ರಷ್ಯಾದ ಸ್ವತಂತ್ರ ಪತ್ರಿಕೆಯಾದ ‘ನೊವಾಯಾ ಗೆಜೆಟಾ’ದ ಸಂಪಾದಕರು ತಮಗೆ ದೊರೆತ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಹರಾಜು ಹಾಕಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧದಿಂದ ಸ್ಥಳಾಂತರಗೊಂಡ ಮಕ್ಕಳಿಗೆ ಸಹಾಯ ಮಾಡಲು ಹರಾಜು ಹಾಕಲು ಮುಂದಾಗಿದ್ದಾರೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ.
ಉಕ್ರೇನ್ ಮೇಲಿನ ಆಕ್ರಮಣದ ನಂತರದಲ್ಲಿ ಸಾಕಷ್ಟು ಸವಾಲುಗಳ ನಡುವೆ ವ್ಲಾಡಿಮಿರ್ ಪುಟಿನ್ ಅವರ ಸರ್ಕಾರವನ್ನು ಟೀಕಿಸುವ ಕೊನೆಯ ಪ್ರಮುಖ ಸ್ವತಂತ್ರ ಮಾಧ್ಯಮವನ್ನು ಡಿಮಿಟ್ರಿ ಮುರಾಟೋವ್ ಮುನ್ನಡೆಸಿದ್ದರು.
ಕಳೆದ ಅಕ್ಟೋಬರ್‌ನಲ್ಲಿ ಮುರಾಟೋವ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ತಮಗೆ ದೊರೆತ 500,000 ಡಾಲರ್ ಬಹುಮಾನದ ಹಣವನ್ನು ನಿರಾಶ್ರಿತ ಮಕ್ಕಳ ಭವಿಷ್ಯ ರೂಪಿಸಲು ಚಾರಿಟಿಗೆ ದಾನ ಮಾಡುವುದಾಗಿ ಘೋಷಿಸಿದರು. 23-ಕ್ಯಾರಟ್ ಚಿನ್ನದ ನೊಬೆಲ್ ಪದಕವನ್ನು ನ್ಯೂಯಾರ್ಕ್‌ನಲ್ಲಿ ಸೋಮವಾರ ಸಂಜೆ 7 ಗಂಟೆಗೆ ವಿಶ್ವ ನಿರಾಶ್ರಿತರ ದಿನದಂದು ಮಾರಾಟ ಮಾಡಲಿದ್ದಾರೆ. ಹರಾಜಿನಲ್ಲಿ ಬರುವ ಎಲ್ಲಾ ಹಣವೂ ಯುನಿಸೆಫ್‌ಗೆ ನೀಡಲಾಗುತ್ತಿದೆ. ಉಕ್ರೇನ್‌ನ ನಿರಾಶ್ರಿತ ಮಕ್ಕಳಿಗೆ ಸಹಾಯ ಮಾಡಲಾಗುತ್ತದೆ.
ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮುರಾಟೋವ್ ಮಾತನಾಡುತ್ತಾ, ರಷ್ಯಾದ ಆಕ್ರಮಣದಿಂದ ಸ್ಥಳಾಂತರಗೊಂಡ 14 ಮಿಲಿಯನ್ ಉಕ್ರೇನಿಯನ್ನರ ಪರ ಒಲವು ತೋರಿಸಿದರು. ಈ ಸ್ಥಳಾಂತರವನ್ನು “ದುರಂತ” ಎಂದು ಕರೆದಿದ್ದರು.
“ನಿರಾಶ್ರಿತರ ಸಂಖ್ಯೆಯನ್ನು ನೋಡಿದರೆ, ನಾವು ಮೂಲತಃ ಮೂರನೇ ಮಹಾಯುದ್ಧದಲ್ಲಿದ್ದೇವೆ. ಇದು ಸ್ಥಳೀಯವಾದ ಸಂಘರ್ಷವಲ್ಲ” ಎಂದಿದ್ದರು. “ಪ್ರಮಾದವಾಗಿದೆ. ನಾವು ಅದನ್ನು ಕೊನೆಗೊಳಿಸಬೇಕಾಗಿದೆ” ಎಂದಿದ್ದರು.
