾಚಲ ಪ್ರದೇಶದ ಚಾಂಗ್ಲಾಂಗ್, ಲಾಂಗ್ಡಿಂಗ್ ಮತ್ತು ತಿರಾಪ್ ಜಿಲ್ಲೆಗಳು ಮತ್ತು ಅಸ್ಸಾಂ ಗಡಿಯಲ್ಲಿರುವ ಅರುಣಾಚಲ ಪ್ರದೇಶದ ಎಂಟು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ AFSPA ಜಾರಿಯಲ್ಲಿದೆ.
ಇದನ್ನೂ ಓದಿ:ನಾಗಾಲ್ಯಾಂಡ್: ದಂಗೆಕೋರರ ವಿರುದ್ಧದ ಕಾರ್ಯಚರಣೆಯಲ್ಲಿ 13 ಮಂದಿ ಗ್ರಾಮಸ್ಥರನ್ನು ಹತ್ಯೆಗೈದ ಸೇನೆ
ಈಶಾನ್ಯ ಜನರ ಕಲ್ಯಾಣ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ಇದ್ದರೆ ಒಕ್ಕೂಟ ಸರ್ಕಾರವು ಈ ಕರಾಳ ಕಾನೂನನ್ನು ಹಿಂಪಡೆಯಬೇಕು ಎಂದು ಪ್ರದೇಶದ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ ಸಂಸ್ಥೆಯಾದ ಈಶಾನ್ಯ ವಿದ್ಯಾರ್ಥಿಗಳ ಸಂಘಟನೆ (ಎನ್‌ಇಎಸ್‌ಒ) ಹೇಳಿದೆ. “…ಇಲ್ಲದಿದ್ದರೆ ಈ ಕಾನೂನು ಪ್ರದೇಶದ ಜನರನ್ನು ಮತ್ತಷ್ಟು ದೂರವಿಡುತ್ತದೆ” ಎಂದು NESO ಅಧ್ಯಕ್ಷ ಸ್ಯಾಮ್ಯುಯೆಲ್ ಬಿ ಜಿರ್ವಾ ಹೇಳಿದ್ದಾರೆ.
“ನಾಗಾಲ್ಯಾಂಡ್‌ನ ಸೋಮದಲ್ಲಿ ನಡೆದ ಘಟನೆಯು, ಹಿಂಸಾಚಾರದ ವಿರುದ್ದದ ಹೋರಾಟದ ಹೆಸರಿನಲ್ಲಿ ಭದ್ರತಾ ಪಡೆಗಳು ಹಲವಾರು ಸಂದರ್ಭಗಳಲ್ಲಿ ಹತ್ಯಾಕಾಂಡ, ಅಮಾಯಕ ಗ್ರಾಮಸ್ಥರನ್ನು ಹಿಂಸಿಸಿ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ ಈ ಹಿಂದಿನ ಭಯಾನಕ ನೆನಪುಗಳನ್ನು ಮರಳಿ ತರುತ್ತದೆ” ಎಂದು ಅವರು ಹೇಳಿದ್ದಾರೆ.
