ಜನರಲ್ಲಿರುವ ಕೊರೊನಾ ಆತಂಕ ಅವರೊಳಗಿನ ಮನುಷ್ಯತ್ವವನ್ನು ಕೊಲ್ಲುತ್ತಿರುವ ಕಾಲಘಟ್ಟವಿದು.
ತನ್ನ ತಾಯಿಯ ಮೃತದೇಹದ ಬಳಿ ಎರಡು ದಿನ ಕಳೆದ ಈ ಕಂದ ನೀರಡಿಕೆ, ಹಸಿವಿನಿಂದ ಬಳಲುತ್ತಿತ್ತು. ತಾಯಿ ಕೊರೊನಾನಿಂದ ಮರಣ ಹೊಂದಿರಬಹುದು ಎಂದು ಊಹಿಸಿದ ನೆರೆಹೊರೆಯವರು ಮಗುವಿನ ನೆರವಿಗೆ ಧಾವಿಸಲೇ ಇಲ್ಲ. ಕೊನೆಯಲ್ಲಿ ಇಬ್ಬರು ಮಹಿಳಾ ಪೊಲೀಸರು ಈ ಕಂದನಿಗೆ ತಾಯಿ ಪ್ರೀತಿ ತೋರಿಸಿ ಜೀವ ಕಾಪಾಡಿದ್ದಾರೆ.
ಎರಡನೇ ಅಲೆಯಲ್ಲಿ ತೀವ್ರ ಬಾಧೆಗೊಳಗಾದ ನಗರ ಎನಿಸಿರುವ ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ ವಾರ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪುಣೆಯ ಸಮೀಪದ ಪಿಂಪ್ರಿ ಚಿಂಚ್‌ವಾಡ್‌ನ ಒಂದು ಮನೆಯೊಳಗೆ ಎರಡು ದಿನಗಳ ಕಾಲ, ಮೃತ ತಾಯಿಯ ದೇಹದ ಪಕ್ಕದಲ್ಲಿ ಈ ಮಗು ಕಾಲ ಕಳೆದಿದೆ.
ಇದನ್ನೂ ಓದಿ: ‘ಅದು ಹೃದಯವಲ್ಲ, ಕಲ್ಲು’- ಮೋದಿಗೆ ಪರೋಕ್ಷವಾಗಿ ಕುಟುಕಿದ ರಾಹುಲ್ ಗಾಂಧಿ
ಕೋವಿಡ್‌ಗೆ ಹೆದರಿ ಯಾರೂ ನೆರವಿಗೆ ಬರಲಿಲ್ಲ. ಶವದ ದುರ್ನಾತದಿಂದ ಬೇಸರಗೊಂಡ ಭೂಮಾಲೀಕನೊಬ್ಬ ಪೊಲೀಸರನ್ನು ಕರೆಸಿದ್ದಾನೆ.
ಸೋಮವಾರ, ಪೊಲೀಸರು ಮನೆಯೊಳಗೆ ಪ್ರವೇಶಿಸಿ ಮಹಿಳೆಯ ಶವ ಮತ್ತು ಆಕೆಯ ಪಕ್ಕದಲ್ಲಿರುವ ಶಿಶುವನ್ನು ಕಂಡುಕೊಂಡಿದ್ದಾರೆ. ಮಹಿಳೆ ಕಳೆದ ಶನಿವಾರ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ, ಅಂದರೆ 18 ತಿಂಗಳ ಮಗು ಆ ಸಮಯದಲ್ಲಿ ಎರಡು ದಿನ ಆಹಾರ ಅಥವಾ ನೀರಿಲ್ಲದೆ ಇತ್ತು.
ನೆರೆಹೊರೆಯವರು ಮಗುವನ್ನು ಮುಟ್ಟಲೂ ಹಿಂಜರಿದ ಸಂದರ್ಭವದು. ಆದರೆ ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಸುಶೀಲಾ ಗಭಾಲೆ ಮತ್ತು ರೇಖಾ ವೇಜ್ ಅವರು ಮಗುವನ್ನು ಎತ್ತಿಕೊಂಡು ನೀರು, ಹಾಲು ಕುಡಿಸಿದರು. ಬಳಲಿದ್ದ ಕಂದ ಚೇತರಿಸಿಕೊಂಡಿದೆ.
