Homeಕರ್ನಾಟಕಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

ಹೊಸ ಸಂಪುಟ; ಬಿಡಿ ಚಿತ್ರಗಳಲ್ಲಿ ಸಿಗುವ ಪೂರ್ಣ ಚಿತ್ರಣ

- Advertisement -
- Advertisement -

ಯಡಿಯೂರಪ್ಪನವರನ್ನು ಯಾಕೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲಾಯಿತು ಎಂಬ ಕುರಿತು ಬಿಜೆಪಿಯಿಂದ ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು ಎನ್ನುವುದಾದರೆ ಈಗ ಭ್ರಷ್ಟಾಚಾರ ಹೇಗೆ ಕಡಿಮೆಯಾಗುತ್ತದೆ ಎಂಬುದು ಹೊಸ ಸಂಪುಟದಿಂದ ಗೊತ್ತಾಗುವಂತಿಲ್ಲ. ವಯಸ್ಸಿನ ಕಾರಣವನ್ನು ಯಡಿಯೂರಪ್ಪನವರೇ ಪರೋಕ್ಷವಾಗಿ ಹೇಳಿದ್ದಾರಾದರೂ, ಅದನ್ನೂ ವರಿಷ್ಠರು ಹೇಳಿಲ್ಲ. ಮುಖ್ಯಮಂತ್ರಿ ಪದಕ್ಕೆ ಏರಿಸುವಾಗಲೇ 75 ದಾಟಿತ್ತಲ್ಲಾ ಎಂಬ ಪ್ರಶ್ನೆಗೆ ಏನು ಉತ್ತರ ಹೇಳುವುದು ಎಂಬ ಇಕ್ಕಟ್ಟು ಅವರದ್ದಿರಬಹುದು. ಸಿಎಂ ಪುತ್ರ ವಿಜಯೇಂದ್ರ ಎಲ್ಲದರಲ್ಲೂ ತಲೆ ಹಾಕುತ್ತಿದ್ದರು ಮತ್ತು ಫಲವತ್ತಾದ ಖಾತೆಗಳನ್ನು ನೇರವಾಗಿ ಅಥವಾ ಡಮ್ಮಿ ಮಂತ್ರಿಗಳಿಂದ ನಿಭಾಯಿಸುತ್ತಿದ್ದರು ಎಂಬುದೇ ಕಾರಣವಾಗಿದ್ದರೆ, ಈಗಲೂ ಅವೇ ಇಬ್ಬರು ಡಮ್ಮಿ ಮಂತ್ರಿಗಳಿಗೆ ಭಾರೀ ಖಾತೆಗಳನ್ನು ನೀಡಲಾಗಿದೆ. ಅಂದರೆ ಈಗಲೂ ಈ ಖಾತೆಗಳಲ್ಲಿ ವಿಜಯೇಂದ್ರ ಕೈ ಹಾಕುತ್ತಾರೆ ಮತ್ತು ಆ ಮೂಲಕ ರಾಜ್ಯದ ಯೋಜನಾ ವೆಚ್ಚದ ಕಾಲುಭಾಗ ಅವರ ಕೈಯ್ಯಲ್ಲೇ ಇದ್ದಂತಾಗುತ್ತದೆ. ಭ್ರಷ್ಟ ಆದಾಯ ತರುವ ಇನ್ನೂ ಕೆಲವು ಖಾತೆಗಳೂ ಎರಡೂ ಕಡೆಗೆ ಹಂಚಿಕೆಯಾಗಿವೆ. ಇಂತಹ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲವಾದರೂ ಈ ಸಂಪುಟ ರಚನೆ ಮತ್ತು ಹೊಸ ಮುಖ್ಯಮಂತ್ರಿಯ ನಡೆಗಳ ಬಿಡಿ ಚಿತ್ರಗಳು ಒಟ್ಟು ಸೇರಿದರೆ ಪೂರ್ಣ ಚಿತ್ರಣ ಸಿಗುವ ಸಾಧ್ಯತೆಯಿದೆ.

