“ಸದಭಿರುಚಿಯ ಸಿನಿಮಾಗಳಿಗೆ ತೆರಿಗೆ ವಿನಾಯಿತಿಯನ್ನು ಸರ್ಕಾರ ನೀಡಬೇಕು. ಈ ಕುರಿತು ಮುಖ್ಯಮಂತ್ರಿಯವರೊಂದಿಗೆ ಮಾತನಾಡುವೆ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ತಿಳಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ಮಾಣ ಮಾಡಿರುವ ‘ಚಾರ್ಲಿ 777’ ಸಿನಿಮಾಕ್ಕೆ ರಾಜ್ಯ ಸರ್ಕಾರ ಎಸ್‌ಜಿಎಸ್‌ಟಿ (ರಾಜ್ಯ ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ ನೀಡಿದೆ. ಸರ್ಕಾರದ ನಿರ್ಧಾರವನ್ನು ತೆರೆದ ಹೃದಯದಿಂದ ಸ್ವಾಗತಿಸಿರುವ ಕನ್ನಡ ಚಿತ್ರಕರ್ಮಿಗಳು ಆಶಾಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ನಿರ್ದೇಶಕ ಮಂಸೋರೆಯವರು ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆಯುತ್ತಾ ಇತರ ಚಿತ್ರಗಳಿಗೂ ತೆರಿಗೆ ವಿನಾಯಿತಿಯನ್ನು ಸರ್ಕಾರ ನೀಡಬೇಕು ಎಂದು ಮುಖ್ಯಮಂತ್ರಿಯವರಲ್ಲಿ ವಿನಂತಿ ಮಾಡಿದ ಬಳಿಕ ಚಿತ್ರರಂಗದ ಅನೇಕರು ಈ ಬೇಡಿಕೆಗೆ ದನಿಗೂಡಿಸಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, “ಈ ವಿಚಾರವಾಗಿ ವಾರ್ತಾ ಇಲಾಖೆಯ ಆಯುಕ್ತರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡುತ್ತೇನೆ. ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿವೆ. ಮಂಸೋರೆಯಂಥವರು ಒಳ್ಳೆಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಚಾರ್ಲಿಗೆ ತೆರಿಗೆ ವಿನಾಯಿತಿ ನೀಡಿದಂತೆಯೇ ಒಳ್ಳೆಯ ಸಿನಿಮಾಗಳಿಗೆ ಸರ್ಕಾರ ತೆರಿಗೆ ವಿನಾಯಿತಿ ನೀಡಬೇಕು” ಎಂದಿದ್ದಾರೆ.
“ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಚಿತ್ರರಂಗ ಸವಾಲುಗಳನ್ನು ಎದುರಿಸುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಇಡೀ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಹಿರಿಯರೊಂದಿಗೆ ಚರ್ಚಿಸುವೆ” ಎಂದು ಹೇಳಿದ್ದಾರೆ.
‘ಹರಿವು’, ‘ನಾತಿಚರಾಮಿ’, ‘ಆಕ್ಟ್ 1978’ ಸಿನಿಮಾಗಳನ್ನು ನಿರ್ದೇಶಿಸಿರುವ ಮಂಸೋರೆಯವರು ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ತಮ್ಮ ಅಭಿಪ್ರಾಯ ದಾಖಲಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಂಸೋರೆಯವರ ಪತ್ರದ ಹಿನ್ನಲೆಯಲ್ಲಿ ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಚಿತ್ರಕರ್ಮಿಗಳು ಸರ್ಕಾರದ ಮುಂದೆ ಇದೇ ಬೇಡಿಕೆಯನ್ನು ಇಟ್ಟರು. ಸದಭಿರುಚಿಯ ಸಿನಿಮಾಗಳು ಹೆಚ್ಚಾಗಬೇಕಾದರೆ ಸರ್ಕಾರ ತೆರಿಗೆ ವಿನಾಯಿತಿ ನಿರ್ಧಾರವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ‘ಚಾರ್ಲಿ 777’ ಭಾವುಕತೆಯಾಚೆಗೆ ತೆರೆದುಕೊಳ್ಳದ ಸರಳರೇಖೆಯ ಸಿನಿಮಾ
ಸಮಿತಿ ರಚಿಸಿ ತೆರಿಗೆ ವಿನಾಯಿತಿಗೆ ನಿರ್ಧಾರ ಮಾಡಲಿ: ಜಯತೀರ್ಥ
‘ಒಲವೇ ಮಂದಾರ’, ‘ಬ್ಯೂಟಿಫುಲ್ ಮನಸುಗಳು’, ‘ಬೆಲ್‌ಬಾಟಂ’ ಸಿನಿಮಾಗಳ ನಿರ್ದೇಶಕ ಜಯತೀರ್ಥ ಅವರು ಮಾತನಾಡಿ, “ಸರ್ಕಾರ ಒಳ್ಳೆಯ ಹೆಜ್ಜೆಯನ್ನಿಟ್ಟಿದೆ. ಸದಭಿರುಚಿಯ ಸಿನಿಮಾಕ್ಕೆ ತೆರಿಗೆ ನೀಡಿದೆ. ಇದೇ ರೀತಿಯ ಒಳ್ಳೆಯ ಆಶಯ ಇರುವ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿದರೆ ಬಹಳ ಒಳ್ಳೆಯದಾಗುತ್ತದೆ. ಅದಕ್ಕೆ ನನ್ನ ಬೆಂಬಲವೂ ಇದೆ” ಎಂದರು.

