Homeಮುಖಪುಟವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

ವಿರೋಧಾಭಾಸಗಳ ಜಗತ್ತಿನಲ್ಲಿ ಧಿಕ್ಕರಿಸಬೇಕಿದೆ ಶ್ರೇಷ್ಠತೆಯ ವ್ಯಸನ : ನಟರಾಜು ವಿ.

- Advertisement -
- Advertisement -

ಕನ್ನಡದ ಪ್ರತಿಭಾನ್ವಿತ ಪತ್ರಕರ್ತರು -ಅಂಕಣಕಾರರಲ್ಲೊಬ್ಬರಾದ ನಟರಾಜು.ವಿ ಅವರು ತಣ್ಣನೆಯ ಶೈಲಿಯಲ್ಲೇ ಕಟುಸತ್ಯಗಳನ್ನು ಬಿಡಿಸಿಡುವ ಬರಹಗಾರರು. ಸಾಮಾಜಿಕ ರಾಜಕೀಯ ವಿಶ್ಲೇಷಣೆ, ಸಮಕಾಲೀನ ವಿದ್ಯಮಾನಗಳ ಕುರಿತ ಅವರ ಅಂಕಣ ‘ಪಠ್ಯ – ಪ್ರಮಾಣ’ ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಟೈಮ್ಸ್ ಆಫ್ ಇಂಡಿಯಾ, ವಿಜಯನೆಕ್ಸ್ಟ್ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಕಳೆದ 15 ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಇವರು ‘ದಿ ಸ್ಟೇಟ್’ ನಲ್ಲಿ ಸೀನಿಯರ್ ಅಸಿಸ್ಟೆಂಟ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಪ್ರಸ್ತುತ ಟೆಕ್ ಕನ್ನಡ ವೆಬ್‍ಜಾಲದ ‘ತಂತ್ರ ತಾಂಡವ’ ಅಂಕಣದ ಜೊತೆಗೆ, ನಟರಾಜುರವರು ನ್ಯಾಯಪಥ ಪತ್ರಿಕೆಯಲ್ಲಿ ಪ್ರಮುಖ ವಿಶ್ಲೇಷಕ ಬರಹಗಳನ್ನು ಬರೆಯುತ್ತಿದ್ದಾರೆ.

ಈ ವಿಶೇಷ ಸಂಚಿಕೆಯನ್ನು ಕೈಯಲ್ಲಿ ಹಿಡಿದು ಕಣ್ಣಾಡಿಸುತ್ತಿರುವ ಈ ಹೊತ್ತಿನಲ್ಲಿ ಬಹುಶಃ ನಿಮಗೆ ಮೇಲುನೋಟಕ್ಕೇ ಸಮಕಾಲೀನ ಭಾರತೀಯ ಸಮಾಜ ಎದುರಿಸುತ್ತಿರುವ ಹತ್ತು ಹಲವು ತಲ್ಲಣಗಳು, ಪ್ರಜಾಪ್ರಭುತ್ವ, ಸಂವಿಧಾನಗಳಿಗೆ ಎದುರಾಗಿರುವ ಗಂಭೀರ ಸವಾಲುಗಳ ಕುರಿತಾದ ತೀವ್ರ ಕಾಳಜಿ ಈ ಬರಹಗಳಲ್ಲಿ ಕಾಣಬಹುದು. ಇದಾಗಲೇ ಜಾತಿವ್ಯವಸ್ಥೆಯಲ್ಲಿ ಸಿಲುಕಿ ಶತಶತಮಾನಗಳಿಂದ ಹೈರಾಣಾಗಿಹೋಗಿರುವ ಭಾರತೀಯ ಸಮಾಜದ ಸೂಕ್ಷ್ಮ ನೇಯ್ಗೆಗಳು ಇಂದು ಮೂಲಭೂತವಾದದ ತೀವ್ರ ಹೆಚ್ಚಳದೊಂದಿಗೆ ಮತ್ತೂ ಗಂಭೀರವಾಗಿ ಘಾಸಿಗೊಂಡಿವೆ. ನಮ್ಮ ಸುತ್ತಣ ಸಮಾಜದ ಆಲೋಚನೆಗಳನ್ನು ಮೂಲಭೂತವಾದವು ವ್ಯಾಪಿಸಿಕೊಳ್ಳುತ್ತಿರುವ ಪರಿ, ಪಡೆಯುತ್ತಿರುವ ರೂಪ, ಭಾಷೆ ಎಲ್ಲ ಪ್ರಜ್ಞಾವಂತರ ಆತಂಕಕ್ಕೆ ಕಾರಣವಾಗಿದೆ. ಇಲ್ಲಿನ ಬಹುತೇಕ ಲೇಖನಗಳು ವಿವಿಧ ಆಯಾಮಗಳಿಂದ ಈ ಸವಾಲುಗಳನ್ನು ಸಂಕೀರ್ಣವಾಗಿಯೂ, ಚಿಕಿತ್ಸಕವಾಗಿಯೂ ಎದುರುಗೊಂಡಿವೆ. ಪ್ರಸಕ್ತ ಲೇಖನ ಇದರಾಚೆಗಿನ ಕೆಲ ಸಂದಿಗ್ಧಗಳು, ಸವಾಲುಗಳ ಬಗ್ಗೆ ಗಮನ ಹರಿಸಲಿದೆ. ಆದರ್ಶ, ವಾಸ್ತವ, ಬೂಟಾಟಿಕೆ, ನೈತಿಕ ವಿರೋಧಾಭಾಸಗಳ ಗೋಜಲುಗಳ ಸುತ್ತಲಿನ ಚರ್ಚೆ ಈ ಲೇಖನದ ತಿರುಳು.

