ಬಡತನವನ್ನೇ ಸಾಧನೆಯ ಮೆಟ್ಟಿಲಾಗಿಸಿದ್ದ ’ದ ಫೈಯಿಂಗ್ ಸಿಖ್’ ಖ್ಯಾತಿಯ ದಂತಕಥೆ ಮಿಲ್ಕಾ ಸಿಂಗ್ ಅವರ ಏಕೈಕ ಕನಸಾಗಿತ್ತು ಒಲಿಂಪಿಕ್ಸ್ ಕ್ರೀಡಾಕೂಟದ ಆ ಒಂದು ಮೆಡಲ್! ಆದರೆ ವಿಪರ್ಯಾಸ ನೋಡಿ ಕಾಮನ್‌ವೆಲ್ತ್ ಗೇಮ್ಸ್, ಏಷಿಯನ್ ಗೇಮ್ಸ್ ಹಾಗೂ ನ್ಯಾಷನಲ್ ಗೇಮ್ಸ್‌ಗಳಲ್ಲಿ ಸಾಲು ಸಾಲು ಚಿನ್ನದ ಪದಕಕ್ಕೆ ಮುತ್ತಿಟ್ಟ ಮಿಲ್ಕಾ ಸಿಂಗ್ ಅವರಿಗೆ 1964ರ ರೋಮ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 0.1 ಸೆಕೆಂಡ್ ಅಂತರದಲ್ಲಿ ಆ ಪದಕ ಮಿಸ್ ಆಗಿ ಹೋಗಿತ್ತು.
ಓಟದ ಅಂಗಳದ ರಾಣಿ ಎಂದೇ ಹೆಮ್ಮೆಯಿಂದ ಕರೆಯಲ್ಪಡುವ, ಸಾವಿರಾರು ಹೆಣ್ಣು ಮಕ್ಕಳ ಸ್ಪೂರ್ತಿಯಾಗಿರುವ ಪಿಟಿ ಉಷಾ ಕನಸೂ ಅದೇ ಆಗಿತ್ತು. ಒಲಿಂಪಿಕ್ಸ್ ಅಥ್ಲೆಟಿಕ್ ವಿಭಾಗದಲ್ಲಿ ಭಾರತಕ್ಕೊಂದು ಪದಕ ತಂದುಕೊಡುವುದು. ಆದರೆ, ಏಷಿಯನ್ ಗೇಮ್ಸ್, ಏಷಿಯನ್ ಚಾಂಪಿಯನ್‌ಶಿಪ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಾಲು ಸಾಲು ಚಿನ್ನದ ಪದಕ ಜಯಿಸಿದ್ದ ಪಿಟಿ ಉಷಾ ಎಷ್ಟೇ ಪ್ರಯತ್ನಪಟ್ಟರೂ ಸಹ ಕೊನೆಗೂ ಆ ಒಂದು ಪದಕವನ್ನು ಒಲಿಸಿಕೊಳ್ಳಲಾಗದ ನಿರಾಸೆಯಲ್ಲೇ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದರು.

ಆದರೆ, ಶತಮಾನದ ಆಸೆ-ಆಕಾಂಕ್ಷೆ, ನಿರೀಕ್ಷೆ, ಭರವಸೆಗಳೆಲ್ಲಾ ಕೊನೆಗೂ ಈಗ ಫಲಿಸಿದೆ. ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ವಿಭಾಗದಲ್ಲಿ 121 ವರ್ಷದ ಬಳಿಕ ಆ ಸ್ವರ್ಣ ಪದಕದ ಆಸೆ ಕೈಗೂಡಿದೆ. ಇಡೀ ಒಲಿಂಪಿಕ್ಸ್ ಇತಿಹಾಸದಲ್ಲೇ ಜಾವಲಿನ್ ಥ್ರೋ ಆಟದಲ್ಲಿ ಭಾರತಕ್ಕೆ ಮೊದಲ ಸ್ವರ್ಣ ಪದಕ ಗೆಲ್ಲುವ ಮೂಲಕ ನೀರಜ್ ಚೋಪ್ರ ಇಡೀ ಭಾರತದ ಕನಸನ್ನು ಇದೀಗ ಸಾಕಾರಗೊಳಿಸಿದ್ದಾರೆ. ಪದಕ ಬರ ಎದುರಿಸಿದ್ದ ಭಾರತದ ಪಾಲಿಗೆ ಮತ್ತು ಭವಿಷ್ಯದ ಕ್ರೀಡಾಪಟುಗಳಿಗೆ ದೊಡ್ಡದೊಂದು ಆಶಾಕಿರಣ ಕಾಣಲು ಕಾರಣರಾಗಿದ್ದಾರೆ. ಆದರೆ, ನೀರಜ್ ಚೋಪ್ರ ಅವರ ಸ್ವರ್ಣ ಪದಕದ ಹಾದಿ ಅಷ್ಟು ಸುಲಭದ್ದಾಗಿರಲಿಲ್ಲ. ಅವರ ಯಶಸ್ಸಿನ ನಡೆ ಮತ್ತು ಜಾವಲಿನ್ ಆಟದ ಬಗೆಗಿನ ಮಾಹಿತಿ ಕುತೂಹಲಕಾರಿಯಾದದ್ದು.