TIPRA ಪಕ್ಷದ ಅಧ್ಯಕ್ಷ ಪ್ರದ್ಯೋತ್ ದೇಬ್ ಬರ್ಮಾ, “ಘಟನೆಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು. ಜೊತೆಗೆ AFSPA ನಂತಹ ಕಾನೂನುಗಳನ್ನು ರದ್ದುಗೊಳಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಅಸ್ಸಾಂನ ರಾಜ್ಯಸಭಾ ಸದಸ್ಯ ಮತ್ತು ಹಿರಿಯ ಪತ್ರಕರ್ತ ಅಜಿತ್ ಕುಮಾರ್ ಭುಯಾನ್ ಮಾತನಾಡಿ, ಗ್ರಾಮಸ್ಥರ ಹತ್ಯೆಯು ಎಲ್ಲರ ಕಣ್ಣು ತೆರೆಸುವಂತಿರಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಸಂಸದನ ಮಾನಹಾನಿ: BJP ನಾಯಕನ ವಿರುದ್ಧ 1 ಕೋಟಿ ಮಾನನಷ್ಟ ಮೊಕದ್ದಮೆ
“ಇಂತಹ ಘಟನೆಗಳು ನಡೆಯಬಾರದು ಎಂದು ಕಠೋರವಾದ AFSPA ವಿರುದ್ಧ ನಾವು ನಿರಂತರವಾಗಿ ಪ್ರತಿಭಟಿಸುತ್ತಿದ್ದೇವೆ. ಇದು ಮೊದಲ ಘಟನೆಯಲ್ಲ, ಆದರೆ ಇದು ಕೊನೆಯದು ಎಂದು ನಾನು ಭಾವಿಸುತ್ತೇನೆ” ಎಂದು ಆಲ್ ಅಸ್ಸಾಂ ವಿದ್ಯಾರ್ಥಿಗಳ ಒಕ್ಕೂಟದ (ಎಎಎಸ್‌ಯು) ಮುಖ್ಯ ಸಲಹೆಗಾರ ಸಮುಜ್ಜಲ್ ಕುಮಾರ್ ಭಟ್ಟಾಚಾರ್ಯ ಹೇಳಿದ್ದಾರೆ. ಭದ್ರತಾ ಪಡೆಗಳ ನಡೆಯು ಕ್ಷಮಿಸಲಾಗದ ಮತ್ತು ಘೋರ ಅಪರಾಧವಾಗಿದೆ. ಈ ಘಟನೆಯು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಸರ್ಕಾರಕ್ಕೆ ಇಷ್ಟವಿಲ್ಲದಿರುವುದನ್ನು ಬಹಿರಂಗಪಡಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ನಾಗರಿಕರ ರಕ್ಷಣೆಗಾಗಿ “ಕಠಿಣ ಮತ್ತು ಪ್ರಜಾಪ್ರಭುತ್ವ ವಿರೋಧಿ” AFSPA ಅನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಭಾನುವಾರ ಭದ್ರತಾ ಪಡೆಗಳಿಂದ ಕನಿಷ್ಠ 13 ನಾಗರಿಕರನ್ನು ಹೊಡೆದುರುಳಿಸಲಾಗಿದೆ. ಇದರ ನಂತರ ನಡೆದ ಗಲಭೆಯಲ್ಲಿ ಒಬ್ಬ ಯೋಧ ಸಾವನ್ನಪ್ಪಿದ್ದಾರೆ. ಶನಿವಾರ ಸಂಜೆ ಕಲ್ಲಿದ್ದಲು ಗಣಿಯಿಂದ ಕೆಲವು ದಿನಗೂಲಿ ಕಾರ್ಮಿಕರು ಪಿಕಪ್ ವ್ಯಾನ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಓಟಿಂಗ್ ಮತ್ತು ತಿರು ಗ್ರಾಮಗಳ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೇನೆಯು ನಾಗರಿಕರ ಹತ್ಯೆಯ ಕುರಿತು ನ್ಯಾಯಾಲಯದ ವಿಚಾರಣೆಗೆ ಭಾನುವಾರ ಆದೇಶಿಸಿದ್ದು, ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಮ್ಯಾನ್ಮಾರ್‌ನ ಗಡಿಯಲ್ಲಿರುವ ಮೋನ್ ಜಿಲ್ಲೆಯ ಈ ಪ್ರದೇಶದಲ್ಲಿ ದಂಗೆಕೋರರ ಚಲನವಲನದ ಬಗ್ಗೆ “ವಿಶ್ವಾಸಾರ್ಹ” ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳಿಗೆ ತೀವ್ರ ಗಾಯಗಳಾಗಿವೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಸಾಧ್ಯವಿಲ್ಲ: ಬೊಮ್ಮಾಯಿ


