Homeಮುಖಪುಟಎಂಎಸ್‌ಪಿಗೆ (ಕನಿಷ್ಟ ಬೆಂಬಲ ಬೆಲೆ) ಹೊಸ ದಾರಿ

ಎಂಎಸ್‌ಪಿಗೆ (ಕನಿಷ್ಟ ಬೆಂಬಲ ಬೆಲೆ) ಹೊಸ ದಾರಿ

- Advertisement -
- Advertisement -

ರೈತರ ಐತಿಹಾಸಿಕ ಪ್ರತಿರೋಧ ಮತ್ತು ಗೆಲವು ಕೇವಲ ರಾಜಕೀಯ ಅಹಂಕಾರವನ್ನಷ್ಟೇ ಅಲ್ಲದೆ, ಸಾಂಪ್ರಾದಾಯಿಕ ತಿಳುವಳಿಕೆಯನ್ನೂ ಹಲವಾರು ರೀತಿಯಲ್ಲಿ ತಲೆಕೆಳಗಾಗಿಸಿದೆ. ಇದು, ವರ್ಗ ವಿಶ್ಲೇಷಣೆಯ ಇತಿಮಿತಿಗಳನ್ನು ಎತ್ತಿತೋರಿಸಿದೆ ಹಾಗೂ ಒಂದು ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಲು ಹೊಸ ಪರಿಕಲ್ಪನೆಗಳನ್ನು ಅನಾವರಣಗೊಳಿಸಿದೆ.

ಪಂಜಾಬ್, ಹರಿಯಾಣ ಮತ್ತು ಉತ್ತರಪ್ರದೇಶದ, ತುಲನಾತ್ಮಕವಾಗಿ ಶ್ರೀಮಂತವಾಗಿರುವ ರೈತರು ಈ ಆಂದೋಲನದ ನಾಯಕತ್ವ ವಹಿಸಿದ್ದರು ಎಂಬ ವಾಸ್ತವಾಂಶ, ನಮಗೆ ವರ್ಗ ಎಂಬುದು ಯಾವಾಗಲೂ ನಿರ್ಣಾಯಕ ಸಂಗತಿಯಾಗಿರುವುದಿಲ್ಲ ಎಂಬ ಪಾಠವನ್ನು ಕಲಿಸಬೇಕಿದೆ. ಯಾವಾಗ ಬೇರೆ ಆಯ್ಕೆಗಳಿಲ್ಲದೆ ಅಂತಿಮ ಹಂತಕ್ಕೆ ತಳ್ಳಲ್ಪಡುತ್ತಾರೋ, ಆಗ ಕೃಷಿ ವಲಯದ ಎಲ್ಲಾ ವರ್ಗಗಳಿಗೂ ಪ್ರತಿರೋಧ ಹಬ್ಬುತ್ತದೆ ಹಾಗೂ ಕೃಷಿಯಲ್ಲಿನ ಅಸಮಾನತೆಯು ಅಷ್ಟು ಮುಖ್ಯವಾಗದೆ ಹಿಂದೆ ಸರಿಯುತ್ತದೆ. ಹಿಂದೆಂದೂ ಕಾಣದಂತಹ ಒಗ್ಗಟ್ಟಿನ ಆಧಾರದ ಮೇಲೆ ಒಂದು ಆಂದೋಲನಕ್ಕೆ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ನಾವೆಲ್ಲಾ ಸಾಕ್ಷಿಯಾಗಿದ್ದೇವೆ; ಸಣ್ಣ ಮತ್ತು ಅಂಚಿನಲ್ಲಿರುವ ರೈತರು, ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಭೂರಹಿತ ಕೃಷಿ ಕಾರ್ಮಿಕರು, ಎಲ್ಲಾ ಜಾತಿ, ಧರ್ಮ ಮತ್ತು ಪ್ರದೇಶಗಳಿಗೆ ಸೇರಿದ ಪುರುಷರು ಮತ್ತು ಮಹಿಳೆಯರು ಈ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಅನುಕೂಲಸ್ಥ ರೈತರಿಗೆ ಪ್ರತಿಭಟನೆ ದೀರ್ಘ ಕಾಲ ಮುಂದುವರೆಸುವ ಆರ್ಥಿಕ ಶಕ್ತಿ ಇದ್ದದ್ದು ಒಂದು ಸಕಾರಾತ್ಮಕ ಅಂಶವೇ ಆಗಿತ್ತು. ಇದರೊಂದಿಗೆ ಕೃಷಿ ಚಟುವಟಿಕೆಯ ಸ್ವರೂಪವೂ ಚಳವಳಿಗೆ ಸಕಾರಾತ್ಮಕ ಅಂಶವಾಗಿತ್ತು. ಇದು ಕಾರ್ಖಾನೆಯ ಕೆಲಸದಂತಿರದೆ, ದಿನನಿತ್ಯದ ಕೃಷಿಯ ಚಟುವಟಿಕೆಗಳನ್ನು ಪುರುಷರು ಮತ್ತು ಮಹಿಳೆಯರು ಹಂಚಿಕೊಳ್ಳಬಹುದಾಗಿದೆ. ಈ ಅಂಶಗಳು ಒಂದು ಅನಿರ್ದಿಷ್ಟ ಕಾಲದ ಪ್ರತಿರೋಧಕ್ಕೆ ಅವರನ್ನು ಸಿದ್ಧರನ್ನಾಗಿಸಿದವು. ತಾಳ್ಮೆಯ ಈ ಆಟದಲ್ಲಿ ಸರಕಾರ ಮೊದಲಿಗೆ ಕಣ್ಣು ಮಿಟುಕಿಸಿತು, ಹಲವಾರು ರಾಜ್ಯಗಳ ಚುನಾವಣೆಗಳ ಹಿನ್ನೆಲೆಯಲ್ಲಿ, ಅದರ ಅತೀವ ಅಹಂಕಾರವು ಕೊನೆಗೆ ಕುಸಿಯಿತು.