ನೀರಜ್ ಚೋಪ್ರ ಸ್ವರ್ಣದ ಹಾದಿ!
ಪ್ರಸ್ತುತ ಭಾರತ ಮಾತ್ರವಲ್ಲ ಇಡೀ ಏಷ್ಯಾ ಖಂಡದಲ್ಲಿನ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಮತ್ತೆ ಮತ್ತೆ ಅಚ್ಚರಿಯಿಂದ ಉಚ್ಚರಿಸಲಾಗುತ್ತಿರುವ ಹೆಸರು ನೀರಜ್ ಚೋಪ್ರ. ಅದಕ್ಕೆ ಕಾರಣಗಳು ಇಲ್ಲದೆ ಏನಿಲ್ಲ. ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಅಷ್ಟೇ ಎಂದು ಭಾವಿಸಿರುವ ಈ ಹಲವು ದೇಶಗಳಲ್ಲಿ ಜಾವೆಲಿನ್ ಥ್ರೋನಂತರ ಕ್ರೀಡೆಗಳಿಗೆ ಜನಮನ್ನಣೆಯೇನೂ ಇಲ್ಲ. ಸರ್ಕಾರದ ಪೋಷಣೆಯಂತು ನಿರೀಕ್ಷಿತ ಮಟ್ಟದಲ್ಲಿ ಮೊದಲೇ ಇಲ್ಲ. ಇದೇ ಕಾರಣಕ್ಕೆ ಈ ಕ್ರೀಡೆಯನ್ನು ವೃತ್ತಿ ಬದುಕಾಗಿ ಹೊಂದುವವರ ಸಂಖ್ಯೆಯೂ ತೀರಾ ವಿರಳಾತಿ ವಿರಳ ಎನ್ನಬಹುದೇನೋ! ಭಾರತೀಯ ಕ್ರೀಡಾಲೋಕದ ಹಣೆಬರಹವೂ ಇದಕ್ಕಿಂತ ಭಿನ್ನವೇನಲ್ಲ. ಇಂತಹ ಪ್ರತಿಕೂಲ ವ್ಯವಸ್ಥೆಯಿಂದ ಎದ್ದು ಬಂದ ಪ್ರತಿಭೆಯೇ ನೀರಜ್ ಚೋಪ್ರ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪುರುಷರ ಜಾವಲಿನ್ ಥ್ರೋ ಸ್ಪರ್ಧೆಯಲ್ಲಿ ಈಟಿಯನ್ನು ಬರೋಬ್ಬರಿ 87.65 ಮೀ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಭಾರತಕ್ಕೆ ಈ ಒಲಿಂಪಿಕ್ಸ್‌ನ ಮೊದಲ ಚಿನ್ನ ತಂದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ.