ಇಂದು ಸಾಮಾಜಿಕ ಕಾರ್ಯಕರ್ತರು, ಸಮಾಜಮುಖಿ ಚಿಂತಕರು, ಪ್ರಜ್ಞಾವಂತರು, ಪತ್ರಕರ್ತರೆಲ್ಲರನ್ನೂ ಒಂದಿಲ್ಲೊಂದು ಬಗೆಯಲ್ಲಿ ನೈತಿಕ ತಳಮಳಗಳು ಬಾಧಿಸುತ್ತಿವೆ. ಮೌಲ್ಯಗಳ ಹೆಸರಿನಲ್ಲಿ ತಾವು ಕಟ್ಟಿಕೊಂಡಿದ್ದ ಕೋಟೆ ಎಲ್ಲ ದಿಕ್ಕಿನಲ್ಲಿಯೂ ಕುಸಿದು ಬೀಳುತ್ತಿರುವುದು ಕಣ್ಣುಮುಚ್ಚಿದರೂ ಗೋಚರಿಸುತ್ತಿದೆ. ಈ ಸತ್ಯಕ್ಕೆ ಮುಖಾಮುಖಿಯಾಗುವುದೋ ಅಥವಾ ಕೋಟೆ ಕುಸಿದರೇನು ನಮ್ಮ ಸುತ್ತ ನಾವೇ ಒಂದು ಗೂಡು ಕಟ್ಟಿಕೊಂಡು ಚಿಟ್ಟೆಯಾಗಿ ಪರಿವರ್ತನೆ ಹೊಂದೋಣ, ಯಾರ ಜಪ್ತಿಗೂ ಸಿಗದೆ ಹಾರಿಬಿಡೋಣ ಎಂದು ರಮ್ಯವಾಗಿ ಉತ್ತರಿಸುವುದೋ ತಿಳಿಯುತ್ತಿಲ್ಲ. ನಾವು ನಿಂತಿರುವ ನೆಲದ ಮೇಲೆಯೇ ಸಂಶಯವೇಳುತ್ತಿರುವ ಈ ಹೊತ್ತಿನಲ್ಲಿ ತಲೆಯನ್ನು ನೆಲದಲ್ಲಿ ಹುದುಗಿಸಿಕೊಂಡು ಎಲ್ಲದಕ್ಕೂ ಕಣ್ಣುಮುಚ್ಚಿಕೊಂಡು ಬಿಡುವುದು ಸಂವೇದನಾಶೀಲರ ಆಯ್ಕೆಯೂ ಅಲ್ಲ.