ಫಲವತ್ತಾದ ಖಾತೆಗಳು

ಈ ಸದ್ಯ ಬೃಹತ್ ನೀರಾವರಿ, ಲೋಕೋಪಯೋಗಿ, ಇಂಧನ ಮತ್ತು ಬೆಂಗಳೂರು ಅಭಿವೃದ್ಧಿಗಳು ಒಟ್ಟು ಯೋಜನಾ ವೆಚ್ಚದ ಅರ್ಧಕ್ಕೂ ಹೆಚ್ಚು ಪಾಲನ್ನು ಕಬಳಿಸುವ ಫಲವತ್ತಾದ ಖಾತೆಗಳಾಗಿವೆ. ಕಾಮಗಾರಿ ಅಥವಾ ಖರೀದಿ ಇರುವ ಈ ಇಲಾಖೆಗಳನ್ನು ಅತ್ಯಂತ ಪ್ರಭಾವಿಗಳೇ ಹಿಡಿಯುತ್ತಾರೆ. ಬೆಂಗಳೂರು ಅಭಿವೃದ್ಧಿ ಸಿಎಂ ಬೊಮ್ಮಾಯಿಯವರ ಕೈಯ್ಯಲ್ಲೇ ಇದ್ದರೆ, ಇಂಧನವನ್ನು ಹೈಕಮ್ಯಾಂಡ್ ಕ್ಯಾಂಡಿಡೇಟಾದ ಸುನಿಲ್‌ಕುಮಾರ್ ಕೈಯ್ಯಲ್ಲಿ ಕೊಟ್ಟಿದ್ದಾರೆ. ಇನ್ನೆರಡು ಅಷ್ಟು ಪ್ರಭಾವಿಗಳಲ್ಲದ ಆದರೆ ಯಡಿಯೂರಪ್ಪ ನಿಷ್ಠರಾದ ಗೋವಿಂದ ಕಾರಜೋಳ ಮತ್ತು ಸಿ.ಸಿ.ಪಾಟೀಲರಿಗೆ ವಹಿಸಲಾಗಿದೆ. ಅಲ್ಲಿಗೆ ಎರಡೂ ಬಣಗಳಿಗೂ ಮೇಯಲು ಸಮಾನ ಅವಕಾಶ ಕಲ್ಪಿಸಿದಂತಾಗಿದೆ.

ನೇರವಾಗಿ ಬಜೆಟ್‌ನಿಂದ ದೋಚದಿದ್ದರೂ, ಬೇರೆ ಆದಾಯ ಇರುವುದು ಕಂದಾಯ ಮತ್ತು ಬೃಹತ್ ಕೈಗಾರಿಕೆಗಳಲ್ಲಿ. ಇವುಗಳಲ್ಲಿ ಒಂದನ್ನು ಯಡಿಯೂರಪ್ಪ ನಿಷ್ಠ ಅಶೋಕರಿಗೂ, ಇನ್ನೊಂದು ಬಹುತೇಕ ಹೈಕಮಾಂಡ್ ನಿಷ್ಠ ನಿರಾಣಿಯವರಿಗೂ ನೀಡಲಾಗಿದೆ. ಇದರ ಅರ್ಥವನ್ನು ಅವರವರಿಗೆ ಅನಿಸಿದ ಹಾಗೆ ಮಾಡಿಕೊಳ್ಳಬಹುದು.

