ಪಂಜಾಬ್ ಕಾಂಗ್ರೆಸ್‌ನಲ್ಲಿ ಒಡಕು ಮೂಡಿದ್ದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಾಂಗ್ರೆಸ್ ಹೈಕಮಾಂಡ್ 2 ಬಾರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ದೆಹಲಿಗೆ ಕರೆಸಿಕೊಂಡು ಭಿನ್ನಮತ ಶಮನಕ್ಕೆ ಪ್ರಯತ್ನ ನಡೆಸಿದೆ. ಹೈಕಮಾಂಡ್ ಪ್ರಯತ್ನ ಯಶಸ್ವಿಯಾಗುವ ಸೂಚನೆಗಳು ಸದ್ಯಕ್ಕೆ ಕಾಣುತ್ತಿಲ್ಲ.
ಇಂದು ಪಂಜಾಬ್ ಕಾಂಗ್ರೆಸ್ ಮುಖಂಡ ಮತ್ತು ಶಾಸಕ ನವಜೋತ್ ಸಿಂಗ್ ಸಿಧು ಅವರು AICC ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರನ್ನು ಭೇಟಿಯಾಗಿ ಚರ್ಚೆಯನ್ನು ನಡೆಸಿದ್ದಾರೆ. ಪ್ರಿಯಾಂಕಾ ಗಾಂಧಿಯವರ ನಡುವಿನ ತಮ್ಮ ಭೇಟಿಯನ್ನು ಸಿಧು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದು ಪಂಜಾಬ್ ಚುನಾವಣಾ ತಯಾರಿಯ ಕುರಿತು ದೀರ್ಘವಾದ ಚರ್ಚೆ ನಡೆದಿದೆ ಎಂದಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ ಆಡಳಿತಾಧಿಕಾರಿಗೆ ಮತ್ತೊಮ್ಮೆ ಹಿನ್ನಡೆ; ಮನೆ ಧ್ವಂಸ ಪ್ರಕ್ರಿಯೆಗೆ ಹೈಕೋರ್ಟ್ ತಡೆ
ನವಜೋತ್ ಸಿಂಗ್ ಸಿಧು ನಿನ್ನೆ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೇಳಿದ್ದು ರಾಹುಲ್ ಭೇಟಿಯನ್ನು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ನವಜೋತ್ ಸಿಂಗ್ ಮತ್ತು ರಾಹುಲ್ ಭೇಟಿಯ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಆ ರೀತಿಯ ಯಾವ ಸಭೆ ಕೂಡ ನಡೆಯುತ್ತಿಲ್ಲ. ಸಿಧು ಭೇಟಿಯ ವಿಷಯ ತಮಗೆ ತಿಳಿದಿಲ್ಲ ಎಂದು ರಾಹುಲ್ ವದಂತಿಯನ್ನು ತಳ್ಳಿ ಹಾಕಿದ್ದರು.
ನವಜೋತ್ ಸಿಂಗ್ ಸಿಧು ಅವರು ಉಪಮುಖ್ಯ ಮಂತ್ರಿ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಧು ಬೇಡಿಕೆಗೆ ಒಪ್ಪಿಲ್ಲ. ಹೀಗಾಗಿ ಕ್ಯಾಪ್ಟನ್ ಮತ್ತು ಸಿಧು ನಡುವೆ ಆಂತರಿಕ ಕಚ್ಚಾಟ ಆರಂಭವಾಗಿದೆ ಎಂದು ಪಂಜಾಬ್ ಕಾಂಗ್ರೆಸ್‌ನ ನಾಯಕರೊಬ್ಬರು ತಿಳಿಸಿದ್ದಾರೆ. ನವಜೋತ್ ಸಿಂಗ್ ಸಿಧು ಜೂನ್ ಆರಂಭದಿಂದಲೂ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರ ಭೇಟಿಗೆ ಅವಕಾಶ ಕೇಳುತ್ತಿದ್ದು ಸಿಧು ಅವರಿಗೆ ಸೋನಿಯಾ ಅವರನ್ನು ಭೇಟಿಯಾಗುವ ಅವಕಾಶ ಇದುವರೆಗೆ ಸಿಕ್ಕಿಲ್ಲ.
ಇದನ್ನೂ ಓದಿ: ಕಾಸರಗೋಡು ಗಡಿ ಗ್ರಾಮಗಳ ಹೆಸರು ಬದಲಿಸುವಿಕೆ: ಸತ್ಯ ಮತ್ತು ಅರೆಸತ್ಯಗಳು
2022 ರ ಆರಂಭದಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು ವಿರೋಧ ಪಕ್ಷಗಳಾದ ಶಿರೋಮಣಿ ಅಕಾಲಿದಳ, ಆಮ್ ಆದ್ಮಿ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ ದಿನ ನಿತ್ಯದ ವಿದ್ಯಮಾನವಾಗಿದೆ. ಪಂಜಾಬ್ ಕಾಂಗ್ರೆಸ್‌ನ ಭಿನ್ನಾಭಿಪ್ರಾಯಗಳು ದೆಹಲಿಯ ನಾಯಕರಿಗೆ ನಿದ್ದೆಗೆಡಿಸಿದ್ದು ಸಮಸ್ಯೆಯನ್ನು ಬಗೆಹರಿಸುವ ಎಲ್ಲ ಪ್ರಯತ್ನಗಳು ವಿಫಲವಾಗುತ್ತಲೇ ಇದೆ.
ಈ ನಡುವೆ ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷವನ್ನು ಸೇರುತ್ತಾರೆ ಎಂಬ ವದಂತಿಗಳು ಹರಿದಾಡುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೊತೆ ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈ ಹಿಂದೆ ಆರೋಪಿಸಿದ್ದರು.
ಇದನ್ನೂ ಓದಿ: ಪಿಕೆ ಟಾಕೀಸ್; ಮುಂದುವರೆದ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ ಸಂಕೋಲೆಗಳಲ್ಲಿ ಸಿಕ್ಕಿಕೊಂಡವರ ಕಥೆಗಳು