ಕಪ್ಪುಬಿಳುಪು ಇವೆರಡನ್ನು ಮಾತ್ರವೇ ಗುರುತಿಸಲು, ಬೇರ್ಪಡಿಸಲಷ್ಟೇ ಕಲಿತಿರುವವರಿಗೆ ಜಗವೆಲ್ಲಾ ಕಂದು ಬಣ್ಣದಲ್ಲೇ ಇರುವಾಗ ಅದನ್ನು ಹೇಗೆ ವರ್ಗೀಕರಿಸುವುದು ತಿಳಿಯದಾಗಿದೆ. ಮಾಧ್ಯಮವೂ ಸೇರಿದಂತೆ ಇಂದು ಎಲ್ಲ ಉದ್ಯಮಗಳೂ ಬಂಡವಾಳಶಾಹಿಗಳ ಹಿಡಿತದಲ್ಲಿವೆ. ಒಂದಿಲ್ಲೊಂದು ರೀತಿಯಲ್ಲಿ ಸರ್ಕಾರ, ಅಧಿಕಾರಸ್ಥರ ಸಹಾಯ, ಸಹಕಾರಗಳನ್ನು ಅವಲಂಬಿಸಿವೆ. ಈ ಅವಲಂಬನೆ ಕೆಲವೆಡೆ ಅಲ್ಪವೇ ಇರಬಹುದು ಮತ್ತೆ ಹಲವೆಡೆ ಅವಕಾಶವಾದಿತನ, ವಶೀಲಿಬಾಜಿಗಾಗಿಯೇ ಈ ಉದ್ಯಮಗಳು ಆರಂಭವಾಗಿಯೂ ಇರಬಹುದು.

ಮೌಲ್ಯಗಳೆನ್ನುವುದು ಇಂದು ತುಲನಾತ್ಮಕವಾಗಿ ನೋಡಬಹುದಾದ ವಿಷಯವಾಗಿದೆಯೇ ಹೊರತು ಪಾವಿತ್ರ್ಯದ ವಿಷಯವಾಗಿ ಉಳಿದಿಲ್ಲ. ಅವರಿಗಿಂತ ಇವರು ಉತ್ತಮ, ಆ ಸಂಸ್ಥೆಗಿಂತ ಈ ಸಂಸ್ಥೆ ಉತ್ತಮ ಎನ್ನಬಹುದೇ ಹೊರತು ಪರಮಪವಿತ್ರವೂ, ಅಗ್ನಿದಿವ್ಯವೂ ಆದ ಸಾಂಸ್ಥಿಕ ರಚನೆಗಳು ಸಾರ್ವಜನಿಕವಾಗಿ ಕಾಣೆಯಾಗಿವೆ. ಇದಕ್ಕೆ ಸರ್ಕಾರಿ, ಖಾಸಗಿ ಎನ್ನುವ ಭೇದಭಾವವಿಲ್ಲ. ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ತಾನು ದುಡಿದು ತಿಂದಿರುವುದಾಗಿ ಯಾರೇ ಹೇಳಿದರೂ ಆ ದುಡಿಮೆಯನ್ನು ಬಳಸಿಕೊಂಡ ಸಂಸ್ಥೆಗಳು ಸಂಬಳಕ್ಕಾಗಿ ತೆತ್ತ ಹಣದ ಹರಿವು ಎಲ್ಲಿಯದು, ಆ ಸಂಸ್ಥೆಗಳ ವ್ಯಾವಹಾರಿಕ ಚೌಕಟ್ಟಿನ ಸ್ವರೂಪವೇನು ಎನ್ನುವುದನ್ನು ಅರಿತರೆ ಭ್ರಷ್ಟತೆ ಎನ್ನುವುದು ನಮ್ಮೆಲ್ಲರನ್ನೂ ಒಂದಿಲ್ಲೊಂದು ಹಂತದಲ್ಲಿ ತಾಕಿಯೂ ಅರಿವಿಗೇ ಬಾರದೆ ಉಳಿದಿರುವುದು ಗಮನಕ್ಕೆ ಬರುತ್ತದೆ.