ಯಾಕಾಗಿ ಸವದಿ ಡಿಸಿಎಂ ಆಗಿದ್ದರು ಎಂಬ ಉಳಿದುಕೊಂಡ ಪ್ರಶ್ನೆ

ಯಡಿಯೂರಪ್ಪನವರಿಗೆ ತಿಂಗಳುಗಟ್ಟಲೆ ಕಾಡಿ ಸಂಪುಟ ರಚನೆಗೆ ಅಸ್ತು ಎಂದ ಹೈಕಮಾಂಡ್ ಯಾರೂ ನಿರೀಕ್ಷಿಸಿರದ ಮೂವರು ಡಿಸಿಎಂಗಳನ್ನೂ ದಯಪಾಲಿಸಿತ್ತು. ಅವರಲ್ಲೊಬ್ಬರು ಮುಖ್ಯಮಂತ್ರಿಯ ಜಾತಿಗೇ ಸೇರಿದ ಲಕ್ಷ್ಮಣ ಸವದಿ, ವಿಧಾನಸಭೆಯಲ್ಲಿ ಸೋತಿದ್ದ ಅಭ್ಯರ್ಥಿ. ಈ ಮಧ್ಯೆ ಅವರನ್ನು ಎಂಎಲ್‌ಸಿಯನ್ನಾಗಿಯೂ ಮಾಡಲಾಗಿತ್ತು. ಈಗ ಅವರು ಇದ್ದಕ್ಕಿದ್ದಂತೆ ಸಚಿವ ಸ್ಥಾನಕ್ಕೂ ಬಂದಿಲ್ಲ. ಇನ್ನಿಬ್ಬರು ಡಿಸಿಎಂಗಳು ಮಂತ್ರಿಗಳಾಗಿ ಮುಂದುವರೆದಿದ್ದಾರೆ. ಹಾಗಾದರೆ ಸವದಿಯಲ್ಲಿ ಏನು ಕಂಡು ಡಿಸಿಎಂ ಮಾಡಿದ್ದಿರಿ? ಏನು ಕಾಣದೇ ಕಿತ್ತು ಹಾಕಿದಿರಿ? ಇದಕ್ಕೆ ಉತ್ತರವನ್ನು ಯಾರು ಬಲ್ಲರು?

PC: Mangalorean.com

ಪರೀಕ್ಷೆಯಲ್ಲಿ ಫೇಲಾದದ್ದು ಪರೀಕ್ಷಾ ಸಚಿವರು, ಮತ್ತೆ ಬಂದವರೂ ಅಯ್ನೋರು

ಚಾಮರಾಜನಗರ ಜಿಲ್ಲೆಯಲ್ಲಾದ ಆಕ್ಸಿಜನ್ ಅವಘಡದ ಕಾರಣಕ್ಕೆ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಮಂತ್ರಿ ಸ್ಥಾನ ಕಳೆದುಕೊಂಡರು ಎಂದರೆ ಯಾರೂ ನಂಬುವುದಿಲ್ಲ. ಕೋವಿಡ್ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಖಾತರಿ ಮಾಡುವುದು ಹೇಗೆ ಎಂದು ತಲೆಕೆಡಿಸಿಕೊಂಡಿದ್ದಕ್ಕಿಂತ ಪರೀಕ್ಷೆ ಖಾತರಿ ಮಾಡುವುದಕ್ಕೆ ಹೆಚ್ಚು ಗಮನ ಹರಿಸಿದ್ದು ಅವರ ಖ್ಯಾತಿ. ಅದನ್ನು ಬಿಟ್ಟರೆ ಅವರ ಅಪಾರ ಸಾಧನೆಯೇನೂ ಈ ಸಾರಿ ಕಣ್ಣಿಗೆ ಬಿದ್ದಿಲ್ಲ. ಆದರೆ ಗಮನ ಹರಿಸಬೇಕಾದ ಸಂಗತಿಯೇನೆಂದರೆ, ಬಿಜೆಪಿ ಸರ್ಕಾರದಲ್ಲಿ (ಯಡಿಯೂರಪ್ಪನವರ ಮೊದಲ ಇನ್ನಿಂಗ್ಸ್‌ನಿಂದ ಆರಂಭಿಸಿ ಇಲ್ಲಿಯವರೆಗೆ) ಪ್ರಾಥಮಿಕ ಶಿಕ್ಷಣ ಖಾತೆ ಬ್ರಾಹ್ಮಣರಿಗೆ ಮಾತ್ರ. ಸುರೇಶ್ ಕುಮಾರ್ ಜಾಗಕ್ಕೆ ಬಂದವರು ತಿಪಟೂರಿನ ಬ್ರಾಹ್ಮಣ ಶಾಸಕ ಬಿ.ಸಿ.ನಾಗೇಶ್.