ಈ ಮೂಲಕ ಒಲಿಂಪಿಕ್ಸ್ ಕ್ರೀಡಾಗಣದಲ್ಲಿ ಭಾರತದ ರಾಷ್ಟ್ರಗೀತೆಯನ್ನು 13 ವರ್ಷಗಳ ನಂತರ ಹಾಡಿಸುವಂತೆ ಮಾಡಿದ್ದಾರೆ. 2008ರ ಬೀಜಿಂಗ್ ಒಲಿಂಪಿಕ್ಸ್‌ನ ಶೂಟಿಂಗ್ ಪಂದ್ಯದಲ್ಲಿ ಅಭಿನವ್ ಬಿಂದ್ರಾ ಚಿನ್ನ ಗೆದ್ದಿದ್ದರು. ಜೊತೆಗೆ ಭಾರತೀಯ ರಾಷ್ಟ್ರಗೀತೆಯನ್ನು ಒಲಿಂಪಿಕ್ಸ್‌ನ ಅಥ್ಲೆಟಿಕ್ಸ್ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ನುಡಿಸುವಂತೆ ಮಾಡಿದ ಕೀರ್ತಿ ನೀರಜ್ ಚೋಪ್ರಾ ಅವರ ಪಾಲಿಗೆ ದಕ್ಕಿದೆ. ಇಷ್ಟೇ ಅಲ್ಲದೆ ಸುಮಾರು 121 ವರ್ಷಗಳ ನಂತರ ಭಾರತಕ್ಕೆ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಪದಕ ಲಭಿಸಿದೆ. ಟ್ರ್ಯಾಕ್ ಮತ್ತು ಫೀಲ್ಡ್‌ನಲ್ಲಿ 1900ರಲ್ಲಿ ನಾರ್ಮನ್ ಪ್ರಿಚರ್ಡ್ ಅವರು ಪಡೆದಿದ್ದ ಬೆಳ್ಳೆ ಪದಕವೆ ಭಾರತಕ್ಕೆ ಕೊನೆಯದ್ದಾಗಿತ್ತು.
ಒಲಿಂಪಿಕ್ಸ್‌ಗಿಂತ ಮುಂಚೆಯೂ ನೀರಜ್ ಚೋಪ್ರ 2016ರಲ್ಲಿ ಮೊದಲ ಬಾರಿಗೆ ಭಾರತವನ್ನು ಪ್ರತಿನಿಧಿಸಿ, ಐಎಎಎಫ್ (ಇಂಟರ್ ನ್ಯಾಷನಲ್ ಅಸೋಸಿಯೇಶನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್) ಕಿರಿಯರ ವಿಶ್ವ ಕ್ರೀಡಾಕೂಟದಲ್ಲಿ ಗೆದ್ದು ಚಾಂಪಿಯನ್ ಆಗಿ ಮಿಂಚಿದ್ದರು.
2018ರ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ನಲ್ಲಿ ಭಾಗವಹಿಸಿದ್ದ ಇವರು ಎರಡೂ ಕ್ರೀಡಾ ಕೂಟದಲ್ಲಿಯೂ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೆ, ಏಷ್ಯನ್ ಗೇಮ್ಸ್‌ನಲ್ಲಿ 88.06 ಮೀ ದೂರ ಜಾವೆಲಿನ್ ಎಸೆದು ರಾಷ್ಟ್ರೀಯ ದಾಖಲೆ ಬರೆದಿದ್ದರು.

2018ರ ಏಷ್ಯನ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಬಾವುಟ ಹಿಡಿದು ಭಾರತದ ಕ್ರೀಡಾಳುಗಳನ್ನು ಪ್ರತಿನಿಧಿಸುವ ಅವಕಾಶವೂ ಇವರಿಗೆ ದಕ್ಕಿದ್ದು, ನೀರಜ್ ಅವರಿಗೆ ಮತ್ತೊಂದು ಹಿರಿಮೆಯನ್ನು ತಂದುಕೊಟ್ಟಿತ್ತು.
2017ರ ಏಷ್ಯನ್ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ 85.23 ಮೀ. ಜಾವೆಲಿನ್ ಎಸೆದು ಸ್ವರ್ಣ ಪದಕ ಪಡೆದಿದ್ದಾರೆ. 2018ರ ಮೇ ತಿಂಗಳಲ್ಲಿ ನಡೆದ ದೋಹ ಡೈಮಂಡ್ ಲೀಗ್ ಪಂದ್ಯದಲ್ಲಿ ಭಾಗವಹಿಸಿ 87.43 ಮೀ. ಜಾವೆಲಿನ್ ಎಸೆಯುವುದರೊಂದಿಗೆ ಹಳೆಯ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. ಫಿನ್‌ಲ್ಯಾಂಡಿನ ಲ್ಯಾಪಿನ್ಲಾಟಿಯಲ್ಲಿ ನಡೆದ ’ಸಾವೋ ಗೇಮ್ಸ್’ನಲ್ಲೂ ಸ್ವರ್ಣ ಪದಕ ಪಡೆದಿದ್ದ ನೀರಜ್ ಚೋಪ್ರ ಅವರ ಸ್ವರ್ಣ ಪದಕದ ಗಳಿಗೆ ಇದೀಗ ಒಲಿಂಪಿಕ್ಸ್‌ನಲ್ಲೂ ಮುಂದುವರೆದಿದೆ.