“ನನಗೆ ಇಬ್ಬರು ಮಕ್ಕಳಿದ್ದಾರೆ, ಎಂಟು ಮತ್ತು ಆರು ವರ್ಷದವರು. ಈ ಮಗು ನನ್ನ ಸ್ವಂತ ಮಗುವಿನಂತೆ ಭಾಸವಾಯಿತು, ಅವನು ತುಂಬಾ ಹಸಿದಿದ್ದರಿಂದ ಅವನು ಬೇಗನೆ ಹಾಲು ಕುಡಿದ” ಎಂದು ಸುಶೀಲಾ ಗಭಾಲೆ ಹೇಳಿದ್ದಾರೆ.
ಇದನ್ನೂ ಓದಿ: ಲಸಿಕೆ ರಾಜಕೀಯ: ರಾಜ್ಯಗಳ ಪಾಲಿಗೆ ವಿಲನ್ ಆದ ಮೋದಿ ಸರ್ಕಾರ?
ಜ್ವರವನ್ನು ಹೊರತುಪಡಿಸಿದರೆ ಮಗು ಬೇರೆಲ್ಲ ರೀತಿಯಲ್ಲೂ ಚೆನ್ನಾಗಿತ್ತು ಎಂದು ಆಕೆಯ ಸಹೋದ್ಯೋಗಿ ರೇಖಾ ಹೇಳಿದ್ದಾರೆ.
“ನಾವು ವೈದ್ಯರಿಗೆ ತೋರಿಸಿದಾಗ ಮಗುವಿಗೆ ಸ್ವಲ್ಪ ಜ್ವರ ಇದ್ದುದು ತಿಳಿಯಿತು.. ಅವನಿಗೆ ಚೆನ್ನಾಗಿ ಆಹಾರವನ್ನು ಕೊಡುವಂತೆ ಅವರು ಹೇಳಿದರು, ಬೇಬಿ ಬಿಸ್ಕತ್, ನೀರು, ಹಾಲು ನೀಡಿದ ನಂತರ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಗೆ ಕರೆದೊಯ್ಯಿದೆವು” ಎಂದು ಹೇಳಿದರು.
ಮಗುವಿನ ಕೊರೊನಾ ಪರೀಕ್ಷೆಯು ನೆಗೆಟಿವ್ ಆಗಿದ್ದು, ಪೋಷಣೆಗಾಗಿ ಸರ್ಕಾರಿ ತಂಡಕ್ಕೆ ವರ್ಗಾಯಿಸಲಾಗಿದೆ.
ಮಗುವಿನ ತಾಯಿಯ ಶವಪರೀಕ್ಷೆ ವರದಿ ಬರಬೇಕಿದೆ. ಅವರು ಹೇಗೆ ಸತ್ತರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ, ಅವರಿಗೆ ಕೊರೊನಾ ಇತ್ತೇ ಎಂಬುದು ಇನ್ನೂ ತಿಳಿದು ಬಂದಿಲ್ಲ.
“ಮಹಿಳೆಯ ಪತಿ ಕೆಲಸಕ್ಕಾಗಿ ಉತ್ತರ ಪ್ರದೇಶಕ್ಕೆ ಹೋಗಿದ್ದಾರೆ ಎಂದು ವರದಿಯಾಗಿದೆ. ಆತ ಹಿಂತಿರುವುದನ್ನು ನಾವು ಕಾಯುತ್ತಿದ್ದೇವೆ” ಎಂದು ಪೊಲೀಸ್ ಇನ್ಸ್‌ಪೆಕ್ಟರ್ (ಅಪರಾಧ) ಪ್ರಕಾಶ್ ಜಾಧವ್ ಹೇಳಿದ್ದಾರೆ.
ಕೊರೊನಾ ಭೀತಿಯಲ್ಲಿರಬಹುದಾದ ನೆರೆಹೊರೆಯವರು ಕನಿಷ್ಠ ವಿಷಯ ಗೊತ್ತಾದ ಕೂಡಲೇ ಪೊಲಿಸರಿಗೆ ಫೋನ್ ಮಾಡುವ ಕಾಳಜಿಯನ್ನು ತೋರಿಲ್ಲ. ಎರಡು ದಿನ ಖಾಲಿ ಹೊಟ್ಟೆಯಲ್ಲಿ ಬದುಕಿದ ಮಗು ಈಗ ಸುರಕ್ಷಿತ ಕೈಗಳನ್ನು ತಲುಪಿದೆ.
ಇದನ್ನೂ ಓದಿ: ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಕಾಂಗ್ರೆಸ್‌ಗೆ ಭರ್ಜರಿ ಜಯ – ಬಿಜೆಪಿಗೆ ಮುಖಭಂಗ