ಲಿಂಬಾವಳಿಯೇಕೆ ಅನರ್ಹ?

ಇನ್ನೂ ಖಾಲಿ ಉಳಿದಿರುವ (ಖಾಲಿಯಂತೇನೂ ಇಲ್ಲ; ಆದರೆ ಸಚಿವರಾಗಬಹುದಾದ ಗರಿಷ್ಠ ಸಂಖ್ಯೆಯ ಸ್ಥಾನಗಳು ಇನ್ನೂ ತುಂಬಿಲ್ಲ) ಸ್ಥಾನಕ್ಕೆ ಯಾರು ಬರುತ್ತಾರೆ ಎಂದು ಯಾರೂ ಲೆಕ್ಕ ಹಾಕಿಟ್ಟಿಲ್ಲವಾದರೂ, ಈ ಸಾರಿಯಂತೂ ಅರವಿಂದ ಲಿಂಬಾವಳಿ ಮಂತ್ರಿಯಲ್ಲ. ಯಡಿಯೂರಪ್ಪ ಮೊದಲ ಇನ್ನಿಂಗ್ಸ್‌ನಲ್ಲಿ ಬೋವಿ ಜನಾಂಗಕ್ಕೆ ಸೇರಿದ ಲಿಂಬಾವಳಿಯೂ ಸೇರಿದಂತೆ ಈ ಹಿಂದೆ ಮೂವರು ಅದೇ ಸಮುದಾಯಕ್ಕೆ ಸೇರಿದ ಮಂತ್ರಿಗಳಿದ್ದರು. ಮಾದಿಗ ಸಮುದಾಯವನ್ನು ತನ್ನ ಮತಬ್ಯಾಂಕಿನೊಳಕ್ಕೆ ಸೇರಿಸಿಕೊಳ್ಳಲು ಬೇಕಾದ ಪ್ರಯತ್ನ ಶುರು ಮಾಡಿದ್ದರೂ, ಬಿಜೆಪಿಯ ಕಡೆಯಿಂದ ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಅಸ್ಪೃಶ್ಯ ದಲಿತರಿಗೇ ಹೆಚ್ಚು ಟಿಕೆಟ್ ಕೊಡಲಾಗಿತ್ತು. ಅದರ ಜೊತೆಗೆ ಪಕ್ಷೇತರನಾಗಿ ಒಳಕ್ಕೆ ಬಂದಿದ್ದ ಶಿವರಾಜ ತಂಗಡಿಯನ್ನೂ ಮಂತ್ರಿಯನ್ನಾಗಿಸಲು ಆ ರೀತಿ ಮಾಡಲಾಗಿತ್ತು. ಆದರೆ ಈ ಸಾರಿ ಲಂಬಾಣಿ ಸಮುದಾಯಕ್ಕೆ ಸೇರಿದ್ದ ಪ್ರಭು ಚೌಹಾಣ್ ಬಿಟ್ಟರೆ ಉಳಿದವರಿಗೆ ಅವಕಾಶವಿಲ್ಲವಾಗಿದೆ. ತನ್ನ ಕ್ಷೇತ್ರದ ಜೊತೆಗೆ ತನ್ನ ಭಾವನೆಂಟ ರಘುವಿನ ಕ್ಷೇತ್ರಕ್ಕಷ್ಟೇ ಪ್ರಭಾವ ಹೊಂದಿರುವ ಲಿಂಬಾವಳಿಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲವೆಂದು ಬಿಜೆಪಿ ಭಾವಿಸಿದಂತಿದೆ.