ಸರಕಾರದ ಪ್ರೋತ್ಸಾಹವಿಲ್ಲದೆಯೇ ಚಿನ್ನ
ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ತರಬೇತುದಾರ ಉವೆ ಹಾನ್ ಜೂನ್ ತಿಂಗಳಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಸಂದರ್ಶನವೊಂದನ್ನು ನೀಡಿದ್ದರು. ಉವೆ ಹಾನ್ ಜರ್ಮನಿ ದೇಶದ ಜಾವಲಿನ್ ದಂತಕಥೆ. ವಿಶ್ವದಲ್ಲಿ ನೂರು ಮೀಟರಿಗಿಂತ ದೂರ ಜಾವಲಿನ್ ಎಸೆದ ಏಕೈಕ ಕ್ರೀಡಾಪಟು.
ಆ ಸಂದರ್ಶನದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ವಿರುದ್ಧ ಕಿಡಿಕಾರಿದ್ದ ಉವೆ ಹಾನ್, “ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಕ್ರೀಡಾಪಟುಗಳಿಗೆ ಒದಗಿಸುವ ಡಯಟ್ ಹಾಗೂ ನ್ಯೂಟ್ರಿಷನ್ ಆಹಾರಗಳು ತೀರಾ ಕಳಪೆ ಗುಣಮಟ್ಟದ್ದಾಗಿದ್ದು, ಕ್ರೀಡಾಪಟುಗಳಿಗೆ ಪೌಷ್ಟಿಕಾಂಶವನ್ನು ಒದಗಿಸಲಾಗದ ಸ್ಥಿತಿಯಲ್ಲಿದೆ. ಹೀಗಾಗಿ ನೀರಜ್ ಚೋಪ್ರ ಅನಿವಾರ್ಯವಾಗಿ ತರಬೇತಿಗಾಗಿ ವಿದೇಶದ ಕಡೆಗೆ ಮುಖ ಮಾಡಬೇಕಾಯಿತು.
ಆದರೆ, ನೀರಜ್ ಚೋಪ್ರಾಗೆ ಯೂರೋಪಿನಲ್ಲಿ ತರಬೇತಿ ದೊರೆಯಲು ಸಾಧ್ಯವಾಗಿದ್ದು ಜೆಎಸ್‌ಡಬ್ಲ್ಯು ಸಂಸ್ಥೆಯ ಪ್ರೋತ್ಸಾಹದಿಂದಾಗಿ. ಅವರು ಏಶಿಯನ್ ಮತ್ತು ಕಾಮನ್‌ವೆಲ್ತ್ ಸ್ಪರ್ಧೆಗಳ ವಿಜೇತರಿಗೆ ವಿದೇಶಗಳಲ್ಲಿ ತರಬೇತಿಯನ್ನು ಪ್ರಾಯೋಜಕತ್ವ ಮಾಡುವುದರಿಂದಾಗಿ ನೀರಜ್‌ಗೆ ಅವಕಾಶ ಲಭಿಸಿತ್ತು. ಭಾರತ ಸರಕಾರವಾಗಲಿ, ಕೇಂದ್ರ ಕ್ರೀಡಾ ಪ್ರಾಧಿಕಾರವಾಗಲಿ ಯಾವುದೇ ರೀತಿಯ ಸಹಾಯವನ್ನು ಮಾಡಿರಲಿಲ್ಲ.