“ಒಳ್ಳೆಯ ಸಿನಿಮಾ ಯಾವುದೆಂದು ನಿರ್ಧಾರ ಮಾಡಲು ಎಲ್ಲ ಸಿನಿಮಾಗಳನ್ನು ನೋಡಲು ಮುಖ್ಯಮಂತ್ರಿಯವರಿಗೆ ಸಾಧ್ಯವಾಗುವುದಿಲ್ಲ. ಮುಖ್ಯಮಂತ್ರಿಯವರಿಗೆ ಸಂಪರ್ಕದಲ್ಲಿರುವವರು ಅವರನ್ನು ಕರೆದು ಸಿನಿಮಾ ತೋರಿಸಬಹುದಷ್ಟೇ. ಆದರೆ ಯಾವುದೇ ಪ್ರಭಾವ ಇರದೇ ಇರುವ ಸಾಮಾನ್ಯ ಕಲಾವಿದರಿಗೆ, ನಿರ್ದೇಶಕರಿಗೆ, ನಿರ್ಮಾಪಕರಿಗೆ ಇದು ಸಾಧ್ಯವಾಗದು. ಅದಕ್ಕಾಗಿ ಒಂದು ಸಮಿತಿ ಮಾಡಬಹುದು. ಗುಣಾತ್ಮಕ ಸಿನಿಮಾಗಳಿಗೆ ಸಬ್ಸಿಡಿ ನೀಡಲು ವ್ಯವಸ್ಥೆ ಮಾಡಿದ್ದಾರೆ. ಆದರೆ ಈ ಸಬ್ಸಿಡಿ ಸಿನಿಮಾ ಬಿಡುಗಡೆಯಾಗಿ ವರ್ಷಗಳು ಕಳೆದ ಮೇಲೆ ಕೈಗೆ ಸಿಗುತ್ತದೆ. ಈ ರೀತಿ ಆಗಬಾರದು. ಸೆನ್ಸಾರ್ ಮಂಡಳಿ ಹೇಗೆ ಸಿನಿಮಾ ನೋಡುತ್ತದೆಯೇ ಹಾಗೆಯೇ ಸಿನಿಮಾ ನೋಡುವ ಸಮಿತಿಯನ್ನು ಸರ್ಕಾರ ಮಾಡಬಹುದು. ತೆರಿಗೆ ವಿನಾಯಿತಿ ನೀಡಬೇಕು ಎಂಬುದು ನಮ್ಮ ಆಶಯ” ಎಂದು ತಿಳಿಸಿದರು.
