ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ನಿವಾಸಗಳ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಕೇಂದ್ರದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರವನ್ನು ನಾಜಿ ಸರ್ಕಾರ ಎಂದು ಬಣ್ಣಿಸಿದ ತೇಜಸ್ವಿ, ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯನ್ನು ವಿರೋಧಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.
“ಮೊದಲು, ಅವರು ರಾಜಕೀಯ ವಿರೋಧಿಗಳನ್ನು ಹಣಿಯಲು ಆದಾಯ ತೆರಿಗೆ ಇಲಾಖೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು ಬಳಸಿ ದಾಳಿ ನಡೆಸಿದರು. ನಿಜ ಹೇಳಬೇಕೆಂದರೆ ನಾಜಿ ಆಡಳಿತವು ಈಗ ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಮತ್ತು ಕಲಾವಿದರನ್ನು ಬೇಟೆಯಾಡುತ್ತಿದೆ. ಇದು ಆಕ್ಷೇಪಾರ್ಹ” ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದ್ದಾರೆ.
They first employed IT, CBI, ED to conduct raids on vocal & upright political rivals for their character assassination.
Now Nazi govt is chasing social activists, journalists & artists to threaten them against calling spade a spade.
Condemnable Act! @taapsee @anuragkashyap72
— Tejashwi Yadav (@yadavtejashwi) March 3, 2021
ಇದನ್ನೂ ಓದಿ: ಕೇಂದ್ರದ ವಿರುದ್ದ ಧ್ವನಿ ಎತ್ತುತ್ತಿದ್ದ ನಟಿ ತಾಪ್ಸಿ ಪನ್ನು ಆಸ್ತಿಗಳ ಮೇಲೆ ಐಟಿ ದಾಳಿ
ಆದಾಯ ತೆರಿಗೆ ಇಲಾಖೆಯು ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್‌ಗೆ ಸಂಬಂಧಿಸಿದ ಸುಮಾರು 20 ಸ್ಥಳಗಳಲ್ಲಿ ದಾಳಿ ನಡೆಸಿದೆ. ನಿರ್ಮಾಪಕ ಮತ್ತು ಉದ್ಯಮಿ ಮಧು ವರ್ಮಾ ಮಂಟೇನಾ ಅವರ ಮನೆಯ ಮೇಲೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಮುಂಬೈ ಮತ್ತು ಪುಣೆಯಲ್ಲಿ ಈ ದಾಳಿ ನಡೆದಿದ್ದು, ತೆರಿಗೆ ವಂಚನೆ ಆರೋಪದ ಮೇಲೆ ತನಿಖೆ ನಡೆಸುತ್ತಿದೆ.
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರು ರಾಜಕೀಯ ವಿಷಯಗಳ ಬಗ್ಗೆ ನಿರಂತರವಾಗಿ ಪ್ರತಿಕ್ರಿಯಿಸುವವರಾಗಿದ್ದಾರೆ. ಅಷ್ಟೇ ಅಲ್ಲದೆ ಅವರು ಸಂಘ ಪರಿವಾರವನ್ನು ಕೂಡಾ ಆಗಾಗ್ಗೆ ಟೀಕೆ ಮಾಡುತ್ತಲೆ ಇದ್ದಾರೆ. ರೈತರ ಹೋರಾಟಕ್ಕೆ ಸಂಬಂಧಿಸಿದಂತೆ ತಾಪ್ಸಿ ಪನ್ನು ಇತ್ತೀಚೆಗೆ ನೀಡಿರುವ ಹೇಳಿಕೆಯಿಂದ ಕೇಂದ್ರವು ಆಕ್ರೋಶಗೊಂಡಿದೆ ಎನ್ನಲಾಗಿದೆ.
ಇದನ್ನೂ ಓದಿ: ’ಒಂದು ಟ್ವೀಟ್‌ನಿಂದ ನಿಮ್ಮ ಐಕ್ಯತೆ ಧಕ್ಕೆ ಆಗುವುದಾದರೆ…’ ಭಾರತೀಯ ಸಲೆಬ್ರಿಟಿಗಳ ಕಪಾಳಕ್ಕೆ ಬಾರಿಸಿದ ತಾಪ್ಸಿ ಪನ್ನು!