ಮಾರುಕಟ್ಟೆ ಎನ್ನುವುದು ಸರ್ವವ್ಯಾಪಿಯಾಗಿರುವ ಈ ಯುಗದಲ್ಲಿ ಅರ್ಥವ್ಯವಸ್ಥೆಯ ಸ್ವರೂಪ ಸಂಕೀರ್ಣವೂ, ಪರಸ್ಪರ ವ್ಯಾಪಕವಾಗಿ ಅವಲಂಬಿತವೂ ಆಗಿರುವಂಥದ್ದು. ಮಾರುಕಟ್ಟೆ ಆಧರಿತ ಜೀವನ ವಿಧಾನದ ಈ ದಿನಗಳಲ್ಲಿ ಹಣವೆನ್ನುವುದು ಎಲ್ಲರ ಬದುಕಿನ ಕೇಂದ್ರದಲ್ಲಿದೆ. ಇದಕ್ಕೆ ನಗರ ಹಾಗೂ ಗ್ರಾಮೀಣ ಎನ್ನುವ ವ್ಯತ್ಯಾಸಗಳಿಲ್ಲ, ಪ್ರಮಾಣದಲ್ಲಿ ಕೊಂಚಮಟ್ಟಿಗಿನ ಅಂತರವಿರಬಹುದು ಅಷ್ಟೇ. ಹೀಗೆ ಹಣದ ಹರಿವು ಮತ್ತು ಅದರ ಅವಲಂಬನೆಗಳು ಹೆಚ್ಚಾದಂತೆಲ್ಲಾ ವ್ಯವಸ್ಥೆಯಲ್ಲಿ ಕಪ್ಪುಬಿಳುಪು ಎನ್ನುವ ವರ್ಗೀಕರಣವೇ ಕ್ರಮೇಣ ಅಪ್ರಸ್ತುತವೂ, ಗೊಂದಲಮಯವೂ ಆಗತೊಡಗುತ್ತದೆ. ಹಣದ ಮೌಲ್ಯವು ಪೂರ್ವನಿರ್ಧರಿತವಾಗಿದ್ದು ಅದು ತನ್ನ ಮೌಲ್ಯವನ್ನು ತನ್ನನ್ನು ಗಳಿಸಿದ, ದುಡಿದ ಮಾರ್ಗದಿಂದಾಗಿ ಪಡೆಯುವುದಿಲ್ಲ. ಶ್ರಮಿಕರು, ಜ್ಞಾನಿಗಳು, ಪ್ರತಿಭಾವಂತರು, ವಯೋವೃದ್ಧರು, ವಿಶೇಷಚೇತನರು ಕಷ್ಟಪಟ್ಟು ದುಡಿದ ಹಣಕ್ಕೂ, ಭ್ರಷ್ಟವೂ, ಅನೈತಿಕವೂ, ವಾಮಮಾರ್ಗದಿಂದಲೂ ಗಳಿಸಿದ ಹಣಕ್ಕೂ ಮೌಲ್ಯದಲ್ಲಿ ಯಾವುದೇ ವ್ಯತ್ಯಾಸಗಳಿರುವುದಿಲ್ಲ. ಇದು ಆಧುನಿಕ ಅರ್ಥವ್ಯವಸ್ಥೆಯಲ್ಲಿನ ದೊಡ್ಡ ನ್ಯೂನತೆ. ಹಣವೆನ್ನುವುದು ಗುಣಗ್ರಾಹಿಯಾಗಿಲ್ಲ. ಜಾತಿ, ಧರ್ಮ, ಜನಾಂಗ, ಬಣ್ಣಗಳ ಆಧಾರದಲ್ಲಿ ಶ್ರೇಷ್ಠತೆಯ ವ್ಯಸನ ಮೆರೆಯುವ ನಮ್ಮ ನಾಗರಿಕತೆಗಳು, ಇದಕ್ಕೆ ಬದಲಾಗಿ ಮೌಲ್ಯ, ನೈತಿಕತೆಯ ಹೆಸರಿನಲ್ಲಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಂಡಿದ್ದರೆ ಹಣಕ್ಕೆ ಗುಣಗ್ರಾಹಿಯಾಗುವ ಅಗತ್ಯ ಖಂಡಿತ ಬರುತ್ತಿತ್ತು. ಆದರೆ, ವಾಸ್ತವ ಹಾಗಿಲ್ಲ. ಹಣ ಇಂದು ನಮ್ಮೆಲ್ಲರ ಬದುಕಿನ ಕೇಂದ್ರದಲ್ಲಿದೆ, ನಮ್ಮೆಲ್ಲರ ಜೀವನಾವಶ್ಯಕತೆಗಳನ್ನು, ಬದುಕು, ಭವಿಷ್ಯವನ್ನು ನಿರ್ಧರಿಸುವ ಪ್ರಖರ ಮಾಧ್ಯಮವಾಗಿದೆ. ಹೀಗೆ ನಮ್ಮೆಲ್ಲರ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವ ಹಣಕ್ಕೆ ನ್ಯಾಯನೀತಿಯ ಪರಿವೆಯೇ ಇಲ್ಲ! ಗುಣಕ್ಕೆ, ಮೌಲ್ಯಗಳಿಗೆ ಕುರುಡಾಗಿರುವ ಇಂತಹ ಹಣವನ್ನು ಕೇಂದ್ರದಲ್ಲಿರಿಸಿಕೊಂಡೇ ನವ ನಾಗರಿಕತೆಗಳು ಅಸ್ತಿತ್ವ ಕಟ್ಟಿಕೊಂಡಿವೆ. ದೇಶ, ಮಾರುಕಟ್ಟೆಗಳು ಉಸಿರಾಡುತ್ತಿವೆ. ಇಂದು ಇಡೀ ಜಾಗತಿಕ ಅರ್ಥವ್ಯವಸ್ಥೆಯವೆನ್ನುವುದು ಹೃದಯಹೀನವೂ, ಅಮಾನವೀಯವೂ ಆಗಿ ಪರಿವರ್ತಿತವಾಗಲು ಈ ಲೋಪವೇ ಕಾರಣ. ಈ ಸಂಕೀರ್ಣತೆಗಳನ್ನು ಅರಿಯದೆ ಭ್ರಷ್ಟಾಚಾರದ ಬಗ್ಗೆ ತೆಳುಗ್ರಹಿಕೆಯಲ್ಲಿ ಮಾತನಾಡುವುದು ಯಾವತ್ತೂ ಅಪಾಯಕಾರಿ.