“ಪ್ರತಿಯೊಂದು ಹಂತದಲ್ಲೂ ನಿರ್ಮಾಪಕರು ಸವಾಲನ್ನು ಎದುರಿಸುತ್ತಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಸಿನಿಮಾಗಳನ್ನು ಮಾಡಿದವರು ಹೇಗೋ ಸಹಿಸಿಕೊಳ್ಳಬಹುದು. ಆದರೆ ಎಲ್ಲರಿಗೂ ಇದು ಸಾಧ್ಯವಾಗದು. ಹೀಗಾದಾಗ ಸಿನಿಮಾಗಳು ಒಟಿಟಿಗೆ ಸೀಮಿತವಾಗಿಬಿಡುತ್ತದೆ. ಸಿನಿಮಾ ಸಂಸ್ಕೃತಿ ಹೊರಟು ಹೋಗುತ್ತದೆ. ಈ ಎಲ್ಲ ದೃಷ್ಟಿಕೋನದಿಂದ ಕನ್ನಡ ಸಿನಿಮಾಗಳಿಗೆ ಪ್ರೋತ್ಸಾಹ ದೊರಕಬೇಕಿದೆ” ಎಂದು ಒತ್ತಾಯಿಸಿದರು.
ಇದನ್ನೂ ಓದಿರಿ: Film Review| ಜನ ಗಣ ಮನ: ಸಮೂಹ ಸನ್ನಿಗೊಂದು ಮದ್ದು
“ಕಲಾವಿದರು ಕೊಡುವ ಅನೇಕ ತೆರಿಗೆಯಿಂದ ಸರ್ಕಾರಕ್ಕೆ ಅನುಕೂಲವಾಗುತ್ತಿದೆ. ಒಂದು ಸಿನಿಮಾ ನೋಡಲು ಬರುವ ಪ್ರೇಕ್ಷಕ ಸಾಕಷ್ಟು ಹಣ ವ್ಯಯಿಸುತ್ತಾನೆ. ಪಾರ್ಕಿಂಗ್ ಶುಲ್ಕ ಕಟ್ಟುತ್ತಾನೆ, ಪೆಟ್ರೋಲ್ ಹಾಕಿಸಿಕೊಳ್ಳುತ್ತಾನೆ, ಮನರಂಜನಾ ತೆರಿಗೆ ಕಟ್ಟುತ್ತಾನೆ. ಹೀಗೆ ಇಷ್ಟೆಲ್ಲ ವೆಚ್ಚದ ನಡುವೆಯೂ ಫೈರಸಿ ಹಾವಳಿಯೂ ಇದೆ. ಈ ಪೈರಸಿ ಹಾವಳಿಯೂ ತಪ್ಪುತ್ತಿಲ್ಲ. ಸರ್ಕಾರದಿಂದಲೂ ಬೆಂಬಲ ಸಿಗುತ್ತಿಲ್ಲ” ಎಂದು ವಿಷಾದಿಸಿದರು.
ರಾಜನ ಭಾವನೆಗೆ ತಕ್ಕಂತೆ ಸಿನಿಮಾ ಮಾಡಬೇಕೆ: ಬಿ.ಎಂ.ಗಿರಿರಾಜ್
‘ಜಟ್ಟ’, ‘ನವಿಲಾದವರು’, ‘ಮೈತ್ರಿ’, ‘ಅಮರಾವತಿ’, ‘ಕನ್ನಡಿಗ’ ಸಿನಿಮಾಗಳ ನಿರ್ದೇಶಕ ಬಿ.ಎಂ.ಗಿರಿರಾಜ್ ಮಾತನಾಡಿ, “ನಾವು ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ನಿಮಗೆ ಇಷ್ಟವಾಗಲು ಅಥವಾ ಆಗದಿರಲು ನಿಮ್ಮದೇ ಆದ ಕಾರಣಗಳಿರುತ್ತವೆ. ಮುಖ್ಯಮಂತ್ರಿಯವರ ನಾಯಿ ತೀರಿಕೊಂಡಿದ್ದರಿಂದ ‘ಚಾರ್ಲಿ’ ಸಿನಿಮಾ ಅವರಿಗೆ ಹೆಚ್ಚು ಕನೆಕ್ಟ್ ಆಯಿತು. ಟ್ಯಾಕ್ಸ್ ಫ್ರೀ ಎಂದರು. ಯಾವುದೇ ಸಿನಿಮಾಕ್ಕೆ ತೆರಿಗೆ ವಿನಾಯಿತಿ ನೀಡುವುದು ಒಳ್ಳೆಯದು. ಆದರೆ ಈ ಪ್ರಕರಣ ಹೇಗಿದೆ ಎಂದರೆ, ಒಬ್ಬ ರಾಜ ಅಥವಾ ಒಡೆಯನ ಮನವೊಲಿಸಿ, ಆತನ ಮನಸ್ಸಿನ ಭಾವಕ್ಕೆ ತಕ್ಕಂತೆ ಸಿನಿಮಾ ಮಾಡಿದರೆ ಮಾತ್ರ ಉಳಿಗಾಲ ಎಂಬಂತಿದೆ” ಎಂದು ವಿವರಿಸಿದರು.

