ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋಮವಾರದಂದು ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆಗೆ ಒಳಗಾಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ(ಇಂದು) ಕೂಡಾ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರದ ವಿಚಾರಣೆಯು ರಾತ್ರಿ 9 ಗಂಟೆಯ ತನಕವೂ ನಡೆದಿತ್ತು ಎಂದು ಅವರು ಹೇಳಿದ್ದಾರೆ. ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಕಳೆದ ನಾಲ್ಕು ದಿನಗಳಲ್ಲಿ 40 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ರಾಹುಲ್ ಗಾಂಧಿ ಅವರು ಸೋಮವಾರ ವಿಚಾರಣೆ ಪುನರಾರಂಭಗೊಳ್ಳುವ ಮೊದಲು ಆಸ್ಪತ್ರೆಗೆ ದಾಖಲಾಗಿರುವ ತಮ್ಮ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಮಧ್ಯೆ, ಸೋನಿಯಾ ಗಾಂಧಿ ಅವರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆದು ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಅವರಿಗೂ ಇಡಿ ಸಮನ್ಸ್ ನೀಡಿತ್ತಾದರೂ, ಅನಾರೋಗ್ಯದ ಕಾರಣ ಜೂನ್ 23 ರವರೆಗೆ ಅವರಿಗೆ ಕಾಲಾವಕಾಶ ನೀಡಲಾಗಿದೆ.
ಇದನ್ನೂ ಓದಿ: ಅಗ್ನಿಪಥ ಯೋಜನೆ: ದೇಶದ ಜನರಿಗೆ ಏನು ಬೇಕೆಂದು ಪ್ರಧಾನಿಗೆ ಅರ್ಥವಾಗುತ್ತಿಲ್ಲ – ರಾಹುಲ್ ಗಾಂಧಿ
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಪಾತ್ರದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಪ್ರಕರಣವು ಕಾಂಗ್ರೆಸ್ ಮುಖವಾಣಿಯಾದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ನಡೆಸುತ್ತಿದ್ದ AJL (ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್) ಅನ್ನು ಯಂಗ್ ಇಂಡಿಯನ್ಸ್ ಸ್ವಾಧೀನಪಡಿಸಿಕೊಂಡಿರುವನ್ನು ಒಳಗೊಂಡಿದೆ. ಪ್ರಸ್ತುತ ನ್ಯಾಶನಲ್ ಹೆರಾಲ್ಡ್ ಆನ್‌ಲೈನ್‌ನಲ್ಲಿ ಮಾತ್ರ ಇದೆ.
“ಎಜೆಎಲ್‌ನ 800 ಕೋಟಿ ರೂ. ಆಸ್ತಿಯನ್ನು ಯಂಗ್ ಇಂಡಿಯನ್ ಪಡೆದುಕೊಂಡಿದ್ದು, ಇದನ್ನು ಯಂಗ್ ಇಂಡಿಯನ್ ಷೇರುದಾರರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಆಸ್ತಿ ಎಂದು ಪರಿಗಣಿಸಬೇಕು, ಇದಕ್ಕಾಗಿ ಅವರು ತೆರಿಗೆ ಪಾವತಿಸಬೇಕಾಗಿದೆ” ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಯಂಗ್ ಇಂಡಿಯನ್ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಆದ್ದರಿಂದ ಷೇರುದಾರರು ಅದರ ಆಸ್ತಿಯಿಂದ ಯಾವುದೇ ಹಣವನ್ನು ಗಳಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದೆ.
ಅದಾಗ್ಯೂ ಯಂಗ್ ಇಂಡಿಯನ್ ಯಾವುದೇ ದತ್ತಿ ಕೆಲಸ ಮಾಡಿಲ್ಲ ಎಂದು ಜಾರಿ ನಿರ್ದೇಶನಾಲಯ ವಾದಿಸಿದ್ದು, ಅದರ ಏಕೈಕ ವಹಿವಾಟು AJL ನ ಸಾಲದ ವರ್ಗಾವಣೆಯಾಗಿತ್ತು ಎಂದು ತಿಳಿಸಿದೆ. ಆದರೆ ಕಾಂಗ್ರೆಸ್ ‘ಪತ್ರಿಕೆ’ ಕೂಡಾ ದತ್ತಿ ಕೆಲಸವೇ ಆಗಿದೆ ಎಂದು ತಿರುಗೇಟು ನೀಡಿದೆ. ಆದಾಯ ತೆರಿಗೆ ಇಲಾಖೆ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.
ಇದನ್ನೂ ಓದಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ: ನಾಲ್ಕನೇ ದಿನ ಇಡಿ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ
ಕಳೆದ ವಾರ, ಕೇಂದ್ರ ದೆಹಲಿಯಲ್ಲಿರುವ ಇಡಿ ಕಚೇರಿಯಲ್ಲಿ ರಾಹುಲ್ ಗಾಂಧಿಯನ್ನು ಪ್ರಶ್ನಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ದೇಶದಾದ್ಯಂತ ಭಾರಿ ಪ್ರತಿಭಟನೆ ನಡೆಸಿದ್ದರು. ಇದು ಆಡಳಿತಾರೂಢ ಬಿಜೆಪಿಯ ‘ಸೇಡಿನ ರಾಜಕೀಯ’ ಎಂದು ಅವರು ಆರೋಪಿಸಿದ್ದರು.