ಇಷ್ಟೆಲ್ಲಾ ಹೇಳಲು ಕಾರಣ, ಇಂದು ಮಾನವೀಯ, ಜನಪರ, ಜನಮುಖಿ ಚಿಂತನೆಗಳುಳ್ಳವರಲ್ಲಿ ಯಾವ ವಿಚಾರಗಳಲ್ಲಿ ಒಮ್ಮತ ಮೂಡಬೇಕಿತ್ತೋ ಅದು ಸಾಧ್ಯವಾಗದೆ ಹೋಗಿರುವುದರಿಂದಾಗಿ. ಬಹುತೇಕ ಸಂದರ್ಭಗಳಲ್ಲಿ ಹಣದ ವಿಚಾರದಲ್ಲಿ ಕೆಲವೊಂದು ಸೀಮಿತ ಕಲ್ಪನೆಗಳಿಂದ ನಾವು ವ್ಯವಹರಿಸುವುದು ಇದಕ್ಕೆಲ್ಲಾ ಕಾರಣವಾಗುತ್ತದೆ. ಇಂದು ಸಮಾಜದ ಕೇಂದ್ರಕ್ಕೆ ಮತ್ತೆ ಮಾನವೀಯ ಮೌಲ್ಯಗಳನ್ನು ತರಬೇಕೆಂದರೆ ಗುಣಗ್ರಾಹಿಯಾಗಿಲ್ಲದ ಹಣದ ವಿಚಾರವಾಗಿ ಅತಿ ಎನಿಸುವಷ್ಟು ಪ್ರಾಮಾಣಿಕವಾಗಿಯೂ, ಕಟುವಾಗಿಯೂ ವರ್ತಿಸುವಂತೆ ಮಾಡಿರುವ ಸ್ಥಾಪಿತ ಮೌಲ್ಯಗಳ ಬಗ್ಗೆಯೇ ನಾವು ಸಂಶಯವನ್ನಿರಿಸಿಕೊಳ್ಳಬೇಕಿದೆ. ಈ ವಿಚಾರದಲ್ಲಿ ನಮ್ಮ ಚಿಂತನೆಗಳು ಹೆಚ್ಚು ಉದಾರವಾಗಬೇಕಿದೆ. ಉತ್ತಮ ಉದ್ದೇಶಗಳು, ಕೆಲಸಕ್ಕಾಗಿ ಹಣ ಹಾಗೂ ಶ್ರಮವನ್ನು ಹೇಗೆ ಒಗ್ಗೂಡಬೇಕು ಎನ್ನುವ ವಿಚಾರದಲ್ಲಿ ಶ್ರೇಷ್ಠತೆಯ ವ್ಯಸನಗಳಿಂದ ನಾವಿಂದು ಹೊರಬರಬೇಕಿದೆ. ಉತ್ತಮ ಉದ್ದೇಶ, ದೂರದರ್ಶಿತ್ವ, ಸಮತೆಯಲ್ಲಿ ನಂಬಿಕೆಯಿಟ್ಟವರನ್ನು ಅಧಿಕಾರದ ಕೇಂದ್ರಕ್ಕೆ ತರಲು ಲಾಬಿ ಮಾಡುವುದು, ಉತ್ತಮ ಧ್ಯೇಯೋದ್ದೇಶಗಳ ಸಾಕಾರಕ್ಕಾಗಿ ಸಂಪನ್ಮೂಲ ಸಂಗ್ರಹದ ವಿಚಾರದಲ್ಲಿ ಅವಾಸ್ತವವೂ, ಅಪ್ರಾಯೋಗಿಕವೂ ಆಗಿರದೆ ಸಮಾಜಕಂಟಕವಲ್ಲದ ಮಾರ್ಗಗಳ ಬಗ್ಗೆ ಪುನರ್ ಪರಿಶೀಲಿಸುವುದು ಇಂದಿನ ಅಗತ್ಯವಾಗಿದೆ. ಒಳಿತನ್ನು ಕೆಟ್ಟದ್ದರಿಂದ ಗೆಲ್ಲಿಸಲು ಸಾಧ್ಯವಿಲ್ಲ ಎನ್ನುವುದು ದಿಟ. ಹಾಗೆಂದು, ಒಳಿತನ್ನು ಒಳಿತಿನಿಂದಲೇ ಸೋಲಿಸಬಾರದು ಕೂಡ. ವಿಚಾರಶೀಲರಿಗೆ ಇವೆರಡರ ನಡುವೆ ಸಮತೋಲನ ಸಾಧಿಸುವುದು ಕಷ್ಟವಾಗಲಾರದು.