ಪರಿಶಿಷ್ಟ ಪಂಗಡಕ್ಕೊಂದು ಖಾತೆ

ಮುಖ್ಯಮಂತ್ರಿಯಾದ ನಂತರ ಖಾತೆ ಹಂಚುವ ಮೊದಲೇ ಹೊಸ ಖಾತೆಯನ್ನೂ ಬೊಮ್ಮಾಯಿ ಶುರು ಮಾಡಿದರು. ಅದೇ ಪರಿಶಿಷ್ಟ ಪಂಗಡ ಖಾತೆ. ಕರ್ನಾಟಕದ ಆದಿವಾಸಿ ಗಿರಿಜನರು ಎಸ್‌ಟಿ (ಶೆಡ್ಯೂಲ್ಡ್ ಟ್ರೈಬ್) ಕೋಟಾದಲ್ಲಿ ಪಡೆದುಕೊಂಡಿದ್ದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಅನುಕೂಲ ಪಡೆದುಕೊಂಡಿದ್ದು ಅವರಿಗಿಂತ ಎಲ್ಲ ರೀತಿಯಲ್ಲೂ ಬಲಾಢ್ಯರಾದ ನಾಯಕ/ವಾಲ್ಮೀಕಿ ಸಮುದಾಯ. ಮಧ್ಯ ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಈ ಸಮುದಾಯವನ್ನು ಶ್ರೀರಾಮುಲು ಮೂಲಕ ಗೆದ್ದುಕೊಳ್ಳುವಲ್ಲಿ ಬಿಜೆಪಿಯು ಸಾಕಷ್ಟು ಯಶಸ್ವಿಯಾಗಿತ್ತು. ಅದಕ್ಕೆ ತಕ್ಕುನಾಗಿ ಶ್ರೀರಾಮುಲುರನ್ನು ಡಿಸಿಎಂ ಆಗಿ ಮಾಡುವುದಾಗಿ ಹೇಳುತ್ತಲೇ ಬರಲಾಗಿತ್ತು. ದೆಹಲಿಯಲ್ಲೂ ಅಧಿಕಾರದಲ್ಲಿಲ್ಲದೇ, ಇಲ್ಲೂ ಪೂರ್ಣ ಅಧಿಕಾರವಿಲ್ಲದೇ ’ಸಂಪನ್ಮೂಲ ಕೊರತೆಯಿಂದ’ ’ಕಷ್ಟ ಪಡಬೇಕಾಗಿ’ ಬಂದಿದ್ದ ಬಿಜೆಪಿಯು ಹಿಂದೆ ರೆಡ್ಡಿ ಹಾಗೂ ರಾಮುಲುಗಳ ಅಗಾಧ ಗಣಿ ಲೂಟಿ ಹಣವನ್ನು ಆಧರಿಸಬೇಕಾಗಿ ಬಂದಿತ್ತು. ಅವರೇ ಲೋಡುಗಟ್ಟಲೇ ಶಾಸಕರನ್ನು ಆಪರೇಷನ್ ಮಾಡಿ ಎತ್ತಿಕೊಂಡು ಬಂದು ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಿದ್ದರು. ಈ ಸಾರಿ ಅಂತಹ ಅಗತ್ಯವೇನೂ ಇರದಂತೆ ’ಗಟ್ಟಿಕುಳ’ಗಳಾಗಿ ಹಲವರು ಸಮೃದ್ಧರಾಗಿದ್ದಾರೆ. ಹೀಗಾಗಿ ರಾಮುಲುಗೆ ಡಿಸಿಎಂ ಇನ್ನು ಕನಸೇ ಸರಿ.

ಆದರೆ ನಾಯಕ/ವಾಲ್ಮೀಕಿ ಸಮುದಾಯವನ್ನು ಹಾಗೇ ಬಿಡಲಾದೀತೇ? ಹಾಗಾಗಿ ಪ್ರತ್ಯೇಕ ಖಾತೆ. ಈ ಹಿಂದೆ ಕೊಟ್ಟಿದ್ದಕ್ಕಿಂತ ಅನುದಾನ ಹೆಚ್ಚು ಕೊಡದಿದ್ದರೂ, ನಮಗೊಂದು ಖಾತೆ ಕೊಟ್ಟರು ಎಂದಾದರೂ ಖುಷಿಗೊಳ್ಳುವ ಐಡೆಂಟಿಟಿ ರಾಜಕಾರಣಕ್ಕೆ ಇದರಿಂದ ಹೆಚ್ಚಿನ ಉಮೇದು ಸಿಗುತ್ತದೆ.

ಸರಳ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ಮೊದಲ ಆದ್ಯತೆ ಏನಾಗಿತ್ತು?

ಸರಳರೆಂದು ಕರೆಸಿಕೊಳ್ಳುವುದಷ್ಟೇ ಅಲ್ಲದೇ, ನಿಜಕ್ಕೂ ಸರಳರಾಗಿರುವ ಕೋಟಾ ಶ್ರೀನಿವಾಸ ಪೂಜಾರಿಯವರದ್ದು ಬಿಲ್ಲವ ಸಮುದಾಯ. ಹಿಂದಿನ ಸಂಪುಟದಲ್ಲಿ ಅವರದ್ದು ’ದೇವರ ಖಾತೆ’ – ಮುಜರಾಯಿ. ಈ ಸಾರಿ ಬಡ್ತಿ ಸಿಕ್ಕು ಸಮಾಜ ಕಲ್ಯಾಣ ಸಚಿವರಾಗಿದ್ದಾರೆ. ಅವರು ಸಚಿವರಾಗುವ ಹೊತ್ತಿಗೆ, ಅದರಿಂದ ಪರಿಶಿಷ್ಟ ಪಂಗಡವನ್ನು ಬೇರೆಯಾಗಿಸಲಾಗಿದೆ. ಸ್ವತಃ ದಲಿತರಲ್ಲದ ಪೂಜಾರಿಯವರು, ಖಾತೆ ಪಡೆದ ನಂತರ ಮೊದಲು ಆಯ್ದುಕೊಂಡ ಮಹತ್ವ ಕೆಲಸವೇನು ಗೊತ್ತೇ? ಹೊಸ ಗೃಹ ಸಚಿವರನ್ನು ಭೇಟಿಯಾಗಿ ’ಹಿಂದೂ ಕಾರ್ಯಕರ್ತರ ಮೇಲೆ’ ಹಾಕಲಾದ ಕೇಸುಗಳನ್ನು ವಾಪಸ್ ಪಡೆಯಬೇಕೆಂದು ಮನವಿ ಮಾಡಿದ್ದು!

ಇನ್ನು ಅವರ ಎರಡನೆಯ ಆದ್ಯತೆ ಶ್ಲಾಘನೀಯವೇ. ಅದು ಎಸ್‌ಸಿ ಸಮುದಾಯಕ್ಕೆ ನೀಡುವ ಮನೆ ಗ್ರಾಂಟ್‌ಅನ್ನು ಐದು ಲಕ್ಷಕ್ಕೇರಿಸುವ ಆಲೋಚನೆ.

ಮುಂದಿನ ಆದ್ಯತೆಗಳು ಸ್ಪಷ್ಟವಾಗುತ್ತಿವೆಯೇ?

ದೆಹಲಿಯ ಜಂತರ್ ಮಂತರ್‌ನಲ್ಲಿ ಕೋಮು ಪ್ರಚೋದಕ ಘೋಷಣೆ ಕೂಗಿದ್ದು ಸುದ್ದಿಯಾಗುತ್ತಿರುವ ಹೊತ್ತಿನಲ್ಲೇ ಕರ್ನಾಟಕದಲ್ಲೂ ಮಂಗಳೂರಿನ ಭಜರಂಗದಳದ ಶರಣ್ ಪಂಪ್‌ವೆಲ್ ಸಹಾ ಅಂತಹುದೇ ಮಾತನ್ನಾಡಿದ್ದಾರೆ. ಸಚಿವ ಈಶ್ವರಪ್ಪ ಬಾಯಿಗೆ ಬಂದಂತೆ ಅಸಭ್ಯವಾಗಿ ಮಾತನಾಡಿದ್ದಾರೆ. ಸ್ವತಃ ಮುಖ್ಯಮಂತ್ರಿ ತಾನು ಸಾಂವಿಧಾನಿಕ ಪೀಠದಲ್ಲಿ ಕೂತಿದ್ದೇನೆಂಬುದನ್ನು ಮರೆತು ಆರೆಸ್ಸೆಸ್ ಕಚೇರಿಗೆ ಹೋಗಿ ಬರುವುದು, ಪಕ್ಷದ ಕಾರ್ಯಕ್ರಮಗಳಲ್ಲಿ ಇತರ ಪಕ್ಷಗಳಿಗೆ ಹೋಲಿಸಿ ಬಹಿರಂಗವಾಗಿ ಟೀಕಿಸುವುದನ್ನು ಮಾಡುತ್ತಿದ್ದಾರೆ.

ಆರ್ಥಿಕ ಬಿಕ್ಕಟ್ಟು, ಅಭಿವೃದ್ಧಿ ಸೂಚ್ಯಂಕಗಳೆಲ್ಲದರಲ್ಲೂ ಹಿಂದೆ ಬಿದ್ದಿರುವ ದೇಶದಲ್ಲಿ ಮತ್ತೆ ಅಧಿಕಾರ ಪಡೆದುಕೊಳ್ಳಲು ಬೇಕಾದದ್ದು ಸಾಮಾಜಿಕ ಬಿಕ್ಕಟ್ಟು. ಅದಕ್ಕೆ ಬೇಕಾದ ಕಾರ್ಯಸೂಚಿ ಇದ್ದಕ್ಕಿದ್ದಂತೆ ಚುರುಕು ಪಡೆದುಕೊಳ್ಳುತ್ತಿದೆಯೇ ಎಂಬ ಅನುಮಾನ ಬರುವ ಹಾಗೆ ಮೇಲಿನ ನಡೆಗಳಿವೆ. ಕೆಲವು ಪ್ರಗತಿಪರರು ಆಶಿಸಿದ ಹಾಗೆ ಅಷ್ಟು ಕೋಮುವಾದಿಯಲ್ಲದಂತೆ ನಡೆದುಕೊಳ್ಳುವ ಯಾವ ಭರವಸೆಯನ್ನೂ ಹೊಸ ಮುಖ್ಯಮಂತ್ರಿ ಬೊಮ್ಮಾಯಿಯವರು ಇನ್ನೂ ಮೂಡಿಸಿಲ್ಲ. ಯಾವುದಕ್ಕೂ ಮುಂದಿನ ದಿನಗಳು ಇದನ್ನು ಸ್ಪಷ್ಟಪಡಿಸಲಿವೆ.

ಒಟ್ಟಾರೆಯಾಗಿ ಕರ್ನಾಟಕವನ್ನು, ದೇಶದ ಆರ್ಥಿಕ ಬಿಕ್ಕಟ್ಟನ್ನು, ಯಡಿಯೂರಪ್ಪನವರನ್ನು ನಿಭಾಯಿಸುವುದು ಯಾವುದರಲ್ಲೂ ಖಚಿತ ನಡೆಗಳು ಸಾಧ್ಯವಾಗದ ಸರ್ಕಾರದ ಬಲಬಿಡಂಗಿ ನಿರ್ಧಾರಗಳು ಎಲ್ಲದರಲ್ಲೂ ಎದ್ದು ಕಾಣುತ್ತಿವೆ. ಮೇಲಿನ ಬಿಡಿಚಿತ್ರಗಳೂ ಅವನ್ನೇ ಸಾಬೀತುಪಡಿಸುತ್ತಿವೆ.


ಇದನ್ನೂ ಓದಿ: ಹೊಸ ಮಂತ್ರಿಮಂಡಲ ಹಳೆಯ ಅಸಮತೋಲನ: ಎ ನಾರಾಯಣ

ಇದನ್ನೂ ಓದಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಪದ ಬಳಕೆ: ಕಾಂಗ್ರೆಸ್ ಆಕ್ರೋಶ, ಕ್ಷಮೆ ಕೇಳಿದ ಈಶ್ವರಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...