ಪ್ರಭುತ್ವದ ವರ್ಗ ಸ್ವರೂಪ ಮತ್ತು ಅದರ ನೀತಿಗಳ ಬಗ್ಗೆ ರೈತರಿಗೆ ಅರಿವು ಇರಲಿಲ್ಲ ಎಂಬುದು ತಪ್ಪಾಗುತ್ತದೆ. ಈಗ ಹಿಂಪಡೆದಿರುವ ಮೂರು ಕಾಯಿದೆಗಳು ದೇಶದ ಎರಡು ದೊಡ್ಡ ಕಾರ್ಪೋರೇಟ್ ಸಂಸ್ಥೆಗಳಿಗೆ; ಅಂಬಾನಿ ಮತ್ತು ಅದಾನಿಗಳ ಹಿತಾಸಕ್ತಿ ಕಾಪಾಡಲು, ಮುನ್ನಡೆಸಲೆಂದೇ ತಂದಿದ್ದೆಂಬುದನ್ನು ಎತ್ತಿ ತೋರಿಸಲು ರೈತರಿಗೆ ಹೆಚ್ಚಿನ ಸಮಯ ಹಿಡಿಯಲಿಲ್ಲ. ಕೃಷಿಯಿಂದ ಈ ಎರಡು ಸಂಸ್ಥೆಗಳು ಲಾಭ ಪಡೆಯುವಂತೆ ಅನುಕೂಲ ಮಾಡುವುದೇ ಸರಕಾರದ ಪಾತ್ರವಾಗಿತ್ತು. ದೊಡ್ಡ ವ್ಯಾಪಾರಿಗಳ ಕೈಯಲ್ಲಿ ರಾಷ್ಟ್ರೀಯ ಸಂಪತ್ತಿನ ’ಟ್ರಸ್ಟೀಶಿಪ್’ ಎಂಬ ಗಾಂಧೀಜಿಯವರ ಅಸ್ಪಷ್ಟ ಪರಿಕಲ್ಪನೆಗೆ ಇದು ವಿರುದ್ಧವಾಗಿದೆ.

ಮೇಲ್ನೋಟಕ್ಕೆ ಈ ರೈತರ ಚಳವಳಿಯು ಜೆಪಿ ಮುನ್ನೆಡಿಸಿದ ’ಸಂಪೂರ್ಣ ಕ್ರಾಂತಿ’ ಅಥವಾ
ಅಣ್ಣಾ ಹಜಾರೆಯ ’ಭ್ರಷ್ಟಾಚಾರ ವಿರೋಧಿ’ ಚಳವಳಿಗಳ ರೀತಿಯಂತೆಯೇ ಕಾಣಿಸಬಹುದು. ಆದರೆ ಅಂತಹ ತಾಳೆ ತಪ್ಪಾಗುತ್ತದೆ. ಆ ’ಸಂಪೂರ್ಣ ಕ್ರಾಂತಿ’ಯು ಒಂದು ಫ್ರೆಂಚ್ ಗಾದೆ ಮಾತನ್ನು ನೆನಪಿಸುತ್ತೆ; ನೀವು ಆಲಿಂಗಸಲು ಹೆಚ್ಚು ಪ್ರಯತ್ನ ಮಾಡಿದಷ್ಟೂ, ನೀವು ಅದನ್ನು ಕಡಿಮೆ ಮಾಡುತ್ತೀರಿ’ ಎಂದು. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಯಾವಾಗ ಒಂದು ಚಳವಳಿಯು ಅನೇಕ ವಿಷಯಗಳಿಗೆ ಹರಡುತ್ತದೋ ಆಗ ಅದಕ್ಕೆ ಯಾವುದನ್ನೂ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ; ಪರಿಣಾಮಕಾರಿಯಾಗಲು, ಅಗತ್ಯವಿರುವ ವಿಷಯಗಳನ್ನು ಆದ್ಯತೆಗೊಳಿಸುವುದು ಮುಖ್ಯ. ಭ್ರಷ್ಟಾಚಾರ ವಿರೋಧಿ ಚಳವಳಿಯು ಇನ್ನೂ ಟೊಳ್ಳಾಗಿತ್ತು. ಅದು ಎಂದಿಗೂ ವೈಯಕ್ತಿಕ ಮತ್ತು ಸಾಂಸ್ಥಿಕ ಭ್ರಷ್ಟಾಚಾರದ ನಡುವೆ ಇರುವ ವ್ಯತ್ಯಾಸವನ್ನು ಕಂಡುಕೊಳ್ಳಲಿಲ್ಲ. ಈ ಮೂರು ಕಾಯಿದೆಗಳನ್ನು ಮೊದಲಿಗೆ ತಂದಿದ್ದು ಏಕೆ ಎಂದು ನೋಡಬೇಕಿದೆ; ಈ ಕಾನೂನುಗಳು ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಕೆಲಸವನ್ನು ಮಾಡಲಿದ್ದವು; ಕೇವಲ ಎರಡು ಖಾಸಗಿ ಬಿಸಿನೆಸ್ ಸಂಸ್ಥೆಗಳ ಲಾಭದ ಉದ್ದೇಶದ ಮೇಲೆ ಭಾರತದ ಅರ್ಧದಷ್ಟು ಜನರ ಹೊಟ್ಟೆಪಾಡು ಅವಲಂಬಿತವಾಗುವಂತೆ ಮಾಡುವುದು ಪ್ರಜಾಪ್ರಭುತ್ವದ ಜೀವ ತೆಗೆದಂತೆ. ಪ್ರಧಾನ ಮಂತ್ರಿ ಮೋದಿ ವೈಯಕ್ತಿಕವಾಗಿ ಭ್ರಷ್ಟರೋ ಅಲ್ಲವೋ ಎಂಬುದು ಪ್ರಸ್ತುತವಲ್ಲ. ಆದರೆ ಅವರ ಕ್ರಮಗಳು ನಮ್ಮ ಪ್ರಜಾಪ್ರಭುತ್ವವನ್ನು ಇನ್ನಷ್ಟು ಭ್ರಷ್ಟಗೊಳಿಸುವ ಕೆಲಸ ಮಾಡುತ್ತಿವೆ, ಹಾಗೂ ಅದೇ ಮುಖ್ಯವಾದ ವಿಷಯವಾಗಿದೆ. ರೈತರು ಇದನ್ನು ಅರ್ಥ ಮಾಡಿಸುವುದರಲ್ಲಿ ಯಾವುದೇ ಗೊಂದಲಗಳನ್ನು ಸೃಷ್ಟಿಸಲಿಲ್ಲ.

ರೈತರು ಪಕ್ಷ ರಾಜಕಾರಣದ ಆಪಾದನೆ-ನಿಂದನೆಗಳ ಆಟ ಮತ್ತು ಹುಸಿ ರಾಷ್ಟ್ರೀಯತೆಯ ದುಷ್ಟ ಕಥನವನ್ನು ಮೀರಿ ನಿಂತರು. ಅದರ ಬದಲಿಗೆ ಅವರು ಜಾತಿ ಮತ್ತು ವರ್ಗಗಳ ಒಗ್ಗಟ್ಟನ್ನು ಸ್ಥಾಪಿಸಿದರು ಮತ್ತು ಲಿಂಗ ಪ್ರಾಬಲ್ಯದ ಮನುವಾದವನ್ನು ತಿರಸ್ಕರಿಸಿದರು. ಇದೆಲ್ಲಾ ಈಗ ಪರಿಣಾಮಕಾರಿಯಾಗಲು, ತಮ್ಮ ಎಂಎಸ್‌ಪಿಯ ಬೇಡಿಕೆಯನ್ನು ಈಡೇರಿಸಲು ಇರುವ ಸಮಸ್ಯೆಯನ್ನು, ಹಲವಾರು ವಿಭಿನ್ನ ಹಿತಾಸಕ್ತಿಗಳನ್ನು ಹೊಂದಿರುವ ಗುಂಪುಗಳು ಒಟ್ಟಿಗಿರುವ ಸಮಾಜದ ವಿಶಾಲ ಉದ್ದೇಶಗಳೊಂದಿಗೆ ಚರ್ಚಿಸಿ ಬಗೆಹರಿಸಿಕೊಂಡು ಮುಂದುವರೆಯಬೇಕಿದೆ.

ಈಗ, ಒಟ್ಟಾರೆ 23 ಬೆಳೆಗಳಿಗೆ (7 ವಿಧದ ಧಾನ್ಯಗಳು, 5 ಕಾಳುಗಳು, 7 ಎಣ್ಣೆ ಬೀಜಗಳು, 4 ವಾಣಿಜ್ಯಬೆಳೆಗಳು) ಎಂಎಸ್‌ಪಿಯ (ಕನಿಷ್ಟ ಬೆಂಬಲ ಬೆಲೆ) ಕಾನೂನಾತ್ಮಕ ಖಾತರಿ ನೀಡಬೇಕು ಎಂಬ ಚರ್ಚೆ, ರೈತರಿಗೆ ಅದು ಒಂದು ಆದಾಯ ಬೆಂಬಲ ನೀತಿಯಾಗಿ ಪಾತ್ರ ವಹಿಸುತ್ತದೆ ಎಂಬುದರ ಮೇಲೆ ಕೇಂದ್ರೀಕೃತವಾಗಿದೆ. ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಆಗುತ್ತಿರುವ ರೈತರ ಆತ್ಮಹತ್ಯೆಗಳು, ಅವರ ಮೇಲೆ ಹೆಚ್ಚುತ್ತಿರುವ ಸಾಲದ ಹೊರೆಯನ್ನು ನೋಡಿದರೆ ಇದು ಆದ್ಯತೆಯ ಕೆಲಸವಾಗಿದೆ. ಅಂದಹಾಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಧಾನ ಮಂತ್ರಿಯ ಹುಸಿ ಭರವಸೆ ಒಂದು ಕ್ರೂರ ಹಾಸ್ಯವಲ್ಲದೇ ಮತ್ತೇನಲ್ಲ. ಈ ದೇಶದಲ್ಲಿ ಸರಾಸರಿ ಕೃಷಿ ಆದಾಯ ಪ್ರತಿ ತಿಂಗಳಿಗೆ 1,800 ಮಾತ್ರ, ಇದು ರಾಷ್ಟ್ರೀಯ ಸರಾಸರಿಗಿಂತ ಮೂರು ಪಟ್ಟು ಕಡಿಮೆ.

ಒಂದು ವೇಳೆ ರೈತರಿಗೆ, ಅದರಲ್ಲೂ ಸಣ್ಣ ರೈತರಿಗೆ ಆದಾಯದ ಬೆಂಬಲ ಸಾಕಾರವಾದಲ್ಲಿ, ಅದು ಅತ್ಯಂತ ಸಕಾರಾತ್ಮಕ ಬಾಹ್ಯ ಆರ್ಥಿಕತೆಗೆ ಕಾರಣವಾಗುವುದು. ಅದರೊಂದಿಗೆ ಕೈಗಾರಿಕೆಗೆ ಬೇಡಿಕೆ ಹೆಚ್ಚುತ್ತದೆ. ಅದರಲ್ಲೂ ವಿಶೇಷವಾಗಿ ಅಸಂಘಟಿತ ವಲಯದಲ್ಲಿನ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ. ಇದರಿಂದ ಕೃಷಿಯೇತರ ಜನಸಮೂಹಕ್ಕೂ ಲಾಭವಾಗಲಿದೆ. ಎಂಎಸ್‌ಪಿಯನ್ನು ಕಾನೂನಾತ್ಮಕ ಖಾತರಿಗೊಳಿಸುವುದರ ಮೂಲಕ, ಸಣ್ಣ ಕೃಷಿ ಭೂಮಿಗಳನ್ನು ಲಾಭದಾಯಕ ಮಾಡಲು ಕ್ರಮಗಳನ್ನು ಕೈಗೊಳ್ಳಬೇಕಿದೆ ಹಾಗೂ ಅದರೊಂದಿಗೆ ಕೃಷಿಯೇತರ ಜನರಿಗೂ ಈ ಅನುಕೂಲ ಲಭ್ಯವಾಗುವಂತೆ ಮಾಡಬೇಕಿದೆ. ರೈತರ ಆದಾಯ ಹೆಚ್ಚಿಸಲು ಮಾಡುವ ಬೆಂಬಲ ಬೆಲೆಯ ಕ್ರಮವು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ನಡೆಯುವ ರಾಷ್ಟ್ರೀಯ ಆಹಾರ ಭದ್ರತೆಯ ನೀತಿಗೆ (ಎನ್‌ಎಫ್‌ಎಸ್‌ಪಿ) ತದ್ವಿರುದ್ಧ ಅನಿಸಬಹುದು. ಅದನ್ನು 1955ರಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಹಾಗೂ ಅಗತ್ಯವಿರುವಷ್ಟು ಶೇಖರಣಾ ಸೌಲಭ್ಯಗಳನ್ನು ಸೃಷ್ಟಿಸಲು ತರಲಾಗಿತ್ತು. ಸರಕಾರವು ಈಗ ಸಾರ್ವಜನಿಕ ವಿತರಣೆಯ ಮೂಲಕ ಬೆಲೆಗಳನ್ನು ಸ್ಥಿರವಾಗಿರಿಸಲು ಪ್ರತಿ ವರ್ಷ ಸರಾಸರಿ 3 ಲಕ್ಷ ಕೋಟಿ ರೂಪಾಯಿ ವ್ಯಯಿಸುತ್ತದೆ. ಆದರೆ ಅದು ರೈತರ ಆದಾಯವನ್ನು ಸ್ಥಿರಗೊಳಿಸುವ ಬಗ್ಗೆ ಕೆಲಸ ಮಾಡುವುದಿಲ್ಲ. ಎಂಎಸ್‌ಪಿಯು ಈ ಎರಡನ್ನೂ, ಬೆಲೆ ಸ್ಥಿರೀಕರಣವನ್ನು ಆದಾಯ ಬೆಂಬಲದ ಜೊತೆಗೆ ಬೆಸುಗೆ ಏರ್ಪಡಿಸಲು ಸಹಕರಿಸುತ್ತದೆ.

ಆ 23 ಬೆಳೆಗಳ ಪ್ರತಿಯೊಂದನ್ನೂ ಒಂದು ಬ್ಯಾಂಡ್‌ನೊಳಗೆ ತಂದು ಅವುಗಳ ಬೆಲೆ ನಿಗದಿಪಡಿಸಬೇಕಿದೆ. ಸಾಮಾನ್ಯವಾಗಿ, ಒಳ್ಳೆಯ ಇಳುವರಿ ಆದಾಗ ಕಡಿಮೆ ಬೆಲೆ ಹಾಗೂ ಹಾಗೆ ಆಗದಿದ್ದಾಗ ಹೆಚ್ಚು ಬೆಲೆ ನಿಗದಿಡಿಸಿ ಊಹಾಪೋಹಗಳನ್ನು ನಿಯಂತ್ರಿಸಬಹುದು. ಮಳೆ ಕಡಿಮೆ ಇರುವ ಪ್ರದೇಶಗಳಲ್ಲಿ ಬೆಳೆಯುವ ಹಲವಾರು ಧಾನ್ಯಗಳಿಗೆ ಹೆಚ್ಚಿನ ಬೆಲೆ ನಿಗದಿಪಡಿಸಿ ಹಾಗೂ ಬೆಲೆಗಳಲ್ಲಿ ಉತ್ತೇಜನ ನೀಡಿ ಧೀರ್ಘಕಾಲೀನ ಬೆಳೆಗಳ ಪದ್ಧತಿಯಯಲ್ಲಿ ಬದಲಾವಣೆಗೆ ಉತ್ತೇಜಿಸುವ ಕೆಲಸ ಮಾಡಬಹುದು.

ಸ್ವಾಮಿನಾಥನ್ ಸಮಿತಿಯ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ಎಂಎಸ್‌ಪಿ ನೀಡಿದ್ದಲ್ಲಿ 17 ಲಕ್ಷ ಕೋಟಿ ರೂಪಾಯಿಗಳ ವೆಚ್ಚ ಆಗುವುದು ಎಂದು ಸರಕಾರ ಹೇಳುತ್ತದೆ. ಆದರೆ ಈ ಅಂದಾಜು ತಪ್ಪಾಗಿದೆ ಹಾಗೂ ಇದನ್ನು ಹೆಚ್ಚಾಗಿ ಬಿಂಬಿಸಲಾಗಿದೆ. ರೈತರು ತಾವು ಸ್ವಂತ ಬಳಕೆಗೆಂದು ಇಡುವ ಧಾನ್ಯಗಳನ್ನು (ಜೋಳ, ರಾಗಿ ಮತ್ತು ಸಜ್ಜೆ ಮುಂತಾದವು) ಹೊರತಪಡಿಸಿದರೆ, ಸುಮಾರು 45-50% ಉತ್ಪಾದನೆ ಮಾರುಕಟ್ಟೆಗೆ ಹೋಗುತ್ತದೆ. ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮಾರಾಟದಿಂದ ಪಡೆದ ಹಣವನ್ನು ಕನಿಷ್ಠ ಬೆಂಬಲ ಬೆಲೆಯ ಯೋಜನೆಯ ವೆಚ್ಚದಿಂದ ತೆಗೆದುಹಾಕಬೇಕು ಹಾಗೂ ಸಾರ್ವಜನಿಕ ವಿತರಣೆಯ ಮೂಲಕ ಆಗುವ ಬೆಲೆಗಳ ಸ್ಥಿರೀಕರಣವನ್ನು ಇನ್ನೊಂದು ಕಡಿತ ಎಂದು ಪರಿಗಣಿಸಬೇಕು. ಇವೆಲ್ಲವನ್ನು ಲೆಕ್ಕ ಹಾಕಿದರೆ, ಆಗುವ ವೆಚ್ಚ 5ರಿಂದ 7 ಲಕ್ಷ ಕೋಟಿ. ಇದನ್ನು ನೀವು ಸರಕಾರಿ ಉದ್ಯೋಗಿಗಳಿಗೆ (ಜನಸಂಖ್ಯೆಯ 5%ಗೂ ಕಡಿಮೆ ಇರುವವರು) ನೀಡುವ ಭತ್ಯೆಯೊಂದಿಗೆ ಹೊಲಿಕೆ ಮಾಡಿ, ಅದು ಸುಮಾರು 5 ಲಕ್ಷ ಕೋಟಿಗಳಷ್ಟಿದೆ; ಹಾಗೂ ಕೆಲವೇ ದೊಡ್ಡ ದೊಡ್ಡ ಬಿಸಿನೆಸ್‌ಗಳಿಗೆ ನೀಡಿದ ತೆರಿಗೆ ಕಡಿತ ಮತ್ತು ಸಹಾಯವನ್ನು ನೋಡಿ, ಅದು 4 ಲಕ್ಷ ಕೋಟಿಗಳಷ್ಟಿದೆ ಹಾಗೂ ಅನಧಿಕೃತ ಆದರೆ ನಂಬಲಾರ್ಹ ಮೂಲಗಳ ಪ್ರಕಾರ, ದೇಶದ ಕೇವಲ 28 ಸಾಲಗಾರರು ಮಾಡಿದ ತೀರಿಸಲಾಗದ ಬ್ಯಾಂಕ್ ಸಾಲ ನೋಡಿ, ಅದು 10 ಲಕ್ಷ ಕೋಟಿಗಳಷ್ಟಿದೆ. ಅವರ ಹೆಸರುಗಳೆಲ್ಲವೂ ನಮಗೆ ತಿಳಿದಿದೆ. ಕುತೂಹಲಕಾರಿಯಾದ ಅಂಶವೆಂದರೆ, ವಿಜಯ್ ಮಲ್ಯ ಒಬ್ಬರನ್ನು ಹೊರತುಪಡಿಸಿ ಮಿಕ್ಕವರೆಲ್ಲರೂ ಗುಜರಾತಿನ ವ್ಯಾಪಾರಿಗಳೇ. ಈಗ ನೋಡಿ, ಭಾರತದ ಜನಸಂಖ್ಯೆಯ 50% ಜನರಿಗೆ ಸಹಾಯವಾಗುವ 5-7 ಲಕ್ಷ ಕೋಟಿ ರೂಪಾಯಿ ಹೊರೆಯಾಗುವುದೇ? ಅಥವಾ ರೈತರಿಗೆ ಪರಿಣಾಮಕಾರಿಯಾಗುವಷ್ಟು ಗಟ್ಟಿಯಾದ ರಾಜಕೀಯ ಧ್ವನಿ ಇರಲಿಲ್ಲವೇ?

ಎಲ್ಲಾ ನಿಗದಿತ ಬೆಳೆಗಳಿಗೆ ಎಂಎಸ್‌ಪಿ ನೀಡಲು ಒಕ್ಕೂಟ ಸರಕಾರದ ಬಜೆಟ್‌ನಿಂದ 7-8 ಲಕ್ಷ ಕೋಟಿಗಳ ಬೆಂಬಲವನ್ನು ಬಳಸುವಾಗ, ಸಣ್ಣ ಹಿಡುವಳಿ ಹೊಂದಿರುವ 85% ರೈತರಿಗೆ ಕೃಷಿಯನ್ನು ಆರ್ಥಿಕವಾಗಿ ಲಾಭದಾಯಕ ಮಾಡುವತ್ತ ಗಮನ ಕೇಂದ್ರೀಕರಿಸಬೇಕು. ಇದು ಕೇವಲ ನ್ಯಾಯಯುತವಾದದ್ದು ಮಾತ್ರವಲ್ಲ, ಈ ಆಂದೋನದ ಯಶಸ್ಸಿನ ಬೆನ್ನೆಲುಬಾಗಿದ್ದವರೊಂದಿಗೆ ಒಗ್ಗಟ್ಟು ತೋರಿಸದೇ ಇದ್ದರೆ ಆಂದೋಲನವು ತನ್ನ ಚಲನೆಯನ್ನು ಕಳೆದುಕೊಳ್ಳಬಹುದಾಗಿದೆ.

ಇದರ ಮುಖ್ಯ ಕೇಂದ್ರ ಭೂಮಿಯ ಉತ್ಪಾದಕತೆಯನ್ನು ಹೆಚ್ಚಿಸುವು ಆಗಿರಬೇಕು, ಕಾರ್ಮಿಕ ಉತ್ಪಾದಕತೆ ಹೆಚ್ಚಳವಲ್ಲ. ಶ್ರಮದ ಉತ್ಪಾದಕತೆಯನ್ನು ಹೆಚ್ಚಿಸುವ ಹೆಚ್ಚಿನ ಯಾಂತ್ರೀಕರಣಗೊಂಡ ಕೃಷಿಯು ಉದ್ಯೋಗ ನೀಡುವ ರೈತನಿಗೆ ಆದಾಯ ಹೆಚ್ಚಿಸುವ ಸಮಯದಲ್ಲಿಯೇ ನಿರುದ್ಯೋಗವನ್ನು ಹೆಚ್ಚಿಸುತ್ತದೆ. ಹೀಗೆ ಬೇಡಿಕೆ ಹೆಚ್ಚಳವಾಗದ ಪರಿಸ್ಥಿತಿಗಳಲ್ಲಿ ಸಂಘಟಿತ ಕ್ಷೇತ್ರದಲ್ಲಿ ಆಗಿದ್ದನ್ನು ನಾವು ಈಗಾಗಲೇ ನೋಡಿದ್ದೇವೆ. ಈಗ ನಮಗೆ ಬೇಕಾಗಿರುವುದು ಅದರ ಬದಲಿಗೆ ಸಣ್ಣ ನೀರಾವರಿ, ಸಾವಯವ ಗೊಬ್ಬರದಲ್ಲಿ ಸಂಶೋಧನೆ, ನೀರಿನ ಸೂಕ್ತ ನಿರ್ವಹಣೆ ಹಾಗೂ ಎಂಎಸ್‌ಪಿ ಬೆಂಬಲಿತ ಆಯಾ ವಾತಾವರಣಕ್ಕೆ ತಕ್ಕುದಾದ ಬೆಳೆಗಳನ್ನು ಬೆಳೆಯುವ ಪದ್ಧತಿ ಮತ್ತು ಸಾಧ್ಯವಾದಷ್ಟು ಸ್ಥಳೀಯ ಮಾರುಕಟ್ಟೆಗಳಲ್ಲಿ ಶೇಖರಣೆ ಮತ್ತು ಮಾರಾಟ ಮಾಡುವ ವ್ಯವಸ್ಥೆಯನ್ನು ಒಳಗೊಂಡ ಆಯಾ ಭೂಮಿಯ ಹೆಚ್ಚಿನ ಉತ್ಪಾದಕತೆ. ಶೇಖರಣೆಯ ಸೌಲಭ್ಯಗಳನ್ನು ಸಾಧ್ಯವಾದಷ್ಟು ವಿಕೇಂದ್ರೀಕರಣಗೊಳಿಸಿ, ಅದರ ಸಾರಿಗೆ ಮತ್ತು ಶೇಖರಣೆಯ ವೆಚ್ಚವನ್ನು ಕಡಿತಗೊಳಿಸುವಂತೆ ಮಾಡಬೇಕು. ಆಯಾ ಪ್ರದೇಶಗಳಿಗೆ ಸೂಕ್ತವಲ್ಲದ, ಅತಿ ಹೆಚ್ಚು ನೀರನ್ನು ಬಳಸುವ ಲಾಭದಾಯಕ ಬೆಳೆ ಪದ್ಧತಿಗಳು ಹವಾಮಾನ ವಿಕೋಪಕ್ಕೆ ಕಾರಣವಾಗುತ್ತಿವೆ. ಇದರಿಂದ ಒಣ ಪ್ರದೇಶಗಳಲ್ಲಿ ಸೂಕ್ತವಾಗಿರುವ ಪೌಷ್ಟಿಕ ಧಾನ್ಯಗಳ ಬೆಳೆಗಳಿಗೆ ನಿರುತ್ತೇಜನಗೊಳಿಸಿ, ಆಹಾರ ಭದ್ರತೆಯನ್ನು ಕಡೆಗಣಿಸಿದಂತಾಗಿದೆ. ಇದನ್ನು ಸರಿಪ ಸಾಲ ಮರುಪಾವತಿ ಮಾಡಲು ಸಾಧ್ಯವಾಗದಾದಾಗ, ಸಾಂಸ್ಥಿಕ ಮೂಲಗಳಿಂದ ಸಾಲ ಪಡೆಯುವುದು ನಿಂತು, ಅತ್ಯಂತ ಹೆಚ್ಚು ಬಡ್ಡಿದರ ಹೊಂದಿರುವ ಖಾಸಗಿ ಲೇವಾದೇವಿಗಾರರಲ್ಲಿ ಸಾಲ ಮಾಡಬೇಕಾಗುತ್ತದೆ, ಅದರಿಂದ ಕೊನೆಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ತನ್ನ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಬೆಳೆ ಬೆಳೆಯುವ ಭೂಮಿಯ ಪ್ರತಿ ಎಕರೆಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ಸಾಮಾನ್ಯ ರೂಢಿಯಾಗಬೇಕು. ಎಂಪಿಎಸ್ ಅಡಿಯಲ್ಲಿ ಧಾನ್ಯಗಳನ್ನು ಮಾರಾಟ ಮಾಡುವ ಸರ್ಟಿಫಿಕೇಟ್‌ಗಳನ್ನು ಬ್ಯಾಂಕಿನಿಂದ ಸಾಲ ಪಡೆಯಲು ಬೆಸೆಯುವಂತಹ ಯೋಜನೆಗಳನ್ನು ರಚಿಸಲು ಸಾಧ್ಯವಿದೆ.