ಒಳಿತಿನ ಬೇರುಗಳು ಸಮಾಜದಲ್ಲಿ ಆಳವಾಗಬೇಕೆಂದರೆ, ಮೊದಲು ಉತ್ತಮರ ಪರವಾಗಿ ಪ್ರಜ್ಞಾವಂತರೆಲ್ಲರೂ ಸಕಾರಾತ್ಮಕವಾಗಿ ಲಾಬಿ ಮಾಡಬೇಕಿದೆ. ಸಜ್ಜನರ ಒಳ್ಳೆಯತನಕ್ಕೆ ಪ್ರಾಮಾಣಿಕತೆಯ ಬೇಡಿ, ಸಲಾಕೆಗಳನ್ನು ಹಾಕಿ, ವಸ್ತುನಿಷ್ಠತೆಯ ಲಕ್ಷ್ಮಣರೇಖೆಯನ್ನೆಳೆದು ಪಂಜರದಲ್ಲಿರಿಸಿ ಆ ಮೂಲಕ ಅಧಿಕಾರ ಕೇಂದ್ರಗಳಿಗೆ, ಆಯಕಟ್ಟಿನ ಸ್ಥಳಗಳಿಗೆ ಒತ್ತರಿಸಿಕೊಳ್ಳುವ ದುಷ್ಟರು, ಧನದಾಹಿಗಳು, ಅಯೋಗ್ಯರನ್ನು ದೂರವಿರಿಸಬೇಕಿದೆ. ಉತ್ತಮರು, ಪ್ರತಿಭಾವಂತರು, ಮಾನವೀಯ ಮೌಲ್ಯಗಳುಳ್ಳವರನ್ನು ಅಧಿಕಾರ ಹಾಗೂ ಸಂಪನ್ಮೂಲಗಳಿರುವೆಡೆ ಕೂರಿಸಿ ರಚನಾತ್ಮಕ ಹಾಗೂ ಮಾನವೀಯ ಕೆಲಸಗಳಿಗೆ ಹೆಚ್ಚೆಚ್ಚು ಶಕ್ತಿ, ಸಂಪನ್ಮೂಲಗಳನ್ನು ಹರಿಸಬೇಕಿದೆ. ಇದು ಸಾಧ್ಯವಾಗಬೇಕೆಂದರೆ ನಾವುಗಳು ಅವಾಸ್ತವ ನೆಲೆಗಳಲ್ಲಿ ರೂಢಿಸಿಕೊಂಡಿರುವ ಶ್ರೇಷ್ಠತೆಯ ವ್ಯಸನವನ್ನು ಬದಿಗಿರಿಸಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...