“ಕನ್ನಡ ಸಿನಿಮಾಗಳಿಗೆ ಮೊದಲು ತೆರಿಗೆ ವಿನಾಯಿತಿ ಇತ್ತು. ಇಲ್ಲಿನ ತಂತ್ರಜ್ಞರು, ಕಾರ್ಮಿಕರನ್ನು ಬಳಸಿಕೊಂಡು ಸಿನಿಮಾ ಮಾಡಬೇಕು ಎಂಬ ನಿಯಮಗಳಿದ್ದವು. ಆದರೆ ಜಿಎಸ್‌ಟಿ ಜಾರಿ ಬಳಿಕ ಬದಲಾಯಿತು. ಕೇಂದ್ರದ ವ್ಯಾಪ್ತಿಗೆ ಹೋದ ಮೇಲೆ ತೆರಿಗೆ ವಿನಾಯಿತಿ ಕಳೆದುಕೊಂಡೆವು” ಎಂದು ಹೇಳಿದರು.
“ಒಬ್ಬ ನಿರ್ಮಾಪಕ ಕಷ್ಟಪಟ್ಟು 10 ಕೋಟಿ ರೂ. ವೆಚ್ಚದಲ್ಲಿ ಒಂದು ಸಿನಿಮಾ ಮಾಡುತ್ತಾನೆ ಎಂದುಕೊಳ್ಳೋಣ. ಅದರಲ್ಲಿ 18 % ಜಿಎಸ್‌ಟಿ ಎಂದರೆ 1 ಕೋಟಿ 80 ಲಕ್ಷ ರೂ.ಗಳಾಗುತ್ತದೆ. ಬಡ್ಡಿ ಮೇಲೆ ಹಣ ತಂದಿರುತ್ತಾರೆ. ಹೀಗಿರುವಾಗ 1 ಕೋಟಿ 80 ಲಕ್ಷ ರೂ. ಮೊದಲೇ ಕಟ್ಟಿ ಎನ್ನುವುದು ಬಹಳ ಭಾರವಾಗುತ್ತದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಅತಿ ಹೆಚ್ಚು ಸಿನಿಮಾ ಬಿಡುಗಡೆ ಮಾಡಿದ ರಾಜ್ಯ ನಮ್ಮದು. ಒಂದು ರಾಜ್ಯಕ್ಕೆ ತೆರಿಗೆ ವಿನಾಯಿತಿ ನೀಡಿದರೆ ಮತ್ತೊಂದು ರಾಜ್ಯವೂ ಕೇಳುತ್ತದೆ ಎಂಬ ವಾದವನ್ನು ಮಂಡಿಸುತ್ತಾರೆ. ಆದರೆ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿರಿ: ಪೊಲೀಸ್ ವ್ಯವಸ್ಥೆಯ ವಾಸ್ತವಗಳತ್ತ ತಮಿಳು, ಮಲಯಾಳಂ ಚಿತ್ರರಂಗ
ವಿನಾಯಿತಿ ನೀಡಿದರೆ ಪ್ರೇಕ್ಷಕರು ಹೆಚ್ಚುತ್ತಾರೆ: ಕಿಶೋರ್ ಪತ್ತಿಕೊಂಡ
ಪುನೀತ್ ರಾಜ್‌ಕುಮಾರ್ ಅವರ ಕೊನೆಯ ಸಿನಿಮಾ ‘ಜೇಮ್ಸ್’ನ ನಿರ್ಮಾಪಕ ಹಾಗೂ ಹಂಚಿಕೆದಾರರೂ ಆಗಿರುವ ಕಿಶೋರ್ ಪತ್ತಿಕೊಂಡ ಮಾತನಾಡಿ, “ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಸರ್ಕಾರ ತೆರಿಗೆ ವಿನಾಯಿತಿ ನೀಡಿದರೆ ಬಹಳ ಅನುಕೂಲವಾಗುತ್ತದೆ. ಮೊದಲೆಲ್ಲ ತೆರಿಗೆ ಇರಲಿಲ್ಲ. ಆದರೆ ಈಗ ಪ್ರೇಕ್ಷಕರಿಗೂ ಭಾರವಾಗುತ್ತಿದೆ. ತೆರಿಗೆ ವಿನಾಯಿತಿ ನೀಡಿದರೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