ಟಾರ್ಗೆಟ್ ಫಾರ್ ಒಲಿಂಪಿಕ್ ಪೋಡಿಯಂ ಸ್ಕೀಮಿಗೆ ಕ್ರೀಡಾಪಟುಗಳನ್ನು ನೇರವಾಗಿ ಕೇಂದ್ರ ಕ್ರೀಡಾ ಸಚಿವಾಲಯ ಆಯ್ಕೆ ಮಾಡುತ್ತಿದ್ದು, ಅವರಿಗೆ ಕನಿಷ್ಠ ಪೌಷ್ಟಿಕ ಆಹಾರವನ್ನೂ ಅದು ಒದಗಿಸಿಕೊಡುವುದಿಲ್ಲ. ಕೋಚ್‌ಗಳಿಗೆ ನೀಡುವ ಯಾವ ಆಶ್ವಾಸನೆಗಳೂ ಈಡೇರುವುದಿಲ್ಲ. ತಮ್ಮ ದೇಶಗಳಿಗೆ ಪದಕಗಳನ್ನು ನಿರೀಕ್ಷಿಸುವ ಯಾವುದೇ ಸರಕಾರಗಳು ಮಾಡಬೇಕಾದ ರೀತಿ ಇದಲ್ಲ ಎಂಬ ಉವೆ ಹಾನ್ ಅವರ ಮಾತುಗಳು ಭಾರತದಲ್ಲಿ ಕ್ರೀಡೆಗಳಿಗೆ ಸರ್ಕಾರ ಯಾವ ರೀತಿಯ ಪ್ರಾಶಸ್ತ್ಯ ನೀಡುತ್ತಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತದೆ. ಪದಕ ಗೆಲ್ಲುವ ನಿರೀಕ್ಷೆ ಇದ್ದ ನೀರಜ್ ಚೋಪ್ರಗೆ ಈ ಸ್ಥಿತಿ ಎಂದರೇ ಇನ್ನು ಉಳಿದವರಿಗೆ ಸರ್ಕಾರ ಎಷ್ಟು ಪ್ರೋತ್ಸಾಹ ಕೊಟ್ಟೀತು? ಎಂಬುದನ್ನು ನೀವೆ ಊಹಿಸಿಕೊಳ್ಳಿ.
ಅಥ್ಲೆಟಿಕ್‌ನಲ್ಲಿ ಅಪರೂಪದ ಸಾಧನೆ

ಭಾರತದ ಹಾಕಿ ತಂಡ 1920ರಿಂದಲೂ ಒಲಿಂಪಿಕ್ಸ್‌ನಲ್ಲಿ ಸಾಲು ಸಾಲು ದಾಖಲೆಗಳನ್ನು ನಿರ್ಮಿಸಿದೆ. ಒಟ್ಟು 8 ಬಾರಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದೆ. ಹಾಕಿಯಲ್ಲಿ ಈ ಸಾಧನೆ ಮಾಡಿದ ಏಕೈಕ ದೇಶ ಬಾರತ ಎಂಬ ಹೆಗ್ಗಳಿಕೆಯೂ ಇದೆ. ಈ ಹೆಗ್ಗಳಿಕೆಯ ಹಿಂದಿದ್ದ ಮೇಜರ್ ಧ್ಯಾನ್ ಚಂದ್ ಎಂಬ ಹಾಕಿ ಸ್ಟಿಕ್ ಜಾದೂಗಾರ ದಂತಕಥೆಯನ್ನು ವಿಶ್ವ ಕ್ರೀಡಾ ಇತಿಹಾಸ ಇಂದಿಗೂ ಕೊಂಡಾಡುತ್ತಿರುವುದು ಅತಿಶಯೋಕ್ತಿಯಲ್ಲ. ಆ ನಂತರ ಭಾರತ ಒಲಿಂಪಿಕ್ಸ್ ಚಿನ್ನ ಗೆಲ್ಲಲು ಶತಮಾನಗಳೇ ಕಾಯಬೇಕಾಗಿತ್ತು. 2008ರಲ್ಲಿ ಬೀಜಿಂಗ್‌ನಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಭಿನವ್ ಬಿಂದ್ರಾ ರೈಫಲ್ಸ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದಿದ್ದರು.