ಜಾಮೀನು ನಿರಾಕರಣೆ : ಸುಪ್ರೀಂ ಕೋರ್ಟ್‌ಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದ ಉಮರ್ ಖಾಲಿದ್

ದೆಹಲಿ ಗಲಭೆ ಪ್ರಕರಣದಲ್ಲಿ ಜಾಮೀನು ನಿರಾಕರಿಸಿದ ಜನವರಿ 5ರ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ಉಮರ್ ಖಾಲಿದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ಬುಧವಾರಕ್ಕೆ (ಏ.15) ನಿಗದಿಯಾಗಿದೆ ಎಂದು...

ಜಾರ್ಖಂಡ್| ಅಬಕಾರಿ ಕಾನ್‌ಸ್ಟೆಬಲ್ ಪರೀಕ್ಷೆ ಪತ್ರಿಕೆ ಸೋರಿಕೆ ಪ್ರಕರಣ; 159 ಅಭ್ಯರ್ಥಿಗಳ ಬಂಧನ

ರಾಂಚಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯಿಂದ 159 ಅಭ್ಯರ್ಥಿಗಳನ್ನು ಪೊಲೀಸರು ಬಂಧಿಸಿದ ನಂತರ ಪರೀಕ್ಷೆ ಪತ್ರಿಕೆ ಸೋರಿಕೆ ಕೃತ್ಯ ಬೆಳಕಿಗೆ ಬಂದಿದೆ. ತಮರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾರ್ಗಾಂವ್‌ನಲ್ಲಿರುವ ಸ್ಥಳದಲ್ಲಿ ಅಭ್ಯರ್ಥಿಗಳನ್ನು ಒಟ್ಟುಗೂಡಿಸಲಾಗಿದ್ದು, ಪರೀಕ್ಷೆಗೆ ಮೊದಲು...

ನೋಯ್ಡಾ: ವೇತನ ಹೆಚ್ಚಳಕ್ಕೆ ಒತ್ತಾಯಿಸಿ ನಡೆದ ಕಾರ್ಮಿಕರ ಪ್ರತಿಭಟನೆಯಲ್ಲಿ ಹೆಚ್ಚಿದ ಹಿಂಸಾಚಾರ; ಕಲ್ಲು ತೂರಾಟ, ವಾಹನಗಳು ಧ್ವಂಸ

ನೋಯ್ಡಾ: ಉತ್ತರ ಪ್ರದೇಶದ ನೋಯ್ಡಾದಲ್ಲಿ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳಿಗಾಗಿ ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆ ಸೋಮವಾರ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನೆಯ ಸಮಯದಲ್ಲಿ, ವಾಹನಗಳು ಮತ್ತು ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಲಾಗಿದ್ದು, ಕಲ್ಲು ತೂರಾಟ...