ನೇಪಾಳದ ‘ಜೆನ್ ಝೀ’ ಪ್ರತಿಭಟನೆಯ ವೇಳೆ ಸಾವಿಗೀಡಾದವರನ್ನು ಮಧ್ಯಂತರ ಸರ್ಕಾರದ ಪ್ರಧಾನಿ ಸುಶೀಲ ಕರ್ಕಿ ‘ಹುತಾತ್ಮರು’ ಎಂದು ಘೋಷಿಸಿದ್ದಾರೆ.
ಪ್ರತಿಭಟನೆಗಳಲ್ಲಿ ಸಾವನ್ನಪ್ಪಿದವರನ್ನು ಸರ್ಕಾರ ಹುತಾತ್ಮರೆಂದು ಗುರುತಿಸಿದೆ ಮತ್ತು ಅವರ ಕುಟುಂಬಕ್ಕೆ 1 ಮಿಲಿಯನ್ ನೇಪಾಳಿ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಏಕನಾರಾಯಣ್ ಆರ್ಯಲ್ ಹೇಳಿದ್ದಾರೆ ಎಂದು ದಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಗಾಯಾಳುಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸರ್ಕಾರಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ ಮತ್ತು ಹೊಸ ನಿರ್ದೇಶನದ ಅಡಿಯಲ್ಲಿ ಚಿಕಿತ್ಸೆ ಈಗಾಗಲೇ ಪ್ರಾರಂಭವಾಗಿದೆ ಎಂದು ಆರ್ಯಲ್ ತಿಳಿಸಿದ್ದಾರೆ.
ಪ್ರಧಾನಿ ಕರ್ಕಿ ಶನಿವಾರ (ಸೆಪ್ಟೆಂಬರ್ 13) ಕಠ್ಮಂಡುವಿನ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ಗಾಯಗೊಂಡ ಪ್ರತಿಭಟನಾಕಾರರನ್ನು ಭೇಟಿಯಾಗಿದ್ದಾರೆ.
ಈ ನಡುವೆ, ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಸುಶೀಲಾ ಕರ್ಕಿ ಅವರ ನೇಮಕವನ್ನು ಅಮೆರಿಕ ಸ್ವಾಗತಿಸಿದೆ. ಕಳೆದ ವಾರದ ಅಶಾಂತಿಯ ನಂತರ ಸ್ಥಿರತೆಯತ್ತ ಒಂದು ಹೆಜ್ಜೆ ಎಂದು ಕರೆದಿದೆ.
ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ನೇಪಾಳದ ಅಮೆರಿಕ ರಾಯಭಾರಿ ಡೀನ್ ಆರ್ ಥಾಂಪ್ಸನ್, “ಅಮೆರಿಕ ಕಳೆದ ವಾರದ ದುರಂತ ಘಟನೆಗಳ ನಂತರ ಶಾಂತತೆಯ ಪುನಃಸ್ಥಾಪನೆ ಮತ್ತು ಶಾಂತಿಯುತ ನಿರ್ಣಯವನ್ನು ಸ್ವಾಗತಿಸುತ್ತದೆ” ಎಂದು ಹೇಳಿದ್ದಾರೆ.
ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಮೂಲಕ ಪರಿಹಾರಕ್ಕೆ ಬದ್ಧತೆ ತೋರಿಸಿದ್ದಕ್ಕಾಗಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಮತ್ತು ಯುವ ನಾಯಕರನ್ನು ಥಾಂಪ್ಸನ್ ಶ್ಲಾಘಿಸಿದ್ದಾರೆ. ಶಾಂತಿ, ಸುವ್ಯವಸ್ಥೆ ಪುನಃಸ್ಥಾಪಿಸಲು ಮತ್ತು ಸುಗಮ ನಾಗರಿಕ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ನೇಪಾಳಿ ಸೇನೆ ಮತ್ತು ಅದರ ಮುಖ್ಯಸ್ಥ ಜನರಲ್ ಅಶೋಕ್ ರಾಜ್ ಸಿಗ್ಡೆಲ್ ಅವರ ಪಾತ್ರವನ್ನು ಅವರು ಕೊಂಡಾಡಿದ್ದಾರೆ.
“ಮುಂದಿನ ದಿನಗಳಲ್ಲಿ ಹೊಸದಾಗಿ ಚುನಾವಣೆ ನಡೆಸುವ ತಯಾರಿಯಲ್ಲಿರುವ ಮಧ್ಯಂತರ ಸರ್ಕಾರದ ನಾಯಕತ್ವದೊಂದಿಗೆ ಕೆಲಸ ಮಾಡಲು ನಮ್ಮ ಸರ್ಕಾರ ಎದುರು ನೋಡುತ್ತಿದೆ. ನೇಪಾಳದ ನಷ್ಟಗಳ ಬಗ್ಗೆ ಅಮೆರಿಕ ಬೇಸರ ವ್ಯಕ್ತಪಡಿಸುತ್ತಿದೆ. ಆದರೆ, ರಾಜಕೀಯ ಪರಿವರ್ತನೆಯು ಶಾಂತಿಯುತವಾಗಿ ಮುಂದುವರಿಯಲು ಅವಕಾಶವನ್ನು ನೀಡುತ್ತದೆ” ಎಂದು ಥಾಂಪ್ಸನ್ ಒತ್ತಿ ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದು ಕೆ.ಪಿ ಶರ್ಮಾ ಓಲಿ ಸರ್ಕಾರದ ಪತನದ ನಂತರ ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ಸದ್ಯಕ್ಕೆ ಕೊನೆಗೊಂಡಿದೆ. ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಶುಕ್ರವಾರ ರಾತ್ರಿ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ದೇಶವನ್ನು ಮುನ್ನಡೆಸಲಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೇಪಾಳಕ್ಕೆ ಮೊದಲ ಮಹಿಳಾ ಪ್ರಧಾನಿ: ಮಧ್ಯಂತರ ಸರ್ಕಾರದ ಚುಕ್ಕಾಣಿ ಹಿಡಿದ ಸುಶೀಲಾ ಕರ್ಕಿ