ಕೊನೆಯದಾಗಿ, ಈ ಕ್ರಮಗಳು ಪಂಚಾಯತಿ ಮತ್ತು ಸ್ಥಳೀಯ ಗ್ರಾಮಸಭೆಗಳ ಮೂಲಕ ಮಾತ್ರ ಕೆಲಸ ಮಾಡಬಲ್ಲವು. ಅವುಗಳು ವಿತ್ತೀಯ ಹಕ್ಕು ಮತ್ತು ಸ್ವಾಯತ್ತತೆಯನ್ನು ಹೊಂದಿರಬೇಕು. (ಇದನ್ನು ಸಂವಿಧಾನದ 73ನೇ ತಿದ್ದುಪಡಿಯಲ್ಲಿ ಈಗಾಗಲೇ ಸ್ಪಷ್ಟಪಡಿಸಲಾಗಿದೆ.) ಹಾಗೂ ಅದನ್ನು ಪ್ರತಿ ಐದು ವರ್ಷಗಳಿಗೊಮ್ಮೆ ಪರಾಮರ್ಶಿಸಬೇಕು. ಆಗ, ಇಳುವರಿ, ಸಾಲ ಮರುಪಾವತಿ, ಬೆಳೆಗಳ ಪದ್ಧತಿ ಹಾಗೂ ಲಿಂಗ, ಜಾತಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಭಾಗವಹಿಸುವಿಕೆ, ಇವೆಲ್ಲವುಗಳನ್ನು ಪರಿಗಣಿಸಿ ಅವಲೋಕಿಸಬೇಕು.

ಇತ್ತೀಚಿನ ವರ್ಷಗಳಲ್ಲಿ ಪಂಚಾಯತಿಗಳಿಂದ ಮತ್ತು ಮಹಾಪಂಚಾಯತ್‌ಗಳಿಂದ ಕಡಿಮೆ ದುಡ್ಡಿನಲ್ಲಿ ಆಯೋಜಿಸಲಾದ ರೈತರ ಪ್ರತಿರೋಧಗಳು ಅತ್ಯದ್ಭುತವಾಗಿದ್ದವು. ಗ್ರಾಮೀಣ ಆರ್ಥಿಕತೆಯನ್ನು ಸಂಘಟಿಸಲು ಅವರಿಗೆ ಈಗಾಗಲೇ ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ ಹಾಗೂ ಅದನ್ನು ಅವರಿಗಿಂತ ಬೇರೆ ಯಾರೂ ಚೆನ್ನಾಗಿ ಮಾಡಲಾರರು. ಅವರು ಮಾತ್ರ ಇದನ್ನು ಮಾಡಲು ಶಕ್ತರು.

(ಕನ್ನಡಕ್ಕೆ): ರಾಜಶೇಖರ್ ಅಕ್ಕಿ

ಅಮಿತ್ ಬಾಧುರಿ

ಅಮಿತ್ ಬಾಧುರಿ
ಸಂಶೋಧಕರು ಮತ್ತು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮಾಜಿ ಅರ್ಥಶಾಸ್ತ್ರ ಪ್ರಾಧ್ಯಾಪಕ; ಇಟಲಿಯ ಪಾವಿಯಾ ವಿಶ್ವವಿದ್ಯಾಲಯದ ’ಕ್ಲಿಯರ್ ಫೇಮ್ ಪ್ರಾಧ್ಯಾಪಕ. ಜೆಎನ್‌ಯು ಕ್ಯಾಂಪಸ್‌ನಲ್ಲಿ ಭಿನ್ನಾಭಿಪ್ರಾಯ, ಭಿನ್ನಮತ ಹತ್ತಿಕ್ಕುವ ವಿದ್ಯಮಾನ ಸಂಭವಿಸಿದಾಗ ಅವರು 2020ರಲ್ಲಿ ಜೆಎನ್‌ಯುಗೆ ರಾಜೀನಾಮೆ ನೀಡಿದರು.


ಇದನ್ನೂ ಓದಿ: ‘ಮೋದಿ ಸರ್ಕಾರಕ್ಕೆ ಎಂಎಸ್‌ಪಿ ಫುಲ್ ಫಾರ್ಮ್ ಗೊತ್ತಿಲ್ಲ!’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...