ಸೋವಿಯತ್ ಒಕ್ಕೂಟದ ವಿಭಜನೆಯ ನಂತರ 1993 ರಲ್ಲಿ ಸ್ಥಾಪಿತವಾದ ನೊವಾಯಾ ಗೆಜೆಟಾ, ರಷ್ಯಾದ ಒಳಗೆ ಮತ್ತು ಹೊರಗೆ ಭ್ರಷ್ಟಾಚಾರವನ್ನು ಹೊರಗೆಳೆಯಿತು. ಚೆಚೆನ್ಯಾದಲ್ಲಿ ಸುದೀರ್ಘ ಯುದ್ಧಗಳ ಕುರಿತು ತನಿಖಾ ವರದಿ ಮಾಡಿತು. ಮುರಾಟೋವ್ ಅವರು ನೊಬೆಲ್ ಪ್ರಶಸ್ತಿಯನ್ನು ತಮ್ಮ ಕೆಲಸದ ಕೆಲಸದ ಕಾರಣಕ್ಕೆ ಹತ್ಯೆಯಾದ ಪತ್ರಿಕೆಯ ಆರು ಪತ್ರಕರ್ತರಿಗೆ ಅರ್ಪಿಸಿದರು.
“ನಾನು ಉಕ್ರೇನ್‌ನಿಂದ ಬರೆಯುತ್ತಿದ್ದೇನೆ. ನಾನು ಕಳೆದ ಆರು ತಿಂಗಳಿಂದ ಅಲ್ಲಿದ್ದೇನೆ. ಸಂಘರ್ಷದ ನಿರ್ಮಾಣ ಮತ್ತು ಯುದ್ಧದ ಕಠೋರ ವಾಸ್ತವತೆಯ ಬಗ್ಗೆ ವರದಿ ಮಾಡಿದ್ದೇನೆ. ಇದು ನನ್ನ 30 ವರ್ಷಗಳ ವೃತ್ತಿಜೀವನದ ಅತ್ಯಂತ ತೀವ್ರವಾದ ಸಮಯ. ಡಿಸೆಂಬರ್‌ನಲ್ಲಿ ನಾನು ಉಕ್ರೇನಿಯನ್ ಸೈನ್ಯದೊಂದಿಗೆ ಡೊನೆಟ್ಸ್‌ಕ್ನ ಪ್ರದೇಶಗಳಿವೆ ಭೇಟಿ ಮಾಡಿದ್ದೇನೆ. ಜನವರಿಯಲ್ಲಿ ನಾನು ಮರಿಯುಪೋಲ್ಗೆ ಹೋದೆ. ನಂತರ ಕ್ರೈಮಿಯಾಗೆ ಬಂದೆ. ಫೆಬ್ರವರಿ 24 ರಂದು ರಷ್ಯಾದ ಬಾಂಬ್‌ಗಳು ಬಿದ್ದಾಗ ನಾನು ಉಕ್ರೇನಿಯನ್ ರಾಜಧಾನಿಯಲ್ಲಿ ಇತರ ಸಹೋದ್ಯೋಗಿಗಳೊಂದಿಗೆ ಇದ್ದೆ” ಎಂದಿದ್ದರು.
“1945ರ ನಂತರದಲ್ಲಿ ಯುರೋಪಿನಲ್ಲಿ ನಡೆದ ಅತಿ ದೊಡ್ಡ ಯುದ್ಧವಾಗಿದೆ. ಇದು ಉಕ್ರೇನಿಯನ್ನರಿಗೆ ಅಸ್ತಿತ್ವದ ಹೋರಾಟವಾಗಿದೆ. ಈ ಯುದ್ಧವು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ಅದನ್ನು ಕವರ್ ಮಾಡಲು ನಮ್ಮ ವರದಿಗಾರರು ಮತ್ತು ಸಂಪಾದಕೀಯ ತಂಡವು ಉದ್ದೇಶಿಸಿದೆ. ಯುದ್ಧದಲ್ಲಿ ಸಿಕ್ಕಿಬಿದ್ದವರ ಕಥೆಗಳನ್ನು, ಅಂತಾರಾಷ್ಟ್ರೀಯ ಆಯಾಮವನ್ನು ಹೇಳಲು ನಾವು ಬದ್ಧರಾಗಿದ್ದೇವೆ” ಎಂದಿದ್ದರು ಮುರಾಟೋವ್.