ಜಾವೆಲಿನ್ ಇತಿಹಾಸ
ಜಾವೆಲಿನ್ ಥ್ರೋ ಆಟಕ್ಕೆ ಕ್ರಿಸ್ತಪೂರ್ವ ಕಾಲದಿಂದಲೂ ಇತಿಹಾಸ ಇದೆ. ಕ್ರಿ.ಪೂ. 708ರಲ್ಲೇ ಪೆಂಟಥ್ಲಾನ್‌ನಲ್ಲಿ ನಡೆದಿದ್ದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಈ ಆಟವನ್ನು ಮೊದಲ ಬಾರಿಗೆ ಪರಿಚಯ ಮಾಡಲಾಗಿತ್ತು. ಮೊದ ಮೊದಲು ಅತ್ಯಂತ ದೂರಕ್ಕೆ ಎಸೆಯುವುದು ಮತ್ತು ನಿಖರವಾಗಿ ಒಂದು ಗುರಿಗೆ ಹೊಡೆಯುವ ರೀತಿಯಲ್ಲಿ ಈ ಆಟವನ್ನು ಪ್ರಚುರಪಡಿಸಲಾಗಿತ್ತು.
ಆದರೆ, 1870ರ ವೇಳೆಗೆ ಜರ್ಮನ್ ಮತ್ತು ಸ್ವೀಡನ್‌ನಲ್ಲಿ ಈ ಆಟವನ್ನು ಮತ್ತಷ್ಟು ನವೀಕರಣಗೊಳಿಸಲಾಯಿತು ಮತ್ತು ಅಭಿವೃದ್ಧಿಪಡಿಸಲಾಯಿತು. 1880ರ ದಶಕದ ವೇಳೆಗೆ ಈ ಕ್ರೀಡೆ ಫಿನ್ಲೆಂಡ್‌ನಲ್ಲಿ ಭಾರೀ ಜನಪ್ರಿಯತೆ ಗಳಿಸಿತ್ತು. ತದನಂತರದ ಕಾಲಘಟ್ಟಗಳಲ್ಲಿ ಈ ಕ್ರೀಡೆ ಮತ್ತು ಅದರ ನಿಯಮಗಳು ವಿಕಸನಗೊಳ್ಳುತ್ತಲೇ ಸಾಗಿದ್ದವು.
ಮೂಲತಃ ಆರಂಭದ ದಿನಗಳಲ್ಲಿ ಜಾವೆಲಿನ್‌ಗಳನ್ನು ಯಾವುದೇ ರನ್-ಅಪ್ ಇಲ್ಲದೆ ಎಸೆಯಲಾಗುತ್ತಿತ್ತು. ಆದರೆ, 1890ರ ಅಂತ್ಯದಲ್ಲಿ ಸೀಮಿತ ರನ್-ಅಪ್‌ಗಳನ್ನು ಪರಿಚಯಿಸಲಾಯಿತು ಮತ್ತು ಶೀಘ್ರದಲ್ಲೇ ಆಧುನಿಕ ಅನಿಯಮಿತ ರನ್-ಅಪ್‌ಗೆ ಅವಕಾಶವನ್ನೂ ನೀಡಲಾಯಿತು.
ಆಧುನಿಕ್ ಜಾವೆಲಿನ್ ಥ್ರೋ ಒಲಿಂಪಿಕ್ಸ್‌ನಲ್ಲಿ ಪರಿಚಯವಾದದ್ದು 1908 ಲಂಡನ್ ಕ್ರೀಡಾಕೂಟದಲ್ಲೇ. ಆ ವರ್ಷ ಮೊದಲ ಚಿನ್ನದ ಪದಕ ಗಳಿಸಿದ್ದ ವ್ಯಕ್ತಿ ಸ್ವೀಡನ್ ಮೂಲದ ಎರಿಕ್ ಲೆಮ್ಮಿಂಗ್. 1912ರಲ್ಲಿ ಸ್ಟಾಕ್ಹೋಮ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲೂ ಎರಿಕ್ ಲೆಮ್ಮಿಂಗ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.
ಇನ್ನೂ 1932ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ಒಲಿಂಪಿಕ್ಸ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ವಿಭಾಗದಲ್ಲೂ ಜಾವೆಲಿನ್ ಥ್ರೋಅನ್ನು ಪರಿಚಯಿಸಲಾಗಿತ್ತು. ಆ ವರ್ಷದ ಚಿನ್ನ ಅಮೆರಿಕದ ಬೇಬ್ ಡಿಡ್ರಿಕ್ಸನ್ ಪಾಲಾಗಿತ್ತು.
ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್: ಭಾರತಕ್ಕೆ ಮೊದಲ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ!