Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

ಭಾರತದ ಪ್ರಗತಿಯನ್ನು ಹಿಂದಕ್ಕೆ ಕೊಂಡೊಯ್ಯುತ್ತಿರುವ ಕೃಷಿ ಕಾಯ್ದೆಗಳು

- Advertisement -
- Advertisement -

ರೈತಾಪಿ ಜನಗಳಿಗೆ ಸಂಬಂಧಪಟ್ಟ ಮೋದಿಯವರ 3 ಕಾಯ್ದೆಗಳನ್ನು ಸರ್ವೋಚ್ಚ ನ್ಯಾಯಾಲಯ ತಡೆ ಹಿಡಿದಿದೆ. ರೈತರೊಡನೆ ಸಮಾಲೋಚನೆ ಮಾಡಲು ಒಂದು ತಜ್ಞರ ಸಮಿತಿ ರಚಿಸಬೇಕೆಂದು ನ್ಯಾಯಾಲಯ ಈ ಹಿಂದೆಯೇ ಹೇಳಿದ್ದರೂ, ಇದುವರೆಗೆ ಸರ್ಕಾರವೇ ಸಂಧಾನ ಸಭೆಗಳನ್ನು ನಡೆಸುತ್ತಾ ಕಾಲ ಕಳೆದಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಠಿಣವಾದ ಮಾತುಗಳನ್ನಾಡಿದೆ. ರೈತರ 26ರ ಟ್ರ್ಯಾಕ್ಟರ್ ಮೆರವಣಿಗೆ ರದ್ದು ಮಾಡಲು ಕೋರಿದ ಅರ್ಜಿಯನ್ನು ವಜಾಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆಯೇ ಸರಿ. ರೈತರ ಹೋರಾಟಕ್ಕೆ ಸಿಕ್ಕ ಮೊದಲ ಜಯವೆಂದರೂ ಒಪ್ಪತಕ್ಕ ಮಾತೇ.

ಮೋದಿಯವರು ಈ ಮೂರು ರೈತ ವಿರೋಧಿ ಆರ್ಡಿನೆಸ್ಸ್‌ಗಳನ್ನು ಜಾರಿ ಮಾಡುವುದಕ್ಕೆ ಮೊದಲೇ ಏನೇನು ತಯಾರಿ ನಡೆಸಿದ್ದರು ಎಂಬುದನ್ನು ತಿಳಿಯೋಣ. ಹರಿಯಾಣದಲ್ಲಿ ಕೈಗಾರಿಕೆ ಸ್ಥಾಪಿಸುವ ನೆಪಹೂಡಿ, ಒಂದೊಂದು ಗ್ರಾಮದಲ್ಲಿ 100-150ರಿಂದ ಹಿಡಿದು 500 ಎಕರೆವರೆಗೆ, ಎರಡು ವರ್ಷಗಳ ಹಿಂದಿನಿಂದಲೇ ಅಪಾರ ಹಣ ಕೊಟ್ಟು ರೈತರಿಂದ ಅದಾನಿ ಜಮೀನನ್ನು ಕೊಳ್ಳುತ್ತಾ ಬಂದಿದ್ದಾರೆ. ಭತ್ತ ಮತ್ತು ಗೋಧಿ ಅಧಿಕವಾಗಿ ಬೆಳೆಯುವ ಸ್ಥಳಕ್ಕೆ ಹತ್ತಿರವಿರುವ ರೈಲ್ವೆ ವ್ಯವಸ್ಥೆಯ ಖಾಸಗೀಕರಣಕ್ಕೆ ನಿರ್ಧಾರ ಮಾಡಿರುವುದಲ್ಲದೆ, ಅದಾನಿಯವರ ಸಂಸ್ಥೆಗೆ ಗುತ್ತಿಗೆ ಆಧಾರದ ಮೇಲೆ ಕೆಲವು ಮಾರ್ಗಗಳನ್ನು ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಈ ಕಂಟೈನರ್ ಇರುವ ಗೂಡ್ಸ್ ವ್ಯಾಗನ್‌ಗಳನ್ನು ತಯಾರಿಸಲು ಅವರಿಗೆ ಅನುಮತಿ ನೀಡಿದ್ದಾರೆ. 2020ರ ಆರಂಭದಲ್ಲೇ ರೈಲ್ವೆ ಸಚಿವಾಲಯದಲ್ಲಿ ಅದಾನಿ ಅವರನ್ನು ಕೂರಿಸಿಕೊಂಡು ಈ ಎರಡೂ ಯೋಜನೆಗಳ ಅನುಷ್ಠಾನಕ್ಕೆ ಸಂಚು ನಡೆಸಿದ್ದಾರೆ. ಅಂಬಾನಿಯವರ ಸಂಸ್ಥೆ ಈ ದಿನಸಿಗಳನ್ನೆಲ್ಲ ಕೊಳ್ಳುವ ತಯಾರಿಯಲ್ಲಿದ್ದಾರೆಂದು ಇತ್ತೀಚೆಗೆ ಬಹಿರಂಗಗೊಂಡಿದೆ. ಈ ಇಬ್ಬರು ಕೋಟ್ಯಾಧಿಪತಿಗಳನ್ನು ಕೂಡಿಕೊಳ್ಳಲು ಟಾಟಾ ಕಂಪನಿಯವರೂ ತವಕ ವ್ಯಕ್ತಪಡಿಸಿದ್ದಾರೆ. ಈ ಆಹಾರ ಧಾನ್ಯಗಳ ವ್ಯಾಪಾರದ ವಹಿವಾಟಿನಲ್ಲಿ ಅಂತರರಾಷ್ಟ್ರೀಯ ಕಂಪನಿಗಳೂ, ಕಾರ್ಪೊರೇಟ್‌ಗಳೂ ಸಹಭಾಗಿತ್ವ ಪಡೆಯಲು ಮುಂದೆ ಬಂದಿವೆ.

ಈ ಕಾನೂನುಗಳು ಜಾರಿಗೆ ಬರುವುದಕ್ಕೆ ಎಷ್ಟೋ ಮೊದಲಿನಿಂದಲೂ ಗುತ್ತಿಗೆ ಕೃಷಿ ಅನಧಿಕೃತವಾಗಿ ನಡೆಯುತ್ತಲೇ ಇದೆ. ಅದರಿಂದ ರೈತರು ನಷ್ಟ ಅನುಭವಿಸಿದ್ದು ಸರ್ಕಾರಕ್ಕೆ ಗೊತ್ತಿಲ್ಲದ ವಿಚಾರವೇನಲ್ಲ. ಈ ವಿಷಯ ಸರ್ಕಾರದ ಗಮನದಲ್ಲಿದ್ದರೂ ಮೋದಿಯವರು ಈ ಕೃಷಿ ಗುತ್ತಿಗೆ ಕಾನೂನು ರೈತರಿಗೆ ಲಾಭದಾಯಕ ಮತ್ತು ಕಾರ್ಪೊರೇಟ್ ಕಂಪನಿಗಳಿಗೂ ಲಾಭದಾಯಕ ಎಂದು ಸುಳ್ಳು ಹೇಳುತ್ತಿದ್ದಾರೆಯೇ? ಈ ಕಾನೂನು ಅನುಷ್ಠಾನದ ನಂತರ ರೈತರು ಮತ್ತು ಕಾರ್ಪೊರೇಟ್ ಕಂಪನಿಗೂ ವಿವಾದ ಎದ್ದರೆ, ಆಗ ಉಭಯತ್ರರೂ ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿಗಳ ಮುಂದೆ ತಮ್ಮ ಅಹವಾಲನ್ನು ಮಂಡಿಸಬೇಕು. ಅಲ್ಲಿ ಸಮಾಧಾನಕರವಾದ ತೀರ್ಪು ಬಂದಿದೆ ಎಂದು ಇವರಿಗೆ ಅನಿಸಿದರೆ ಅವರು ಅಂತಿಮ ತೀರ್ಮಾನಕ್ಕಾಗಿ ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು. ಜಿಲ್ಲಾಧಿಕಾರಿಗಳ ತೀರ್ಪೇ ಅಂತಿಮ. ಈ ಕಾಯ್ದೆ ಜಾರಿಗೆ ಬರುವುದಕ್ಕೆ ಮುಂಚೆ ರೈತರು ಇಂತಹ ಪ್ರಸಂಗ ಬಂದಾಗ ಸಿವಿಲ್ ಕೋರ್ಟಿಗೆ ಹೋಗುವ ಅವಕಾಶವಿತ್ತು. ಈ ಹೊಸ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲದಂತೆ ರಚಿಸಲಾಗಿದೆ.

ಕಂದಾಯ ಇಲಾಖೆ ಎಷ್ಟು ಕುಲಗೆಟ್ಟಿದೆ ಎಂಬ ವಿಚಾರ ಪ್ರತಿ ರೈತನಿಗೂ ಗೊತ್ತು. ಲಂಚ ಕೊಟ್ಟಲ್ಲದೆ ಯಾವ ಕೆಲಸವೂ ಅಲ್ಲಿ ಆಗುವುದಿಲ್ಲ ಇಂತಹ ಇಲಾಖೆಯ ತೀರ್ಪು ಅಂತಿಮ ಎಂದ ಮೇಲೆ ರೈತರಿಗೆ ನ್ಯಾಯ ದೊರಕುವುದಾದರೂ ಹೇಗೆ? ಮೋದಿ ಪೋಷಿತ ಶ್ರೀಮಂತ ವರ್ಗದ ಪರ ನ್ಯಾಯ ಮಾರಾಟವಾಗುತ್ತದೆ ಎಂಬುದನ್ನು ಊಹಿಸುವುದು ಕಷ್ಟವೇ? ಇದರಿಂದ ರೈತರಿಗೆ ಈ ಕಾನೂನಿಂದ ನೆರವು ಸಿಗುತ್ತದೆ ಎಂಬ ಭ್ರಮೆಯನ್ನು ಕಳಚಿ ಹಾಕಬೇಕಾಗಿದೆ. ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗಗಳ ಅಧಿಕಾರ ವ್ಯಾಪ್ತಿ ಯಾವುದು ಎಂಬುದನ್ನು ನಮ್ಮ ಸಂವಿಧಾನ ಸ್ಪಷ್ಟವಾಗಿ ಹೇಳುತ್ತದೆ. ಈಗ ಅದನ್ನು ಮೀರಿ ಈ ಶಾಸನ ರಚಿಸಲಾಗಿದೆ ಎಂಬುದು ನನ್ನ ಅನಿಸಿಕೆ. ರೈತರಿಗೆ ಸಿಗುತ್ತಿದ್ದ ಸಹಜ ನ್ಯಾಯವನ್ನು ನಿರಾಕರಿಸಿದಂತೆ ಇದೆ ಈ ಕರಾಳ ಶಾಸನ.

ಗುತ್ತಿಗೆ ಹಿಡಿದ ಒಂದು ಕಾರ್ಪೊರೇಟ್ ಕಂಪೆನಿ ಜಮೀನನ್ನು ಹಿಡಿತಕ್ಕೆ ತೆಗೆದುಕೊಂಡಂತೆಯೇ, ಆ ಜಮೀನನ್ನೆಲ್ಲ ವ್ಯವಸಾಯಕ್ಕೆ ಬಳಸುವುದಾದರೆ ಅದು ಸಹಜವಾಗಿ ತನ್ನ ಎಲ್ಲ ಕೆಲಸಕ್ಕೂ ಆಧುನಿಕ ರೀತಿಯ ಯಂತ್ರಗಳನ್ನೆ ಬಳಸಬೇಕಾಗುತ್ತದೆ. ಉಳುವುದು, ಕಾಳು ಚೆಲ್ಲುವುದು, ಗೊಬ್ಬರ, ಕೀಟನಾಶ ಎಲ್ಲವನ್ನು ಯಂತ್ರಗಳ ಸಹಾಯದಿಂದಲೇ ಮಾಡಬೇಕಾಗುವುದು ಅನಿವಾರ್ಯ. ಹಾಗೆಯೇ ಫಸಲು ಕುಯ್ಯುವುದು ಅದನ್ನು ಒಣಗಿಸುವುದು, ಕಾಳಿನ ಭಾಗವನ್ನು ಹುಲ್ಲನ್ನು ಬೇರ್ಪಡಿಸುವುದು, ಕಾಳನ್ನು ಪ್ರತ್ಯೇಕಗೊಳಿಸುವುದು, ಗಾಳಿಯ ಸಹಾಯದಿಂದ ಕಾಳನ್ನು ತೂರಿ ಹೊಟ್ಟನ್ನು ಪ್ರತ್ಯೇಕಿಸುವುದು ಎಲ್ಲದಕ್ಕೂ ಯಂತ್ರದ ಉಪಯೋಗ ಮಾಡುವುದು ಅನಿವಾರ್ಯವಾಗುತ್ತದೆ. ಯಂತ್ರವೇ ಈ ಎಲ್ಲ ಕೆಲಸ ಮಾಡುವುದರಿಂದ ಕೆಲವೇ ಜನ ವ್ಯವಸಾಯ ಕೆಲಸಗಾರರ ಆವಶ್ಯಕತೆ ಇರುತ್ತದೆ. ಹಳ್ಳಿಯಲ್ಲಿ ಅನಾದಿ ಕಾಲದಿಂದ ವ್ಯವಸಾಯ ಕಾರ್ಮಿಕರಾಗಿ ಉಳಿದಿರುವ ಈ ನಿರುದ್ಯೋಗಿ ಹತಭಾಗ್ಯರು ವಲಸೆ ಹೋಗಿ ಬೇರೆ ಕೆಲಸ ಹುಡುಕಬೇಕಾಗುವುದರ ಅನಿವಾರ್ಯತೆಯನ್ನು ಈ ಕಾನೂನು ಸೃಷ್ಟಿ ಮಾಡಿದೆ. ಭಾರತ ವ್ಯವಸಾಯ ಪ್ರಧಾನ ದೇಶವಾಗಿ ಇದುವರೆಗೂ ಇತ್ತು. ಮೋದಿ ಅವರು ಇಡೀ ವ್ಯವಸಾಯ ವ್ಯವಸ್ಥೆಯನ್ನು ಶ್ರೀಮಂತರ ಕಾರ್ಪೊರೇಟ್‌ಗಳ ವಶಕ್ಕೆ ಒಪ್ಪಿಸುವ ಮೂಲಕ ಭಾರತವನ್ನು ಅಮೆರಿಕ ಮಾಡುವ ಗುತ್ತಿಗೆ ಹಿಡಿದಿದ್ದಾರೆ.

ಅಮೆರಿಕ ಒಂದು ಉದ್ಯಮಶೀಲ ರಾಷ್ಟ್ರವಾಗಿದ್ದು, ವ್ಯವಸಾಯದಲ್ಲಿ ತೊಡಗಿರುವ ಹಿಡಿ ಮಂದಿಯ ಕೈಯಲ್ಲಿ ಸಾವಿರ ಸಾವಿರ ಎಕರೆ ಜಮೀನು ಇದೆ. ಅವರ ಮನೆಯವರೇ ಸೇರಿಕೊಂಡು ಕೆಲವರೇ ಕಾರ್ಮಿಕರ ಸಹಾಯದಿಂದ ವ್ಯವಸಾಯದಲ್ಲಿ ತೊಡಗಿದ್ದಾರೆ. ಹೆಲಿಕಾಪ್ಟರ್ ಸಹಾಯದಿಂದ ಬೀಜ ಬಿತ್ತಿ ಉಳಿದ ಎಲ್ಲ ಕೆಲಸಗಳಿಗೂ ಟ್ರ್ಯಾಕ್ಟರ್ ಕಟ್ಟಿಂಗ್ ಮಿಷನ್, ಹಾರ್ವೆಸ್ಟಿಂಗ್ ಮಿಷನ್, ಡ್ರೈಯರ್ ಎಲ್ಲವನ್ನು ಅವರು ಬಳಸುತ್ತಾರೆ. ಮೋದಿ ಕನಸು ಬಹುಶಃ ಮುಂದೊಂದು ದಿನ ಭಾರತವನ್ನು ಉದ್ಯಮಶೀಲ ರಾಷ್ಟ್ರವನ್ನಾಗಿ ಮಾಡುವುದಿರಬಹುದು. ಮೋದಿ ಅವರದು ಉಳ್ಳವರ ಅಭಿವೃದ್ಧಿಯೇ ಹೊರತು ಬಡವರ ಬದುಕನ್ನು ಹಸನು ಮಾಡುವುದಲ್ಲ. ಈ ಕೃಷಿ ಕಾಯ್ದೆಗಳು ಲಕ್ಷಾಂತರ ಮಂದಿ ಕೃಷಿ ಕಾರ್ಮಿಕರ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳಲಿವೆ.
Socialistic societyಯನ್ನಾಗಿ ಪರಿವರ್ತಿಸುವ, ಭಾರತವನ್ನು ಸಮಸಮಾಜವನ್ನಾಗಿ ಪರಿವರ್ತಿಸುವ, ಸರ್ವಜನರೂ ಸುಖವಾಗಿ dignityಇಂದ ಬದುಕುವ ಸಮಾಜವನ್ನು ಕಟ್ಟುವ ಹೊಣೆಗಾರಿಕೆ ರಾಷ್ಟ್ರದ ಚುಕ್ಕಾಣಿ ಹಿಡಿಯುವವರ ಕೈಲಿರಬೇಕು ಎಂಬ ಆಶಯವನ್ನು ನಾವು ಪ್ರಜೆಗಳು ಹೊಂದಿದ್ದವು. ಈಗ ಆ ಕನಸು ಭಗ್ನವಾಗುವ ಸನ್ನಿವೇಶವನ್ನು ಪ್ರಭುತ್ವ ನಿರ್ಮಾಣ ಮಾಡುತ್ತಿದೆ.

ಈ 70 ವರ್ಷಗಳಲ್ಲಿ ಹಿಂದಿನ ಸರ್ಕಾರಗಳು ಬಹಳ ಪ್ರಗತಿಯನ್ನು ಸಾಧಿಸಿದ್ದವು. ಪಿ. ಸುಬ್ರಹ್ಮಣ್ಯಂ ವ್ಯವಸಾಯ ಮಂತ್ರಿಗಳಾಗಿದ್ದಾಗ ವ್ಯವಸಾಯ ಕ್ರಾಂತಿ, ಹಾಲಿನ ಕ್ರಾಂತಿ ಮುಂತಾದ ಗ್ರಾಮೀಣ ಜನರ ಬದುಕು ಹಸನಾಗುವಂತೆ ಮಾಡಿದರು. ಭಾರತ ಆಹಾರದ ವಿಚಾರದಲ್ಲಿ ಸ್ವಾವಲಂಬಿಯಾಯಿತು. ರಫ್ತಿಗೂ ಅವಕಾಶವಾಯಿತು. ನೆಹರು ಕಾಲದಲ್ಲಿ ವಿಜ್ಞಾನದಲ್ಲಿ ಭಾರತ ದಾಪುಗಾಲು ಹಾಕಿತು. ಜನಸಾಮಾನ್ಯರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಕೈಗೊಂಡ ಯೋಜನೆಗಳು ವಾಂಚಿತ ಫಲ ನೀಡಿದವು. ಚಂದ್ರಲೋಕ, ಮಂಗಳ ಗ್ರಹಗಳನ್ನು ಅಧ್ಯಯನ ಮಾಡುವ ಸಾಹಸ ಮಾಡಲಾಯಿತು. ಅಸ್ಪೃಶ್ಯತೆ ನಿವಾರಣೆ ಉದ್ಯೋಗ ಸೃಷ್ಟಿಯ ಕೆಲಸಗಳನ್ನು ಮಾಡಲಾಯಿತು. ಆದರೆ ಅವು ಇನ್ನೂ ಪೂರ್ಣವಾಗಿ ಪರಿಹಾರವಾಗಿಲ್ಲ.

ಮೋದಿ ಸರ್ಕಾರ ಅವನ್ನೆಲ್ಲ ಮುಂದುವರೆಸಬೇಕಾಗಿತ್ತು. ಆದರೆ ನಾವು ಭಾರತೀಯರು ಈಗ ಆರ್ಥಿಕ ಅಸ್ಥಿರತೆ, ನಿರುದ್ಯೋಗ, ಆಹಾರ ಅಭದ್ರತೆ, ಕೃಷಿಯ ಅಸ್ಥಿರತೆಯಲ್ಲಿ ಸಿಲುಕಿದ್ದೇವೆ. ಮೋದಿ ಸರ್ಕಾರ ಈ ಜ್ವಲಂತ ಪ್ರಶ್ನೆಗಳಿಗೆ ಪರಿಹಾರ ಹುಡುಕುವ ಬದಲು ಅವನ್ನು ಬಂಡವಾಳಶಾಹಿ ವ್ಯವಸ್ಥೆಗೆ ಕೈಗೊಪ್ಪಿಸುತ್ತಿದ್ದಾರೆ. ಆದರೆ ಇದು ಬಡವರ ಮತ್ತು ಮಧ್ಯಮ ವರ್ಗದವರ ಅರಿವಿಗೆ ಬಾರದಿರುವುದು ದುರದೃಷ್ಟ.


ಇದನ್ನೂ ಓದಿ: ಕೃಷಿ ಕಾಯ್ದೆಗಳ ಸಮರ್ಥನೆ: ತೊಂದರೆಗೊಳಗಾದವರಿಗೆ ರಕ್ಷಣೆ ಅಗತ್ಯವೆಂದ IMF

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...