“ಚಿತ್ರಮಂದಿರಗಳಿಂದ ಬರುವ ಆದಾಯ ಹೆಚ್ಚಾದರೆ, ಮೂವತ್ತು ದಿನಕ್ಕೆ ಓಟಿಟಿಗೆ ಹೋಗುವ ಸಿನಿಮಾ ಐವತ್ತು ದಿನಕ್ಕೆ ಹೋಗುತ್ತದೆ. ದುರಾದೃಷ್ಟವಶಾತ್ ಬಹಳಷ್ಟು ಚಿತ್ರಮಂದಿರಗಳು ಮುಚ್ಚಿಹೋಗುತ್ತಿವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಅನುಭವವೇ ಬೇರೆ. ಇಂದು ಚಿತ್ರಮಂದಿರಗಳು ಉಳಿಯಬೇಕಾದರೆ ತೆರಿಗೆ ವಿನಾಯಿತಿ ಅಗತ್ಯವಿದೆ. ಚಾರ್ಲಿಗೆ ಎಸ್‌ಜಿಎಸ್‌ಟಿ ವಿನಾಯಿತಿ ನೀಡಿದ್ದು ಖುಷಿ ತಂದಿದೆ. ಇದೇ ಕ್ರಮವನ್ನು ಎಲ್ಲ ಸಿನಿಮಾಗಳಿಗೆ ಅನ್ವಯಿಸುವ ಅಗತ್ಯವಿದೆ” ಎಂದು ಮನವಿ ಮಾಡಿದರು.
ತೆರಿಗೆ ವಿನಾಯಿತಿ ವಿಸ್ತರಿಸಿ: ಮಂಸೋರೆ
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಮಂಸೋರೆಯವರು, “ತೆರಿಗೆ ವಿನಾಯಿತಿ ನೀಡಿದರೆ ಮಧ್ಯಮ ಹಾಗೂ ಕಡಿಮೆ ಬಜೆಟ್ ಸಿನಿಮಾ ಮೇಕರ್ಸ್‌ಗಳಿಗೆ ಬಹಳ ಅನುಕೂಲವಾಗುತ್ತದೆ. ಚಾರ್ಲಿಗೆ ಕೊಟ್ಟಿರುವ ವಿನಾಯಿತಿಯನ್ನು ಎಲ್ಲ ಸಿನಿಮಾಗಳಿಗೆ ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
“ಜಿಎಸ್‌ಟಿ ಬಂದ ಮೇಲೆ ಕೇಂದ್ರದ ಹಿಡಿತಕ್ಕೆ ಸಿಲುಕಿ ರಾಜ್ಯ ಸರ್ಕಾರಗಳ ಕೈಕಾಲು ಕತ್ತರಿಸಿದಂತಾಗಿದೆ. ಒಟ್ಟಾಗಿ ಕೂತು ಮಾತನಾಡಿ, ವಿನಾಯಿತಿ ನೀಡಬೇಕಾಗಿದೆ. ಒಳ್ಳೆಯ ಸಿನಿಮಾ ಯಾವುದೆಂದು ವಾರ್ತಾ ಇಲಾಖೆ ನಿರ್ಧರಿಸಬೇಕಿದೆ. ಹಳೆಯ ಪದ್ಧತಿಯನ್ನು ಜಾರಿಗೆ ತರಬೇಕಾಗಿದೆ” ಎಂದು ಹೇಳಿದರು.

ಅಭಿಪ್ರಾಯ ನೀಡಲು ನಿರಾಕರಿಸಿದ ರಾಕ್‌ಲೈನ್
ಕನ್ನಡ ಚಿತ್ರರಂಗದ ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. “ತೆರಿಗೆ ವಿನಾಯಿತಿ ಬಗ್ಗೆ ಕಮೆಂಟ್ ಮಾಡಲು ಹೋಗಲ್ಲ” ಎಂದು ಹೇಳಿದರು.